ನನ್ನ ಹೇಳಿಕೆ ಸುಳ್ಳು ಎಂದು ಸಾಬೀತುಪಡಿಸಿ, ಕ್ಷಮೆ ಅಲ್ಲ, ರಾಜೀನಾಮೆಯೇ ನೀಡುತ್ತೇನೆ: ಸತೀಶ್ ಜಾರಕಿಹೊಳಿ
ಬೆಳಗಾವಿ: ಹಿಂದೂ ಪದ ಭಾರತೀಯ ಪದವಲ್ಲ, ಅದು ಪರ್ಷಿಯನ್ ಭಾಷೆಯ ಪದ. ಪರ್ಷಿಯನ್ ಭಾಷೆಯಲ್ಲಿ ಇದೊಂದು ಅಶ್ಲೀಲ ಪದ ಎಂದು ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ನಾಯಕರು ಕಿಡಿಕಾಡಿದ್ದಾರೆ. ಈ ನಡುವೆ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದು, ತನ್ನ ಹೇಳಿಕೆ ಸುಳ್ಳು ಎಂದು ಸಾಬೀತು ಪಡಿಸಿದರೆ, ಕ್ಷಮೆ ಅಲ್ಲ, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಪದದ ಬಗ್ಗೆ ನೀಡಿದ್ದ ಹೇಳಿಕೆ ಕುರಿತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಹೇಳಿಕೆ ತಪ್ಪೆಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.
ನಾನು ಅರೆಬರೆ ಓದಿದವನಲ್ಲ, 30 ವರ್ಷಗಳಿಂದ ಓದುತ್ತಲೇ ಇದ್ದೇನೆ. ಆಳವಾದ ಅಧ್ಯಯನದ ಅನುಭವದಿಂದಲೇ ನಾನು ಈ ಹೇಳಿಕೆ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ನಾನು ಹೇಳಿದ್ದೇನೆ. ಆದರೆ, ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.
ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂಬ ಅರ್ಥವಿದೆ. ಶಬ್ದಕೋಶ ಮತ್ತು ವಿಕಿಪೀಡಿಯಾದಲ್ಲಿ ಇರುವುದನ್ನೇ ನಾನು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಸಾರಾಸಗಟಾಗಿ ವಿರೋಧಿಸುವ ಬದಲು, ಸಮರ್ಪಕವಾಗಿ ಪರಿಶೀಲಿಸಲಿ. ಯಾವುದೇ ಧರ್ಮ, ಜಾತಿ, ಸಮಾಜದ ವಿರುದ್ಧ ನಾನು ಹೇಳಿಕೆ ನೀಡಿಲ್ಲ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅವರಿಗೆ ಸೂಕ್ತ ಎನಿಸುವ ಸಂಸ್ಥೆಗಳಿಗೆ ತನಿಖೆ ಮಾಡಿಸಲಿ. ನನ್ನ ಜತೆ ಚರ್ಚೆಗೆ ಬಂದರೆ ನಾನೇ ಅವರಿಗೆ ಮನವರಿಕೆ ಮಾಡಿಕೊಡುವೆ. ಚರ್ಚೆಗೆ ಬಂದವರಿಗೆ ದಾಖಲೆ ಸಮೇತ ವಿವರಣೆ ನೀಡಲು ಸಿದ್ಧನಿರುವೆ ಎಂದು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka