ತನ್ನ, ತಂಗಿಯ ಮದುವೆಗಾಗಿ ದುಡಿದ ಹಣ ಸಿಗದೇ ಹೋದಾಗ ಹುಚ್ಚನಾಗಿ ಮಂಗಳೂರಿಗೆ ಸೇರಿದ: ಒಂದು ಭಾವನಾತ್ಮಕ ಘಟನೆ
ತನ್ನ ಹಾಗೂ ತಂಗಿಯ ಮದುವೆಗಾಗಿ ಆತ ಹಗಲಿರುಳು ದುಡಿದಿದ್ದ. ಆದರೆ, ಮದುವೆಗೆ ಹೋಗಲು ಹಣ ಕೇಳಿದ ವೇಳೆ, ಬಾಸ್ ಹಣ ನೀಡದೇ ಸತಾಯಿಸಿದ್ದಾನೆ. ಒಂದೆಡೆ ಮನೆಯವರು ಮದುವೆಗೆ ಸಿದ್ಧತೆ ನಡೆಸಿದ್ದರು. ಬರಿಗೈಯಲ್ಲಿ ಮನೆಗೆ ಹೇಗೆ ಹೋಗುವುದು ಎನ್ನುವುದು ತಿಳಿಯದೇ ಚಿಂತಾಕ್ರಾಂತನಾದ ಯುವಕ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡು ಕಣ್ಣೀಗೆ ತೋಚಿದ ರೈಲನ್ನು ಹತ್ತಿ ಬಿಟ್ಟ…
ಹೌದು ಇದು ಅಲಹಾಬಾದ್ ನ ಶಿಬು ಎಂಬ ಯುವಕನ ದುರಂತ ಕಥೆ ಸುಖಾಂತ್ಯವಾದ ಘಟನೆ. ಶಿವಕಾಶಿಯಲ್ಲಿ ಕ್ಯಾಲೆಂಡರ್ ತಯಾರಿಸುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಶಿಬು ಮತ್ತು ಈತನ ಸೋದರಿಗೆ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಸಹೋದರಿಯ ಮದುವೆಯ ಬಳಿಕ ಶಿಬುಗೂ ಮದುವೆ ಮಾಡಲು ವಧುವನ್ನು ನೋಡಲಾಗಿತ್ತು. ಮದುವೆಯ ತಯಾರಿಯ ಹಿನ್ನೆಲೆಯಲ್ಲಿ ಶಿಬು ತಾನು ಕೆಲಸ ಮಾಡುವ ಸಂಸ್ಥೆಯಲ್ಲಿ ರಜೆ ಮತ್ತು ದುಡಿದ ಹಣ ಕೇಳಿದ್ದ. ಆದರೆ ಸಂಸ್ಥೆ ಎರಡನ್ನೂ ನೀಡಲು ನಿರಾಕರಿಸಿತ್ತು. ಇದರಿಂದ ದಿಗಿಲುಗೊಂಡ ಈತ ರೈಲ್ವೆ ಸ್ಟೇಷನ್ ಗೆ ಹೋಗಿ ರೈಲು ಹತ್ತಿದ್ದ. ತೀರಾ ಆತಂಕದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಸ್ವಸ್ಥನಾಗಿದ್ದ. ಹೀಗೆ ರೈಲು ಹತ್ತಿ ಬಂದವನು ಮಂಗಳೂರು ತಲುಪಿದ್ದ. ಮಂಗಳೂರು ನಗರದಲ್ಲಿ ಸುಮಾರು ನಾಲ್ಕು ದಿನಗಳಿಂದ ಮಾನಸಿಕ ಅಸ್ವಸ್ಥನಾಗಿ ಬೀದಿ ಬೀದಿ ಅಳೆಯುತ್ತಿದ್ದ ಈತನನ್ನು 2019 ಮೇ ತಿಂಗಳಲ್ಲಿ ನಿರ್ಗತಿಕರಿಗೆ ನೆರವಾಗುವ ನಗರದ ವೈಟ್ ಡೌಸ್ ಸಂಸ್ಥೆಯ ಕೊರಿನ್ ರಸ್ಕಿನ್ ಅವರು ಗಮನಿಸಿ ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದರು.
ಕೊನೆಗೂ ಪತ್ತೆಯಾದ ವಿಳಾಸ:
ಮಂಗಳೂರಿನ ವೈಟ್ ಡೌಸ್ ಎಂಬ ಸಂಸ್ಥೆ ಶಿಬುಗೆ ಪುನರ್ಜನ್ಮ ನೀಡಿದೆ. ತಾನು ಯಾರು ಅನ್ನೋದೇ ತಿಳಿಯದೇ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಯುವಕನಿಗೆ ಆಶ್ರಯ ನೀಡಿ, ಆತನಿಗೆ ಸೂಕ್ತ ಚಿಕಿತ್ಸೆ ನೀಡಿ, ಗುಣಪಡಿಸಿದೆ. ಬಳಿಕ ಯುವಕನ ಮಾಹಿತಿ ಸಂಗ್ರಹಿಸಿದ್ದು, ಈ ವೇಳೆ ಯುವಕ ಉತ್ತರ ಪ್ರದೇಶ ಮೂಲದವನು ಎಂದು ತಿಳಿದು ಬಂದಿದ್ದು, ಉತ್ತರಪ್ರದೇಶದ ಅಲಹಾಬಾದ್ ನ ಮುಹಮ್ಮದ್ ಅಯ್ಯೂಬ್ ಎಂಬವರ ಪುತ್ರನಾಗಿರುವ ಶಿಬು ಯಾನೆ ಮುಹಮ್ಮದ್ ತೊಯಿಬ್ ಇದೀಗ ತನ್ನ ತಂದೆಯ ಜೊತೆಗೆ ತನ್ನ ಊರಿಗೆ ಹೊಸ ಕನಸುಗಳೊಂದಿಗೆ ತೆರಳಿದ್ದಾನೆ.
ಆರಂಭದಲ್ಲಿ ಈ ಯುವಕ ತನ್ನ ಹೆಸರು ಬಿಟ್ಟು ಬೇರೇನೂ ಹೇಳ್ತಿರಲಿಲ್ಲ. ಸುಮಾರು ಮೂರು ವರ್ಷದಿಂದ ಈತ ತನ್ನ ಹೆಸರು ಶಿಬು ಎಂಬುದನ್ನು ಬಿಟ್ಟು ಬೇರೇನೂ ಹೇಳುತ್ತಿರಲಿಲ್ಲ. ಇತ್ತೀಚೆಗೆ ಆತನಿಗೆ ತನ್ನ ನೆನಪಿನ ಶಕ್ತಿ ಮರಳಿ ಬಂದಿದ್ದು, ಅಲಹಾಬಾದ್ ನಲ್ಲಿ ತಾನು ಕಲಿತ ಶಾಲೆಯ ಹೆಸರನ್ನು ಹೇಳಿದ್ದಾನೆ. ಅಸ್ಪಷ್ಟವಾಗಿದ್ದ ಅವನ ಶಾಲೆಯ ಹೆಸರನ್ನು ಹುಡುಕಿ ವೈಟ್ ಡೌಸ್ ಸಂಸ್ಥೆ ಮ್ಯಾನೇಜರ್ ಅವರು ದೂರವಾಣಿ ಮೂಲಕ ಶೋಧ ನಡೆಸಿದ್ದರು.
ಮಂಗಳೂರಿನಲ್ಲಿ ಪುನರ್ಜನ್ಮ ಪಡೆದು ಮತ್ತೆ ಮನೆ ಸೇರಿದ ಶಿಬು ದೂರವಾಣಿಯಲ್ಲಿ ಅವನು ಹೇಳಿದ ಶಾಲೆ ಗೊತ್ತಾಗದಿದ್ದರೂ ಶಾಲೆಯವರ ಮೂಲಕ ಶಿಬುವಿನ ಗ್ರಾಮದ ಸರಪಂಚರನ್ನು ಸಂಪರ್ಕಿಸಲು ಸಾಧ್ಯವಾಯಿತು. ಆ ಮೂಲಕ ಶಿಬುವಿನ ತಂದೆಯ ಮೊಬೈಲ್ ನಂಬರ್ ಪತ್ತೆಯಾಗಿತ್ತು. ತನ್ನ ಮಗ ಮಂಗಳೂರಿನಲ್ಲಿ ಇರುವ ವಿಚಾರ ತಿಳಿದ ಮೊಹಮ್ಮದ್ ಆಯುಬ್ ಅವರು ಕೂಡಲೇ ಅಲಹಬಾದ್ ನಿಂದ ರೈಲು ಹತ್ತಿ ಮಂಗಳೂರಿಗೆ ಬಂದಿದ್ದಾರೆ. ಮೊಹಮ್ಮದ್ ಅಯುಬ್ ಅವರು ಮಂಗಳೂರಿನಲ್ಲಿ ವೈಟ್ ಡೌಸ್ ನಲ್ಲಿ ಮಗನನ್ನು ಕಂಡು, ಶಿಬು ತನ್ನ ತಂದೆಯನ್ನು ಕಂಡು ಭಾವುಕರಾದರು. ಅಪ್ಪುಗೆಯೊಂದಿಗೆ ತಾವು ಕಳೆದುಕೊಂಡ ಕ್ಷಣಕ್ಕಾಗಿ ದುಖಪಟ್ಟರು. ಆತ್ಮೀಯತೆಯ ಈ ಕ್ಷಣ ಎಲ್ಲರ ಕಣ್ಣನ್ನು ತೇವಗೊಳಿಸಿತು.
ಶಿಬುವಿಗಾಗಿ ದೇಶದೆಲ್ಲಡೆ ಸುತ್ತಾಡಿದ್ದ ತಂದೆ..!
ಕಳೆದು ಹೋದ ಮಗ ಶಿಬುವಿಗಾಗಿ ಈತನ ತಂದೆ ದೇಶದ ವಿವಿಧೆಡೆ ಲಕ್ಷಾಂತರ ಖರ್ಚು ಮಾಡಿ ಹುಡುಕಾಡಿದ್ದಾರೆ. ಆದರೆ, ಶಿಬು ಎಲ್ಲಿಯೂ ಸಿಗದೇ ಕಣ್ಣೀರಿನಲ್ಲಿ ಮೂರು ವರ್ಷ ಕಳೆದಿದ್ದಾರೆ. ಈತನಿಗಾಗಿ ಈತನ ತಾಯಿ ನಿತ್ಯ ರೋಧಿಸುತ್ತಿದ್ದು, ಇಂದು ತಂದೆಯ ಪೋನ್ ಮೂಲಕ ತಾಯಿ ಜೊತೆಗೆ ವಿಡಿಯೋ ಕಾಲ್ ಮಾಡಿ ಮಾತಾಡಿದ್ದಾನೆ. ಶಿಬು ವೈಟ್ ಡೌಸ್ನಲ್ಲಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ. ಈತ ಮಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರ್ಗತಿಕರಲ್ಲಿ ಒಬ್ಬನಾಗಿ ಚಿಕಿತ್ಸಾ ಕೇಂದ್ರದಲ್ಲಿ ನೀರಿನ ಜವಾಬ್ದಾರಿ ವಹಿಸಿದ್ದ. ಗುಣಮುಖನಾಗಿದ್ದ ಈತನನ್ನು ಎಲ್ಲರೂ ಈತನನ್ನು ಆತ್ಮೀಯವಾಗಿ ಬೀಳ್ಕೊಟ್ಟಿದ್ದಾರೆ.
ಶಿಬು ಕೂಡ ಗೇಟಿನ ಹೊರಗಡೆ ಕಣ್ಣೀರಿಡುತ್ತಲೇ ತನ್ನ ತಂದೆ ಜೊತೆಗೆ ಅಲಹಬಾದ್ ಗೆ ಹೊರಟಿದ್ದಾನೆ. ಶಿಬು ಊರಿಗೆ ಹೋಗಿ ಮದುವೆಯಾಗುವ ಇಚ್ಛೆಯನ್ನು ಹೊಂದಿದ್ದಾನೆ. ಇದು ಮಂಗಳೂರಿನ ವೈಟ್ ಡೌಸ್ ಸಂಸ್ಥೆ ಮೂಲಕ 398 ನೇ ನಿರ್ಗತಿಕರನ್ನು ಮನೆಯವರಿಗೆ ಸೇರಿಸಿದ ಪ್ರಕರಣವಾಗಿದೆ.
ವಿಡಿಯೋ:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka