ಜನರು ತಪ್ಪು ರೀತಿಯ ಆಹಾರ ಸೇವನೆ ಮಾಡಬಾರದು: ಮಾಂಸಾಹಾರ ಕುರಿತು ಮೋಹನ್ ಭಾಗವತ್ ಹೇಳಿಕೆ

ನಾಗಪುರ: ಬಹುಸಂಖ್ಯಾತ ಮಾಂಸಾಹಾರಿಗಳ ಆಹಾರದ ಮೇಲೆ ಪದೇ ಪದೇ ಅಸಹನೆ ವ್ಯಕ್ತವಾಗುತ್ತಿದೆ. ಇದೀಗ ಸ್ವತಃ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಮಾಂಸಾಹಾರದ ಕುರಿತು ಅಸಹನೆ ವ್ಯಕ್ತಪಡಿಸಿದ್ದಾರೆ.
ಜನರು ತಪ್ಪು ರೀತಿಯ ಆಹಾರ ಸೇವನೆ ಮಾಡಬಾರದು ಮತ್ತು ಅತಿಯಾದ ಹಿಂಸೆಯನ್ನು ಒಳಗೊಂಡ ಆಹಾರ ಸೇವಿಸುವುದರಿಂದ ದೂರ ಇರಬೇಕು ಎಂದು ಅವರು ಹೇಳಿದ್ದಾರೆ.
ಆರೆಸ್ಸೆಸ್‌ನ ಅಂಗ ಸಂಸ್ಥೆ ಭಾರತ್ ವಿಕಾಸ್ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ತಪ್ಪು ರೀತಿಯ ಆಹಾರ ಸೇವಿಸುತ್ತಿದ್ದರೆ, ಅದು ನಿಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ. ಜನರು ‘ತಾಮಸಿಕ’ ಆಹಾರ ತಿನ್ನಬಾರದು. ಅತಿಯಾದ ಹಿಂಸೆಯನ್ನು ಒಳಗೊಂಡ ಆಹಾರವನ್ನು ಸೇವನೆ ಮಾಡಬಾರದು” ಎಂದು ಸಲಹೆ ನೀಡಿದ್ದಾರೆ
ಜಗತ್ತಿನಲ್ಲಿ ಎಲ್ಲೆಡೆ ಮಾಂಸ ಸೇವಿಸುವಂತಹ ಜನರು ಭಾರತದಲ್ಲಿ ಇದ್ದಾರೆ. ಆದರೆ ನಮ್ಮ ದೇಶದಲ್ಲಿ ಮಾಂಸಾಹಾರಿಗಳಾಗಿದ್ದರೂ ಕೂಡ ಸಂಯಮಗಳನ್ನು ಹೊಂದಿರುತ್ತಾರೆ ಮತ್ತು ಕೆಲವು ನಿಯಮಗಳನ್ನು ಪಾಲಿಸುತ್ತಾರೆ ಎಂದಿದ್ದಾರೆ.
ಇಲ್ಲಿನ ಮಾಂಸಾಹಾರಿಗಳು ಶ್ರಾವಣದ ಇಡೀ ತಿಂಗಳು ಅದನ್ನು ತಿನ್ನುವುದಿಲ್ಲ. ಅವರು ಸೋಮವಾರ, ಮಂಗಳವಾರ, ಗುರುವಾರ ಅಥವಾ ಶನಿವಾರ ಮಾಂಸ ಸೇವನೆ ಮಾಡುವುದಿಲ್ಲ. ಅವರು ತಮ್ಮ ಮೇಲೆ ತಮಗೆ ಕೆಲವು ನಿಯಮಗಳನ್ನು ಹೇರಿಕೊಂಡಿರುತ್ತಾರೆ ಎಂದಿದ್ದಾರೆ.
ಇನ್ನೂ ಮೋಹನ್ ಭಾಗವತ್ ಹೇಳಿಕೆ ದೇಶಾದ್ಯಂತ ಮಾಂಸಾಹಾರಿಗಳ ಬೇಸರಕ್ಕೆ ಕಾರಣವಾಗಿದೆ. ಕೇವಲ ಮಾಂಸಾಹಾರ ಮಾತ್ರ ಹಿಂಸೆಯಿಂದ ಕೂಡಿಲ್ಲ, ಸಸ್ಯಾಹಾರ ಕೂಡ ಹಿಂಸೆಯಿಂದ ಕೂಡಿದೆ. ಸಸ್ಯಗಳಿಗೂ ಜೀವ ಇದೆ. ಸಸ್ಯಗಳನ್ನು ಜೀವಂತವಾಗಿ ಕುದಿಸಿ ಹಿಂಸೆಯಿಂದಲೇ ಆಹಾರ ತಯಾರಿಸಲಾಗುತ್ತದೆ. ಆದರೆ ವ್ಯತ್ಯಾಸ ಏನಂದ್ರೆ, ಪ್ರಾಣಿಗಳು ತಮ್ಮ ನೋವನ್ನು ಧ್ವನಿಯ ಮೂಲಕ ವ್ಯಕ್ತಪಡಿಸುತ್ತದೆ. ಸಸ್ಯಕ್ಕೆ ನೋವನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಮನುಷ್ಯ ಮಿಶ್ರ ಆಹಾರಿಯಾಗಿದ್ದು, ಆತನಿಗೆ ಚಪ್ಪಟೆ ಹಲ್ಲು ಮತ್ತು ಕೋರೆ ಹಲ್ಲುಗಳಿವೆ. ಪ್ರಾಕೃತಿಕವಾಗಿ ಮನುಷ್ಯ ಮಿಶ್ರಾಹಾರಿಯಾಗಿದ್ದಾನೆ. ಸಾಮಾನ್ಯವಾಗಿ ಚಪ್ಪಟೆ ಹಲ್ಲು ಹೊಂದಿರುವ ಪ್ರಾಣಿಗಳು ಸಸ್ಯಾಹಾರಿಗಳಾಗಿದ್ದರೆ, ಕೋರೆಹಲ್ಲು ಹೊಂದಿರುವ ಪ್ರಾಣಿಗಳು ಮಾಂಸಾಹಾರಿಯಾಗಿರುತ್ತದೆ. ಈ ಎರಡೂ ರೀತಿಯ ಹಲ್ಲುಗಳನ್ನು ಹೊಂದಿರುವ ಮನುಷ್ಯ ಮಾಂಸಾಹಾರಿಯೂ ಹೌದು, ಸಸ್ಯಾಹಾರಿಯೂ ಹೌದು. ಇದು ಪ್ರಕೃತಿಯ ನಿಯಮ ಎನ್ನುವ ಚರ್ಚೆಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka