ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ಸಂವಿಧಾನಕ್ಕೆ ಆರೆಸ್ಸೆಸ್ ವಿರೋಧ ಮಾಡುತ್ತಿದೆ: ಸಿದ್ದರಾಮಯ್ಯ - Mahanayaka
11:17 PM Wednesday 11 - December 2024

ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ಸಂವಿಧಾನಕ್ಕೆ ಆರೆಸ್ಸೆಸ್ ವಿರೋಧ ಮಾಡುತ್ತಿದೆ: ಸಿದ್ದರಾಮಯ್ಯ

siddaramaiha
15/10/2022

ಬಳ್ಳಾರಿಯಲ್ಲಿ ಇಂದು ನಡೆದ ಭಾರತ ಐಕ್ಯತಾ ಯಾತ್ರೆಯ ಬೃಹತ್‌ ಸಮಾವೇಶದಲ್ಲಿ  ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾತನಾಡಿದರು.

ರಾಹುಲ್‌ ಗಾಂಧಿಯವರು ಭಾರತ ಐಕ್ಯತಾ ಯಾತ್ರೆಯನ್ನು ಕೈಗೊಂಡಿರುವುದು ಮುಂದಿನ ಲೋಕಸಭಾ ಚುನಾವಣೆಯನ್ನೋ ಅಥವಾ ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಅಲ್ಲ. ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆ. ಮಹತ್ಮಾ ಗಾಂಧಿ, ವಿನೋಬಾ ಭಾವೆ, ಚಂದ್ರಶೇಖರ್‌ ಅವರು ಪಾದಯಾತ್ರೆಯನ್ನು ಮಾಡಿದ್ದಾರೆ, ಆದರೆ ರಾಹುಲ್‌ ಗಾಂಧಿ ಅವರು ಏಕಕಾಲದಲ್ಲಿ ಸುಮಾರು 3,570 ಕಿ.ಮೀ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಇಷ್ಟೊಂದು ಉದ್ದನೆಯ ಪ್ರವಾಸ ಕೈಗೊಂಡಿರುವುದು ಇದೇ ಮೊದಲು. ಈಗಾಗಲೇ 1,000 ಕಿ.ಮೀ ನಡಿಗೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಕರ್ನಾಟಕದಲ್ಲಿ ಪಾದಯಾತ್ರೆ ಮುಗಿದ ಮೇಲೆ ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹೀಗೆ 12 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾದಯಾತ್ರೆ ಸಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಪಾದಯಾತ್ರೆಯ ಉದ್ದೇಶವನ್ನು ಅನೇಕ ಬಾರಿ ರಾಹುಲ್‌ ಗಾಂಧಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇಂದು ದೇಶದಲ್ಲಿ ಜಾತಿ, ಧರ್ಮ, ವರ್ಗ, ಭಾಷೆಗಳ ಆಧಾರದ ಮೇಲೆ ಜನರನ್ನು ಒಡೆಯುವ ಕೆಲಸ ನಡೆಯುತ್ತಿದೆ, ಜನರ ಮನಸಲ್ಲಿ ವಿಷ ಹಿಂಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಈ ಮನುಷ್ಯ ವಿರೋಧಿ ಕೆಲಸ ಹೆಚ್ಚಾಗಿ ಆಗುತ್ತಿದೆ. ಎಲ್ಲಾ ಕಡೆ ದ್ವೇಷದ ರಾಜಕಾರಣ, ಹಿಂಸೆಯ ರಾಜಕಾರಣ ಮಾಡಲು ಆರಂಭಿಸಿರುವುದರಿಂದ ದಲಿರು, ಮಹಿಳೆಯರು, ಶೋಷಿತರು, ಅಲ್ಪಸಂಖ್ಯಾತ ಜನ ಭಯದಲ್ಲಿ ಬದುಕುವಂತಾಗಿದೆ. ಕುವೆಂಪು ಅವರು ಭಾರತ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಹೇಳಿದ್ದರು, ಇಲ್ಲಿನ ಜನ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಬದುಕುವ ಪರಿಸ್ಥಿತಿ ನಿರ್ಮಾಣ ಆಗಬೇಕು ಎಂದು ಅವರು ಹೇಳಿದ್ದಾರೆ. ಆದರೆ ಆರ್‌,ಎಸ್‌,ಎಸ್‌ ಹಾಗೂ ಸಂಘ ಪರಿವಾರ ಧರ್ಮ ರಾಜಕಾರಣ ಮಾಡಿ ದೇಶ ಒಡೆಯುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿ ಅವರು ರಾಹುಲ್‌ ಗಾಂಧಿ ಅವರ ಪಾದಯಾತ್ರೆಯನ್ನು ಲಘುವಾಗಿ ಟೀಕೆ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಅವರ ಕುಟುಂಬ ದೇಶಕ್ಕಾಗಿ ತ್ಯಾಗ, ಬಲಿದಾನವನ್ನು ಮಾಡಿದೆ. ಈಗ ದೇಶಕ್ಕಾಗಿ ನಿಮ್ಮ ಕೊಡುಗೆ ಏನು ಎಂದು ಅಮಿತ್‌ ಶಾ ಹಾಗೂ ನರೇಂದ್ರ ಮೋದಿ ಅವರನ್ನು ನಾವು ಕೇಳಬೇಕಾಗಿದೆ. ಕಾಂಗ್ರೆಸ್‌ ಪಕ್ಷ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಮಹಾತ್ಮ ಗಾಂಧಿ, ನೆಹರು ಆದಿಯಾಗಿ ನಮ್ಮ ಪಕ್ಷದ ಅನೇಕರು ತ್ಯಾಗ ಮಾಡಿದ್ದಾರೆ, ಹುತಾತ್ಮರಾಗಿದ್ದಾರೆ. 1925ರಲ್ಲಿ ಆರಂಭವಾದ ಆರ್‌,ಎಸ್‌,ಎಸ್‌ ನವರಲ್ಲಿ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಒಬ್ಬ ವ್ಯಕ್ತಿ ಇದ್ದಾರ? ಕಾಂಗ್ರೆಸ್‌ ಪಕ್ಷ ತಂದು ಕೊಟ್ಟ ಸ್ವಾತಂತ್ರ್ಯವನ್ನು ಬಿಜೆಪಿಯವರು ಅನುಭವಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.


ಪೆದ್ದನ ಜೊತೆ ಚರ್ಚೆ ನಡೆಸುವ ಹುಂಬತನದ ಕೆಲಸ ನಾವು ಮಾಡಲ್ಲ

ಸಚಿವ ರಾಮುಲು ಅವರು ಕಾಂಗ್ರೆಸ್‌ ಪಕ್ಷ ಮತ್ತು ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಈ ದೇಶಕ್ಕಾಗಿ ಏನು ಮಾಡಿಲ್ಲ ಎಂದಿದ್ದಾರೆ. ನಾನು ಶ್ರೀರಾಮುಲು ಅವರಿಗೆ ಇತಿಹಾಸ ನೆನಪಿಸಲು ಬಯಸುತ್ತೇನೆ. 1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಿದ್ದು ಯಾರು ಗೊತ್ತಾ? ಇಂದು ಸಾವಿರಾರು ಜನರಿಗೆ ಉದ್ಯೋಗ, ಆ ಮೂಲಕ ಅನ್ನಕ್ಕೆ ದಾರಿ ಆಗಿದ್ದರೆ ಅದಕ್ಕೆ ಕಾರಣ ಶ್ರೀಮತಿ ಇಂದಿರಾ ಗಾಂಧಿ ಅವರು. ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಲೋಕಸಭಾ ಸದಸ್ಯರಾದ ಮೇಲೆ 3,300 ಕೋಟಿ ರೂಪಾಯಿಯ ಕುಡತಿನಿ ವಿದ್ಯುತ್‌ ಯೋಜನೆ ಜಾರಿ ಮಾಡಿದ್ದರು. ಈಗ ಅವರು ಉತ್ತರ ಕೊಡಲಿ, ಬಳ್ಳಾರಿಯ ಅಭಿವೃದ್ಧಿಗೆ ಶ್ರೀರಾಮುಲು ಅಥವಾ ಬಿಜೆಪಿಯ ಕೊಡುಗೆ ಏನು? ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷಗಳು ಕಳೆದಿದೆ, ಬಳ್ಳಾರಿಗೆ ಒಂದೇ ಒಂದು ರೂಪಾಯಿ ಉಪಯೋಗ ಆಗಿಲ್ಲ. ಶ್ರೀರಾಮುಲು ಚರ್ಚೆಗೆ ತಯಾರಾಗಿದ್ದಾರಂತೆ ಆದರೆ ಅವರಂಥ ಪೆದ್ದನ ಜೊತೆ ಚರ್ಚೆ ಮಾಡುವ ಹುಂಬತನದ ಕೆಲಸ ನಾವು ಮಾಡಲ್ಲ  ಎಂದರು.

ಬಳ್ಳಾರಿಯ ಅಕ್ರಮ ಗಣಿಗಾರಿಕೆಯಲ್ಲಿ ಲೂಟಿ ಹೊಡೆದಿದ್ದು ನಿಮ್ಮ ಸಾಧನೆ. ಇದಕ್ಕೆ ಕುಮ್ಮಕ್ಕು ಕೊಟ್ಟವರು ಯಾರು? ಈ ಅಕ್ರಮಗಳ ವಿರುದ್ಧ ಬೆಂಗಳೂರಿಂದ ಬಳ್ಳಾರಿಗೆ ನಾವು ಪಾದಯಾತ್ರೆ ಮಾಡಿದ ಮೇಲೆ ಜನಾರ್ಧನ ರೆಡ್ಡಿ ಜೈಲು ಸೇರಿದ್ದು. ಇಂದು ಕೂಡ ಅವರ ವಿರುದ್ಧ ಅನೇಕ ಕ್ರಿಮಿನಲ್‌ ಮೊಕದ್ದಮೆಗಳಿವೆ. ಕಾಂಗ್ರೆಸ್‌ ವಿರುದ್ಧ ಮಾತನಾಡುವ ನೈತಿಕತೆ ರಾಮುಲು ಅವರಿಗೆ ಇಲ್ಲ. ಒಂದು ವೇಳೆ ಕಾಂಗ್ರೆಸ್‌ ಪಕ್ಷ ಬಳ್ಳಾರಿಗೆ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಲೇಬೇಕು ಎಂದಿದ್ದರೆ ನಮ್ಮ ಪಕ್ಷದ ನಾಯಕರಾದ ಉಗ್ರಪ್ಪನವರನ್ನು ಕಳಿಸಿಕೊಡ್ತೇವೆ ತಯಾರಾಗಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇಂದು ರಾಜ್ಯದ ಬಿಜೆಪಿ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ಕರೆಯುತ್ತಿದ್ದಾರೆ. ಈ ಮಾತನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು ಇಲ್ಲಿನ ಸರ್ಕಾರ ಪ್ರತಿ ಕಾಮಗಾರಿಗೆ 40% ಕಮಿಷನ್‌ ಕೇಳುತ್ತಿದೆ ಎಂದು ಆರೋಪ ಮಾಡಿದ್ದಾರೆ. ಪತ್ರ ಬರೆದು 1 ವರ್ಷ ಆಯಿತು, ನರೇಂದ್ರ ಮೋದಿ ಅವರು ಈ ವರೆಗೆ ಯಾವ ಕ್ರಮ ಕೈಗೊಂಡಿಲ್ಲ. ನಾ ಖಾವೂಂಗ, ನಾ ಖಾನೆದೂಂಗ ಎನ್ನುವ ಮೋದಿ ಅವರು ಈಗೆಲ್ಲಿದ್ದಾರೆ? ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.

ರಾಹುಲ್‌ ಗಾಂಧಿ ಅವರು ಪಾದಯಾತ್ರೆ ಆರಂಭ ಮಾಡಿದ ಮೇಲೆ ಬಿಜೆಪಿ ಈಗ ಜನಸಂಕಲ್ಪ ಯಾತ್ರೆ ಹೊರಟಿದೆ. ಆದರೆ 2023ಕ್ಕೆ ಬಿಜೆಪಿಯನ್ನು ಕಿತ್ತೆಸೆದು ಮತ್ತೆ ಕಾಂಗ್ರೆಸ್‌ ಸರ್ಕಾರವನ್ನು ಸ್ಥಾಪನೆ ಮಾಡಬೇಕು ಎಂದು ರಾಜ್ಯದ ಜನ ಸಂಕಲ್ಪ ಮಾಡಿದ್ದಾರೆ. ರಾಹುಲ್‌ ಗಾಂಧಿ ಅವರ ಪಾದಯಾತ್ರೆಗೆ ವ್ಯಕ್ತವಾಗುತ್ತಿರುವ ಅಭೂತಪೂರ್ವ ಸ್ಪಂದನೆ ಇಂದ ಬಿಜೆಪಿಗೆ ನಡುಕ ಹುಟ್ಟಿದೆ. ಅದೇ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡಲು ಆರಂಭ ಮಾಡಿದ್ದಾರೆ ಎಂದರು.


165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ:

ರಾಹುಲ್‌ ಗಾಂಧಿ ಅವರು ನನಗೆ 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಅವಕಾಶ ಕೊಟ್ಟಿದ್ದರು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಮತ್ತು ಇದರ ಜೊತೆಗೆ ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಬಿಜೆಪಿ 2018ರಲ್ಲಿ ನೀಡಿದ್ದ ಚುನಾವಣಾ ಪ್ರಣಾಳಿಕೆಯ ಭರವಸೆಗಳಲ್ಲಿ 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ. ನಾಚಿಕೆಯಾಗಬೇಕು ಬಿಜೆಪಿ ನಾಯಕರಿಗೆ. ಈ ಸತ್ಯ ಜನರಿಗೆ ಗೊತ್ತಾಗಬೇಕೋ? ಬೇಡವೋ? ಒಡೆದಿರುವ ಜನರ ಮನಸುಗಳನ್ನು ಒಂದು ಮಾಡಬೇಕು ಎಂಬ ಕಾರಣಕ್ಕೆ ರಾಹುಲ್‌ ಗಾಂಧಿ ಅವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.

ಇಂದು ಬೆಲೆಯೇರಿಕೆ ಗಗನ ಮುಟ್ಟಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಚ್ಚಾತೈಲದ ಬೆಲೆ 125 ಡಾಲರ್‌ ಇದ್ದಾಗ ಡೀಸೆಲ್‌ ಬೆಲೆ 46 ಹಾಗೂ ಪೆಟ್ರೋಲ್‌ ಬೆಲೆ 71 ರೂಪಾಯಿ ಇತ್ತು. ಇಂದು ಪೆಟ್ರೋಲ್‌ ಬೆಲೆ 102 ಹಾಗೂ ಡೀಸೆಲ್‌ ಬೆಲೆ 95 ಆಗಿದೆ. 2016ರಲ್ಲಿ ಕಚ್ಚಾತೈಲ ಬೆಲೆ 40 ರಿಂದ 50 ಡಾಲರ್‌ ಒಳಗೆ ಇದ್ದರೂ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆ ಮಾಡಿಲ್ಲ. ಗ್ಯಾಸ್‌ ಬೆಲೆ 2013ರಲ್ಲಿ 414 ಇತ್ತು, ಇಂದು ಅದು 1050 ಆಗಿದೆ. ಇದನ್ನು ಜನರಿಗೆ ತಿಳಿಸಲು ಪಾದಯಾತ್ರೆ ಮಾಡುತ್ತಿರುವುದು. ನರೇಂದ್ರ ಮೋದಿ ಅವರು ಯುವಕರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಅಂದರೆ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಅದರ ಬದಲಿಗೆ ಸುಮಾರು 5 ರಿಂದ 6 ಲಕ್ಷ ಸಣ್ಣ ಮತ್ತು ಮಧ್ಯಮಗಾತ್ರದ ಕೈಗಾರಿಕೆಗಳು ಮುಚ್ಚಿ ಯುವಕರ ಬದುಕು ಬೀದಿ ಪಾಲಾಗಿದೆ ಎಂದು ಅವರು ಹೇಳಿದರು.


ರೈತರ ಮನೆ ಹಾಳು ಮಾಡಿದ್ದಾರೆ:

2022ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಈಗ ರೈತರು ಕೃಷಿ ಚಟುವಟಿಕೆಗಳಿಗೆ ಮಾಡುವ ಖರ್ಚು ದುಪ್ಪಟ್ಟಾಗಿದೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಕೊಡದೆ ರೈತರ ಮನೆ ಹಾಳು ಮಾಡಿದ್ದಾರೆ. ಶ್ರೀಮತಿ ಇಂದಿರಾ ಗಾಂಧಿ ಅವರು ಜಾರಿ ಮಾಡಿದ್ದ ಭೂಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಟಾಟಾ, ಬಿರ್ಲಾ, ಅಂಬಾನಿ, ಅದಾನಿಯಂತವರು ಭೂಮಿ ಖರೀದಿಸಲು ಅವಕಾಶ ಮಾಡಿಕೊಟ್ಟು ಸಣ್ಣ ಹಿಡುವಳಿದಾರರನ್ನು ಬೀದಿಪಾಲು ಮಾಡಿದ್ದಾರೆ. ಹೀಗೆ ಆದರೆ ದೇಶ ಉಳೀತದಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 

ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ದೇಶದ ಸಾಲ ಇದ್ದಿದ್ದು 53 ಲಕ್ಷದ 11 ಸಾವಿರ ಕೋಟಿ. 2023ರ ವರ್ಷದ ಮಾರ್ಚ್‌ ಕೊನೆಗೆ ಅದು 155 ಲಕ್ಷ ಕೋಟಿ ಆಗುತ್ತದೆ. ಸ್ವಾತಂತ್ರ್ಯ ಬಂದ ಮೇಲಿಂದ ಇಷ್ಟು ಸಾಲ ಯಾವ ಸರ್ಕಾರವೂ ಮಾಡಿರಲಿಲ್ಲ. ಅಚ್ಚೇದಿನ್‌ ಆಯೇಗಾ ಎಂದಿದ್ದರು, ಇದೇನಾ ಅಚ್ಚೇದಿನ್? ಇದನ್ನು ಜನರಿಗೆ ಹೇಳಬೇಕಾ ಬೇಡ್ವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ಸಂವಿಧಾನಕ್ಕೆ ಆರೆಸ್ಸೆಸ್ ವಿರೋಧ:

ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ಸಂವಿಧಾನ ಇವೆಲ್ಲವಕ್ಕೂ ಆರ್,ಎಸ್‌,ಎಸ್‌ ಮತ್ತು ಸಂಘ ಪರಿವಾರ ವಿರೋಧ ಮಾಡುತ್ತಿದೆ. ಇದನ್ನು ಬಹಿರಂಗವಾಗಿ ಮತ್ತು ಆಡಳಿತಾತ್ಮಕವಾಗಿ ಅವರು ವಿರೋಧ ಮಾಡುತ್ತಿದ್ದಾರೆ, ಇದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಇಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದು, ನಾನು ಮುಖ್ಯಮಂತ್ರಿಯಾಗಿರುವುದು ಕೂಡ ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ. ಇದನ್ನೇ ನಾಶ ಮಾಡಲು ಹೊರಟಿದ್ದೀರಲ್ವಾ ನಿಮಗೆ ನಾಚಿಕೆಯಾಗಲ್ವಾ ಎಂದು ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಾನು ರಾಹುಲ್‌ ಗಾಂಧಿ ಅವರಿಗೆ ಭಾರತ ಐಕ್ಯತಾ ಯಾತ್ರೆ ಎಂಬ ದೊಡ್ಡ ಸಾಹಸಕ್ಕೆ ಕೈ ಹಾಕಿರುವುದಕ್ಕಾಗಿ ತುಂಬುಹೃದಯದಿಂದ ನಮಸ್ಕಾರ ಮಾಡುತ್ತೇನೆ, ನಾವೆಲ್ಲರೂ ರಾಹುಲ್‌ ಗಾಂಧಿ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯೋಣ, ಕರ್ನಾಟಕದಲ್ಲಿ ಪಾದಯಾತ್ರೆಯು ನಮ್ಮ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ಭರವಸೆಯನ್ನು ನಾನು ರಾಹುಲ್‌ ಗಾಂಧಿ ಅವರಿಗೆ ನೀಡಲು ಬಯಸುತ್ತೇನೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ