ಪಿಲಿಕುಳ ಜೈವಿಕ ಉದ್ಯಾನದಲ್ಲಿ ಇರುವೆಗಳ ದಾಳಿಗೆ ಒದ್ದಾಡಿದ ಹಾವು: ಉರಗ ಪಾಲಕರಿಗೆ ನೋಟಿಸ್ - Mahanayaka
10:57 PM Wednesday 11 - December 2024

ಪಿಲಿಕುಳ ಜೈವಿಕ ಉದ್ಯಾನದಲ್ಲಿ ಇರುವೆಗಳ ದಾಳಿಗೆ ಒದ್ದಾಡಿದ ಹಾವು: ಉರಗ ಪಾಲಕರಿಗೆ ನೋಟಿಸ್

pilikula
08/10/2022

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನದೊಳಗಿರುವ ಹಾವಿನ ಗೂಡೊಂದರಲ್ಲಿ ಇರುವೆಗಳ ಗುಂಪು ಹಾವನ್ನು ಕಚ್ಚುತ್ತಿರುವ ವೀಡಿಯೋ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಾರವು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಪ್ರಾಧಿಕಾರದ ಆಯುಕ್ತರು ಸಂಬಂಧಪಟ್ಟ ಹಿರಿಯ ವೈಜ್ಞಾನಿಕ ಅಧಿಕಾರಿ, ಪಶುಪಾಲನಾ ವೈದ್ಯಾಧಿಕಾರಿ ಮತ್ತು ಬಯಾಲಾಜಿಸ್ಟ್ ಜೊತೆಗೂಡಿ ಸ್ಥಳಪರಿಶೀಲನೆ ನಡೆಸಿರುತ್ತಾರೆ. ಪರಿಶೀಲನೆ ವೇಳೆ ಇರುವೆಗಳ ಬಾದೆಗೆ ಒಳಗಾದ ಉರಗದ ಆರೋಗ್ಯವು ಸ್ಥಿರವಾಗಿದೆ ಎಂಬುದಾಗಿ ಪಶುಪಾಲನಾ ವೈದ್ಯಾಧಿಕಾರಿಯವರು ದೃಢೀಕರಿಸಿರುತ್ತಾರೆ. ಪ್ರಾಧಿಕಾರ ಆಯುಕ್ತರ ನಿರ್ದೇಶನದಂತೆ ಜೈವಿಕ ಉದ್ಯಾನವನದ ನಿರ್ದೇಶಕರು ಈ ಲೋಪಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಲುವಾಗಿ ಉರಗ ಪಾಲಕರಿಗೆ ನೋಟೀಸು ನೀಡಿ ವಿವರಣೆ ನೀಡಲು ತಿಳಿಸಿರುತ್ತಾರೆ.

ಇಂತಹ ಘಟನೆಯು ಪುನಃ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಕೂಡಲೇ ಪ್ರಾಧಿಕಾರದ ಆಯುಕ್ತರ ನೇತೃತ್ವದಲ್ಲಿ ಜೈವಿಕ ಉದ್ಯಾನವನದ ನಿರ್ದೇಶಕರು, ಹಿರಿಯ ವೈಜ್ಞಾನಿಕ ಅಧಿಕಾರಿ ಮತ್ತು ಪಶುಪಾಲನಾ ವೈದ್ಯಾಧಿಕಾರಿಯವರನ್ನು ಒಳಗೊಂಡು ವಿಶೇಷ ಸಭೆಯನ್ನು ನಡೆಸಲಾಗಿದೆ, ಅಂತೆಯೇ ಈ ಸಭೆಯಲ್ಲಿ ಇರುವೆಗಳ ಬಾಧೆಗೊಳಗಾದ ಆ ಉರಗದ ಆರೋಗ್ಯವನ್ನು ಪ್ರತೀ 2 ಗಂಟೆಗಳಿಗೊಮ್ಮೆ ಪರಿಶೀಲನೆ ನಡೆಸಿ ವರದಿಯನ್ನು ಆಯುಕ್ತರಿಗೆ ನೀಡಲು ತಿಳಿಸಲಾಗಿದೆ.

ಅಲ್ಲದೇ ಜೈವಿಕ ಉದ್ಯಾನದಲ್ಲಿ ಬೇರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದಿನದ ಎಲ್ಲಾ ಅವಧಿಯಲ್ಲಿ ಉರಗ ವಿಭಾಗಕ್ಕೆ ಹೆಚ್ಚುವರಿ ಸಿಸಿ ಕ್ಯಾಮರಾವನ್ನು ಅಳವಡಿಸಿ 24*7 ಕಣ್ಗಾವಲು ಮಾಡಲು ಕ್ರಮಕೈಗೊಳ್ಳಲಾಗುವುದು. ಉರಗಗಳ ಆವರಣದ ಒಳಗೆ ಯಾವುದೇ ತಿಂಡಿ ತಿನಸುಗಳನ್ನು ಕೊಂಡೋಗದಂತೆ ನೋಡಿಕೊಂಡು ನಿಗಾವಹಿಸಲು ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಉರಗ ಆವರಣದ ಹೊರಭಾಗದ ಸ್ವಚ್ಛತೆಯನ್ನು ಆಗಾಗ ಮಾಡಲು ಹಾಗೂ ಇದರ ಮೇಲುಸ್ತುವಾರಿಯನ್ನು ಭದ್ರತಾಧಿಕಾರಿಯವರು ನೋಡಿಕೊಂಡು ವರದಿ ನೀಡಲು ಸೂಚಿಸಲಾಗಿದೆ.

ಇದಲ್ಲದೆ ಜೈವಿಕ ಉದ್ಯಾನದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರುವಲ್ಲಿ ತಿಂಡಿ ತಿನಿಸುಗಳ ಪ್ಯಾಕೇಟುಗಳು ಪ್ಲಾಸ್ಟಿಕ್ ಬಾಟಲಿ ಇನ್ನಿತರ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಹಾಗೂ ಪ್ರಾಣಿಗಳ ಆವರಣಗಳಿಗೆ ಹಾನಿ ಉಂಟು ಮಾಡದಂತೆ, ಸಂದರ್ಶಕರಿಗೆ ಅರಿವು ಮೂಡಿಸಲು  ಹೆಚ್ಚುವರಿ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ