ದಾರಿ ಕೇಳುವ ನೆಪದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಚಿನ್ನದ ಕರಿಮಣಿ ಸರ ಸುಲಿಗೆ
ಅಂಗನವಾಡಿ ಕಾರ್ಯಕರ್ತೆಯ ಕುತ್ತಿಗೆಯಿಂದ ಚಿನ್ನ ಕಸಿದು ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಇನ್ನಾದಲ್ಲಿ ಇಂದು 9:15ಕ್ಕೆ ನಡೆದಿದೆ.
ಇನ್ನಾ ನಿವಾಸಿ ರೇಖಾ ಚಿನ್ನದ ಕರಿಮಣಿ ಸರ ಕಳೆದುಕೊಂಡ ಮಹಿಳೆ. ಇವರು ಕುರ್ಕಿಲಬೆಟ್ಟುವಿನ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು, ಸ್ಕೂಟಿಯಲ್ಲಿ ಮನೆಯಿಂದ ಅಂಗನವಾಡಿಗೆ ಇನ್ನಾ ಹೊಸಕಾಡು ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭ ಕಪ್ಪು ಬಣ್ಣದ ಬೈಕ್ ನಲ್ಲಿ ಬಂದ ಕಳ್ಳರು ಚೀಟಿ ತೋರಿಸಿ ವಿಳಾಸ ಕೇಳುವ ನೆಪದಲ್ಲಿ ರೇಖಾರವರ ಬಳಿ ಬಂದು ಕುತ್ತಿಗೆಯಲ್ಲಿದ್ದ ಸುಮಾರು 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕಿತ್ತುಕೊಂಡು ಹೋದ ಚಿನ್ನದ ಕರಿಮಣಿ ಸರದ ಅಂದಾಜು ಮೌಲ್ಯ 1.44 ಲಕ್ಷ- ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಮುಖ್ಯ ಶಿಕ್ಷಕ ತೋಡಿನ ನೀರಿಗೆ ಬಿದ್ದು ಮೃತ್ಯು
ಶಿವಳ್ಳಿಯ ಮೂಡುಪೆರಂಪಳ್ಳಿಯಿಂದ ನಾಪತ್ತೆಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕರೊಬ್ಬರ ಮೃತದೇಹ ಇನ್ನಂಜೆಯ ಉಂಡಾರು ವಿಷ್ಣುಮೂರ್ತಿ ದೇವಸ್ಥಾನದ ಸಮೀಪದ ತೋಡಿನಲ್ಲಿ ಇಂದು ಪತ್ತೆಯಾಗಿದೆ.
ಮೂಡುಪೆರಂಪಳ್ಳಿ ನಿವಾಸಿ 75ವರ್ಷದ ರಾಮದಾಸ ಶಿವತ್ತಾಯ ಮೃತಪಟ್ಟ ವ್ಯಕ್ತಿ. ಇವರು ನ.6 ರಂದು ಮೂಡುಪೆರಂಪಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದರು. ಇವರನ್ನು ಎಲ್ಲಾ ಕಡೆ ಹುಡುಕಿದರೂ ಸಿಗದೇ ಇದ್ದಾಗ ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು.
ರಾಮದಾಸ ಶಿವತ್ತಾಯರವರು ತಂಗಿ ಮನೆ ಇನ್ನಂಜೆಯಲ್ಲಿದ್ದು, ಅಲ್ಲಿಗೆ ಬಂದಿರಬಹುದೆಂದು ಅನುಮಾನಗೊಂಡ ಮನೆಯವರು ಇನ್ನಂಜೆಗೆ ಬಂದು ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದ್ದಾರೆ. ಆಗ ರಾಮದಾಸ ಶಿವತ್ತಾಯರವರು ದೇವಸ್ಥಾನದ ಪ್ರಾಂಗಣದಲ್ಲಿ ತಿರುಗಾಡುತ್ತಿರುವ ದೃಶ್ಯ ಕಂಡು ಬಂದಿತ್ತು.
ಆದ್ದರಿಂದ ಇನ್ನಂಜೆಯಲ್ಲಿ ಹುಡುಕಾಡಿದ್ದಾಗ ದೇವಸ್ಥಾನದ ಸಮೀಪ ಇರುವ ಸಣ್ಣ ತೋಡಿನಲ್ಲಿ ರಾಮದಾಸ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಶಶಾಂಕ ಶಿವತ್ತಾಯ ಎಂಬವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಿಉಡುಪಿ ಪ್ರೌಢಶಾಲೆಗೆ ನುಗ್ಗಿ ನಗದು ಕಳವು
ಆದಿ ಉಡುಪಿಯ ಸರ್ಕಾರಿ ಪ್ರೌಢಶಾಲೆಗೆ ನುಗ್ಗಿದ ಕಳ್ಳರು ಶಾಲಾ ಕಚೇರಿಯ ಬೀಗಮುರಿದು 45,144 ರೂ. ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ 8:30ಕ್ಕೆ ಬೆಳಕಿಗೆ ಬಂದಿದೆ.
ಪ್ರೌಢ ಶಾಲೆಗೆ ನುಗ್ಗಿದ ಕಳ್ಳರು ಶಾಲಾ ಕಛೇರಿಯ ಬೀಗ ಮುರಿದು, ಕಪಾಟಿನಲ್ಲಿದ್ದ ಆರ್.ಡಿ, ಪ್ರೈವೇಟ್ ನಗದು, ಮಕ್ಕಳ ಪರೀಕ್ಷಾ ಶುಲ್ಕ, ಅಕ್ಷರ ದಾಸೋಹದ ಸಹಿತ ಇತರ ಉದ್ದೇಶಗಳಿಗೆ ಇಟ್ಟಿದ್ದ ಒಟ್ಟು 45,144 ರೂ. ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯ ರವೀಂದ್ರ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka