ಮಂಗಳೂರಿನಲ್ಲಿ NIA ದಾಳಿ ಹೇಗಿತ್ತು?: ದಾಳಿ ವೇಳೆ ಏನೇನು ನಡೆಯಿತು!
ಮಂಗಳೂರು: ನಗರ ಹಾಗೂ ಹೊರವಲಯದ ಹಲವೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂದ್ರೆ ಪಿಎಫ್ ಐ ಮುಖಂಡರ ಮನೆಗಳ ಮೇಲೆ ಗುರುವಾರ ಮುಂಜಾನೆ ಎನ್ ಐಎ ದಾಳಿ ನಡೆಸಿದೆ. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆದಿರುವ ಎನ್ ಐಎ, ಮನೆಮಂದಿಯ ಮೊಬೈಲ್ ಗಳನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ಇದೇವೇಳೆ ಮಂಗಳೂರಿನಲ್ಲಿರುವ ಪಿಎಫ್ ಐ, ಎಸ್ ಡಿಪಿಐ ಕಚೇರಿಯ ಮೇಲೂ ದಾಳಿ ನಡೆಸಿರುವ ಎನ್ ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ತಾಲೂಕಿನ ಕಂಕನಾಡಿ, ಹಳೆಯಂಗಡಿ, ಜೋಕಟ್ಟೆ, ಕಾವೂರಿನಲ್ಲಿರುವ ಪಿಎಫ್ ಐ ನಾಯಕರ ಮನೆಗಳು ಹಾಗೂ ನಗರದಲ್ಲಿರುವ ಎಸ್.ಡಿ.ಪಿ.ಐ ಕಚೇರಿಗೆ ಇಂದು ಮುಂಜಾನೆ 3:30ರ ಸುಮಾರಿಗೆ ಏಕಕಾಲದಲ್ಲಿ ದಾಳಿ ಮಾಡಿದ ಎನ್ಐಎ ಅಧಿಕಾರಿಗಳ ತಂಡ ಮನೆಗಳನ್ನು ಜಾಲಾಡಿದೆ.
ಅಲ್ಲದೇ, ಮನೆಯಲ್ಲಿದ್ದ ಎಲ್ಲಾ ಸದಸ್ಯರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದೆ. ಪಿಎಫ್ ಐ ಮುಖಂಡರಾದ ಕಾವೂರು ನಿವಾಸಿ ನವಾಝ್, ಬಜ್ಪೆ ಜೋಕಟ್ಟೆಯ ಎ.ಕೆ.ಅಶ್ರಫ್, ಹಳೆಯಂಗಡಿಯ ಮೊಯ್ದಿನ್ ಹಾಗೂ ಕಂಕನಾಡಿ ನಿವಾಸಿ ಅಶ್ರಫ್ ಎಂಬವರ ಮನೆಗಳ ಮೇಲೆ ದಾಳಿ ಮಾಡಿದ್ದು, ಮನೆಯಲ್ಲಿದ್ದ ನವಾಝ್, ಎ.ಕೆ.ಅಶ್ರಫ್, ಮೊಯ್ದಿನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಕೆಲಸ ನಿಮಿತ್ತ ದಿಲ್ಲಿಗೆ ತೆರಳಿದ್ದ ಕಂಕನಾಡಿಯ ಅಶ್ರಫ್ ಎಂಬವರನ್ನು ಅಲ್ಲಿಯೇ ವಶಕ್ಕೆ ಪಡೆದುಕೊಂಡಿದೆ.
ಹಳೆಯಂಗಡಿ ನಿವಾಸಿ ಪಿಎಫ್ ಐ ಮುಖಂಡ ಮೊಯ್ದಿನ್ ಅವರ ಮನೆಯ ಮೇಲೆ ದಾಳಿ ಮಾಡಿದ ತಂಡ, ಅದೇ ಸಮಯದಲ್ಲಿ ಅವರ ತಾಯಿಯ ಮನೆಗೂ ದಾಳಿ ಮಾಡಿದೆ. ಈ ವೇಳೆ ಎರಡೂ ಮನೆಯನ್ನು ಜಾಲಾಡಿದೆ. ಅಲ್ಲದೆ, ಮನೆಯ ಎಲ್ಲಾ ಸದಸ್ಯರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದೆ. ಪಿಎಫ್ ಐ ಮುಖಂಡರ ಮನೆಯ ಜೊತೆಗೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನ ನೆಲ್ಲಿಕಾಯಿ ರಸ್ತೆ ಬಳಿ ಇರುವ ಎಸ್.ಡಿ.ಪಿ.ಐ., ಪಿ.ಎಫ್.ಐ. ಕಚೇರಿ ಮೇಲೂ ಎನ್ ಐಎ ದಾಳಿ ಮಾಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಸ್.ಡಿ.ಪಿ.ಐ. ದ.ಕ. ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಎನ್ಐಎ ಅಧಿಕಾರಿಗಳು ಯಾವುದೇ ಸೂಕ್ತ ಕಾರಣಗಳನ್ನು ನೀಡದೇ ವಿನಾಕಾರಣ ಎಸ್.ಡಿ.ಪಿ.ಐ. ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಅಧಿಕಾರಿಗಳನ್ನು ಈ ಕುರಿತು ಮಾಹಿತಿ ಕೇಳಿದರೆ, ಪಿಎಫ್ ಐ ಕಚೇರಿ ಎಂದು ಎಸ್.ಡಿ.ಪಿ.ಐ., ಕಚೇರಿಗೆ ದಾಳಿ ಮಾಡಿರುವುದಾಗಿ ಸಮಜಾಯಿಷಿ ನೀಡಿದ್ದಾರೆ ಎಂದರು.
ಎಸ್.ಡಿ.ಪಿ.ಐ. ಕಚೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ, ಕಚೇರಿಯಲ್ಲಿ ಬಳಕೆ ಮಾಡುವ ಲ್ಯಾಪ್ ಟಾಪ್ ಹಾಗೂ ನಮ್ಮ ಪಕ್ಷಕ್ಕೆ ಸಂಬಂಧಿಸಿದ ಕೆಲವು ಫೋಟೋ ಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಆದರೆ ಯಾವುದೇ ದಾಖಲೆಗಳನ್ನು ಕೊಂಡೊಯ್ದಿಲ್ಲ ಎಂದವರ ಸ್ಪಷ್ಟಪಡಿಸಿದರು. ಎನ್ ಐಎ ಅಧಿಕಾರಿಗಳು, ಎಸ್ ಡಿಪಿಐ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ, ದರ್ಪ ಪ್ರದರ್ಶಿಸಿದ ಜೊತೆಗೆ ಕಚೇರಿಗೆ ಹಾನಿ ಉಂಟು ಮಾಡಿದ್ದಾರೆ. ಈ ಕುರಿತು ಕಾನೂನು ಹೋರಾಟ ಮಾಡಲಾಗುವುದು ಎಂದು ಅಬೂಬಕರ್ ಕುಳಾಯಿ ತಿಳಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆ ನಡೆಸುತ್ತಿದ್ದ ಪಿಎಫ್ ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಅಂದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka