ಆಶೀರ್ವಾದ ಮಾಡಲು ಹೋಗಿ ಮಾಂಗಲ್ಯ ಸರ ಕಳೆದುಕೊಂಡ ಅರ್ಚಕರ ಪತ್ನಿ!
ಆಶೀರ್ವಾದ ಮಾಡಲು ಹೋಗಿ ಮಹಿಳೆಯೋರ್ವರು ಮಾಂಗಲ್ಯ ಸರ ಕಳೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ರಥಬೀದಿಯಲ್ಲಿರುವ ಹನುಮಾನ್ ದೇವಾಲಯಕ್ಕೆ ಹೋಗುವ ದಾರಿಯಲ್ಲಿನ ಅರ್ಚಕರ ಮನೆ ಬಾಗಿಲಿಗೆ ಬಂದ ಹಿಂದಿ ಭಾಷಿಗ ವ್ಯಕ್ತಿಯೋರ್ವ ಮನೆಯಲ್ಲಿದ್ದ ಅರ್ಚಕರ ಪತ್ನಿಯಲ್ಲಿ ತನಗೆ ಸೂತಕ ಇದೆ. ಹೀಗಾಗಿ ದೇವಾಲಯಕ್ಕೆ ಹೋಗಲಾಗುವುದಿಲ್ಲ. ದೇವರಿಗೆ ಹರಕೆ ರೂಪದಲ್ಲಿ ತನ್ನ ಪರವಾಗಿ ಮುನ್ನೂರು ರೂಪಾಯಿ ಸಲ್ಲಿಸಿ ಎಂದು ತಲಾ 100 ರೂಪಾಯಿಯ 3 ನೋಟುಗಳನ್ನು ನೀಡಿ, ನಿಮ್ಮ ಮಾಂಗಲ್ಯ ಸರವನ್ನು ಅದಕ್ಕೆ ಸ್ಪರ್ಶಿಸಿ ಹಣವನ್ನು ಹಿಂತಿರುಗಿಸಲು ವಿನಂತಿಸುತ್ತಾನೆ.
ಈ ವೇಳೆ ನನ್ನ ಮಾಂಗಲ್ಯ ಸರವನ್ನು ನಿಮ್ಮ ನೋಟಿಗೆ ಯಾಕೆ ಸ್ಪರ್ಶಿಸಬೇಕೆಂದು ಅರ್ಚಕರ ಪತ್ನಿ ಪ್ರಶ್ನಿಸಿದ್ದಾರೆ. ಅದಕ್ಕೆ ನಾನು ಊರಿನಲ್ಲಿ ಚಿನ್ನಾಭರಣದ ಅಂಗಡಿಯನ್ನು ತೆರೆಯಲಿದ್ದೇನೆ. ಪತಿವ್ರತಾ ಮಹಿಳೆಯ ಮಾಂಗಲ್ಯ ಸರವನ್ನು ಸ್ಪರ್ಶಿಸಿದ ಹಣವನ್ನು ಅಂಗಡಿಯೊಳಗಿರಿಸಲು ಸೂಚಿಸಿದ್ದಾರೆ. ಅದಕ್ಕಾಗಿ ನಿಮ್ಮ ಮಾಂಗಲ್ಯ ಸರವನ್ನು ಈ ನೋಟಿಗೆ ಸ್ಪರ್ಶಿಸಿ ನೀಡಿ ಎಂದು ವಿನಂತಿಸುತ್ತಾನೆ. ಆತನ ಮಾತನ್ನು ಸತ್ಯವೆಂದು ನಂಬಿದ ಮಹಿಳೆ ತನ್ನ ಮಾಂಗಲ್ಯವನ್ನು ಹಣಕ್ಕೆ ಸ್ಪರ್ಶಿಸುತ್ತಾರೆ. ಈ ವೇಳೆ ಆತ, ಆ ರೀತಿಯಲ್ಲ. ಮಾಂಗಲ್ಯ ಸರವನ್ನು ಸಂಪೂರ್ಣ ತೆಗೆದು ಅದನು ಒಮ್ಮೆ ನೋಟಿನಲ್ಲಿಟ್ಟು ಕೊಡಿ ಎಂದು ತಿಳಿಸಿದಾಗ ಮಹಿಳೆಯು ಅದೇ ರೀತಿ ಮಾಡಿ ನೋಟನ್ನು ಆತನ ಕೈಯಲ್ಲಿ ನೀಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಆ ವ್ಯಕ್ತಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ.
ಒಂದಷ್ಟು ಹೊತ್ತು ಕಳೆದ ಮೇಲೆ ವಾಸ್ತವ ಸ್ಥಿತಿಗೆ ಬಂದ ಮಹಿಳೆ ತನ್ನ ಮಾಂಗಲ್ಯ ಸರ ಕೊರಳಲ್ಲಿ ಇಲ್ಲದಿರುವುದನ್ನು ಅರಿತು ಬೊಬ್ಬೆ ಹೊಡೆದಾಗಲೇ ಅಪರಿಚಿತ ವ್ಯಕ್ತಿ ಮಂಕುಬೂದಿ ಎರಚಿ ತನ್ನ ಮಾಂಗಲ್ಯ ಸರ ಎಗರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳದಲ್ಲಿನ ಸಿಸಿ ಕ್ಯಾಮಾರಗಳ ಆಧಾರದಲ್ಲಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka