ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ನಡುವೆಯೇ ಉದ್ಯಮಿ ಭಾಸ್ಕರ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ನೆನಪು! - Mahanayaka
3:10 AM Wednesday 11 - December 2024

ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ನಡುವೆಯೇ ಉದ್ಯಮಿ ಭಾಸ್ಕರ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ನೆನಪು!

bhaskar shetty
18/11/2022

ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇದೀಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಆರೋಪಿ ಅಫ್ತಾಬ್ ನ ಕ್ರೂರತೆ ದಿನಕ್ಕೊಂದರಂತೆ ತೆರೆದುಕೊಳ್ಳುತ್ತಿದೆ. ಶ್ರದ್ಧಾ ವಾಕರ್ ಹತ್ಯೆಯಂತೆಯೇ 2016ರಲ್ಲಿ ಉಡುಪಿಯ ಖ್ಯಾತ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಹತ್ಯೆ ನಡೆದಿತ್ತು. ಈ ಹತ್ಯೆ ಪ್ರಕರಣವನ್ನು ಕರಾವಳಿಗರು ನೆನಪಿಸಿಕೊಳ್ಳುತ್ತಿದ್ದಾರೆ.

ಸಾಕಷ್ಟು ಸಂಖ್ಯೆಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಭಾಸ್ಕರ್ ಶೆಟ್ಟಿ ಪ್ರಕರಣವನ್ನು ಇದೀಗ ನೆನಪು ಮಾಡಿಕೊಳ್ಳುತ್ತಿದ್ದಾರೆ. ಪತ್ನಿ, ಮಗ ಹಾಗೂ ಜ್ಯೋತಿಷಿ ಸೇರಿ ಭಾಸ್ಕರ್ ಶೆಟ್ಟಿಯನ್ನು ಜುಲೈ 28, 2016ರಂದು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಹತ್ಯೆ ಕೂಡ ಅತ್ಯಂತ ಘೋರವಾಗಿತ್ತು.

ಉಡುಪಿಯ ಇತಿಹಾಸದಲ್ಲೇ ಈ ಪ್ರಕರಣ ಅತ್ಯಂತ ಭಯಂಕರವಾದ ಪ್ರಕರಣವಾಗಿತ್ತು. ಉಡುಪಿಯ ಇಂದ್ರಾಳಿ ನಿವಾಸಿಯಾಗಿದ್ದ ಭಾಸ್ಕರ್ ಶೆಟ್ಟಿ ಅವರು ಸೌದಿ ಅರೇಬಿಯಾದಲ್ಲಿ ದೊಡ್ಡ ಉದ್ಯಮಿಯಾಗಿದ್ದರು.  ಉಡುಪಿಯಲ್ಲಿ ಕೂಡ ಅವರು ಹೊಟೇಲ್ ಉದ್ಯಮ ನಡೆಸುತ್ತಿದ್ದರು.

ಭಾಸ್ಕರ್ ಶೆಟ್ಟಿ ಅವರು ಜುಲೈ 28, 2016ರಂದು ತಮ್ಮ ಉಡುಪಿಯ ಮನೆಯಿಂದ ನಾಪತ್ತೆಯಾಗುತ್ತಾರೆ. ಭಾಸ್ಕರ್ ಶೆಟ್ಟಿ ನಾಪತ್ತೆಯಾಗಿದ್ದಾರೆ ಎಂದು ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಅವರು ಜುಲೈ 29ರಂದು ಪೊಲೀಸರಿಗೆ ದೂರು ನೀಡುತ್ತಾರೆ. ನಾಪತ್ತೆಯಾಗಿದ್ದ ಭಾಸ್ಕರ್ ಶೆಟ್ಟಿ ಅವರನ್ನು ಹುಡುಕುತ್ತಾ ಹೋದ ಪೊಲೀಸರು, ಭಾಸ್ಕರ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ  ಎನ್ನುವುದನ್ನು ಪತ್ತೆ ಹಚ್ಚುತ್ತಾರೆ.

ಹೇಗೆ ನಡೆದಿತ್ತು ಭಾಸ್ಕರ್ ಶೆಟ್ಟಿ ಹತ್ಯೆ?

ಅಂದಿನ ಮಾಧ್ಯಮ ವರದಿಗಳಂತೆ, ಜುಲೈ 28, 2016ರಂದು  ಮಧ್ಯಾಹ್ನ 3 ಗಂಟೆಗೆ ಭಾಸ್ಕರ್ ಶೆಟ್ಟಿ ಅವರು ಉಡುಪಿಯ ತಮ್ಮ ದುರ್ಗಾ ಹೊಟೇಲ್ ನಿಂದ ತಮ್ಮ ಮನೆಗೆ ಆಗಮಿಸುತ್ತಾರೆ. ಆಗ ಅವರ ಮನೆಯಲ್ಲಿ ಪತ್ನಿ ರಾಜೇಶ್ವರಿ ಮತ್ತು ಮಗ ನವನೀತ್ ಶೆಟ್ಟಿ ಮತ್ತು ಇವರ ಸ್ನೇಹಿತ ನಿರಂಜನ್ ಭಟ್ ಎಂಬಾತ ಇರುತ್ತಾರೆ.

ಭಾಸ್ಕರ್ ಶೆಟ್ಟಿಯನ್ನು ಹತ್ಯೆ ಮಾಡಬೇಕು ಎಂದು ಮೊದಲೇ ಇವರು ಪ್ಲಾನ್ ಹಾಕಿದ್ದರು. ಅಂತೆಯೇ ಭಾಸ್ಕರ್ ಶೆಟ್ಟಿ ಸ್ನಾನ ಮಾಡಿ, ಬಾತ್ ರೂಮ್ ನಿಂದ ಹೊರಗೆ ಬರುತ್ತಿದ್ದಂತೆಯೇ ಪತ್ನಿ ರಾಜೇಶ್ವರಿ, ಭಾಸ್ಕರ್ ಶೆಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡುತ್ತಾಳೆ. ಪೆಪ್ಪರ್ ಸ್ಪ್ರೇಯಿಂದ ಭಾಸ್ಕರ್ ಶೆಟ್ಟಿ ಕಣ್ಣು ಉರಿಯಿಂದ ಚಡಪಡಿಸುತ್ತಿದ್ದ ವೇಳೆ ತಲೆಗೆ ರಾಡ್ ನಿಂದ ಹೊಡೆದು, ಕೈ ಕಾಲುಗಳನ್ನು ಕಟ್ಟಿ ಹಾಕಿ ಸ್ನಾನದ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದರು. ಭಾಸ್ಕರ್ ಶೆಟ್ಟಿ ಸಾವನ್ನಪ್ಪಿದ ತಕ್ಷಣವೇ ಮೃತದೇಹವನ್ನು  ಮೂವರೂ ಸೇರಿ ಕಾರಿನ ಡಿಕ್ಕಿಯಲ್ಲಿ ಹಾಕಿ, ನಂದಿಕಟ್ಟೆಯಲ್ಲಿರುವ ನಿರಂಜನ್ ಭಟ್ ನ ಯಾಗ ಶಾಲೆಗೆ ಸಾಗಿಸುತ್ತಾರೆ.

ನಿರಂಜನ್ ಭಟ್ ನ ಯಾಗ ಶಾಲೆಯಲ್ಲಿ ಶವವನ್ನು ಹೋಮಕುಂಡದಲ್ಲಿ ಹಾಕಿ, ತುಪ್ಪ, ಕರ್ಪೂರ, ಪೆಟ್ರೋಲ್ ಬಳಸಿ ಸುಡಲಾಯಿತು.  ಬಳಿಕ ಬೂದಿ, ಮೂಳೆಗಳನ್ನು ಹಾಗೂ ಹೋಮಕುಂಡದ ಇಟ್ಟಿಗೆಗಳನ್ನು  ಇಲ್ಲಿನ ನದಿಗೆ ಎಸೆಯಲಾಯಿತು.

ಸಿಕ್ಕಿ ಬಿದ್ದ  ಆರೋಪಿಗಳು:

ಇತ್ತ ತಾಯಿ ಗುಲಾಬಿ ಶೆಟ್ಟಿ ಮಗ ಕಾಣದೇ ಕಂಗಾಲಾಗಿದ್ದರು. ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದರು. ಈ ಪ್ರಕರಣದ ತನಿಖೆ ನಡೆಸಿದಾಗ, ಪತ್ನಿ ರಾಜೇಶ್ವರಿ, ಮಗ ನವನೀತ್ ಹಾಗೂ ರಾಜೇಶ್ವರಿ ಸಂಬಂಧ ಹೊಂದಿದ್ದರು ಎನ್ನಲಾಗಿರುವ ಜ್ಯೋತಿಷಿ ನಿರಂಜನ್ ಭಟ್ ಸೇರಿ ಭಾಸ್ಕರ್ ಶೆಟ್ಟಿಯನ್ನು ಹತ್ಯೆ ಮಾಡಿರುವುದು ತಿಳಿದು ಬರುತ್ತದೆ. ಹೀಗಾಗಿ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್ ಶೆಟ್ಟಿಯನ್ನು ಪೊಲೀಸರು ಬಂಧಿಸುತ್ತಾರೆ. ಕೃತ್ಯದ ಬಳಿಕ ತಲೆಮರೆದಿಕೊಂಡಿದ್ದ ಜ್ಯೋತಿಷಿ ನಿರಂಜನ್ ಭಟ್ ನ್ನು ಆಗಸ್ಟ್ 8, 2016 ರಂದು ನಿಟ್ಟೆಯಿಂದ ಪೊಲೀಸರು ಬಂಧಿಸುತ್ತಾರೆ. ಆಗಸ್ಟ್ 10, 2016 ರಂದು, ಪೊಲೀಸರು ಪಲ್ಲಿ ನದಿಯಲ್ಲಿ ಭಾಸ್ಕರ್ ಶೆಟ್ಟಿ ಅವರ ಮೂಳೆಗಳನ್ನು ಪತ್ತೆ ಹಚ್ಚುತ್ತಾರೆ.

ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಂದು ಶ್ರದ್ಧಾ ಹತ್ಯೆ ಹೇಗೆ ದಿನಕ್ಕೊಂದು ಶಾಕಿಂಗ್ ಟ್ವಿಸ್ಟ್ ಗಳನ್ನು ನೀಡುತ್ತಿದ್ದೆಯೋ ಅದಕ್ಕಿಂತಲೂ ಒಂದು ಕೈ ಮೇಲೆ ಎಂಬಂತೆ ಭಾಸ್ಕರ್ ಶೆಟ್ಟಿ ಪ್ರಕರಣ ಸುದ್ದಿಯಾಗಿತ್ತು. ಮಗನನ್ನು ಕಳೆದುಕೊಂಡ ತಾಯಿ ಗುಲಾಬಿ ಶೆಟ್ಟಿಯ ಮೂಕರೋದನೆ ಯಾರಿಗೂ ಕೇಳಿಸಿರಲಿಲ್ಲ!

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ