ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು: ಸಿಎಂ ಬೊಮ್ಮಾಯಿ - Mahanayaka
2:05 AM Wednesday 11 - December 2024

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು: ಸಿಎಂ ಬೊಮ್ಮಾಯಿ

jana sankalpa yathre
07/11/2022

ಕಾಪು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕ್ಫ್ ಜಾಗ ಕಬಳಿಸಿದವರು ಕಾಂಗ್ರೆಸ್ ಪಕ್ಷದವರು ಎಂದು ಟೀಕಿಸಿದರು. ಒಡೆದು ಆಳುವ ನೀತಿ ಕಾಂಗ್ರೆಸ್ಸಿಗರದು. ಕಾಂಗ್ರೆಸ್ ಪಕ್ಷದವರಿಗೆ ಕರ್ನಾಟಕದ ಜನರಿಗೆ ಮುಖ ತೋರಿಸುವ ನೈತಿಕತೆ ಇಲ್ಲ ಎಂದು ಆಕ್ಷೇಪಿಸಿದರು.

ಹಾಸ್ಟೆಲ್ ಕಟ್ಟಡ ವಿಚಾರದಲ್ಲಿ ಭ್ರಷ್ಟಾಚಾರ, ಅನ್ನ ಭಾಗ್ಯದಲ್ಲಿ ಕನ್ನ, ಬಿಡಿಎ, ಭೂಮಿ, ನೀರಾವರಿ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್ಸಿಗರು ಎಂದ ಅವರು, ಎಸ್‍ಸಿ ಎಸ್‍ಟಿ ಮೀಸಲಾತಿ ವಿಚಾರದಲ್ಲಿ ನಮಗೆ ಧೈರ್ಯ ಇತ್ತು. ಆದರೆ, ಕಾಂಗ್ರೆಸ್‍ಗೆ ಆ ಧಮ್ ಇರಲಿಲ್ಲ ಎಂದು ಟೀಕಿಸಿದರು. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಬಲ್ ಎಂಜಿನ್ ಸರಕಾರ ಕೆಲಸ ಮಾಡುತ್ತಿದೆ. ಇದನ್ನು ಗಮನಿಸಿ ಬಿಜೆಪಿ ಸರಕಾರಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಮನವಿ ಮಾಡಿದರು.

5 ಬಿಲಿಯನ್ ಡಾಲರ್ ಆರ್ಥಿಕತೆಯ ಚಿಂತನೆಗೆ 1 ಬಿಲಿಯನ್ ಡಾಲರ್ ಕೊಡುಗೆಯನ್ನು ನೀಡಲು ಕರ್ನಾಟಕವು ಸಂಕಲ್ಪ ಮಾಡಿದೆ. ಅನೇಕ ಕೈಗಾರಿಕೆಗಳು ಕರಾವಳಿಯಲ್ಲಿ ಹೂಡಿಕೆ ಮಾಡಲಿವೆ. ಕರ್ನಾಟಕದ ಅಭಿವೃದ್ಧಿಗೆ ಕರಾವಳಿಯ ಕೊಡುಗೆ ಮಹತ್ವದ್ದಾಗಲಿದೆ ಎಂದು ತಿಳಿಸಿದರು.

ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್, 4 ಸಾವಿರ ಹೆಚ್ಚುವರಿ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಿರುವುದು, ರೈತ ವಿದ್ಯಾನಿಧಿ ಯೋಜನೆ ಜಾರಿಯನ್ನು ಉಲ್ಲೇಖಿಸಿದ ಅವರು, ವಿದ್ಯಾನಿಧಿಯನ್ನು ಮೀನುಗಾರರ ಮಕ್ಕಳಿಗೂ ಕೊಡಲಾಗುತ್ತಿದೆ ಎಂದರು.

ಜನರ ಸಂಕಷ್ಟ ನಿವಾರಿಸಲು ನಾವು ಶ್ರಮಿಸುತ್ತಿದ್ದೇವೆ. ಮೀನುಗಾರರಿಗೆ 5 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಮೀನುಗಾರರಿಗೆ ಹೆಚ್ಚುವರಿ ಕೆರೋಸಿನ್ ನೀಡಲು ಬದ್ಧವಿದ್ದೇವೆ ಎಂದು ತಿಳಿಸಿದರು. ಪಡಿತರ ಮೂಲಕ ಕುಚ್ಚಲಕ್ಕಿ ವಿತರಿಸಲಿದ್ದೇವೆ ಎಂದು ತಿಳಿಸಿದರು.

ಈ ಭಾಗದ 8 ಮೀನುಗಾರರ ಬಂದರು ಅಭಿವೃದ್ಧಿಗೆ ಹೆಚ್ಚುವರಿ ಹಣ ಕೊಡಲಾಗಿದೆ. ಕೆಲಸ ಶೀಘ್ರವೇ ನಡೆಯಲಿದೆ. 100 ಹೈಸ್ಪೀಡ್ ಬೋಟ್ ಮಂಜೂರು ಮಾಡಿದ್ದೇವೆ. ಇದೇ ವರ್ಷ ಮಂಜೂರಾತಿ ಸಿಗಲಿದ್ದು, 40 ಶೇಕಡಾ ಸಬ್ಸಿಡಿಯೂ ಸಿಗಲಿದೆ ಎಂದು ವಿವರಿಸಿದರು.

ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿಜಿ ಅವರು ಗುಜರಾತ್‍ನ ಮುಖ್ಯಮಂತ್ರಿಯಾಗಿ 12 ವರ್ಷ ಕಾಲ ಉತ್ತಮ ಆಡಳಿತ ನೀಡಿದವರು. ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದವರು. ಅವರ ನೇತೃತ್ವದಲ್ಲಿ ದೇಶವು ಆರ್ಥಿಕವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದರು.

ಸಾಗರ್ ಮಾಲಾ ಯೋಜನೆಗಳ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಸಿಆರ್‍ಜೆಡ್ ನಿಯಮಾವಳಿಯಲ್ಲಿ ಬದಲಾವಣೆಗೆ ಬೇಡಿಕೆ ಇದ್ದುದನ್ನು ಅನುಮತಿ ಕೊಟ್ಟಿದ್ದಾರೆ. 3 ದಶಕಗಳ ಬೇಡಿಕೆ ಇದಾಗಿತ್ತು. ಕಡಲ ತೀರದ ಆರ್ಥಿಕತೆಗೆ ಇದು ವೇಗ ಕೊಡಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ದೂರದೃಷ್ಟಿ ಇರುವ ಕಾರ್ಯಕ್ರಮಗಳನ್ನು ಮೋದಿಜಿ ನೀಡಿದ್ದಾರೆ. ಕೊಂಕಣ ರೈಲ್ವೆ ವಿದ್ಯುದೀಕರಣಕ್ಕೆ ಬಿಜೆಪಿ ಕಾರಣ. ಗತಿ ಶಕ್ತಿ ಯೋಜನೆ ಮೂಲಕ ಬಂದರುಗಳನ್ನು ಮುಖ್ಯ ನಗರಗಳಿಗೆ ಜೋಡಿಸುವ ಕಾರ್ಯ ನಡೆದಿದೆ ಎಂದು ವಿವರಿಸಿದರು. 2 ತಿಂಗಳಿಗೊಮ್ಮೆ ಅದರ ಪ್ರಗತಿಯನ್ನು ಪ್ರಧಾನಿಯವರೇ ಪರಿಶೀಲಿಸುತ್ತಿದ್ದಾರೆ ಎಂದರು.

ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಭಾಷಣದ ಸರಕಾಗಿತ್ತು. ಅಹಿಂದ ಈಗ ಉಳಿದಿಲ್ಲ. ಹಿಂದುಳಿದ ವರ್ಗದ ಜನರು ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದರು. ಆದರೆ, ಸಾಮಾಜಿಕವಾಗಿ ಕ್ರಾಂತಿಕಾರಿ ನಿರ್ಣಯಗಳನ್ನು ಮೋದಿಜಿ ಕೈಗೊಂಡಿದ್ದಾರೆ ಎಂದು ವಿವರಿಸಿದರು.

ಬಹುಮತ ಸಾಧಿಸುವ ಮೂಲಕ ಮೋದಿಜಿಗೆ ಗೌರವ- ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ನರೇಂದ್ರ ಮೋದಿಜಿ ಪ್ರಧಾನಿಯಾದ ಮೇಲೆ 8 ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಇಡೀ ಜಗತ್ತೇ ಮೆಚ್ಚುವ ಮೋದಿಜಿ ಅವರು ಈ ದೇಶದ ರಥವನ್ನು ಮುನ್ನಡೆಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಗೆಲುವಿನ ಭ್ರಮೆ ಹುಸಿಯಾಗಲಿದೆ. ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ. ಬಿಜೆಪಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಮೋದಿಜಿ ಅವರಿಗೆ ಗೌರವ ತಂದು ಕೊಡಲಿದೆ ಎಂದು ವಿಶ್ವಾಸದಿಂದ ನುಡಿದರು. ಇದೇ 11ರಂದು ಮೋದಿಜಿ ಅವರ ಭೇಟಿ ವೇಳೆ ಮೂರ್ನಾಲ್ಕು ಲಕ್ಷ ಜನರು ಸೇರಲಿದ್ದಾರೆ ಎಂದರು.

ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ಬಚ್ಚಾ ಇದ್ದ ಹಾಗೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ರಾಹುಲ್ ಹೋದಲ್ಲೆಲ್ಲ ಕಾಂಗ್ರೆಸ್ ಸೋಲಿಗೆ ಕೊಳ್ಳೇಗಾಲದ ಚುನಾವಣಾ ಫಲಿತಾಂಶವೇ ಉದಾಹರಣೆ ಎಂದು ತಿಳಿಸಿದರು.

ಮಂಗಳೂರು- ಉಡುಪಿಯ ಜನರು ಶಿಸ್ತಿನ ಜನರಾಗಿದ್ದು, ಬಹಳ ಕಾಲದಿಂದ ಬಿಜೆಪಿಯನ್ನು ಬೆಂಬಲಿಸುತ್ತ ಬಂದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ 10 ಲಕ್ಷ ಕೋಟಿಯಷ್ಟು ಹೂಡಿಕೆ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕರಾವಳಿ ಭಾಗದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದರ ಕುರಿತು ಅವರು ವಿವರ ನೀಡಿದರು. ಬಿಜೆಪಿ ಬೆಂಬಲಿಸುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಸ್ತುವಾರಿ ಸಚಿವ ಎಸ್. ಅಂಗಾರ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‍ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ಅವರು ಉಪಸ್ಥಿತರಿದ್ದರು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ