ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆ ಇಲ್ಲ ಎಂದ ಆಪ್ ಸಚಿವ: ಬಿಜೆಪಿ ಕಿಡಿ
ದೇಶದಲ್ಲಿ ಬೌದ್ಧ ಧರ್ಮ ಮತ್ತೆ ವೇಗವಾಗಿ ಬೆಳೆಯುತ್ತಿದೆ. ಪ್ರತೀ ವರ್ಷ ಧಮ್ಮ ಚಕ್ಕ ಪವತ್ತನ ದಿನದಂದು ಲಕ್ಷಾಂತರ ಜನರು ಬೌದ್ಧ ಧಮ್ಮವನ್ನು ಸ್ವೀಕರಿಸುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಅಕ್ಟೋಬರ್ 1956 ರಲ್ಲಿ ತಮ್ಮ ಕೋಟ್ಯಾಂತರ ಅನುಯಾಯಿಗಳ ಜೊತೆಗೆ ಮೂಲ ಧರ್ಮ ಬೌದ್ಧ ಧಮ್ಮಕ್ಕೆ ಮರಳಿದರು. ಪ್ರತೀ ವರ್ಷದಂತೆ ಈ ವರ್ಷವೂ ಲಕ್ಷಾಂತರ ಮಂದಿ ಬೌದ್ಧ ಧಮ್ಮ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಆಪ್ ಸಚಿವ ರಾಜೇಂದ್ರ ಪಾಲ್ ಗೌತಮ್ ಕೂಡ ಭಾಗವಹಿಸಿದ್ದು, ಅಂಬೇಡ್ಕರ್ ಅವರು ಬೋಧಿಸಿದ ಪ್ರತಿಜ್ಞೆಯನ್ನು ಸ್ವೀಕರಿಸಿದ್ದಾರೆ.
“ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆ ಇಲ್ಲ, ಮತ್ತು ನಾನು ಅವರನ್ನು ಪೂಜಿಸುವುದಿಲ್ಲ” ಎಂಬ ಪ್ರತಿಜ್ಞೆಯನ್ನು ರಾಜೇಂದ್ರ ಪಾಲ್ ಗೌತಮ್ ಸ್ವೀಕರಿಸಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ ದೆಹಲಿ ಘಟಕವು ವೀಡಿಯೊವನ್ನು ಟ್ವೀಟ್ ಮಾಡಿದ್ದು, ಆಪ್ ಸಚಿವರು ಹಿಂದೂಗಳ ವಿರುದ್ಧ ವಿಷವನ್ನು ಉಗುಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ಸಚಿವರು ಹಿಂದೂಗಳ ವಿರುದ್ಧ ಹೇಗೆ ವಿಷ ಉಗುಳುತ್ತಿದ್ದಾರೆ ಎಂಬುದನ್ನು ನೋಡಿ ಎಂದು ಕಿಡಿಕಾರಿದೆ.
ಚುನಾವಣಾ ಹಿಂದೂ ಕೇಜ್ರಿವಾಲ್ ಮತ್ತು ಎಎಪಿಯ ಹಿಂದೂ ವಿರೋಧಿ ಮುಖವು ಎಲ್ಲರ ಮುಂದೆ ಬಂದಿದೆ. ಹಿಂದೂ ವಿರೋಧಿ ಎಎಪಿಗೆ ಸಾರ್ವಜನಿಕರು ಶೀಘ್ರದಲ್ಲೇ ತಕ್ಕ ಉತ್ತರ ನೀಡುತ್ತಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಗುಜರಾತ್ ನಲ್ಲಿ ಎಎಪಿ ಅಧಿಕಾರಕ್ಕೆ ಬರಲು ತೀವ್ರ ಪ್ರಯತ್ನ ಮಾಡುತ್ತಿದ್ದು, ಬಿಜೆಪಿಗೆ ಇದು ತಲೆ ನೋವಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಬೌದ್ಧ ಧರ್ಮದಲ್ಲಿ ಪ್ರತಿಜ್ಞೆಯನ್ನು ಬಿಜೆಪಿ ಟೀಕಿಸುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಎಎಪಿ ಸಚಿವರು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಸಚಿವರನ್ನು ತಕ್ಷಣವೇ ಪಕ್ಷದಿಂದ ತೆಗೆದುಹಾಕಬೇಕು. ನಾವು ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.
ಇನ್ನೂ ಬಿಜೆಪಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜೇಂದ್ರ ಪಾಲ್ ಗೌತಮ್, ಬಿಜೆಪಿ ದೇಶ ವಿರೋಧಿ. ನನಗೆ ಬೌದ್ಧ ಧರ್ಮದಲ್ಲಿ ನಂಬಿಕೆ ಇದೆ, ಯಾರಿಗಾದರೂ ಯಾಕೆ ತೊಂದರೆ? ಅವರು ದೂರು ನೀಡಲಿ. ಯಾವುದೇ ಧರ್ಮವನ್ನು ಅನುಸರಿಸಲು ಸಂವಿಧಾನವು ನಮಗೆ ಸ್ವಾತಂತ್ರ್ಯ ನೀಡಿದೆ. ಬಿಜೆಪಿ ಎಎಪಿಗೆ ಹೆದರುತ್ತದೆ. ಅವರು ನಮ್ಮ ವಿರುದ್ಧ ಕೇವಲ ನಕಲಿ ಪ್ರಕರಣಗಳನ್ನು ದಾಖಲಿಸಬಹುದು ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka