ನ.21ರಿಂದ ಭತ್ತ ಖರೀದಿ ನೋಂದಣಿ ಕೇಂದ್ರ ಆರಂಭ: ಜಿಲ್ಲಾಧಿಕಾರಿ ಕೂರ್ಮರಾವ್ ಎಂ. - Mahanayaka
10:04 AM Friday 13 - December 2024

ನ.21ರಿಂದ ಭತ್ತ ಖರೀದಿ ನೋಂದಣಿ ಕೇಂದ್ರ ಆರಂಭ: ಜಿಲ್ಲಾಧಿಕಾರಿ ಕೂರ್ಮರಾವ್ ಎಂ.

udupi
17/11/2022

ಉಡುಪಿ:  ಪ್ರಸಕ್ತ ಮುಂಗಾರು  ಋತುವಿನಲ್ಲಿ  ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, ಜಿಲ್ಲೆಯ ರೈತರಿಂದ ಸ್ಥಳೀಯವಾಗಿ ಬೆಳದಿರುವ ಭತ್ತವನ್ನು  ಖರೀದಿಸಲು  ಜಿಲ್ಲೆಯಲ್ಲಿ ನವೆಂಬರ್  21ರಿಂದ ಭತ್ತ ಖರೀದಿಗೆ ನೋಂದಣಿ ಕೇಂದ್ರಗಳನ್ನು ತರೆದು, ರೈತರ ನೋಂದಣಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದರು.

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಷಾ, ಅಭಿಲಾಷ ಮತ್ತು ಎಂಓ4 ತಳಿಯ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಅದರಂತೆ ಸಾಮಾನ್ಯ ಭತ್ತಕ್ಕೆ ರೂ.2540 ದರ ನಿಗದಿಪಡಿಸಲಾಗಿದೆ. ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 10 ಕಡೆಗಳಲ್ಲಿ ಭತ್ತ ನೋಂದಣಿ ಕೇಂದ್ರಗಳನ್ನು ಹಾಗೂ 7 ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಬೇಡಿಕೆ ಇದ್ದಲ್ಲಿ ಅಗ್ಯತ್ಯಕ್ಕೆ ತಕ್ಕಂತೆ  ಹೆಚ್ಚಿನ ನೊಂದಣಿ ಮತ್ತು ಖರೀದಿ ಕೇಂದ್ರ ತೆರೆಯಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್ ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತವನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು  ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾದ ರೈತರು ತಾವು ಬೆಳದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದ್ದು, ಇದುವರೆಗೆ ಈ ತಂತ್ರಾಂಶದಲ್ಲಿ ನೊಂದಣಿಯಾಗದ ರೈತರು ನೊಂದಣಿ ಮಾಡಿಕೊಂಡು ಮಾರಾಟ ಮಾಡಬಹುದಾಗಿದೆ. ಭತ್ತ ಮಾರಾಟದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವುದರಿಂದ ,  ಮಾರಾಟ ಸಮಯದಲ್ಲಿ ರೈತರು ಆಧಾರ್ ಸಂಖ್ಯೆ ನೊಂದಣಿಯಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವಂತೆ ತಿಳಿಸಿದರು.

ಬೆಂಬಲ ಬೆಲೆಯಡಿ ಭತ್ತ ಖರೀದಿ ಕುರಿತಂತೆ , ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೊಂದಣಿ ಕೇಂದ್ರಗಳು ಹಾಗೂ ಭತ್ತ ಖರೀದಿ ಕೇಂದ್ರಗಳ ಕುರಿತು  ವಿವರಗಳನ್ನು ನೀಡುವಂತೆ ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಪ್ರಕ್ರಿಯೆಯನ್ನು  ನಡೆಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಭತ್ತ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿದ ಭತ್ತವನ್ನು  ಜಿಲ್ಲೆಯ ಅಕ್ಕಿ ಗಿರಣಿಗಳಲ್ಲಿ ಹಲ್ಲಿಂಗ್ ಮತ್ತು ಕುಚ್ಚಲಕ್ಕಿಯಾಗಿ ಪರಿವರ್ತಿಸಲು ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವುದಾಗಿ ಅಕ್ಕಿ ಗಿರಣಿಗಳ ಮಾಲಿಕರು ತಿಳಿಸಿದರು.

ಸಭೆಯಲ್ಲಿ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ತರಬೇತಿ ನಿರತ ಜಿಲ್ಲಾಧಿಕಾರಿ ಯತೀಶ್, ಆಹಾರ ಇಲಾಖೆ ಉಪ ನಿರ್ದೇಶಕ ಮೊಹಮದ್ ಇಸಾಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳು, ಎಪಿಎಂಸಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ