ರಾಜ್ಯಪಾಲರಿಗೆ ಕಾರ್ಯನಿರ್ವಾಹಕ ಅಧಿಕಾರ ಇರುವುದಿಲ್ಲ - Mahanayaka
7:39 AM Thursday 12 - December 2024

ರಾಜ್ಯಪಾಲರಿಗೆ ಕಾರ್ಯನಿರ್ವಾಹಕ ಅಧಿಕಾರ ಇರುವುದಿಲ್ಲ

arif mohammad khan
17/11/2022

  • ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ ದುರ್ಬಲವಾಗುತ್ತಿರುವ ಸಾಂವಿಧಾನಿಕ ವ್ಯವಸ್ಥೆಯ ಸಂಕೇತವಾಗಿದೆ
  • ಮೂಲ : ಪಿ.ಡಿ.ಟಿ. ಆಚಾರಿ
  • Governors Do Not Have Executive Powers. –- ದ ವೈರ್ 14-11-2022
  • ಅನುವಾದ : ನಾ ದಿವಾಕರ

ದೇಶದಲ್ಲಿ ಇತ್ತೀಚೆಗೆ ಕೆಲವು ರಾಜ್ಯಪಾಲರ ವರ್ತನೆಗಳು ತೀವ್ರ ಸಾರ್ವಜನಿಕ ಚರ್ಚೆಗೀಡಾಗಿದೆ. ರಾಜ್ಯ ವಿಧಾನಸಭೆಗಳಲ್ಲಿ ಅನುಮೋದಿಸಲಾದ ಮಸೂದೆಗಳಿಗೆ ಸಮ್ಮತಿ ನೀಡಲು ವಿಳಂಬ ಮಾಡುವುದು, ಚುನಾಯಿತ ರಾಜ್ಯ ಸರ್ಕಾರಗಳ ಸಲಹೆಗೆ ಅನುಗುಣವಾಗಿ ನಡೆದುಕೊಳ್ಳದೆ ಇರುವುದು, ಆಗಾಗ್ಗೆ ಮಾಧ್ಯಮಗಳ ಬಳಿ ಮಾತನಾಡುವುದು, ರಾಜ್ಯ ಸರ್ಕಾರಗಳನ್ನು ಟೀಕಿಸುವುದು, ಇತ್ಯಾದಿ ವರ್ತನೆಗಳು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿವೆ.

ಕೇರಳದ ರಾಜ್ಯಪಾಲರಾದ ಆರಿಫ್‌ ಮೊಹಮ್ಮದ್‌ ಖಾನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಾಧ್ಯಮ ಗೋಷ್ಟಿಯೊಂದರಲ್ಲಿ, ಮುಖ್ಯಮಂತ್ರಿ ಕಚೇರಿಯಲ್ಲಿರುವ ಅಧಿಕಾರಿಗಳು ಕಳ್ಳಸಾಗಾಣಿಕೆಯ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ವೈಯಕ್ತಿಕವಾಗಿಯೂ ಆಪಾದನೆ ಮಾಡಿದ್ದು, ಅಪರಾಧಿಯೊಬ್ಬನನ್ನು ಜೈಲಿನಿಂದ ಬಿಡಿಸಲು ಮುಖ್ಯಮಂತ್ರಿ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ ಎಂದೂ ಆರೋಪಿಸಿದ್ದಾರೆ. ಒಬ್ಬ ಕಿರಿಯ ಪೊಲೀಸ್‌ ಅಧಿಕಾರಿ ತನಗೆ ಬಂದೂಕು ತೋರಿಸಿದ್ದು, ತಾವು ಮನೆಗೆ ಧಾವಿಸಿ ತಮ್ಮ ಬಟ್ಟೆ ಬದಲಾಯಿಸಬೇಕಾಯಿತು ಎಂದು ಆರೋಪಿಸಿದ್ದಾರೆ. ರಾಜ್ಯಪಾಲರೊಬ್ಬರು ತಮ್ಮ ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಈ ರೀತಿಯ ಆರೋಪ ಮಾಡುವುದು ಸಹಜವಾಗಿಯೇ ಕ್ಷುಲ್ಲಕ ಎನಿಸುತ್ತದೆ.

ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಆಯಾ ರಾಜ್ಯಪಾಲರಿಂದ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೇರಳದಲ್ಲಿ ರಾಜ್ಯಪಾಲ ಮತ್ತು ಮುಖ್ಯಮಂತ್ರಿಯ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದೆ. ತಮಿಳುನಾಡಿನ ಸಂಸದರು ಭಾರತದ ರಾಷ್ಟ್ರಪತಿಗಳಿಗೆ ಜಂಟಿ ಮನವಿಯೊಂದನ್ನು ಸಲ್ಲಿಸಿದ್ದು, ರಾಜ್ಯಪಾಲರನ್ನು ವಜಾಗೊಳಿಸಲು ಆಗ್ರಹಿಸಿದ್ದಾರೆ. ವಿರೋಧ ಪಕ್ಷಗಳ ಸರ್ಕಾರ ಇರುವ ಇತರ ರಾಜ್ಯಗಳಿಂದಲೂ ಇದೇ ರೀತಿಯ ಆಗ್ರಹ ಕೇಳಿಬರುವ ಸಾಧ್ಯತೆಗಳಿವೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವೆ ಈ ರೀತಿಯ ಮುಕ್ತ ಸಂಘರ್ಷಗಳು, ಶಿಥಿಲವಾಗುತ್ತಿರುವ ಸಾಂವಿಧಾನಿಕ ವ್ಯವಸ್ಥೆಯ ಸಂಕೇತವಾಗಿಯೇ ಕಾಣುತ್ತದೆ. ವ್ಯವಸ್ಥೆಯೊಳಗೆ ನುಸುಳಿರುವ ಈ ಲೋಪದೋಷಗಳನ್ನು ಸರಿಪಡಿಸುವ ಯಾವುದೇ ಸಾಂಸ್ಥಿಕ ಅಧಿಕಾರ ಇಲ್ಲ ಎನಿಸುತ್ತದೆ. ರಾಜ್ಯಪಾಲರ ಸಾಂವಿಧಾನಿಕ ಅಧಿಕಾರಗಳು ನಿಶ್ಚಿತವಾಗಿವೆ. ರಾಜ್ಯಪಾಲರ ಅಧಿಕಾರ ಮತ್ತು ಕಾರ್ಯನಿರ್ವಹಣೆಯನ್ನೂ ಸಹ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠಗಳ ಹಲವು ತೀರ್ಪುಗಳು ಸ್ಪಷ್ಟವಾಗಿ ನಿರೂಪಿಸಿವೆ.

ಶಂಶೇರ್‌ ಸಿಂಗ್‌ ವಿರುದ್ಧ ಪಂಜಾಬ್‌ ಸರ್ಕಾರ (1974) ಮೊಕದ್ದಮೆಯಲ್ಲಿ, ರಾಜ್ಯಪಾಲರುಗಳ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಪರಿಶೀಲಿಸಲು ಮೊಟ್ಟಮೊದಲ ಬಾರಿಗೆ ಸುಪ್ರೀಂಕೋರ್ಟ್‌ ಏಳು ಸದಸ್ಯರ ಪೀಠವನ್ನು ರಚಿಸಿತ್ತು. ರಾಜ್ಯಪಾಲರಿಗೆ ಯಾವುದೇ ರೀತಿಯ ಕಾರ್ಯನಿರ್ವಾಹಕ ಅಧಿಕಾರ ಇರುವುದಿಲ್ಲವೆಂದೂ, ರಾಜ್ಯಪಾಲರು ಸರ್ಕಾರದ ಸಚಿವ ಸಂಪುಟದ ಸಲಹೆ ಮತ್ತು ನೆರವಿನೊಂದಿಗೆ ತಮ್ಮ ಕಾರ್ಯ ನಿರ್ವಹಿಸಬಹುದೆಂದೂ ಈ ಪೀಠವು ತನ್ನ ತೀರ್ಪಿನಲ್ಲಿ ಹೇಳಿತ್ತು. ವಾಸ್ತವದಲ್ಲಿ ಕಾರ್ಯ ನಿರ್ವಹಣೆಯ ಅಧಿಕಾರವು ಚುನಾಯಿತ ಸರ್ಕಾರಕ್ಕೆ ಮಾತ್ರವೇ ಇರುತ್ತದೆ, ಇದು ಶಾಸಕಾಂಗಕ್ಕೆ ಉತ್ತರದಾಯಿಯಾಗಿರುತ್ತದೆ.

ಇದೇ ಅಂಶಗಳನ್ನು ನಾಬಮ್‌ ರಬಿಯಾ ವಿರುದ್ಧ ಡೆಪ್ಯುಟಿ ಸ್ಪೀಕರ್‌ (2016) ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್‌ ಪುನರುಚ್ಚರಿಸಿದ್ದು ರಾಜ್ಯಪಾಲರು ಸಚಿವ ಸಂಪುಟದ ಸಲಹೆಯ ಅನುಸಾರವಾಗಿಯೇ ನಡೆದುಕೊಳ್ಳಬೇಕು ಎಂದು ಹೇಳಿತ್ತು. ರಾಜ್ಯಪಾಲರ ಹುದ್ದೆಯ ಬಗ್ಗೆ ಸಂವಿಧಾನ ರಚಕ ಮಂಡಲಿಯಲ್ಲಿ ನಡೆದ ಚರ್ಚೆಗಳ ಸಂದರ್ಭದಲ್ಲಿ ಡಾ ಬಿ ಆರ್‌ ಅಂಬೇಡ್ಕರ್‌, ಭಾರತದ ಸಾಂವಿಧಾನಿಕ ವ್ಯವಸ್ಥೆಯೊಳಗೆ ರಾಜ್ಯಪಾಲರಿಗೆ ಯಾವುದೇ ಅಧಿಕಾರಗಳಿರುವುದಿಲ್ಲ, ರಾಜ್ಯಗಳ ಸಚಿವ ಸಂಪುಟ ಸಲಹೆಯ ಅನುಸಾರವಾಗಿಯೇ ಅವರು ನಡೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ ಸಂವಿಧಾನದ ಬಗ್ಗೆ ವ್ಯಾಖ್ಯಾನಿಸಿರುವ ಎಲ್ಲ ವಿದ್ವಾಂಸರೂ ಸಹ ರಾಜ್ಯದ ರಾಜ್ಯಪಾಲರ ಹುದ್ದೆಯನ್ನು ಯಾವುದೇ ನೈಜ ಅಧಿಕಾರ ಇಲ್ಲದ ನಾಮಮಾತ್ರದ ಸಾಂವಿಧಾನಿಕ ಹುದ್ದೆ ಎಂದೇ ಹೇಳಿದ್ದಾರೆ.

ಆದಾಗ್ಯೂ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ಚುನಾಯಿತ ಸರ್ಕಾರಗಳಿಗೆ ರಾಜ್ಯಪಾಲರುಗಳು ಹಲವು ಸಮಸ್ಯೆಗಳನ್ನು ಸೃಷ್ಟಿಸಲು ಸಾಧ್ಯವಿದೆ. ಬಹುತೇಕ ಸರ್ಕಾರಗಳು ಎದುರಿಸುವ ಒಂದು ಸಾಮಾನ್ಯ ಸಮಸ್ಯೆ ಎಂದರೆ, ವಿಧಾನ ಸಭೆಯಲ್ಲಿ ಅನುಮೋದಿಸಲಾದ ಮಸೂದೆಗಳನ್ನು ರಾಜ್ಯಪಾಲರ ಅಂಕಿತಕ್ಕಾಗಿ ಸಲ್ಲಿಸಿದಾಗ, ತೀವ್ರ ವಿಳಂಬ ಮಾಡುವುದು. ರಾಜ್ಯಪಾಲರು ಮಸೂದೆಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ ಸುಮ್ಮನಿರುತ್ತಾರೆ. ಒಂದು ನಿರ್ದಿಷ್ಟ ವಿಚಾರದಲ್ಲಿ ಕಾನೂನು ಜಾರಿ ಮಾಡಬೇಕಾದ ತುರ್ತು ಎದುರಾದಾಗಲೇ ಸರ್ಕಾರಗಳು ಮಸೂದೆಯನ್ನು ಜಾರಿಗೊಳಿಸುತ್ತವೆ. ಚುನಾಯಿತ ಸರ್ಕಾರಗಳು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಹೊಣೆ ಹೊತ್ತಿರುವುದರಿಂದ, ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸುವ ಸಲುವಾಗಿಯೇ ಶಾಸನಗಳನ್ನು ಜಾರಿಮಾಡಲಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ರಾಜ್ಯಪಾಲರು ಸಂವಿಧಾನರೀತ್ಯಾ ಕ್ರಮ ಕೈಗೊಳ್ಳದೆ ಹೋದಲ್ಲಿ, ಅದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಿದಂತಾಗುತ್ತದೆ.

ಮೇಲಾಗಿ, ಸಂವಿಧಾನದ ಪರಿಚ್ಚೇದ 200ರಲ್ಲಿ ರಾಜ್ಯಪಾಲರ ಮುಂದಿರುವ ನಾಲ್ಕು ಆಯ್ಕೆಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ಈ ಆಯ್ಕೆಗಳೆಂದರೆ – ಮಸೂದೆಗೆ ಸಮ್ಮತಿ ಸೂಚಿಸುವುದು, ಸಮ್ಮತಿಯನ್ನು ತಡೆಹಿಡಿಯುವುದು, ಮಸೂದೆಯ ಪುನರ್‌ ಪರಿಶೀಲನೆಗಾಗಿ ಶಾಸನಸಭೆಗೆ ಹಿಂದಿರುಗಿಸುವುದು ಅಥವಾ ರಾಷ್ಟ್ರಪತಿಗಳ ಪರಿಶೀಲನೆಗಾಗಿ ಅದನ್ನು ತಡೆಹಿಡಿಯುವುದು, ಇದರರ್ಥ ರಾಜ್ಯಪಾಲರು ಈ ನಾಲ್ಕರಲ್ಲಿ ಒಂದು ಮಾರ್ಗವನ್ನು ಆಯ್ಕೆ ಮಾಡಿಕೊಂಡು ಆದಷ್ಟೂ ಬೇಗನೆ ನಿರ್ಧಾರ ಕೈಗೊಳ್ಳುವ ಮೂಲಕ ಶಾಸಕಾಂಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೆರವಾಗಬೇಕು. ರಾಜ್ಯಪಾಲರು ಈ ಮೇಲಿನ ಆಯ್ಕೆಗಳನ್ನು ಅನುಸರಿಸದೆ ಹೋದಾಗ ಸಾಂವಿಧಾನಿಕ ಯೋಜನೆಗಳು ಧಕ್ಕೆಗೊಳಗಾಗುತ್ತವೆ.

ಅನಿರ್ದಿಷ್ಟ ಕಾಲ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವ ಆಯ್ಕೆಯನ್ನು ಸಂವಿಧಾನ ನೀಡಿಲ್ಲವಾದ್ದರಿಂದ, ಈ ರೀತಿ ವರ್ತಿಸುವ ರಾಜ್ಯಪಾಲರುಗಳ ನಡೆಯು ಸಾಂವಿಧಾನಿಕವಾಗಿ ಮಾನ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ಸ್ಪಷ್ಟ ಹಾಗೂ ನಿಷ್ಕ್ರೃಷ್ಟವಾದ ನಿರ್ಣಯ ಇಲ್ಲದಿರುವುದರಿಂದ, ಸಂವಿಧಾನದಲ್ಲಿ ರಾಜ್ಯಪಾಲರು ತಮ್ಮ ನಿರ್ಧಾರ ಕೈಗೊಳ್ಳಲು ಸಮಯದ ಗಡುವು ನಿರ್ಧರಿಸದೆ ಇರುವುದರಿಂದ, ರಾಜ್ಯಪಾಲರುಗಳು ಇದರ ಅನುಚಿತ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಹಲವು ಸಂದರ್ಭಗಳಲ್ಲಿ ಸಾಂವಿಧಾನಿಕವಾಗಿ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟಿರುವ ನಿಯಮಗಳನ್ನೂ ಲೆಕ್ಕಿಸದೆ ರಾಜ್ಯಪಾಲರುಗಳು ಸಚಿವ ಸಂಪುಟದ ಸಲಹೆಗಳನ್ನು ಅಥವಾ ಶಿಫಾರಸುಗಳನ್ನು ಧಿಕ್ಕರಿಸಿರುವ ಪ್ರವೃತ್ತಿಯೂ ಇತ್ತೀಚೆಗೆ ಕಂಡುಬರುತ್ತಿದೆ. ಇದು ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದೆ. ರಾಜಸ್ಥಾನದಲ್ಲಿ ವಿಧಾನಸಭೆ ಅಧಿವೇಶನವನ್ನು ಕರೆಯಲು ಸರ್ಕಾರವು ದಿನಾಂಕ ನಿಗದಿಪಡಿಸಿ, ತನ್ನ ಸಲಹೆಯನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ರಾಜ್ಯಪಾಲರು, ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಮತ್ತೊಂದು ದಿನಾಂಕವನ್ನು ಸೂಚಿಸಿದ್ದರು. ರಾಜ್ಯಪಾಲರೊಡನೆ ಸಂಘರ್ಷವನ್ನು ಬಯಸದ ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿ ಸೂಚಿಸಿದ್ದರು. ಮಹಾರಾಷ್ಟ್ರದಲ್ಲಿ ಹಿಂದಿನ ಉದ್ಧವ್‌ ಥಾಕ್ರೆ ಸರ್ಕಾರ ವಿಧಾನಸಭಾ ಅಧ್ಯಕ್ಷರನ್ನು ಚುನಾಯಿಸಲು ದಿನಾಂಕವನ್ನು ನಿಗದಿಪಡಿಸಿ, ರಾಜ್ಯಪಾಲರ ಅನುಮತಿ ಕೋರಿತ್ತು. ಆದರೆ ಈ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಸರ್ಕಾರದ ಅಧಿಕಾರಾವಧಿಯುದ್ದಕ್ಕೂ ಸಭಾಪತಿಯ ಆಯ್ಕೆಯ ಸರ್ಕಾರದ ಪ್ರಸ್ತಾವನೆಗೆ ಸಮ್ಮತಿ ಸೂಚಿಸಲು ರಾಜ್ಯಪಾಲರು ನಿರಾಕರಿಸಿದ್ದರಿಂದ, ಈ ಚುನಾವಣೆಯನ್ನು ನಡೆಸಲು ಸಾಧ್ಯವಾಗಲೇ ಇಲ್ಲ. ವಿಧಾನಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯಪಾಲರಿಗೆ ಯಾವುದೇ ಸಾಂವಿಧಾನಿಕ ಪಾತ್ರ ಇಲ್ಲದೆ ಇದ್ದರೂ ಇದು ನಡೆದಿದೆ. ಯಾವುದೇ ರಾಜ್ಯದಲ್ಲಿ ಸಚಿವ ಸಂಪುಟದ ಸಲಹೆಯ ವಿರುದ್ಧ ನಡೆದುಕೊಳ್ಳುವ ಮೂಲಕ ರಾಜ್ಯಪಾಲರು ಪರ್ಯಾಯ ಆಡಳಿತವನ್ನು ನಡೆಸುವುದು ಉಚಿತವಲ್ಲ ಎಂದು ಶಂಶೇರ್‌ ಸಿಂಗ್ ಮೊಕದ್ದಮೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಕೇರಳದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳು ಸಂದಿಗ್ಧ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ರಾಜ್ಯಪಾಲರು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಘರ್ಷದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಯ ಸಲಹೆ ಇಲ್ಲದೆಯೇ ರಾಜ್ಯಪಾಲರು ಹಣಕಾಸು ಸಚಿವರ ಅಧಿಕಾರವನ್ನು ಮೊಟಕುಗೊಳಿಸುವುದಕ್ಕೆ ಮುಂದಾಗಿದ್ದಾರೆ. ಈ ಅಧಿಕಾರವನ್ನು ಹಿಂಪಡೆದಾಗ ಸಚಿವರು ತಮ್ಮ ಹುದ್ದೆಯಲ್ಲಿ ಮುಂದುವರೆಯಲಾಗುವುದಿಲ್ಲ. ಆದರೆ ಸಂವಿಧಾನದ ಅನ್ವಯ ಮುಖ್ಯಮಂತ್ರಿಯ ಸಲಹೆಯನ್ನು ಆಧರಿಸಿಯೇ ರಾಜ್ಯಪಾಲರು ಈ ಅಧಿಕಾರವನ್ನು ಚಲಾಯಿಸಬಹುದಾಗಿದೆ. ಆದರೆ ಮುಖ್ಯಮಂತ್ರಿಗಳು ತಮ್ಮ ಸಚಿವರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದು, ಸಚಿವರು ಹುದ್ದೆಯಲ್ಲಿ ಮುಂದುವರೆದಿದ್ದಾರೆ.

ಇದೇ ರೀತಿ, ಕೇರಳದ ತಂತ್ರಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಗಳ ನೇಮಕಾತಿಯು, ಇದೇ ರಾಜ್ಯದ ಕಾಯ್ದೆಗೆ ವ್ಯತಿರಿಕ್ತವಾಗಿದ್ದು, ಉಪಕುಲಪತಿಗಳನ್ನು ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಲಾಗಿದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರದ ನೇಮಕಾತಿ ಆದೇಶವನ್ನು ಅನೂರ್ಜಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಕೇರಳದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಯಾಗಿರುವ ರಾಜ್ಯಪಾಲರು, ಸುಪ್ರೀಂಕೋರ್ಟ್‌ ತೀರ್ಪಿನ ಆಧಾರದಲ್ಲೇ ಎಲ್ಲ ಉಪಕುಲಪತಿಗಳ ನೇಮಕವನ್ನು ರದ್ದುಪಡಿಸಬಹುದು ಎಂದು ಭಾವಿಸಿದ್ದಾರೆ. ಅಂತಿಮವಾಗಿ, ರಾಜ್ಯ ಹೈಕೋರ್ಟ್‌ ಉಪಕುಲಪತಿಗಳಿಗೆ ತಾತ್ಕಾಲಿಕವಾಗಿ ಸಮಾಧಾನ ತಂದಿದೆ. ವಾಸ್ತವದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ನೋಡಿದಾಗ ಸುಪ್ರೀಂಕೋರ್ಟ್‌ ತೀರ್ಪು ಒಂದು ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದ್ದು, ಎಲ್ಲ ಉಪಕುಲಪತಿಗಳಿಗೂ ಅನ್ವಯಿಸುವಂತಹ ತೀರ್ಪು ಇಲ್ಲದೆ ಹೋದಲ್ಲಿ ಇತರ ನೇಮಕಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ.

ಕೇರಳದ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷವು ತಾರಕಕ್ಕೇರುತ್ತಿದ್ದು ಹಲವು ವಲಯಗಳಿಗೆ ವ್ಯಾಪಿಸುತ್ತಿದೆ. ಲೋಕಾಯುಕ್ತ ಕಾಯ್ದೆಯ ತಿದ್ದುಪಡಿ ಮಸೂದೆಯನ್ನೂ ಸೇರಿದಂತೆ ಹಲವು ಮಸೂದೆಗಳು ರಾಜ್ಯಪಾಲರ ಬಳಿ ಬಾಕಿ ಉಳಿದಿವೆ. ರಾಜ್ಯಪಾಲರು ಮಾಧ್ಯಮ ಗೋಷ್ಠಿಗಳ ಮುಖಾಂತರವೇ ಸರ್ಕಾರದೊಡನೆ ಸಂಭಾಷಿಸುತ್ತಿರುವಂತೆ ಕಾಣುತ್ತಿದೆ.

ಈ ರೀತಿಯ ಬೋಧಪ್ರದವಲ್ಲದ ಘಟನೆಗಳು, ಸಾಂವಿಧಾನಿಕ ವ್ಯವಸ್ಥೆಯು ದುರ್ಬಲವಾಗುತ್ತಿರುವುದರ ಸಂಕೇತವಾಗಿ ಕಾಣುತ್ತದೆ. ಅಪಾರ ಅನುಭವ ಮತ್ತು ಜ್ಞಾನ ಇರುವ ರಾಜ್ಯಪಾಲರುಗಳು ತಮ್ಮ ಅಧಿಕಾರ ವ್ಯಾಪ್ತಿಯ ಇತಿಮಿತಿಗಳನ್ನು ಅರಿತಿರುತ್ತಾರೆ. ಆದರೆ ವ್ಯವಸ್ಥೆಯು ಅವರನ್ನು ತಡೆಗಟ್ಟಲಾಗುವುದಿಲ್ಲ ಎಂಬುದನ್ನು ಗ್ರಹಿಸಿದ್ದಾರೆ. ಈಗಾಗಲೇ ಗಂಭೀರವಾದ ಲೋಪಗಳನ್ನೆದುರಿಸುತ್ತಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಸರ್ಕಾರಗಳಿಗೆ ಕಿರುಕುಳ ನೀಡಲು ಈ ಗ್ರಹಿಕೆಯೇ ಸಾಕೆಂದು ಭಾವಿಸುತ್ತಾರೆ.

( ಲೇಖಕರು ಲೋಕಸಭೆಯ ಮಾಜಿ ಮುಖ್ಯ ಕಾರ್ಯದರ್ಶಿಗಳು)

ಇತ್ತೀಚಿನ ಸುದ್ದಿ