ಒಡೆಯಿತು ಸಾರ್ವಜನಿಕರ ಆಕ್ರೋಶದ ಕಟ್ಟೆ : ಟೋಲ್ ಗೇಟ್ ಗೆ ಮುತ್ತಿಗೆ ಯಶಸ್ವಿ!
ಅಲ್ಲಿ ಆಕ್ರೋಶ, ಸಿಟ್ಟು ಇತ್ತು. ಕಾರಣ ಆ ಒಂದೇ ಒಂದು ಟೋಲ್ ಗೇಟ್. ಕೇಂದ್ರ ಸರ್ಕಾರ, ಕೇಂದ್ರ ಸಚಿವರು ಅದನ್ನು ಕಾನೂನು ಬಾಹಿರ ಅಂತಾ ಹೇಳಿದ್ರೂ ಆ ಟೋಲ್ ಗೇಟನ್ನು ತೆರವು ಮಾಡದ ಕರಾವಳಿಯ ಜನಪ್ರತಿನಿಧಿಗಳ ವಿರುದ್ಧ ಇಂದು ಸಮಾನ ಮನಸ್ಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಟೋಲ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ರು.
ಕಟ್ಟೆಯೊಡೆದ ಆಕ್ರೋಶ, ಸರ್ಕಾರದ ವಿರುದ್ಧ ಘೋಷಣೆ, ಟೋಲ್ ಗೆ ಮುತ್ತಿಗೆ. ಹೌದು. ಈ ದೃಶ್ಯ ಕಂಡು ಬಂದಿದ್ದು ಮಂಗಳೂರು ನಗರದ ಸುರತ್ಕಲ್ ನಲ್ಲಿ. ಮಂಗಳೂರು ನಗರದ ಎನ್ ಐಟಿಕೆ ಬಳಿಯಿರುವ ಸುರತ್ಕಲ್ ಟೋಲ್ ಗೇಟ್ ತೆರವು ನಿರ್ಣಾಯಕ ಕಾರ್ಯಾಚರಣೆಯ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಯ್ತು. ಈ ವೇಳೆ ಪ್ರತಿಭಟನಾಕಾರರು ಏಕಾಏಕಿ ಟೋಲ್ ಗೇಟ್‌ನತ್ತ ಮುತ್ತಿಗೆ ಹಾಕಿದ್ರು. ಈ ವೇಳೆ ಪೊಲೀಸರು ಬ್ಯಾರಿಕೇಡ್ ಇಟ್ಟು ಆಕ್ರೋಶಿತ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರು. ಸಾವಿರಾರು ಪ್ರತಿಭಟನಾಕಾರರು ಏಕಾಏಕಿ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಟೋಲ್ ನತ್ತ ಓಡಿ ಹೋದ ಘಟನೆ ನಡೆಯ್ತು.
ಸ್ಥಳದಲ್ಲಿ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಿದ್ದರೂ, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆದರೂ ಟೋಲ್‌ನತ್ತ ನುಗ್ಗಿದ ಪ್ರತಿಭಟನಾಕಾರರು ಟೋಲ್ ಸಂಗ್ರಹ ವಸ್ತುಗಳನ್ನು ಪುಡಿಗಟ್ಟಿದ್ರು. ಈ ವೇಳೆ ಪೊಲೀಸರು ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಸುರತ್ಕಲ್ ಟೋಲ್ ತೆರವನ್ನು ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಇಂದು ಟೋಲ್ ವಿರೋಧಿ ಸಮಿತಿ ನಿರ್ಣಾಯಕ ಹೋರಾಟವನ್ನು ಕೈಗೊಂಡಿತ್ತು. ಕೆಲಕಾಲದವರೆಗೆ ಟೋಲ್ ಗೇಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಪೊಲೀಸರು ಟೋಲ್ ಗೇಟ್‌ನಲ್ಲಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟರು.
ಒಟ್ಟಿನಲ್ಲಿ ಸುರತ್ಕಲ್ ಟೋಲ್ ತೆರವಿಗಾಗಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಅತ್ತ ಸಂಸದರು, ಜಿಲ್ಲಾಡಳಿತ ಕೆಲವೇ ದಿನಗಳಲ್ಲಿ ಟೋಲ್ ತೆರವು ಮಾಡ್ತೀವಿ ಅಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka