ಭಜನೆ ಭಗವಂತನನ್ನು ತಲುಪಲು ಅತ್ಯುತ್ತಮ ದಾರಿ: ಶಮಿತ ಮಲ್ನಾಡ್
ಬೆಳ್ತಂಗಡಿ: ಭಗವಂತನನ್ನು ತಲುಪಲು ಭಜನೆ ಅತ್ಯುತ್ತಮ ದಾರಿಯಾಗಿದೆ ನಾಡಿನ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಜನರಲ್ಲಿ ಭಜನೆಯ ಬಗ್ಗೆ ಜಾಗೃತಿ ಮೂಡಲು ಕಾರಣವಾಗಿದೆ ಎಂದು ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಡಾ. ಶಮಿತ ಮಲ್ನಾಡ್ ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ 24ನೆ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಆಧ್ಯಾತ್ಮಕ್ಕೂ, ಭಜನೆಗೂ ಅವಿನಾಭಾವ ಸಂಬಂಧವಿದ್ದು, ರಾಗ-ತಾಳ ಲಯ ಬದ್ಧವಾಗಿ ಸುಶ್ರಾವ್ಯವಾಗಿ ಭಜನೆ ಹಾಡಿದಾಗ ಮನಸ್ಸಿಗೆ ಸಂತೋಷ, ಶಾಂತಿ ಮತ್ತು ಸಮಾಧಾನ ಸಿಗುತ್ತದೆ. ಎಲ್ಲರೂ ಏಕಾಗ್ರತೆಯಿಂದ ಭಜನೆಯನ್ನು ಹಾಡಿ ಸಂತೋಷದಿಂದ ಅನುಭವಿಸಿ ಎಂದು ಅವರು ಸಲಹೆ ನೀಡಿದರು. ಎರಡು ಭಕ್ತಿಗೀತೆಗಳನ್ನು ಅವರು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳಿಗೆ ಮುದ ನೀಡಿದರು.
ಡಾ. ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ಭಜನೆ ಮೂಲಕ ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂವಾದ ಸಾಧ್ಯವಾಗುತ್ತದೆ. ಉತ್ತಮ ಚಾರಿತ್ರ್ಯದೊಂದಿಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡು ಎಲ್ಲರೂ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನೆ ಮೂಲಕ ಸಾಮಾಜಿಕ ಪರಿವರ್ತನೆಯಾಗಬೇಕು. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಎಲ್ಲಾ ದೋಷಗಳನ್ನು ಹಾಗೂ ವ್ಯಸನಗಳನ್ನು ತ್ಯಜಿಸಿ ಆದರ್ಶ ನಾಯಕತ್ವದೊಂದಿಗೆ ಭಜನಾ ಮಂದಿರಗಳು ಉತ್ತಮ ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು ಎಂದು ಸಲಹೆ ನೀಡಿದ ಅವರು ಕಮ್ಮಟದಲ್ಲಿ ಆಸಕ್ತಿಯಿಂದ ಭಾಗವಹಿಸಿ ಎಲ್ಲರೂ ಭಜನಾಪಟುಗಳಾಗಬೇಕು ಎಂದು ಹೇಳಿದರು.
ವರದಿ ಸಾದರ ಪಡಿಸಿದ ಸುರೇಶ್ ಮುಯಿಲಿ, 133 ಮಹಿಳೆಯರು ಮತ್ತು 183 ಪುರುಷರು ಸೇರಿದಂತೆ ಒಟ್ಟು 316 ಮಂದಿ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. ಮಾಣಿಲದ ಮೋಹನದಾಸ ಸ್ವಾಮೀಜಿ ಮತ್ತು ಅಮಿತ್ ಉಪಸ್ಥಿತರಿದ್ದರು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಪುರುಶೋತ್ತಮ, ಪಿ.ಕೆ. ಧನ್ಯವಾದವಿತ್ತರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka