ಕೊಲೆ ಪ್ರಕರಣಗಳ ತನಿಖೆಯಲ್ಲಿ ತಾರತಮ್ಯ ನೀತಿ ಖಂಡಿಸಿ ಸೆ.23ರಂದು ಪ್ರತಿಭಟನೆ - Mahanayaka
12:17 PM Saturday 14 - December 2024

ಕೊಲೆ ಪ್ರಕರಣಗಳ ತನಿಖೆಯಲ್ಲಿ ತಾರತಮ್ಯ ನೀತಿ ಖಂಡಿಸಿ ಸೆ.23ರಂದು ಪ್ರತಿಭಟನೆ

pressmeet
22/09/2022

ಬೆಳ್ತಂಗಡಿ;  ಸುಳ್ಯದ ಮಸೂದ್ ಮತ್ತು ಸುರತ್ಕಲ್‌ ನ ಫಾಝಿಲ್ ಎಂಬಿಬ್ಬರ  ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಸರಕಾರ ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ನಿಲ್ಲಿಸಬೇಕು. ಎಂದು ಒತ್ತಾಯಿಸಿ ಸೆ.23 ರಂದು ಸಂಜೆ 4 ಗಂಟೆಗೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಸಭೆಯನ್ನು ಬೆಳ್ತಂಗಡಿ ತಾಲೂಕಿನ ಮುಸ್ಲಿಂ ಸಂಘಟನೆಗಳ ಸಂಯುಕ್ತ ಒಗ್ಗೂಡುವಿಕೆಯೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ ಹೇಳಿದರು.

ಜಮೀಯತುಲ್ ಫಲಾಹ್ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ದ.ಕ.ಜಿಲ್ಲೆಯಲ್ಲಿ ಇತ್ತೀಚಿಗೆ ಕೋಮು ವೈಷಮ್ಯದ ಕಾರಣದಿಂದ ನಡೆದ ಸರಣಿ ಹತ್ಯೆಗಳಿಗೆ ಸಂಬಂಧಿಸಿ ಆಡಳಿತ ವ್ಯವಸ್ಥೆಯು ಪಕ್ಷಪಾತದ ತನಿಖೆ ನಡೆಸುತ್ತಿರುವುದು ಮತ್ತು ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಕಂಡು ಬರುತ್ತಿದೆ ಎಂದರು.

ದುಷ್ಕರ್ಮಿಗಳು ಸುಳ್ಯದ ಮಸೂದ್ ಎಂಬ ಅಮಾಯಕ ಯುವಕನನ್ನು ವ್ಯವಸ್ಥಿತವಾಗಿ ಹತ್ಯೆಗೈದ ಬಳಿಕ ಅದಕ್ಕೆ ಸ್ಥಳೀಯರಿಂದ ಪ್ರವೀಣ್ ನೆಟ್ಟಾರು ಎಂಬ ಬಿಜೆಪಿ ನಾಯಕನ ಹತ್ಯೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಸುರತ್ಕಲ್‌ ನ ಫಾಝಿಲ್ ಎಂಬ ಯುವಕನನ್ನು ಹತ್ಯೆ ನಡೆಯಿತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ನಿಷ್ಪಕ್ಷಪಾತ ಹಾಗೂ ತಾರತಮ್ಯರಹಿತವಾಗಿ ವರ್ತಿಸಿ ರಾಜಧರ್ಮ ಪಾಲಿಸಬೇಕಾಗಿದ್ದ ರಾಜ್ಯ ಸರಕಾರವು, ಹತ್ಯೆ ಪ್ರಕರಣಗಳನ್ನು ಧರ್ಮಾಧಾರಿತವಾಗಿ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ಪ್ರವೀಣ್ ನೆಟ್ಟಾರು ಕೊಲೆ ಸ್ಥಳೀಯವಾಗಿ ನಡೆದ ಪ್ರತೀಕಾರದ ಹತ್ಯೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದ್ದರೂ, ಇದರ ತನಿಖೆಯನ್ನು ತರಾತುರಿಯಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್.ಐ.ಗೆ) ವಹಿಸಲಾಯಿತು. ನಂತರದಲ್ಲಿ ಹಲವಾರು ಮುಸ್ಲಿಮ್ ಮುಖಂಡರು ಮತ್ತು ಮುಸ್ಲಿಮ್ ಯುವಕರ ಮನೆಗೆ ತನಿಖೆ ನೆಪದಲ್ಲಿ ದಾಳಿ ನಡೆಸಿ ಕಿರುಕುಳ ನೀಡಲಾಯಿತು. ಆದರೆ ಮಸೂದ್ ಮತ್ತು ಫಾಝಿಲ್ ಹತ್ಯೆ ಸಂಘಪರಿವಾರದ ದುಷ್ಕರ್ಮಿಗಳಿಂದ ನಡೆದ ವ್ಯವಸ್ಥಿತ ಹತ್ಯೆಯಾಗಿದ್ದರೂ ಆಡಳಿತ ವ್ಯವಸ್ಥೆಯು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಾತ್ರವಲ್ಲ, ಇದರ ಹಿಂದಿನ ಷಡ್ಯಂತ್ರವನ್ನು ಭೇಧಿಸುವಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯಾಗಲೀ, ರಾಜ್ಯ ಸರಕಾರವಾಗಲೀ ಆಸಕ್ತಿ ತೋರುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ಧೋರಣೆ ಅನುಸರಿಸಲಾಗಿದೆ. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಲವೇ ಕಿ.ಮೀ.ಅಂತರದಲ್ಲಿದ್ದ ಮಸೂದ್ ಮನೆಗೆ ಭೇಟಿ ನೀಡಲಿಲ್ಲ. ಸುರತ್ಕಲ್ ಫಾಝಿಲ್ ಕುಟುಂಬಕ್ಕೂ ಮುಖ್ಯಮಂತ್ರಿಯಾಗಲೀ, ಸರಕಾರದ ಇತರ ಪ್ರತಿನಿಧಿಗಳಾಗಲೀ ಇದುವರೆಗೂ ಭೇಟಿ ನೀಡಿಲ್ಲ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಮಸೂದ್‌ ಮತ್ತು ಫಾಝಿಲ್ ಮನೆಗೆ ಭೇಟಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೂ, ಅದನ್ನು ಈಡೇರಿಸಿಲ್ಲ. ಅಲ್ಲದೇ ಸಚಿವರು, ಸ್ಥಳೀಯ ಶಾಸಕರಾಗಲೀ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಅದೇ ರೀತಿ ಪ್ರವೀಣ್ ಕುಟುಂಬಕ್ಕೆ ಸರಕಾರದ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರದ ಚೆಕ್‌ ವಿತರಿಸಲಾಯಿತಾದರೂ, ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಯಾವುದೇ ರೀತಿಯ ಪರಿಹಾರವನ್ನು ಘೋಷಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲಾ ವರ್ಗದ ಜನರೊಂದಿಗೆ ಸಮಾನವಾಗಿ ವ್ಯವಹರಿಸಬೇಕಾಗಿರುವುದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವೊಂದರ ಕರ್ತವ್ಯವಾಗಿರುತ್ತದೆ. ಆದರೆ ಪ್ರಸಕ್ತ ಆಡಳಿತ ಸರಕಾರವು ಒಂದು ನಿರ್ದಿಷ್ಟ ಸಮುದಾಯದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಇಸ್ಲಾಂ ಧರ್ಮದ ಬಗ್ಗೆ ಅಲ್ಲಲ್ಲಿ ಅಪಪ್ರಚಾರಗಳನ್ನು ಮಾಡುತ್ತಾ, ಕಪೋಲಕಲ್ಪಿತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಮದರಸಗಳ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಈ ಸರಣಿ ಹತ್ಯೆ ಘಟನೆಗಳಿಗೆ ಸಂಬಂಧಿಸಿ ನ್ಯಾಯಯುತ ಕ್ರಮಕ್ಕೆ ಒತ್ತಾಯಿಸಿ “ಬೆಳ್ತಂಗಡಿ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟ” ಈ ಮೂಲಕ ಪ್ರತಿಭಟನೆ ನಡೆಸಲಾಗುತ್ತಿರುವುದಾಗಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಝೀರ್ ಬೆಳ್ತಂಗಡಿ, ಅಬ್ದುಲ್ ರಝಾಕ್, ಕೆ.ಎಸ್ ಅಬ್ದುಲ್ಲ ಕರಾಯ, ತಲ್‌ಹತ್ ಎಂ.ಜಿ, ಉಸ್ಮಾನ್ ಶಾಫಿ ಮತ್ತು ಉಮರ್ ಗುರುವಾಯನಕೆರೆ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ