ಅನಂತಪುರ ದೇವಾಲಯದ ಸಸ್ಯಾಹಾರಿ ಮೊಸಳೆ ಬಾಬಿಯಾ ಸಾವು
ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆಯಲ್ಲಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸರೋವರದ ದೇವಾಲಯದ ರಕ್ಷಕ ಎಂದೇ ಪ್ರಸಿದ್ಧಿ ಪಡೆದಿದ್ದ ಮೊಸಳೆ ನಿನ್ನೆ ತಡ ರಾತ್ರಿ ಸಾವನ್ನಪ್ಪಿದೆ.
ಬಾಬಿಯಾ ಎಂಬ ಹೆಸರಿನ ಈ ಮೊಸಳೆಯು ಸಸ್ಯಾಹಾರಿ ಮೊಸಳೆ ಎಂದೇ ಕರೆಯಲ್ಪಡುತ್ತಿತ್ತು. ಈ ಮೊಸಳೆ ದೇವರ ಪ್ರಸಾದ ಮಾತ್ರವೇ ಸೇವಿಸುತ್ತದೆ. ಯಾವುದೇ ಮಾಂಸಾಹಾರ ಸೇವಿಸುವುದಿಲ್ಲ ಅನ್ನೋ ನಂಬಿಕೆ ಇಲ್ಲಿದೆ.
ದೇವರ ಪ್ರಸಾದವಾದ ಬೇಯಿಸಿದ ಅನ್ನ ಮತ್ತು ಬೆಲ್ಲವನ್ನು ಮಾತ್ರವೇ ಇದು ಸೇವನೆ ಮಾಡುತ್ತಿತ್ತು. ಹೀಗಾಗಿ ಭಕ್ತರು ನಿರ್ಭಯವಾಗಿ ಈ ಮೊಸಳೆಗೆ ತಮ್ಮ ಕೈಗಳಿಂದಲೇ ಪ್ರಸಾದ ನೀಡುತ್ತಿದ್ದರು. ಈ ಮೊಸಳೆ ಸ್ನೇಹಪರವಾಗಿತ್ತು.
ಇಲ್ಲಿ ಚಾಲ್ತಿಯಲ್ಲಿರುವ ಕಥೆಗಳ ಪ್ರಕಾರ ಸುಮಾರು 70 ವರ್ಷಗಳ ಹಿಂದೆ ಅನಂತಪುರ ಸರೋವರದ ದೇವಾಲಯದಲ್ಲಿ ಕಾವಲು ಕಾಯುತ್ತಿದ್ದ ಮೊಳೆಯನ್ನು ಬ್ರಿಟೀಷ್ ಸೈನಿಕನೊಬ್ಬ ಕೊಂದಿದ್ದ. ಆ ಬಳಿಕ ಈತ ಅಚ್ಚರಿಯ ಘಟನೆಯೊಂದರಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ್ದ. ಆತ ನಾಗದೇವತೆಯ ಕೋಪಕ್ಕೆ ಬಲಿಯಾದ ಎಂದು ಇಲ್ಲಿನ ಭಕ್ತರು ನಂಬಿದ್ದಾರೆ.
ಇನ್ನೂ ನಿನ್ನೆ ಸಾವನ್ನಪ್ಪಿದ್ದ ಮೊಸಳೆಯ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ದೇವಾಲಯದ ಆವರಣದಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು. ಇಂದು ದೇವಾಲಯದ ಆವರಣದಲ್ಲೇ ಮೊಸಳೆಯ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka