ಬಸ್ಸಿನಲ್ಲಿ ಪೊಲೀಸರನ್ನು ದೂಡಿ ಹಾಕಿ ಪರಾರಿಯಾದ ಕಳ್ಳ: ಕೆಲವೇ ಕ್ಷಣದಲ್ಲಿ ಕಳ್ಳನನ್ನು ಹಿಡಿದ ಪೊಲೀಸರು - Mahanayaka
6:24 PM Wednesday 11 - December 2024

ಬಸ್ಸಿನಲ್ಲಿ ಪೊಲೀಸರನ್ನು ದೂಡಿ ಹಾಕಿ ಪರಾರಿಯಾದ ಕಳ್ಳ: ಕೆಲವೇ ಕ್ಷಣದಲ್ಲಿ ಕಳ್ಳನನ್ನು ಹಿಡಿದ ಪೊಲೀಸರು

giridhar
03/11/2022

ಬಂಟ್ವಾಳ: ಕಳ್ಳತನ ಪ್ರಕರಣದ ಆರೋಪಿಯನ್ನು  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣಾ ಪೊಲೀಸರು ಸರಕಾರಿ ಬಸ್ಸಿನಲ್ಲಿ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಪೊಲೀಸರನ್ನು ಬಸ್ಸಿನೊಳಗೆ ದೂಡಿ ಹಾಕಿ ಬಸ್ಸಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಘಟನೆ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಬಳಿ ನಡೆದಿದೆ.

ಪರಾರಿಯಾದ ಆರೋಪಿಯನ್ನು ಮತ್ತೆ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಕಳ್ಳಿಗೆ ಗ್ರಾಮದ, ಬ್ರಹ್ಮರಕೂಟ್ಲು – ಪೆರಿಯೋಡಿಬೀಡು ನಿವಾಸಿ ಗಿರೀಶ್ ಅಲಿಯಾಸ್ ಗಿರಿಧರ್ (52) ಎಂಬಾತ 2003ರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್ ಸಿ  ನ್ಯಾಯಾಲಯದ ಸಿಸಿ ಸಂಖ್ಯೆ 1706/2003 ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 15/2003 ಕಲಂ 457, 380 ಐಪಿಸಿಯಂತೆ ತಲೆಮರೆಸಿಕೊಂಡಿದ್ದ ಶಿಕ್ಷಾರ್ಹ ಅಪರಾಧಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಈತನನ್ನು ಬಂಟ್ವಾಳ ನಗರ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವ ಸಲುವಾಗಿ ಶಿಕ್ಷಾ ಕೈದಿಯನ್ನು ಸರಕಾರಿ ಬಸ್ಸಿನಲ್ಲಿ ಬಂಟ್ವಾಳ ನಗರ ಠಾಣಾ ಎಎಸೈ ದೇವಪ್ಪ ಗೌಡ ಹಾಗೂ ಪಿಸಿ ಉಸ್ಮಾನ್ ಅವರು ಬಿ.ಸಿ.ರೋಡಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ಬ್ರಹ್ಮರಕೋಟ್ಲು ಟೋಲ್ ಗೇಟಿನಲ್ಲಿ ಬಸ್ಸು ನಿಧಾನವಾಗುತ್ತಿದ್ದಂತೆ, ಆರೋಪಿ ಪೊಲೀಸರನ್ನು ಬಸ್ಸಿನೊಳಗೆ ದೂಡಿ ಹಾಕಿ ಬಸ್ಸಿನಿಂದ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಕೂಡಾ ಮಿಂಚಿನ ವೇಗದಲ್ಲಿ ಆರೋಪಿಯನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಮತ್ತೆ ಆತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ