ಮೀಸಲು ಕ್ಷೇತ್ರದ ನಾಯಕರು ಮೂಕರಾದಾಗ
- ಧಮ್ಮಪ್ರಿಯಾ ಬೆಂಗಳೂರು
ಕೇಳಿಸದೇ ಕಲಿಗಳೇ ಭೀಮಗೀತೆಯ ಸಾಲುಗಳು ತಿಳಿಸುವಂತೆ ಒಂದು ವರ್ಗವು ಮತ್ತೊಂದು ವರ್ಗದ ಮೇಲೆ ದಬ್ಬಾಳಿಕೆ ನಡೆಸಲು ಅಧಿಕಾರವೇ ಮೂಲ ಕಾರಣ, ಎಲ್ಲಾ ಅಧಿಕಾರಗಳ ಕೀಲಿಕೈಯಂತಿರುವ ರಾಜಕೀಯ ಅಧಿಕಾರವನ್ನು ಕೈಗೆತ್ತಿಕೊಳ್ಳಿರಿ ಎಂದು ಸಾರಿ ಸಾರಿ ಹೇಳಿದ ಬಾಬಾಸಾಹೇಬರ ಮಾತುಗಳು ದೇಶದ ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿಯೂ ಅಚ್ಚೋತ್ತಿದೆ. ಮೀಸಲು ಕ್ಷೇತ್ರದಿಂದ ಗೆದ್ದ ದಲಿತ ನಾಯಕರು ಸತತವಾಗಿ ಗೆಲ್ಲುತ್ತಲೇ ಇದ್ದಾರೆ, ಈ ಬಾರಿ ಒಬ್ಬರು ಗೆದ್ದರೆ, ಮುಂದಿನ ಚುನಾವಣೆಯಲ್ಲಿ ಮತ್ತೊಬ್ಬರನ್ನು ಗೆಲ್ಲಿಸುತ್ತಿರುವ ಶೋಷಿತ ಜನಾಂಗವು ಇಂದಿಗೂ ತಮ್ಮ ಭರವಸೆಯ ಕಣ್ಣುಗಳಲ್ಲೇ ಹಸನಾದ ಬದುಕನ್ನು ಎದುರು ನೋಡುತ್ತಲೇ ಇದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದವು. ಸುವರ್ಣ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲಾಯಿತು. ಆದರೆ ಇಂದಿಗೂ ದಲಿತರಿಗೆ ಸ್ವಾತಂತ್ರ್ಯ ಸಿಕ್ಕಿದೆಯಾ ಎನ್ನುವುದೇ ಬಹುದೊಡ್ಡ ಪ್ರಶ್ನೆಯಾಗಿದೆ. ಈ ದೇಶದಲ್ಲಿ ಕೇವಲ ಶೇ 3.5% ಇರುವ ಜನರು ಶೇ 97% ಅಧಿಕಾರವನ್ನು ಬೀದಿಗಿಳಿದು ಹೋರಾಟವನ್ನು ಮಾಡದೇ ಅನುಭವಿಸುತ್ತಿದ್ದಾರೆ . ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ತಪ್ಪದೆ ಪಡೆದುಕೊಳ್ಳುತ್ತಿದ್ದಾರೆ . ರೈತ ಚಳುವಳಿಯಲ್ಲಾದ ರೈತರ ಮೇಲಿನ ಗುಂಡಿನ ದಾಳಿಯಲ್ಲಿ (ಚನ್ನಪಟ್ಟಣದಲ್ಲಿ )ಸಾವನ್ನಪ್ಪಿದ ರೈತ ಬಂಧುಗಳ ಪರವಾಗಿ ಮಾತನಾಡಿದ ಮಾಜಿ ಪ್ರಧಾನಿಗಳ ಸ್ವಾಭಿಮಾನದ ಮಾತುಗಳು ತನ್ನ ಜನಾಂಗದಲ್ಲಿ ಭರವಸೆಯ ಬದುಕನ್ನು ಕಟ್ಟಿಕೊಟ್ಟಂತಿವೆ.
75 ರ ಸುವರ್ಣ ಸ್ವಾತಂತ್ರ್ಯ ದಿನದಂದೇ ನಡೆದ ದಲಿತ ವಿದ್ಯಾರ್ಥಿಯ ಮೇಲಿನ ಹಲ್ಲೆ ಮತ್ತು ಆತನ ಸಾವು, ದೇವರ ಕೋಲು ಮುಟ್ಟಿದ್ದಕ್ಕೆ 50 ಸಾವಿರ ದಂಡ, ದಲಿತ ಹೆಣ್ಣುಮಗಳ ‘ಹ’ತ್ಯಾಚಾರ, ಮಾನಭಂಗ ಇವುಗಳು ಇನ್ನೂ ನಿಲ್ಲುತ್ತಿಲ್ಲಾ , ಎಲ್ಲಿದೆ ಸಮಾನತೆ, ಸ್ವಾತಂತ್ರ್ಯ, ನಮ್ಮ ನಾಯಕರ ಸ್ವಾಭಿಮಾನದ ರಾಜಕೀಯ ಹೋರಾಟ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳುವ ಅನಿವಾರ್ಯತೆ ಇಂದು ದಲಿತ ವಿದ್ಯಾವಂತ ಜನರಿಗೆ ಬಹಳ ಮುಖ್ಯವಾಗಿದೆ.
ಸ್ವಾತಂತ್ರ್ಯ ಬಂದು, ಸಂವಿಧಾನ ಜಾರಿಯದಾಗಿನಿಂದಲೂ ಮೀಸಲು ಕ್ಷೇತ್ರಗಳಿಂದ ದಲಿತರು ಸ್ವರ್ದಿಸುತ್ತಲೇ ಬಂದಿದ್ದಾರೆ. ಗೆದ್ದ ನಂತರ ವಿಧಾನಸಭೆ, ಲೋಕಸಭೆಗೆ ತೆರಳಿ ಅಲ್ಲಿ ಮುಖ್ಯ ವಿಚಾರಗಳನ್ನು ಚರ್ಚಿಸುವ ಬದಲು ಮಾತು ಬಾರದ ಮೂಕರಾಗಿದ್ದಾರೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ವೇದಿಕೆಗೆ ಬಂದಾಗ ಈ ಬಾರಿ ನಮ್ಮನ್ನು ನೀವು ಗೆಲ್ಲಿಸದಿದ್ದರೆ ನಿಮ್ಮ ಸಾವು ಖಚಿತ ಎನ್ನುವ ನಾಯಕರುಗಳು ಇಂತಹ ಕೃತ್ಯಗಳನ್ನು ತಡೆಯಲಾಗುತ್ತಿಲ್ಲಾ ಯಾಕೆ ? ನಮ್ಮ ಸಂವಿಧಾನ, ನಮ್ಮ ಹಕ್ಕುಗಳು ಸರಿಯಾಗಿ ಜಾರಿಯಾಗದಿದ್ದರೆ ನಿಮ್ಮ ಸರ್ಕಾರಗಳು ಬೀಳುವುದು ಖಚಿತ ಎಂದು ಏಕೆ ಪ್ರತಿಭಟಿಸುತ್ತಿಲ್ಲಾ ? ಸರ್ಕಾರಿ ಸ್ವಾಮ್ಯದ ಎಲ್ಲಾ ಸಂಸ್ಥೆಗಳು ಖಾಸಗಿಯವರ ಕೈ ಪಾಲಾಗುತ್ತಿವೆ. ಅಲ್ಲಿ ದಲಿತರಿಗೆ ಉದ್ಯೋಗವೆಂಬುದು ಮರೀಚಿಕೆಯಾಗುತ್ತಿವೆ. ಕೇವಲ ಕಸ ಗುಡಿಸುವ , ಟಾಯ್ಲೆಟ್ ತೊಳೆಯುವ ಕೆಲಸಗಳಿಗೆ ಅಲ್ಲಿನ ಉದ್ಯೋಗಗಳು ಮೀಸಲಾಗುತ್ತಿವೆ. ಇದನ್ನು ಸರಿಪಡಿಸುವ ಹೊಣೆ ಯಾರದು ? ಹಾಗಾದರೆ ನಾವು ಯಾವ ಕಾರಣಕ್ಕಾಗಿ ನಿಮ್ಮನ್ನು ಗೆಲ್ಲಿಸುತ್ತಿದ್ದೇವೆ ? ಇಂತಹ ಸಂದರ್ಭದಲ್ಲಿ ಮೀಸಲು ಕ್ಷೇತ್ರದಿಂದ ಗೆದ್ದು ಹೋದ ನಮ್ಮ ಹೆಮ್ಮೆಯ ನಾಯಕರು ಸರ್ಕಾರವನ್ನು ಬೀಳಿಸುವ ಹುನ್ನಾರವನ್ನು, ತಂತ್ರಗಾರಿಕೆಯನ್ನು ಏಕೆ ಬಳಸುತ್ತಿಲ್ಲಾ ? ಈ ಸಂದರ್ಭಗಳಲ್ಲಿ ನಿಮ್ಮ ಸ್ಟ್ಯಾಟರ್ಜಿಗಳು ಏಕೆ ಕೆಲಸ ಮಾಡುತ್ತಿಲ್ಲಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿವೆ.
ಚುನಾವಣೆಗಳು ಘೋಷಣೆಯಾಗಿ ಹತ್ತಿರವಾಗುತ್ತಿದ್ದಂತೆ ಇಲ್ಲಿ ಸಮಾವೇಶ, ಅಲ್ಲಿ ಪ್ರತಿಭಟನೆ, ಮತ್ತೆಲ್ಲೋ ಗೋಷ್ಠಿ , ಇನ್ನೆಲ್ಲೋ ಚಳುವಳಿ ಇವೆಲ್ಲಾ ದಲಿತೇತರರಿಗೆ ಬಹಳ ಖುಷಿ ಕೊಡುವಂತಹ ವಿಚಾರವಾಗಿಬಿಟ್ಟಿವೆ. ಯಾರಿಗಾಗಿ ಈ ಹೋರಾಟ ? ಹಾರಾಟ ? ಚೀರಾಟ ? ಕಳೆದ 70 ವರ್ಷಗಳಿಂದಲೂ ಒಂದಲ್ಲಾ ಒಂದು ಹೋರಾಟಗಳು ಬೀದಿಗಳಲ್ಲಿ ನಡೆಯುತ್ತಿವೆಯೇ ಹೊರತು, ಇಂತಹ ಘಟನೆಗಳು ಗತಿಸುವುದು ನಿಂತಿವೆಯಾ ? ಹಾಗಾದರೆ ಇಂದಿನ ದಲಿತ ಪರ ಚಳುವಳಿಗಳು ಅಳುವ ಸರ್ಕಾರದ ವಿರುದ್ದವಲ್ಲಾ! ಎನ್ನಬಹುದು. ಒಂದು ವೇಳೆ ಸರ್ಕಾರದ ವಿರುದ್ಧ ನೀವು ಹೋರಾಡುವುದೇ ಆದಲ್ಲಿ ಮೀಸಲು ಕ್ಷೇತ್ರಗಳಿಂದ ಗೆದ್ದು ಹೋದಂತವರ ಮನೆ ಮುಂದೆ ಕುಳಿತು ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡಿದರೆ ಗೆದ್ದು ಗದ್ದುಗೆಯಲ್ಲಿರುವ ಮೀಸಲು ಕ್ಷೇತ್ರದ ಮಹಾ ನಾಯಕರು ಕಣ್ಣು ತೆರೆಯಬಹುದು.
ಇವರುಗಳನ್ನು ನಮ್ಮ ಹಕ್ಕುಗಳ ಪರವಾಗಿ ಮಾತನಾಡಲು, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾವು ಆಯ್ಕೆ ಮಾಡಿ ಕಳಿಸಿರುವುದು.ಆದರೆ ಇವರುಗಳೆಲ್ಲಾ ತಮ್ಮವರ ಹಾಗೂ ತಮ್ಮ ಕುಟುಂಬಸ್ತರ ಅಸ್ತಿ ಗಳ ರಕ್ಷಣೆ ಮಾಡಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ. ಇದನ್ನು ಇಂದಿನ ದಲಿತ ಪರ ನಾಯಕರು, ಹೋರಾಟಗಾರರು ಅರಿಯಬೇಕಿದೆ. ಒಂದು ಸಣ್ಣ ಉದಾಹರಣೆ ನೀಡುವುದಾದರೆ – ಕೇವಲ ಶೇ 3.5 % ಇರುವ ಸಮುದಾಯ ಶೇ 10% ಮೀಸಲಾತಿ ತೆಗೆದುಕೊಂಡು ಅನುಭವಿಸುತ್ತಿದೆ. ಅಲ್ಲದೆ ಅದನ್ನು ಸರಿಯಾ ಸಮಯಕ್ಕೆ ಸರಿಯಾದ ರೀತಿಯಲ್ಲಿ ಜಾರಿಮಾಡಲು ಒಂದು ಸಮಿತಿಯನ್ನೇ ನಿರ್ಮಾಣ ಮಾಡಿಕೊಂಡು ದೇಶದಲ್ಲಿ ದೊರೆಯುತ್ತಿರುವ ಸಕಲ ಸಂಪತ್ತನ್ನು ಅನುಭವಿಸುತ್ತಿದ್ದಾರೆ. ಈ ಜನಾಂಗ ಎಂದೂ ಬೀದಿಗಿಳಿದು ಹೋರಾಟ ಮಾಡಿದ ಪುರಾವೆಗಳಿಲ್ಲಾ. ಆದರೆ ಇಂದು ಇವರೇ ದೇಶದ ಶೇಕಡಾ 97% ಸಂಪತ್ತಿನ ವಾರಸುಧಾರರು, ಅಧಿಕಾರದ, ಆಡಳಿತದ ರೂವಾರಿಗಳು ಹಾಗೂ ಯಜಮಾನರಾಗಿದ್ದಾರೆ.
ಬಾಬಾಸಾಹೇಬರ ಪೊಲಿಟಿಕಲ್ ಪವರ್ ಮಾಸ್ಟರ್ ಕೀ ಎಂಬ ಮಾತು ಅವರಿಗೆ ಅರ್ಥವಾಗಿದೆ. ಯಾರೂ ಅಂಬೇಡ್ಕರ್ ರವರನ್ನು ಅರಿಯಬೇಕಿತ್ತೋ ಅವರು ಇಂದು ಕೇವಲ ಅವರ ಅಭಿಮಾನಿಗಳಾಗಿ ಅವರ ಮೂಲ ಆಶಯಗಳನ್ನು ಅರಿಯದವರಾಗಿದ್ದಾರೆ. ಅರಿತ್ತಿದ್ದರೂ ಅದನ್ನು ಇಂದಿನ ರಾಜಕೀಯ ವ್ಯವಸ್ಥೆಗೆ ತಳುಕು ಹಾಕಿಕೊಂಡು ತಮ್ಮಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವವರಾಗಿದ್ದಾರೆ. ಯಾರೂ ಅಂಬೇಡ್ಕರ್ ರವರ ಸಿದ್ದಾಂತದ ವಿರೋಧಿಗಳಾಗಿದ್ದರೋ ಅವರು ಬಾಬಾಸಾಹೇಬರನ್ನು ಚೆನ್ನಾಗಿ ಅರಿತು ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮ ಜನಾಂಗದ ರಕ್ಷಣೆಯಲ್ಲಿದ್ದಾರೆ. ನಮ್ಮ ವಿಮೋಚನೆ ಇರುವುದು ರಾಜಕೀಯ ಅಧಿಕಾರದಲ್ಲಿ ಎಂದು ಅರಿತಿದ್ದಾರೆ. ಅಲ್ಲದೆ ಸುಮಾರು ಶೇ 97% ಜನ ಅಧಿಕಾರದಲ್ಲಿದ್ದಾರೆ.
ಆದರೆ ದಲಿತ ಶೋಷಿತ ಸಮುದಾಯಗಳು ಮಾತ್ರ ಕೇವಲ ಚುನಾವಣೆಗಳು ಬಂದಾಗ ನಮ್ಮದು ಆ ಪಕ್ಷ, ನಿಮ್ಮದು ಈ ಪಕ್ಷ ಎಂದು ಮೊದಲೇ ತೀರ್ಮಾನಿಸಿಕೊಂಡು ಬೇರೆಯವರ ಪಕ್ಷಕ್ಕೆ ಬಹಳ ನಿಷ್ಠೆಯಿಂದ ದುಡಿಯುತ್ತಾರೆ. ಪಕ್ಷಗಳು ಅಧಿಕಾರಕ್ಕೆ ಬಂದ ತಕ್ಷಣ ಮತ್ತೆ ನಮಗೆ ಆ ಸವಲತ್ತು ಈ ಸವಲತ್ತು ಬೇಕೆಂದು, ನಮ್ಮ ಹೆಣ್ಣು ಮಕ್ಕಳ ರಕ್ಷಣೆಯಾಗಬೇಕೆಂದು ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅಲ್ಲೆಲ್ಲೋ ದೇವಸ್ಥಾನದ ಒಳಗೆ ಬಿಟ್ಟಿಲ್ಲಾ, ದೇವರು ನಮ್ಮ ಕೇರಿಗೆ ಮೆರವಣಿಗೆ ಬಂದಿಲ್ಲಾ, ಇಲ್ಲೆಲ್ಲೋ ಪೂಜಾರಿ ದಲಿತರಿಗೆ ದೇವರ ಪೂಜೆ ಮಾಡಲು ನಿರಾಕರಿಸಿದ, ಮತ್ತೆಲ್ಲೋ ದೇವರ ಕೋಲು ಮುಟ್ಟಿದ್ದಕ್ಕೆ 50 ಸಾವಿರ ದಂಡ ವಸೂಲಾತಿ, ಎಂದು ಬೀದಿಗಿಳಿದು ಹೋರಾಟ ಮಾಡಲು ಸಿದ್ಧವಿದ್ದು ಇವರುಗಳೆಲ್ಲಾ ಬ್ಯಾನರ್ಗಳಲ್ಲಿ, ಪೋಸ್ಟರ್ ಗಳಲ್ಲಿ ತಮ್ಮ ಮುಖವನ್ನು ಹಾಕಿಕೊಳ್ಳಬಹುದೇ ಹೊರತು ಅಧಿಕಾರ ಎನ್ನುವದು ಮರೀಚಿಕೆಯಾಗಿಬಿಡುತ್ತಿದೆ. ಇದನ್ನು ನಮ್ಮ ನಾಯಕರು ಅರಿತುಕೊಳ್ಳಬೇಕು. ತಮ್ಮ ಜನಾಂಗದ ರಕ್ಷಣೆ ನಮ್ಮ ಹೊಣೆಯೆಂದು ತಿಳಿದು ರಾಜಕೀಯವಾಗಿ ಭದ್ರತೆ ನೀಡುವಂತಿರಬೇಕು.
RSS ನ ಸಂಸ್ಥಾಪಕರಾದ ಗೊಳ್ವಲ್ಕರ್ ಹೇಳಿರುವ ಹಾಗೆ ತಮಟೆಗಳು ಹೇಗೆ ಸದ್ದು ಮಾಡುತ್ತವೆಯೋ ಹಾಗೆಯೇ ದಲಿತರು ಸದ್ದು ಮಾಡುತ್ತಾರೆ. ಆದರೆ ತಮಟೆಯನ್ನು ಹಿಂದೆ ತಿರುಗಿಸಿ ಒಳಗಡೆ ನೋಡಿದರೆ ಏನೂ ಇರುವುದಿಲ್ಲವೋ ಹಾಗೆಯೇ ದಲಿತರ ತಲೆಯಲ್ಲಿಯೂ ಏನೂ ಇಲ್ಲಾ ಬೀದಿಯಲ್ಲಿ ಕೇವಲ ಸದ್ದುಮಾಡುತ್ತಾರೆ ಮಾಡಿಕೊಳ್ಳಲಿ ಬಿಡಿ ಎಂದಿದ್ದಾರೆ. ಆದರೆ ನಮ್ಮ ಪರವಾಗಿ ಸಂವಿಧಾನದ ಅಡಿಯಲ್ಲಿ ಮೀಸಲು ಕ್ಷೇತ್ರದಿಂದ ಗೆದ್ದು ಹೋದ ದಲಿತ ನಾಯಕರು ಒಮ್ಮೆ ಸರ್ಕಾರವನ್ನು ದಿಕ್ಕರಿಸಿ ಹೊರಗಡೆ ಬರುತ್ತೇವೆ ಎನ್ನುವ ದೈರ್ಯವಿರಲಿ, ಒಂದು ಘೋಷಣೆಯನ್ನು ಕೂಗಿ ಹೊರಬಾರದವರಾಗಿದ್ದಾರೆ. ಒಮ್ಮೆ ಗಟ್ಟಿಯಾಗಿ ಎದೆ ತಟ್ಟಿ ನಿಂತರೆ ಅಂದೇ ಸರ್ಕಾರಗಳು ನಡುಗಿಹೋಗುತ್ತವೆ. ಆದರೆ ಇವರು ಆ ಕೆಲಸವನ್ನೂ ಮಾಡುವುದಿಲ್ಲಾ. ಯಾಕೆಂದರೆ ಇವರೆಲ್ಲಾ ಬಾಯಿಕಟ್ಟಿದ ನಾಯಿಗಳಂತೆ, ಬೇರೆ ಪಕ್ಷಗಳ ಕೊಟ್ಟಿಗೆಯಲ್ಲಿ ಮೂಗುದಾರ ಹಾಕಿರುವ ಎತ್ತುಗಳಂತೆ ಸುಮ್ಮನಿದ್ದಾರೆ. ಇವರುಗಳನ್ನು ಇವರು ಮಾರಿಕೊಂಡಂತೆ ಸುಮ್ಮನಿದ್ದಾರೆ. ಇವರುಗಳೆಲ್ಲಾ ಫುಲೆ, ಶಾಹು, ನಾಲ್ವಡಿ, ಪೆರಿಯಾರ್ ಬಾಬಾಸಾಹೇಬರ ಹೋರಾಟದ ಹಾದಿಯನ್ನು ಅನುಸರಿಸಿದವರಲ್ಲಾ. ಇವರುಗಳೆಲ್ಲಾ ತಮ್ಮಗಳ ಹಿತಾಶಕ್ತಿಯನ್ನು ಕಾಪಾಡಿಕೊಳ್ಳುವವರೇ ಹೊರತು ಇವರು ಯಾರು ದಲಿತರ /ಶೋಷಿತರ ಉದ್ಧಾರಕರಲ್ಲಾ. ಇವರು ನಿಜವಾಗಿಯೂ ದಲಿತರ ಶೋಷಿತರ ಪರವಾಗಿ ಕೆಲಸ ಮಾಡುವವರಾಗಿದಿದ್ದರೆ, ಬೀದಿಗೊಂದು ಸಂಘಟನೆ, ಕ್ಷೇತ್ರಕೊಂದು ಸಮಿತಿ, ದಿನನಿತ್ಯ ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿರಲಿಲ್ಲಾ. ಅಧಿಕಾರದಲ್ಲಿರುವ ಅಲ್ಪಸಂಖ್ಯಾತ ಸಮುದಾಯವನ್ನು ನೋಡಿ ದಲಿತರು ಶೋಷಿತರು ಕಲಿಯಬೇಕಿದೆ. ಅವರು ಯಾರೂ ಯಾವ ಸಂಘ ಸಂಸ್ಥೆಯನ್ನು ಹೋರಾಟಕ್ಕಾಗಿ ಮಾಡಿಕೊಂಡವರಲ್ಲಾ. ಕೇವಲ ಅಭಿವೃದ್ದಿಗಾಗಿ, ಅವರ ಆದಾಯದ ಮೂಲಕ್ಕಾಗಿ ಸೃಷ್ಠಿಸಿಕೊಂಡಿರುವ ದೇವಾಲಯಗಳು, ಮಠ ಮಾನ್ಯಗಳಲ್ಲಿ ಕೆಲಸ ಮಾಡುವುದೇ ಹೊರತು ಸಮಾವೇಶ, ಪ್ರತಿಭಟನೆ, ಧರಣಿ, ಜಾತಾ ಎಂದೂ ಮಾಡಿದವರಲ್ಲಾ. ಅದಕ್ಕಾಗಿಯೇ ಇಂದು ಮಠಾಧೀಶರು ಕೂಡ ಮಂತ್ರಿಗಳಾಗುತ್ತಿರುವುದು, ರಾಜಕೀಯ ರಂಗಪ್ರವೇಶ ಮಾಡುತ್ತಿರುವುದು. ನಿಮಗೆ ನಿಜವಾಗಿಯೂ ಬಾಬಾಸಾಹೇಬರ ಬಗ್ಗೆ ಗೌರವವಿದ್ದಲ್ಲಿ, ನಾವು ನಮ್ಮ ನಮ್ಮ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ನಿಮ್ಮ ಪಕ್ಷದಿಂದ ಅಭ್ಯರ್ಥಿಯಾಗಿ ಯಾರನ್ನೂ ಕಣಕ್ಕಿಳಿಸುತ್ತಿಲ್ಲಾ. ಚುನಾವಣೆಯನ್ನು ದಿಕ್ಕರಿಸಿದ್ದೇವೆ. ಆಯೋಗಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿ ಹೊರಗಡೆ ಬರಲಿ. ಅಂದು ನೋಡಿ ಇಡೀ ಆಳುವ ಸರ್ಕಾರಗಳೇ ನಡುಗಿ ದಲಿತ ನಾಯಕರಿಗೆ ಅಧಿಕಾರಿಗಳಿಗೆ ಸಿಗುವ ಸ್ಥಾನಮಾನಗಳನ್ನು ತನ್ನಷ್ಟಕ್ಕೆ ತಾನೇ ನೀಡಲು ಮುಂದಾಗುತ್ತಾರೆ.
ಬೀದಿಗಿಳಿದು ಹೋರಾಟಗಳನ್ನು ಮಾಡಿ ಎಂದು ಬಾಬಾಸಾಹೇಬರು ಎಂದೂ ಬಯಸಿದವರಲ್ಲ. ಅವರು ಈ ರೀತಿಯ ಹೋರಾಟ ಪ್ರತಿಭಟನೆ ಎಲ್ಲೂ ಮಾಡಿಯೂ ಇಲ್ಲಾ. ಒಮ್ಮೆ ಬಾಬಾಸಾಹೇಬರನ್ನು ಅರಿತು ನಡೆಯಿರಿ. ಅರಿತಿರುವಿರೆಂದಾದರೆ ನಮಗೂ ನಿಮ್ಮ ಮೇಲೆ ಅಪಾರವಾದ ಗೌರವ ಕಾಳಜಿ ಪ್ರೇಮ ಪ್ರೀತಿ ವಿಸ್ವಾಸ ನಂಬಿಕೆ ಎಲ್ಲವೂ ಇದೇ ಎಂದು ತಿಳಿದು ತಮ್ಮನ್ನು ಗೌರವಿಸುತ್ತಿದ್ದೇನೆ. ಬುದ್ಧ ಬಸವ ಬಾಬಾಸಾಹೇಬರ ದಾರಿಯಲ್ಲಿ ನಡೆಯೋಣ ಅವರಂತೆ ಇತಿಹಾಸದ ಪುಟಗಳಲ್ಲಿ ಸೇರೋಣ. ಬಾಬಾಸಾಹೇಬರ ಆಶಯಗಳಿಗೆ ಜಯವಾಗಲಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka