ಹಾಸ್ಟೆಲ್ ನ ಕಿಟಕಿ ಮುರಿದು ಪರಾರಿಯಾಗಿದ್ದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ!
ಮಂಗಳೂರಿನಲ್ಲಿ ನಾಪತ್ತೆಯಾಗಿದ್ದ ಮೇರಿಹಿಲ್ ನ ಖಾಸಗಿ ಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 21ರಂದು ಮುಂಜಾನೆ 3 ಗಂಟೆಗೆ ಕಾಲೇಜಿನ ಪ್ರಥಮ ಪಿಯುಸಿಯ ಮೂವರು ಕಾಲೇಜ್ ಹಾಸ್ಟೆಲ್ನ ಕಿಟಕಿ ಮುರಿದು ಪರಾರಿಯಾಗಿದ್ದರು.
ವಿದ್ಯಾರ್ಥಿನಿಯರು ಕಾಲೇಜ್ ಹಾಸ್ಟೆಲ್ ಹೊರಭಾಗದ ಮುಖ್ಯರಸ್ತೆಯಲ್ಲಿ ಒಟ್ಟಿಗೆ ನಡೆದಾಡಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಮೂವರು ನಾಪತ್ತೆಯಾದ ಬಳಿಕ ಎಲ್ಲಿ ಹೋಗಿದ್ದಾರೆ ಎಂಬುದು ಆತಂಕ ಸೃಷ್ಟಿಸಿತ್ತು. ಈ ವಿದ್ಯಾರ್ಥಿನಿಯರು ಶುಕ್ರವಾರ ಸಂಜೆ ಚೆನ್ನೈ ಪೊಲೀಸ್ ಠಾಣೆಯಲ್ಲಿ ಹಾಜರಾಗಿ, ನಾವು ಮಂಗಳೂರಿನಿಂದ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಇಂದು ಅವರನ್ನು ಮಂಗಳೂರಿಗೆ ಕರೆದುಕೊಂಡು ಬರಲಾಗಿದೆ.
ವಿದ್ಯಾರ್ಥಿನಿಯರು ಇತ್ತೀಚೆಗೆ ನಡೆದ ಪ್ರಥಮ ಪಿಯುಸಿಯ ಯುನಿಟ್ ಪರೀಕ್ಷೆಯೊಂದರಲ್ಲಿ ಕಡಿಮೆ ಅಂಕ ಪಡೆದಿದ್ದರು. ಇದರಿಂದ ಮನೆಯವರಿಗೆ ಯಾವ ರೀತಿ ಉತ್ತರಿಸುವುದು ಎಂದು ತಿಳಿಯದೆ ಪರಾರಿಯಾಗಲು ನಿರ್ಧರಿಸಿದ್ದರು. ಮೂವರಲ್ಲಿ ಓರ್ವ ವಿದ್ಯಾರ್ಥಿನಿಯ ಸಂಬಂಧಿಕರು ಚೆನ್ನೈನಲ್ಲಿ ಇರುವುದರಿಂದ ಇವರು ರೈಲಿನಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.
ಆದರೆ ಚೆನ್ನೈಗೆ ಹೋದ ಬಳಿಕ ಅವರಿಗೆ ಮನೆಯವರು ಆತಂಕಗೊಂಡಿರಬಹುದು ಎಂಬುದು ಅರಿವಾಗಿದೆ. ಅಲ್ಲೇ ಸುತ್ತಾಡಿ ರಿಕ್ಷಾದಲ್ಲಿ ಚೆನ್ನೈ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಪೊಲೀಸರಿಗೆ ನಡೆದ ವಿಚಾರ ತಿಳಿಸಿದ್ದು, ಅವರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಿದ್ಯಾರ್ಥಿನಿಯರು ಪತ್ತೆಯಾದ ಬಳಿಕ ಮಂಗಳೂರು ನಗರ ಪೊಲೀಸ್ ಕಮಿಷನರ್, ವಿದ್ಯಾರ್ಥಿನಿಯರ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಯ ಜೊತೆಗೆ ಮಾತನಾಡಿ, ವಿದ್ಯಾರ್ಥಿನಿಯರ ಜೊತೆಗೆ ಕೌನ್ಸಿಲಿಂಗ್ ನಡೆಸುವಂತೆ ಸಲಹೆ ನೀಡಿದರು. ವಿದ್ಯಾರ್ಥಿನಿಯರು ಪತ್ತೆಯಾಗಿದ್ದರಿಂದ ನಗರದಲ್ಲಿ ಆತಂಕ ಸೃಷ್ಟಿಸಿದ್ದ ಪ್ರಕರಣವು ಸುಖಾಂತ್ಯ ಕಂಡಿದೆ.
ವಿಡಿಯೋ ನೋಡಿ:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka