ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದರೆ ಗಾಂಧಿ ಕುಟುಂಬದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಾರೆ: ಸಚಿವ ಸುನೀಲ್ ಕುಮಾರ್
ಉಡುಪಿ: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದರೆ ಗಾಂಧಿ ಕುಟುಂಬದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿಕೆ ನೀಡಿದರು.
ಎಐಸಿಸಿ ಅಧ್ಯಕ್ಷ ರೇಸ್ ನಲ್ಲಿ ಖರ್ಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಈಗಾಗಲೇ ಎರಡು ಮೂರು ಶಕ್ತಿಗಳು ಕೆಲಸ ಮಾಡುತ್ತಿವೆ. ಖರ್ಗೆ ಅಧ್ಯಕ್ಷರಾದರೆ ಗಾಂಧಿ ಕುಟುಂಬದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಾರೆ. ಸ್ವತಂತ್ರವಾಗಿ ಅವರಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ನಮ್ಮದು ಯುವಕರ ಪಾರ್ಟಿ ಯುವಕರನ್ನು ಆಕರ್ಷಿಸುತ್ತೇವೆ ಎನ್ನುತ್ತಾರೆ. ಆದರೆ, ಖರ್ಗೆಯಂತಹ ಹಿರಿಯರನ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಕಾಂಗ್ರೆಸ್ ಯುವಕರಿಗೆ ಯಾವ ಆದ್ಯತೆ ನೀಡುತ್ತೆ ಕಾದುನೋಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ನ ಮೂರನೇ ಬಣ ಉದಯವಾಗುತ್ತೆ. ಸಿದ್ದರಾಮಯ್ಯ ಗುಂಪು ಡಿಕೆ ಶಿವಕುಮಾರ್ ಗುಂಪು ಜೊತೆಗೆ ಖರ್ಗೆಯವರ ಗುಂಪು ಉದಯವಾಗುತ್ತೆ ಎಂದು ಅವರು ಭವಿಷ್ಯ ನುಡಿದರು.
ಕಾಂಗ್ರೆಸ್ 5 G ವೇಗದಲ್ಲಿ ಭ್ರಷ್ಟಾಚಾರ:
ಕಾಂಗ್ರೆಸಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಇಲ್ಲ, ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ 5 G ವೇಗದಲ್ಲಿ ಭ್ರಷ್ಟಾಚಾರ ಮಾಡಿದೆ. ಭ್ರಷ್ಟಾಚಾರ ಕಾಂಗ್ರೆಸ್ ನ ಟ್ರೇಡ್ ಮಾರ್ಕ್. ಭ್ರಷ್ಟಾಚಾರ ಮಾಡಿ ಕಾಂಗ್ರೆಸ್ ನಾಯಕರು ಜಾಮೀನಿನ ಮೇಲೆ ಇದ್ದಾರೆ. ಭ್ರಷ್ಟಾಚಾರದ ಬಗ್ಗೆ ಟಿ-ಶರ್ಟ್ ಗಳನ್ನು ಹಾಕಿಕೊಂಡು ನಾಟಕ ಮಾಡುತ್ತಿದ್ದಾರೆ ಎಂದರು.
ಜೋಡೋಗೂ ಕಾಂಗ್ರೆಸ್ ಗೂ ಸಂಬಂಧವೇ ಇಲ್ಲ:
ಕಾಂಗ್ರೆಸ್ ನವರು ಯಾವುದೇ ವಿಚಾರ ಸ್ಪಷ್ಟತೆ ಇಲ್ಲದೆ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಈ ದೇಶದಲ್ಲಿ ಎರಡು ಧ್ವಜದ ಸಂಸ್ಕೃತಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಭಾರತಕ್ಕೊಂದು ಧ್ವಜ ಕಾಶ್ಮೀರಕ್ಕೊಂದು ಧ್ವಜ ಮಾಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಭಾರತವನ್ನು ವಿಭಜಿಸುವ ಎಲ್ಲಾ ಪ್ರಯತ್ನ ಮಾಡಿದ ಪಕ್ಷ ಕಾಂಗ್ರೆಸ್ ಗೂ ಭಾರತ ಜೋಡೋ ಅನ್ನುವ ಶಬ್ದಕ್ಕೂ ಯಾವುದೇ ಸಂಬಂಧವೇ ಇಲ್ಲ ಎಂದ ಸುನೀಲ್ ಕುಮಾರ್, ಕಾಂಗ್ರೆಸ್ ಕಾರ್ಯಕರ್ತರನ್ನು ಮೊದಲು ಜೋಡಿಸಿ, ಕಾಂಗ್ರೆಸಿಗೆ ನಮ್ಮ ಕಾಮನ್ ಮ್ಯಾನ್ ಸಿಎಂ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ 21 ದಿನಗಳ ಯಾತ್ರೆಗೆ ಜನ ಬೆಂಬಲ ಇಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka