ಗ್ರಾ.ಪಂ. ಅಧ್ಯಕ್ಷರ ಅಧಿಕಾರವನ್ನು ಕಿತ್ತುಕೊಂಡ ಬಿಜೆಪಿ ಸರಕಾರ: ಬಿ.ಎಂ.ಭಟ್ ಖಂಡನೆ
ಗ್ರಾಮ ಪಂಚಾಯತಿನಲ್ಲಿ ಬಿಲ್ ಪಾವತಿಯ ಚೆಕ್ ಗೆ ಪಂಚಾಯತ್ ಅಧ್ಯಕ್ಷರ ಸಹಿ ಬೇಡ ಎಂದು ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಕೇಂದ್ರಕರಣ ಮಾಡಿದ ಬಿಜೆಪಿ ಸರಕಾರದ ನೂತನ ಆದೇಶ ಖಂಡನೀಯ ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ,
ಈ ಹಿಂದೆ ಗ್ರಾಮ ಪಂಚಾಯತ್ ಕಾಯ್ದೆ ಪ್ರಕಾರ ಅಧಿಕಾರ ವಿಕೇಂದ್ರಕರಣದ ಅಡಿಯಲ್ಲಿ ಎಲ್ಲಾ ಹಣಕಾಸು ವ್ಯವಹಾರಗಳಿಗೂ, ಬಿಲ್ ಪಾವತಿಗಳಿಗೂ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ (ಈ ಹಿಂದೆ ಕಾರ್ಯದರ್ಶಿ) ಜಂಟಿ ಸಹಿ ಬೇಕಾಗಿತ್ತು. ಆದರೆ ಇದೀಗ ಬಿಜೆಪಿ ಸರಕಾರ ಅಧ್ಯಕ್ಷರ ಅಧಿಕಾರವನ್ನು ಕಿತ್ತುಕೊಂಡು, ಬಿಲ್ ಪಾವತಿಯ ಚೆಕ್ ಗೆ ಪಂಚಾಯತ್ ಪಿಡಿಓ ಮತ್ತು ಎರಡನೇ ದರ್ಜೆಯ ಗುಮಾಸ್ತರ ಜಂಟಿ ಸಹಿ ಹಾಕುವಂತೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಿರುವುದು ಜನರ ಹಕ್ಕನ್ನ ಕಸಿಯುವ ತಂತ್ರವಾಗಿದೆ ಎಂದು ಅವರು ಟೀಕಿಸಿದರು.
ಪಂಚಾಯತ್ ವ್ಯಾಪ್ತಿಯ ಕಾಮಗಾರಿಗಳು ಕಳಪೆ ಆಗದಂತೆ ತನ್ನ ಅಧಿಕಾರವನ್ನು ಬಳಸಲು ಅಧಿಕಾರ ಇದ್ದ ಅಧ್ಯಕ್ಷರ ಅಧಿಕಾರವನ್ನು ಕಿತ್ತುಕೊಳ್ಳುವುದರ ಮೂಲಕ ಕಳಪೆ ಕಾಮಗಾರಿಗೆ ಅನುವು ಮಾಡಿಕೊಟ್ಟಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದರು.
ಮಾತ್ರವಲ್ಲ ಅಧಿಕಾರ ಕಿತ್ತುಕೊಳ್ಳಲು ಸರಕಾರ ನೀಡಿದ ಕಾರಣ ಪಂಚಾಯತ್ ಅಧ್ಯಕ್ಷರನ್ನೇ ಅವಮಾನಿಸುವುದು ಹಾಗೂ ಅನುಮಾನದಿಂದ ನೋಡುವಂತಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರ ದೆಸೆಯಿಂದ ಕೆಲವು ಅಧ್ಯಕ್ಷರು ಲೋಕಾಯುಕ್ತ ಬಲೆಗೆ ಬಿದ್ದಿರುವರು ಹಾಗೂ ಅಧ್ಯಕ್ಷರ ನಿರ್ಲಕ್ಷತೆಯಿಂದ ಬಿಲ್ ಪಾವತಿ ವಿಳಂಬವಾಗುವುದೆಂದು ಹೇಳಿರುವ ಬಿಜೆಪಿ ಸರಕಾರ, ಊರ ಜನತೆಗೆ ಮಾಡಿದ ಅಪಮಾನ ಎಂದರು.
ದೊಡ್ಡ ಭ್ರಷ್ಟಾಚಾರ ಮಾಡಿದವರನ್ನು ಮಂತ್ರಿ ಮಂಡಲದಿಂದ ಕೈಬಿಡಲಾಗದ ಸರಕಾರ ಯಾರೋ ಮಾಡಿದ ತಪ್ಪಿಗೆ ರಾಜ್ಯದ ಎಲ್ಲಾ ಪಂಚಾಯತ್ ಅಧ್ಯಕ್ಷರ ಮೇಲೆ ಆಪಾದನೆ ಹೊರಿಸುವುದು ಸರಿಯಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರ ಇದ್ದರೆ ಅದರಿಂದ ಕಮೀಷನ್ ದಂಧೆ ನಡೆಸಲು ಸಾಧ್ಯವಾಗುತ್ತಿಲ್ಲ, ಅಧ್ಯಕ್ಷರು ಊರಿನವರಾಗಿದ್ದು ಅವರ ಪಾರದರ್ಶಕತೆಯನ್ನು ವಿರೋಧಿಸಲು ಕಷ್ಟವೆಂದು ಈ ರೀತಿ ಅಡ್ಡ ದಾರಿ ಹಿಡಿದ ಸರಕಾರದ ನಡೆಯ ವಿರುದ್ದ ನಾವು ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಅವರು ಸರಕಾರವನ್ನು ಎಚ್ಚರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka