‘ಪ್ರೇತ’ ದ ವೇಷ ಹಾಕಿ ಯುವಕನಿಂದ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಯಾಚನೆ..!
ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವು ನೀಡಲು, ಬಡ ಯುವತಿಯ ಮದುವೆಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಯುವಕನೋರ್ವ ಪ್ರೇತದ ವೇಷ ಹಾಕಿ ಹಣ ಸಂಗ್ರಹಕ್ಕೆ ಮುಂದಾಗಿದ್ದಾನೆ.
ಹೌದು. ನವರಾತ್ರಿಯ ಈ ಸಂದರ್ಭದಲ್ಲಿ ಪ್ರೇತದ ವೇಷದ ಮೂಲಕ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ವಿಶೇಷ ವೇಷ ಧರಿಸಿ ಈ ರೀತಿ ನೆರವಾಗಲು ಹೊರಟವರು. ಇವ್ರು ವೇಷ ಹಾಕಿ ಮನೆ ಮನೆ ಸುತ್ತಾಟ ನಡೆಸೋ ವೇಳೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ.
ದೇವದಾಸ್ ಅವರು ಈ ಹಿಂದೆಯೂ ಎರಡು ಬಾರಿ ವೇಷ ಹಾಕಿ ಸಂಗ್ರಹಗೊಂಡ ಹಣದಿಂದ ಅಶಕ್ತರಿಗೆ ನೆರವು ನೀಡಿದ್ದರು. ಆದರೆ ಕೊರೊನಾ ಕಾರಣಕ್ಕೆ ಎರಡು ವರ್ಷಗಳ ಕಾಲ ವೇಷ ಹಾಕುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಹಿಂದೆ ಒಂದೆರಡು ದಿನ ಕಾಲ ಮಾತ್ರ ವೇಷ ಹಾಕಿದ್ದ ಅವರು ಈ ಬಾರಿ ಹೆಚ್ಚಿನ ಹಣ ಸಂಗ್ರಹದ ಉದ್ದೇಶದಿಂದ ಬರೋಬ್ಬರಿ ಏಳು ದಿನಗಳ ಕಾಲ ವೇಷ ಹಾಕಿ ಸುತ್ತಾಟ ನಡೆಸಲಿದ್ದಾರೆ.
ಪ್ರೇತದ ವೇಷ ಹಾಕಿ ಸುತ್ತಾಟ ಆರಂಭಿಸಿರುವ ಅವರು ಅಕ್ಟೋಬರ್ ಐದರವರೆಗೆ ವೇಷ ಧರಿಸುತ್ತಾರೆ. ಒಟ್ಟು ಸುಮಾರು ಇಪ್ಪತ್ತು ಸಾವಿರ ರೂಪಾಯಿ ಸಂಗ್ರಹದ ಗುರಿ ಹೊಂದಿರುವ ಅವರು ಅದನ್ನು ಸಮಾನವಾಗಿ ವಿಂಗಡಿಸಿ ಎರಡು ಕುಟುಂಬಕ್ಕೆ ನೆರವು ನೀಡುವ ಗುರಿ ಹೊಂದಿದ್ದಾರೆ.
ತಮ್ಮ ಮನೆಯ ಪಕ್ಕದಲ್ಲಿರುವ ಬಡ ಕುಟುಂಬದ ಒಂದೇ ಮನೆಯ ಇಬ್ಬರು ಮಕ್ಕಳ ಕಿಡ್ನಿ ಸಂಬಂಧಿ ಖಾಯಿಲೆಯ ಚಿಕಿತ್ಸೆಗೆ ನೆರವಿನ ಜತೆಗೆ ಪಕ್ಕದ ಗ್ರಾಮದ ಬಡ ಕುಟುಂಬದ ಯುವತಿಯ ಮದುವೆಯ ಸಹಾಯ ನೀಡುವ ಯೋಜನೆ ಹಾಕಿ ಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka