ಮಾಂಸಾಹಾರ ನಿಜಕ್ಕೂ ಕೆಟ್ಟದ್ದೇ ?
- ಧಮ್ಮಪ್ರಿಯಾ, ಬೆಂಗಳೂರು
“ತುಪ್ಪ ತಿಂದವರಿಂದ ದೇಶ ಹಾಳಾಗಿದೆಯೇ ಹೊರತು ಮಾಂಸತಿಂದವರಿಂದ ಅಲ್ಲಾ” ಎನ್ನುವ ನಿಜಗುಣಾನಂದ ಸ್ವಾಮೀಜಿಯವರ ಮಾತುಗಳನ್ನು ಸ್ವಲ್ಪ ಮಟ್ಟಿಗೆ ಸಮರ್ಥಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನದೊಂದಿಗೆ ನನ್ನ ಬರಹವನ್ನು ಮುಂದುವರೆಸುತ್ತಿದ್ದೇನೆ. ಇತ್ತೀಚೆಗಷ್ಟೇ RSS ವರಿಷ್ಠ ಮೋಹನ್ ಭಾಗವತ್ ರವರು ನೀಡಿದ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಲೇಖನ ಬರೆಯಬೇಕೆನಿಸಿತು.
ಮಾನ್ಯ ಭಾಗವತ್ ಅವರು “ಮಾಂಸಾಹಾರ ಒಳ್ಳೆಯದಲ್ಲ” ಎಂಬ ಶಿರೋನಾಮೆಯಡಿ ಪತ್ರಿಕೆಗಳಲ್ಲಿ (01-oct-2022)ಪ್ರಕಟಗೊಂಡ ಹೇಳಿಕೆ ನನ್ನಲ್ಲಿ ಬಹಳ ಗೊಂದಲ ಸೃಷ್ಟಿಸಿ, ಕೆಲವು ಪ್ರಶ್ನೆಗಳನ್ನು ನನ್ನಲ್ಲಿ ಎಬ್ಬಿಸಿದೆ. ಮಾನ್ಯರು ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಖಂಡ ಭಾರತ ತನ್ನ ಬೌಗೋಳಿಕ ನೆಲೆಗಟ್ಟಿನ ಆಧಾರದ ಮೇಲೆ ವಿವಿಧ ಭಾಷೆ, ವಿವಿಧ ಸಂಸ್ಕೃತಿ, ವಿವಿಧ ಆಚಾರ ವಿಚಾರ, ಸಂಪ್ರದಾಯ , ಉಡುಗೆ ತೊಡುಗೆ, ವಿವಿಧ ಧಾರ್ಮಿಕ ಆಚರಣೆಗಳು, ವಿಭಿನ್ನ ಧರ್ಮಗಳನ್ನೊಳಗೊಂಡ ಒಂದು ಉಪಖಂಡವಾಗಿದೆ. ಈ ಹಿನ್ನೆಲೆಯ ದೇಶವನ್ನು ಒಂದೇ ಐಕ್ಯತೆಯಲ್ಲಿ ಒಗ್ಗೂಡಿಸಬೇಕೆಂದು ಸ್ವಾತಂತ್ರ್ಯ ಚಳುವಳಿಯ ನಾಯಕರು ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಅಂದು ಸಂಸ್ಥೆಯಾಗಿ ಕಾರ್ಯ ನಿರ್ವಹಿಸಿದ ಕಾಂಗ್ರೇಸ್ ನಂತರ ದೇಶದ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ದೇಶದ ಎಲ್ಲಾ ಜನಾಂಗದ ಹಿತದೃಷ್ಟಿಯಿಂದ ದೇಶಕ್ಕೆ ಒಂದು ಕಾನೂನಾತ್ಮಕ ಸಂವಿಧಾನವನ್ನು ರಚಿಸಿ ಜಾರಿಮಾಡಲಾಯಿತು. ಅಲ್ಲಿಯವರೆವಿಗೂ ಸಂಸ್ಥಾನಗಳಾಗಿದ್ದ ಇಡೀ ದೇಶವನ್ನು, ವಿವಿಧ ರಾಜ್ಯಗಳಾಗಿ ಪುನರ್ ವಿಂಗಡಣೆ ಮಾಡಿ, ಗಣತಂತ್ರ ರಾಜ್ಯವನ್ನಾಗಿ ನಿರ್ಮಿಸಲಾಯಿತು. ಸಂವಿಧಾನದ ನೆರಳಲ್ಲಿ ಬದುಕುವ ಭಾರತೀಯರಿಗೆ ಅದು ಸಮಾನತೆಯನ್ನು ಸಾರುವ ಹೆಮ್ಮರವಾಗಿ ಹೊರಹೊಮ್ಮಿತು. ಅದಕ್ಕಾಗಿಯೇ *ಒಬ್ಬ ಟೀ ಮಾರುವ ಸಾಮಾನ್ಯ ಪ್ರಜೆಯೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗುವ ಅವಕಾಶವನ್ನು ಸಂವಿಧಾನ ಒದಗಿಸಿತು. ಹಾಗೆಯೇ ಬೀದಿ ದೀಪದ ಕೆಳಗೆ ಓದಲು ಕುಳಿತ ಸಾಮಾನ್ಯ ಪ್ರಜೆಯು ರಾಷ್ಟ್ರಪತಿಯಾಗಿ* ಅಧಿಕಾರ ನಡೆಸುವ ಸಮಾನತೆಯನ್ನು ಸಂವಿಧಾನ ಒದಗಿಸಿಕೊಟ್ಟಿದೆ. ಇದನ್ನು ಭಾರತೀಯರಾದ ನಾವು ಮರೆಯುವಂತಿಲ್ಲ.
ನಮ್ಮ ಸಂವಿಧಾನವು ಸಮಾನತೆಯ ಜೊತೆಗೆ ವಾಕ್ ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಆಹಾರ ಪದ್ಧತಿ, ಉಡುಗೆ ತೊಡುಗೆ ಎಲ್ಲದರಲ್ಲೂ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದೆ. ಇದನ್ನು ಯಾವ ಸಂಘಟನೆಯು ಪ್ರಶ್ನಿಸುವ, ಬಹಿಸ್ಕರಿಸುವ, ಹೀಯಾಳಿಸುವ, ದೂರುವ ಅಗತ್ಯವಿಲ್ಲ. ಮಾಂಸಾಹಾರ ಬಹಳ ಕೆಟ್ಟದ್ದು ಎನ್ನುವುದಾದರೆ ಈ ದೇಶದಲ್ಲಿ ಶೇಖಡ 95%ಗೂ ಹೆಚ್ಚು ಜನ ಮಾಂಸ ತಿನ್ನುತ್ತಿದ್ದಾರೆ. ಅಂದಮೇಲೆ ನಮ್ಮ ದೇಶ ಇಷ್ಟು ಹೊತ್ತಿಗೆ ಭೂಮಂಡಲದ ನಕ್ಷೆಯಲ್ಲಿ ಕಾಣೆಯಾಗಬೇಕಿತ್ತು ಅಲ್ಲವೇ. “ಭಾರತ ಪ್ರಕಾಶಿಸುತ್ತಿದೆ” ಇಡೀ ಜಗತ್ತೇ ಭಾರತದ ಕಡೆ ತಿರುಗಿ ನೋಡುವ ಹಾಗೆ ನಾವು ದೇಶವನ್ನು ಆಳುತ್ತಿದ್ದೇವೆ ಎನ್ನವ ಆಳುವ ಸರ್ಕಾರದ ಮಾತು ಸುಳ್ಳಾಗಿದೆಯೇ? ಅಥವಾ ಕೇವಲ ಖಾಸಗಿ ಕಂಪನಿಗಳ ಅಭಿವೃದ್ಧಿಯೇ ದೇಶದ ಪ್ರಕಾಶಮಾನವೇ. ಇವರಿಂದಲೇ ದೇಶದ ಅಭಿವೃದ್ಧಿ ಎಂದು ನೀವೇ ಒಪ್ಪಿಕೊಂಡಂತೆ ಅನಿಸುತ್ತಿದೆ. ಈ ದೇಶದಲ್ಲಿ ಮಾಂಸಾಹಾರ ನಿಷೇಧ ಆಗಬೇಕು, ಗೋವಿನ ಮಾಂಸವನ್ನು ನಿಷೇಧಿಸಬೇಕು, ಪ್ರಾಣಿಗಳ ಮೇಲೆ ದಯೆ ತೋರಬೇಕು ಎನ್ನುವ ನಿಮ್ಮ ಬೂಟಾಟಿಕೆಯ ಮಾತುಗಳು ಸಾಮಾನ್ಯ ಜನರಿಗೆ ಬಹಳ ಚೆನ್ನಾಗಿ ಅರ್ಥವಾಗುತ್ತಿವೆ ಎನ್ನುವುದು ನನ್ನ ಅಭಿಪ್ರಾಯ.
ಶತಮಾನಗಳಿಂದ ಈ ದೇಶದಲ್ಲಿ ದಲಿತರು-ಅಸ್ಪೃಶ್ಯರನ್ನು ಹಂದಿ ನಾಯಿಗಳಿಗೂ ಕಡೆಯಾಗಿ ನಡೆಸಿಕೊಂಡಿರುವ ಸನಾತನವಾದಿಗಳಿಗೆ, ಅವರ ಧರ್ಮಕ್ಕೆ ಪ್ರಾಣಿಗಳ ಮೇಲಿರುವ ಕರುಣೆ ಪ್ರೀತಿ ದಯೆ ಸಾಮಾನ್ಯ ಮನುಷ್ಯನ ಮೇಲೆ ಏಕಿಲ್ಲ? ಎತ್ತು, ಎಮ್ಮೆ, ಕೋತಿ, ನಾಯಿಗೆಂತಹ ಪ್ರೀತಿ, ಸಾಮಾನ್ಯರ ಮುಟ್ಟದ ನಿಮದೆಂತಹ ಸಣ್ಣ ಜಾತಿ* ಅನ್ನುವ ದಲಿತ ಪ್ರಜ್ಞೆಯ ಸಾಲುಗಳು ಇವತ್ತಿಗೂ ಗ್ರಾಮೀಣ ಪ್ರದೇಶದ ಜನರಲ್ಲಿ ಜೀವಂತವಾಗಿದೆ. ಅಂದರೆ ನಿಮಗೆ ಪ್ರಾಣಿಗಳ ಮೇಲಿರುವ ದಯೆ ಕರುಣೆ ಪ್ರೀತಿ ಇಲ್ಲಿನ ಅಸ್ಪೃಶ್ಯರ ದಲಿತರ ಹಿಂದುಳಿದ ವರ್ಗಗಳ, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿಲ್ಲ ಎನ್ನುವುದು ಬಹಳ ಸ್ವಷ್ಟವಾಗಿ ಅರ್ಥವಾಗುತ್ತಿದೆ. ನಿಮಗೆ ಪ್ರಾಣಿಗಳ ಮೇಲೆ ಯಾವುದೇ ದಯೆ ಪ್ರೀತಿ ಕರುಣೆ ಜೀವದ ಮೌಲ್ಯ ಯಾವುದು ಇಲ್ಲ. ಇವೆಲ್ಲವೂ ಕೇವಲ ಬೂಟಾಟಿಕೆಯ ಮಾತುಗಳು, ಧರ್ಮದ ಮಂಪರಿನಲ್ಲಿ ಮಾತನಾಡುವ ಮಾತುಗಳು ಅಷ್ಟೇ, ಇವತ್ತಿನ ರಾಜಕಾರಣಕ್ಕೆ ಇಂತಹ ಮಾತುಗಳ ಅನಿವಾರ್ಯತೆ ಇದೆ. ಇವೆಲ್ಲವು ಪಟ್ಟಭದ್ರ ಹಿತಾಸಕ್ತಿಗಳ ನಿಲುವು ಎಂದರೆ ತಪ್ಪಾಗಲಾರದು.
ಒಬ್ಬ ಇತಿಹಾಸಕಾರ ಹೇಳುವಂತೆ “ಧರ್ಮ ಅಮಲನ್ನು ಕೊಡುವ ಅಫೀಮಿನಂತೆ” ಎನ್ನುವ ಮಾತು ಬಹಳ ಸತ್ಯವಾದದ್ದು. ಇಂದು ಸಂಘ ಪರಿವಾರದ ಕಪಿ ಮುಷ್ಟಿಯಲ್ಲಿ ಸಿಲುಕಿರುವ ಆಡಳಿತರೂಢ ಪಕ್ಷಕ್ಕೆ ಈ ಮಾಂಸಾಹಾರವನ್ನು ನಿಷೇಧಿಸುವುದು ಯಾವ ಲೆಕ್ಕವೂ ಅಲ್ಲ. ನೀವು ಸದಾ ಚಾಲ್ತಿಯಲ್ಲಿರಲು ಇಂತಹ ವಿಷಯಗಳು ಬೇಕೇ ಹೊರತು, ಯಾವುದೂ ಕಾರ್ಯಗತವಾಗುವುದಿಲ್ಲ. ನಿಮಗೆ ನಿಜವಾಗಿಯೂ ಮಾಂಸ ತಿನ್ನುವುದು ಕೆಟ್ಟದ್ದು ಅದರಿಂದ ಜನರು ತಪ್ಪು ದಾರಿ ಹಿಡಿಯುತ್ತಾರೆ ಎನ್ನುವುದಾದರೆ ಮೊದಲು ನಿಮ್ಮ ಸಂಘಟನೆಯಲ್ಲಿರುವ ದಲಿತ, ಅಸ್ಪೃಶ್ಯ, ಹಿಂದುಳಿದ, ಶೂದ್ರರೆಲ್ಲರನ್ನು ಸಂಘ ಪರಿವಾರದಿಂದ ಹೊರಹಾಕಬಹುದಲ್ಲವೇ? ಅಲ್ಲಿರುವ ಸ್ವಯಂ ಸೇವಕರನ್ನು ನೀವು RSS, VHP, ಶ್ರೀರಾಮ ಸೇನೆ ಸಂಘಟನೆಗಳಿಂದ ಹೊರಗಡೆ ಕಳಿಸಬಹುದಲ್ಲವೇ? ಅಷ್ಟೇ ಏಕೆ ನಿಮ್ಮ ರಾಜಕೀಯ ಪಕ್ಷದಲ್ಲಿರುವ ಮೀಸಲು ಕ್ಷೇತ್ರದ ನಾಯಕರೆಲ್ಲರೂ ಮಾಂಸಾಹಾರಿಗಳಾಗಿರುವುದರಿಂದ ಮೀಸಲು ಕ್ಷೇತ್ರಗಳ ನಾಯಕರ ಅಗತ್ಯತೆ ನಿಮ್ಮ ಪಕ್ಷಕ್ಕೆ ಯಾಕೆ ಬೇಕಾಗಿದೆ? ಮೀಸಲು ಕ್ಷೇತ್ರಗಳಲ್ಲಿ ನಿಮ್ಮ ಪಕ್ಷದಿಂದ ಸ್ವರ್ಧಿಸುವುದನ್ನು ನಿಷೇಧ ಮಾಡಬಹುದಲ್ಲವೇ? ಇವೆಲ್ಲ ಕೇವಲ ದೊಂಬರಾಟದ, ಧರ್ಮದ ಮಂಪರಿನಲ್ಲಿ ಮಾತನಾಡುವ ಮಾತುಗಳು. ನಿಮಗೆ ನಿಜವಾಗಿಯೂ ಮಾಂಸ ಮಾರಾಟ ಹಾಗೂ ಮಾಂಸಾಹಾರ ನಿಷೇಧ ಮಾಡಬೇಕು ಎನಿಸಿದರೆ ಮೊದಲು ಈ ದೇಶದಲ್ಲಿರುವ ಮೇಲ್ಜಾತಿಯವರ ಒಡೆತನದಲ್ಲಿರುವ ಏಳು ಬೀಫ್ ಎಕ್ಸ್ಪೋರ್ಟ್ ಕಂಪನಿಗಳನ್ನು ಮುಚ್ಚಲು ಇಂದಿನ ಸರ್ಕಾರವನ್ನು ಒಪ್ಪಿಸಬಹುದಲ್ಲವೇ?
- ಮಹೇಂದ್ರ ಸಿಂಗ್ ಒಡೆತನದ ಹಿಂದೂ ಆಗ್ರೋ ಇಂಡಸ್ಟ್ರೀಸ್.
- ಸುನಿಲ್ ಸೂರ್ ಒಡೆತನದ ಆಲ್ ನೂರ್ ಎಕ್ಸ್ಪೋರ್ಟ್
- ಸತೀಶ್ ಮತ್ತು ಅತುಲ್ ಸಬರ್ ವಾಲ್ ಒಡೆತನದ ಅಲ್ ಕಬೀರ್ ಎಕ್ಸ್ಪೋರ್ಟ್.
- ಸುನಿಲ್ ಕಪೂರ್ ಒಡೆತನದ ಅರೇಬಿಯನ್ ಎಕ್ಸ್ಪೋರ್ಟ್.
- ಮದನ್ ಅಬ್ಲೋಟ್ ಒಡೆತನದ MKR ಎಕ್ಸ್ಪೋರ್ಟ್.
- AS ಬಿಂದ್ರಾ ಒಡೆತನದ (ಇವರು BJPಯ MLA) BML ಎಕ್ಸ್ಪೋರ್ಟ್.
- ಸಂಗೀತ್ ಸೋಮನ್ ಒಡೆತನದ ಅಲ್ ದುವಾ ಫುಡ್ ಇಂಡಸ್ಟ್ರೀಸ್.
ಈ ಎಲ್ಲಾ ಕಂಪನಿಗಳು ಇರುವುದು ಈ ದೇಶದ ವಿವಿಧ ರಾಜ್ಯಗಳಾದ ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಹೈದರಾಬಾದ್, ಚನ್ನೈ ನಲ್ಲಿ. ಇವುಗಳ ವಾರ್ಷಿಕ ವಹಿವಾಟು 27 ಲಕ್ಷ ಕೋಟಿ “ಮಾನ್ಯ ನರೇಂದ್ರ ಮೋದಿಜೀ” ಹೇಳುವ ಹಾಗೆ 13 ಲಕ್ಷ ಟನ್ ( ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಅಭಿವೃದ್ಧಿ ಪ್ರಾಧಿಕಾರದ ವರದಿ) ರಫ್ತಾಗುತ್ತಿದೆ. ಆದರೆ ಅಮೇರಿಕಾ ಕೃಷಿ ಇಲಾಖೆಯ ವರದಿ ಪ್ರಕಾರ 24 ಲಕ್ಷ ಟನ್ ವರ್ಷಕ್ಕೆ ರಪ್ತಾಗುತ್ತಿದೆ. ಮುಂದಿನ ಮೋದಿಜೀಯವರ ಗೋವಿನ ಮಾಂಸ ರಫ್ತಿನ ಗುರಿ ವರ್ಷಕ್ಕೆ 35 ಲಕ್ಷ ಟನ್ ಗೆ ಏರಿಸಲಾಗಿದೆಯಂತೆ. ಈಗ ಹೇಳಿ ನಿಮ್ಮಲ್ಲಿ ನಿಜವಾಗಿಯೂ ಜೀವಗಳಿಗೆ ಬೆಲೆ ಇದೆಯಾ? ನೀವು ಆಡುತ್ತಿರುವುದು ದೊಂಬರಾಟವಲ್ಲವೇ? ನೀವು ಯಾಕೆ ಈ ಕಂಪನಿಗಳನ್ನು ಮುಚ್ಚಿಸಲು ಹೋರಾಟ ನಡೆಸಬಾರದು? ಅದು ಬಿಟ್ಟು ಇಲ್ಲಿನ SC /ST/OBC ಧಾರ್ಮಿಕ ಅಲ್ಪಸಂಖ್ಯಾತರು ತಿನ್ನುವ ಆಹಾರದ ಮೇಲೆ ನಿಮಗೇಕೆ ಇಷ್ಟು ಕಣ್ಣು, ಹೊಟ್ಟೆಕಿಚ್ಚು? ಹೋಗಲಿ ನಾವು ತಿಂದ ಆಹಾರವೆಲ್ಲಾ ವಿಷವಾಗಿ ನಾವು ಸಾಯುತ್ತಿದ್ದೇವೆ. ಮಾಂಸಹಾರದಿಂದ ನಮ್ಮನ್ನು ರಕ್ಷಣೆ ಮಾಡಿ ಎಂದು ಎಂದಾದರೂ ನಿಮ್ಮನ್ನು ಕೇಳಿದ್ದೇವೆಯೇ? ನಮ್ಮ ಆಹಾರ ನಮ್ಮ ಆರೋಗ್ಯ ನಿಮಗೇನು ಕಷ್ಟ? ನಮ್ಮ ಆಹಾರ ವಿಷಪೂರಿತವಾಗಿದೆ ಅನ್ನುವುದು ನಿಮಗೆ ಹೇಗೆ ಗೊತ್ತು. ನೀವು ತಿಂದಿದ್ದೀರಾ? ಮಾಂಸ ತಿನ್ನುವ ಜನರ, ಮುಸಲ್ಮಾನರ ಓಟು ನಮಗೆ ಬೇಡ ಅಂತ ಹೇಳಿ ನೋಡೋಣ? ನಿಮ್ಮ ಅಧಿಕಾರಕ್ಕೆ ನಮ್ಮ ಓಟು ಬೇಕು, ನಮ್ಮ ಆಹಾರ ಪದ್ಧತಿ ನಿಮಗೆ ಬೇಡ ಇದು ಯಾವ ನ್ಯಾಯ ಸ್ವಾಮಿ? ಆಹಾರ ಪದ್ಧತಿಯು ಈ ದೇಶದ ಪ್ರತಿಯೊಬ್ಬ ನಾಗರೀಕನ ಸ್ವಇಚ್ಚೆಗೆ ಸಂಬಂದಿಸಿದ್ದು. ಇದನ್ನು ಪ್ರಶ್ನಿಸುವ, ನಿಷೇಧಿಸುವ ಹಕ್ಕು ಅಧಿಕಾರ ಯಾರಿಗೂ ಇಲ್ಲ. ದಯವಿಟ್ಟು ಮಾತನಾಡುವ ನಿಮ್ಮಂಥವರಿಗೆ ಇದು ಅರ್ಥವಾದರೆ ಸಾಕು.
ಬಾಡು ಬಾಡೆಂದೇಕೆ ಈಯ್ಯಾಳಿಸುವಿರಿ
ಬಾಡುತ್ತಿನ್ನದ ಓ ಬ್ರಾಹ್ಮಣರೇ
ಬಾಡಲ್ಲವೇ ಬಹುಜನರ ಆಹಾರ
ಸಕಲ ಪ್ರೋಟೀನುಗಳ ಆಗರ
ಬಾಡು ತಿನ್ನದವನ ನಾಲಿಗೆಯನ್ನು
ಸೀಳೆಂದ ಶ್ರೀ ಶ್ರೀ ಶ್ರೀ ಕೊರಬಾಡೇಶ್ವರ
ಇದು ನಮ್ಮ ಬಹುಜನ ಕವಿಯ ವಚನ. ಇದನ್ನೂ ನಾವು ಎಂದು ಮರೆಯುವಂತಿಲ್ಲಾ. ಕೇವಲ ಆಹಾರ ಪದ್ಧತೀಯನ್ನು ಚರ್ಚಿಸುವ ಮಾತನಾಡುವ ನೀವು ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆಯೆತ್ತಿವೆ ಅದೆಷ್ಟೋ, ಸಮಸ್ಯೆಗಳನ್ನು ಬಗೆಹರಿಸಲಾರದೆ ಹಾಗೆಯೇ ಉಳಿದಿವೆ. ಇವುಗಳ ಬಗ್ಗೆ ನಿಮಗೆ ಕಾಳಜಿ ಇದ್ದಿದ್ದರೆ ಈ ದೇಶದಲ್ಲಿ ಕೋಮು ಗಲಭೆಗಳಿಗೆ ಅವಕಾಶಗಳೇ ಇರುತ್ತಿರಲಿಲ್ಲ. ಅಭಿವೃದ್ಧಿ ರಾಷ್ಟ್ರಗಳ ಪಟ್ಟಿಯಲ್ಲಿ ದೇಶ 3ರಿಂದ 163ನೇ ಸ್ಥಾನಕ್ಕೆ ಇಳಿಯುತ್ತಿರಲಿಲ್ಲಾ.
- ಈ ದೇಶದಲ್ಲಿ ಪ್ರತಿ ಗಂಟೆಗೆ 350ರಿಂದ 400 ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ. ಹುಟ್ಟುತ್ತಿರುವ ಜೀವಗಳಿಗೆ ಇಲ್ಲಿ ಬೆಲೆಯೇ ಇಲ್ಲವೇ?
- ವಾಸಿಸಲು ಮನೆಯೇ ಇಲ್ಲದೆ ಎಷ್ಟೋ ಕುಟುಂಬಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. ಈ ಜೀವಗಳಿಗೆ ಬೆಲೆ ಇಲ್ಲವೇ?
- ಕರೋನಾ ಮಹಾಮಾರಿಗೆ ತುತ್ತಾದವರಿಗೆ ಚಿಕಿತ್ಸೆ ಸಿಗಲಾರದೆ ಬೀದಿಯಲ್ಲಿ ನರಳಿ ಸತ್ತರು. ಆ ಜೀವಗಳಿಗೆ ಬೆಲೆ ಇಲ್ಲವೇ?
- ಪ್ರತೀ ವರ್ಷ ಅತಿವೃಷ್ಟಿ ಅನಾವೃಷ್ಟಿಯಿಂದ ಬಳಲಿದ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ರೈತರ ಸಾಲ ಮನ್ನಾ ಮಾಡಲು ಇಷ್ಟವಿಲ್ಲದ ಸರ್ಕಾರಕ್ಕೆ ಖಾಸಗಿ ಕಂಪನಿಗಳ ಕೋಟಿಗಟ್ಟಲೆ ಸಾಲವನ್ನು ಮನ್ನಾ ಮಾಡುತ್ತಿದೆ. ದೇಶದ ಬೆನ್ನೆಲುಬು ರೈತರ ಜೀವಗಳ ಬೆಲೆ ಗೊತ್ತಿಲ್ಲವೇ?
- ಸಾವಿರಾರು ಕಂಪನಿಗಳನ್ನು ಖಾಸಗೀಯವರ ಕೈಲಿಟ್ಟಾಗ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡು ಬೀದಿಪಾಲಾದರೂ ನಿಮಗೆ ಮಾತನಾಡಬೇಕೆನಿಸಲಿಲ್ಲವೇ?
- ಕರ್ನಾಟಕ ರಾಜ್ಯದಲ್ಲಿ BMTC ಮತ್ತು KSRTC ನೌಕರರಿಗೆ ಸರಿಯಾದ ಸಮಯಕ್ಕೆ ಸಿಗಬೇಕಾದ ವೇತನ ವಿಳಂಬ ನೀತಿಯ ಬಗ್ಗೆ ನಿಮಗೆ ಮಾತನಾಡಬೇಕೆನಿಸಲಿಲ್ಲವೇ?
- ನಿರಂತರವಾಗಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು, ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ಸಾವು ನೋವುಗಳು, ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ. ಇಲ್ಲಿನ ಮುಗ್ದ ಮನಸ್ಸುಗಳಿಗೆ ಬೆಲೆ ಇಲ್ಲವೇ?
- PSI ನೇಮಕಾತಿ ವಿಚಾರದಲ್ಲಿ ಆದ ಅನಾಹುತಗಳ ಬಗ್ಗೆ ಮಾತನಾಡಲು ನಿಮಗೆ ಮನಸ್ಸಿಲ್ಲವೇ?
- ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ನಿವಾರಣೆಯಲ್ಲಿ 2 ಲಕ್ಷ 60 ಸಾವಿರ ಉದ್ಯೋಗ ಸೃಷ್ಠಿಯ ಅಗತ್ಯವಿದ್ದರೂ ನೀವು ಮಾತನಾಡುತ್ತಿಲ್ಲಾ ಇದರಲ್ಲಿ ನಿಮ್ಮಗಳ ಪಾಲೆಷ್ಟು?
- GST, GAS, PETROL, ಅಡುಗೆ ಎಣ್ಣೆಯ ಬೆಲೆಗಳ ನಿರಂತರ ಹೆಚ್ಚಳದಲ್ಲಿ ನೀವೇಕೆ ತಲೆ ಕೆಡಿಸಿಕೊಳ್ಳುತ್ತಿಲ್ಲಾ?
- ಧರ್ಮದ ನೆಪದಲ್ಲಿ, ಚಾತುರ್ವರ್ಣ್ಯದ ನೆಪದಲ್ಲಿ ಶತಮಾನಗಳಿಂದ ಸುಮಾರು 95% ಜನರನ್ನು ವರ್ಣ, ವರ್ಗ, ಜಾತಿಗಳ ಆಧಾರದ ಮೇಲೆ ಶೋಷಣೆ ಮಾಡಿ ದಲಿತರನ್ನು ಅಸ್ಪೃಶ್ಯರನ್ನು ಊರ ಹೊರಗಡೆ ಇಡಲಾಗಿದೆ. ಇದು ಜೀವ ವಿರೋಧಿ ಕೆಲಸವಲ್ಲವೇ?
- ಕಳೆದ ಹತ್ತು ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ದೇಶಕ್ಕೆ ಬಹಳ ಮುಖ್ಯವೆನಿಸುವ ಜಾತಿ-ಜನಗಣತಿ ಕಾರ್ಯವನ್ನು ಕೈಗೆತ್ತಿಕೊಂಡಿಲ್ಲಾ.ಇದರ ಹಿಂದಿನ ಮರ್ಮವನ್ನು ಎಲ್ಲರೂ ಅರಿಯಬೇಕಾದ ಅನಿವಾರ್ಯತೆ ಇದೆ.ಇದರ ಬಗ್ಗೆ ನೀವುಗಳು ಏಕೆ ಮಾತನಾಡುತ್ತಿಲ್ಲಾ ?
ಈಗ ಹೇಳಿ ನೀವು ಬೇರೆಯವರು ತಿನ್ನುವ ಆಹಾರದ ಬಗ್ಗೆ ಗಂಭೀರವಾಗಿ ಮಾತನಾಡಬೇಕೋ? ದೇಶದಲ್ಲಿ ಪ್ರಸ್ತುತವಾಗಿ ತಲೆದೋರಿರುವ ಗಂಭೀರ ಸಮಸ್ಯೆಗಳ ಬಗ್ಗೆ ತೊಡಗಿಸಿಕೊಳ್ಳಬೇಕೋ ಯೋಚಿಸಿ.
ರಫೇಲ್ ಹಗರಣವನ್ನು ಮುಚ್ಚಿಹಾಕಲು ಪುಲ್ವಾಮ ಕಡೆಗೆ ಜನರ ಮನಸ್ಸನ್ನು ತಿರುಗಿಸಲಾಯಿತು. ಕರೋನ ಸಮಯದಲ್ಲಿ ನಡೆದ ಹಗರಣವನ್ನು ಮುಚ್ಚಿಹಾಕಲು ಹಿಜಾಬ್/ಹಲಾಲ್ ಕಿಚ್ಚನ್ನು ಹಚ್ಚಲಾಯಿತು. ಮುಂಬರುವ ಚುನಾವಣೆಯ ಸಮಯಕ್ಕೆ ಇನ್ಯಾವ ವಿಚಾರವನ್ನು ತೆಗೆದು ಜನರನ್ನು ಮಾನಸಿಕ ಗುಲಾಮರನ್ನಾಗಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಸಲತ್ತು ಬಹಳಷ್ಟಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka