ಅಕ್ರಮಗಳ ʼಚಿಲುಮೆʼಯೂ ʼಗಡಿʼ ವಿವಾದದ ಪರದೆಯೂ - Mahanayaka
2:07 PM Saturday 14 - December 2024

ಅಕ್ರಮಗಳ ʼಚಿಲುಮೆʼಯೂ ʼಗಡಿʼ ವಿವಾದದ ಪರದೆಯೂ

voter data theft
27/11/2022

  • ಯಾವುದೇ ಸರ್ಕಾರವಾದರೂ ತನ್ನ ಬುಡ ಅಲುಗಾಡಿದಾಗ ಭಾವನಾತ್ಮಕತೆಗೆ ಮೊರೆಹೋಗುತ್ತದೆ

  • ನಾ ದಿವಾಕರ

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 75 ವರ್ಷಗಳಿಂದಲೂ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಸರ್ಕಾರಗಳು ವಿಧಿವತ್ತಾಗಿ ಅನುಸರಿಸಿಕೊಂಡು ಬಂದಿರುವ ಏಕೈಕ ಮಾರ್ಗ ಎಂದರೆ, ಸರ್ಕಾರದ ಅಸ್ತಿತ್ವ ಅಲುಗಾಡಿದಾಗ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ವಾಸ್ತವವನ್ನು ಮರೆಮಾಚುವ ತಂತ್ರಗಾರಿಕೆ. 1947ರಿಂದಲೂ ಈ ವಿದ್ಯಮಾನವನ್ನು ಭಾರತದ ಸಾರ್ವಭೌಮ ಪ್ರಜೆಗಳು ಗಮನಿಸುತ್ತಲೇ ಇದ್ದಾರೆ, ಅನುಭವಿಸುತ್ತಲೇ ಇದ್ದಾರೆ. ಜಾತಿ, ಮತ, ಭಾಷೆಗಳೊಂದಿಗೇ ಜನಸಾಮಾನ್ಯರ ಭಾವನೆಗಳೊಂದಿಗೆ ಚೆಲ್ಲಾಟವಾಡಲು ಒದಗಿಬರುವ ಮತ್ತೊಂದು ಅಂಶ ಎಂದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಇಂದಿಗೂ ಪರಿಪೂರ್ಣವಾಗಿ ಬಗೆಹರಿಯದ ಭೌಗೋಳಿಕ ಗಡಿ ವಿವಾದಗಳು. ಜಾತಿ-ಮತ-ಧಾರ್ಮಿಕ ವಿಚಾರಗಳಲ್ಲಿ ವಿಘಟಿತವಾಗಿರುವ ಸಮಾಜಗಳೂ ಸಹ ಭಾಷೆ ಮತ್ತು ಭೌಗೋಳಿಕ ಗಡಿಯ ಪ್ರಶ್ನೆ ಎದುರಾದಾಗ ಐಕ್ಯತೆಯೊಂದಿಗೆ ಹೋರಾಡುವುದನ್ನು ಗಮನಿಸುತ್ತಲೇ ಬಂದಿದ್ದೇವೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಆದಿಯಾಗಿ ಸ್ವಾತಂತ್ರ್ಯ ಪೂರ್ವದ ಎಲ್ಲ ನೇತಾರರೂ ಈ ಅಂಶವನ್ನು ಮನಗಂಡಿದ್ದರಿಂದಲೇ ಭಾರತವನ್ನು ಒಂದು ಒಕ್ಕೂಟ ಎಂದು ಕರೆಯಲಾಗಿದೆ. ಈ ಒಕ್ಕೂಟ ವ್ಯವಸ್ಥೆಯೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಭದ್ರ ಬುನಾದಿಯನ್ನೂ ಒದಗಿಸಿದೆ. ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಬಹುತ್ವದ ಪ್ರಾದೇಶಿಕ ನೆಲೆಗಳೇ, ಭಾಷಾವಾರು ರಾಜ್ಯಗಳ ಭೌತಿಕ-ಭೌಗೋಳಿಕ ಅಸ್ಮಿತೆ ಮತ್ತು ಅಸ್ತಿತ್ವವನ್ನೂ ನಿರ್ಧರಿಸುತ್ತದೆ. ಭಾರತದಾದ್ಯಂತ ಇನ್ನೂ ಬಗೆಹರಿಯದ ಗಡಿ ವಿವಾದಗಳು ಆಗಿಂದ್ದಾಗ್ಗೆ ತಲೆದೋರುತ್ತಲೇ ಇರುವುದನ್ನೂ ಈ ಹಿನ್ನೆಲೆಯಲ್ಲೇ ಗಮನಿಸಬೇಕಿದೆ. ಈಗಲೂ ಸಹ ಅಸ್ಸಾಂ ಮತ್ತು ಮೇಘಾಲಯದ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಈ ಎರಡೂ ರಾಜ್ಯಗಳನ್ನು ಬೇರ್ಪಡಿಸಿರುವ 884 ಕಿಮೀ ವ್ಯಾಪ್ತಿಯ ಗಡಿ ಪ್ರದೇಶವು ವಿವಾದಾಸ್ಪದವಾಗಿದ್ದು, ಮಾರ್ಚ್‌ ತಿಂಗಳಲ್ಲಿ ನಡೆದ ಸಂಧಾನ ಸಭೆಯಲ್ಲಿ ವಿವಾದಕ್ಕೊಳಗಾಗಿರುವ 12 ಪ್ರದೇಶಗಳ ಪೈಕಿ ಆರು ಪ್ರದೇಶಗಳ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಈಗ ಎರಡನೆ ಸುತ್ತಿನ ಮಾತುಕತೆ ನಡೆಯುತ್ತಿದ್ದು, ಈ ಸಂದರ್ಭದಲ್ಲೇ ಅಸ್ಸಾಂ ಗಡಿ ಪ್ರದೇಶದಲ್ಲಿ ನಡೆದಿರುವ ಘರ್ಷಣೆ ಗಂಭೀರ ಸ್ವರೂಪ ಪಡೆದಿದೆ.

ಏಕ ರಾಷ್ಟ್ರ-ಏಕ ಭಾಷೆ-ಏಕ ಸಂಸ್ಕೃತಿಯ ಘೋಷಣೆಯ ನಡುವೆಯೂ ಗಮನಿಸಬೇಕಾದ ಅಂಶ ಎಂದರೆ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ನೆಲೆಗಳಿಗಾಗಿ, ಭಾಷಿಕ ಅಸ್ಮಿತೆಗಾಗಿ, ಪ್ರಾದೇಶಿಕ ಅಸ್ತಿತ್ವಕ್ಕಾಗಿ ಹೋರಾಟಗಳನ್ನು ನಡೆಸುತ್ತಲೇ ಇವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆಯೂ ಇಂತಹುದೇ ಗಡಿ ವಿವಾದ ಕಳೆದ ಆರು ದಶಕಗಳಿಂದಲೂ ಜೀವಂತವಾಗಿದೆ. ಬ್ರಿಟೀಷ್‌ ವಸಾಹತು ಆಳ್ವಿಕೆಯಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯನ್ನು 1956ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡನೆಯಾದ ಸಂದರ್ಭದಲ್ಲಿ ಕರ್ನಾಟಕಕ್ಕೆ ಸೇರಿಸಲಾಗಿತ್ತು. 1881ರ ಜನಗಣತಿಯ ಅನುಸಾರ ಬೆಳಗಾವಿಯಲ್ಲಿ ಕನ್ನಡ ಭಾಷಿಕರ ಪ್ರಮಾಣ ಶೇ 64.39ರಷ್ಟಿದ್ದು, ಮರಾಠಿ ಭಾಷಿಕರು ಶೇ 26.04ರಷ್ಟಿದ್ದರು. 1951ರ ಜನಗಣತಿಯಲ್ಲಿ ಬೆಳಗಾವಿಯ ನಗರ ಪ್ರದೇಶದಲ್ಲಿ ಮರಾಠಿ ಭಾಷಿಕರ ಪ್ರಮಾಣ ಶೇ 60ರಷ್ಟಿತ್ತೆಂದೂ, ಶಹಾಪುರದಲ್ಲಿ ಶೇ 57, ಬೆಳಗಾವಿಯ ಕಂಟೋನ್‌ಮೆಂಟ್‌ನಲ್ಲಿ ಶೇ 33.6 ಹಾಗೂ ಉಪನಗರಗಳಲ್ಲಿ ಶೇ 50.9ರಷ್ಟಿತ್ತು ಎಂದು ದಾಖಲಾಗಿದೆ. ಈ ಹಿನ್ನೆಲೆಯಲ್ಲೇ 1956ರಲ್ಲಿ ಮಹಾರಾಷ್ಟ್ರ ಸರ್ಕಾರವು ಈ ಪ್ರದೇಶಗಳು ತನಗೆ ಸೇರಬೇಕು ಎಂದು ಆಗ್ರಹಿಸಿತ್ತು.

ಈ ಆಗ್ರಹದ ಹಿನ್ನೆಲೆಯಲ್ಲೇ ಮಹಾಜನ್‌ ಆಯೋಗವನ್ನೂ ರಚಿಸಲಾಗಿತ್ತು. ಆಯೋಗವು ಮಹಾರಾಷ್ಟ್ರ ಸರ್ಕಾರದ ಆಗ್ರಹವನ್ನು ತಿರಸ್ಕರಿಸಿತ್ತು. ಬೆಳಗಾವಿ ನಗರ ಮತ್ತು ಸುತ್ತಲಿನ 814 ಗ್ರಾಮಗಳು ತನಗೆ ಸೇರಬೇಕೆಂದು ಆಗ್ರಹಿಸಿದ್ದ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಇದೇ ಪ್ರಕರಣವೇ ಈಗ ಮತ್ತೊಮ್ಮೆ ವಿಚಾರಣೆಗೆ ಬಂದಿದ್ದು, ಎರಡೂ ರಾಜ್ಯಗಳ ನಡುವೆ ವಿವಾದ ಭುಗಿಲೆದ್ದಿದೆ. ಆದರೆ ಮಹಾಜನ್‌ ಆಯೋಗವು ತನ್ನ ಅಂತಿಮ ವರದಿಯಲ್ಲಿ ಬೆಳಗಾವಿ ನಗರವು ಮೂರು ದಿಕ್ಕುಗಳಲ್ಲಿ ಕನ್ನಡ ಭಾಷಿಕ ಪ್ರದೇಶಗಳಿಂದ ಆವೃತವಾಗಿರುವುದರಿಂದ ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕು ಎಂದು ಹೇಳಿತ್ತು. ಹಾಗೆಯೇ ಜಟ್ಟಾ, ಅಕ್ಕಲಕೋಟೆ ಮತ್ತು ಶೋಲಾಪುರ ಹಾಗೂ 247 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದೂ, ನಂದಗಡ್‌, ಖಾನಾಪುರ ಹಾಗೂ 264 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದೂ ಶಿಫಾರಸು ಮಾಡಿತ್ತು. ಕರ್ನಾಟಕ ಸರ್ಕಾರ ಆಯೋಗದ ವರದಿಯನ್ನು ಸ್ವೀಕರಿಸಿದ್ದರೂ ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ.

ಬೆಳಗಾವಿ, ಬೀದರ್‌, ಭಾಲ್ಕಿ, ಕಾರವಾರ ಸೇರಿದಂತೆ 865 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ವಾದಿಸಿ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಹೂಡಿದ್ದ ದಾವೆ ಮುಂದಿನ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಈ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಕರ್ನಾಟಕದಲ್ಲಿರುವ ಮರಾಠಿ ಭಾಷಿಕರ ಪ್ರದೇಶಗಳಾದ ಕಾರವಾರ, ನಿಪ್ಪಾಣಿ ಮತ್ತು ಬೆಳಗಾವಿ ತಮ್ಮ ರಾಜ್ಯಕ್ಕೆ ಸೇರಬೇಕು ಎಂದು ಹೇಳಿಕೆ ನೀಡಿದ್ದು, ವಿವಾದ ಉಲ್ಬಣಿಸಲು ಕಾರಣವಾಗಿದೆ, ಮಹಾರಾಷ್ಟ್ರವು ತನ್ನದೆನ್ನುತ್ತಿರುವ ನೆರೆ ರಾಜ್ಯಗಳ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ಯೋಜನೆ ಮತ್ತು ಈ ಪ್ರದೇಶದ ನಿವಾಸಿಗಳಿಗೆ ಮಹಾತ್ಮ ಫುಲೆ ಆರೋಗ್ಯ ಯೋಜನೆಯನ್ನು ವಿಸ್ತರಿಸುವುದಾಗಿಯೂ ಫಡ್ನವಿಸ್‌ ಹೇಳಿದ್ದರು. ಫಡ್ನವಿಸ್‌ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ ಕರ್ನಾಟಕವು ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ” ಎಂದು ಹೇಳಿರುವುದೇ ಅಲ್ಲದೆ, ಮಹಾರಾಷ್ಟ್ರದ ಜತ್‌ ತಾಲ್ಲೂಕು ಅಲ್ಲಿನ ಗ್ರಾಮ ಪಂಚಾಯತಿಗಳು ನಿರ್ಧರಿಸಿರುವುದರಿಂದ ರಾಜ್ಯ ಸರ್ಕಾರ ಈ ಕುರಿತು ಗಂಭೀರ ಚಿಂತನೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷಿಕರೇ ಹೆಚ್ಚಾಗಿರುವ ಶೋಲಾಪುರ ಮತ್ತು ಅಕ್ಕಲಕೋಟೆ ಪ್ರದೇಶಗಳೂ ಕರ್ನಾಟಕಕ್ಕೇ ಸೇರಬೇಕಿದೆ ಎಂದೂ ಹೇಳಿದ್ದಾರೆ.

ಗಡಿ ವಿವಾದದ ನಡುವೆ ಅಕ್ರಮದ ಚಿಲುಮೆ

ಈ ಪ್ರಕರಣವು ಮುಂದಿನ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೊಳಪಡಲಿದ್ದು, ಈ ಸಂದರ್ಭದಲ್ಲಿ ವಿವಾದ ಉಲ್ಬಣಿಸಬೇಕಿತ್ತೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಇರುವಾಗಲೂ ಈ ವಿವಾದ ಉಲ್ಬಣಿಸಬೇಕಿರಲಿಲ್ಲ. ಮುಂದಿನ ವಾರದಲ್ಲಿ ಮಾತುಕತೆ ನಡೆಸಲು ಸಿದ್ಧವಾಗಿರುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್‌ ಹೇಳಿದ್ದರೂ, ಈಗಾಗಲೇ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಸುಗಳಿಗೆ ಮಸಿ ಬಳಿದ ಪ್ರಕರಣವೂ ನಡೆದಿದ್ದು ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲೂ ಕೆಲವು ಸಂಘಟನೆಗಳು ಆ ರಾಜ್ಯದ ಬಸ್ಸುಗಳಿಗೆ ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಿವೆ. ಮಹಾರಾಷ್ಟ್ರದ ಕೊಲ್ಹಾಪುರ, ಪುಣೆ, ಔರಂಗಾಬಾದ್‌ ಮುಂತಾದೆಡೆ ಕರ್ನಾಟಕದ ಬಸ್ಸುಗಳಿಗೆ ತಡೆ ಒಡ್ಡಲಾಗಿದೆ. ಈ ಹಿನ್ನೆಲೆಯಲ್ಲೇ ಉಭಯ ರಾಜ್ಯಗಳ ನಡುವೆ ಸಂಚರಿಸುವ 300ಕ್ಕೂ ಹೆಚ್ಚು ಬಸ್ಸುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ವಾರದಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದು, ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸುವ ವಕೀಲರನ್ನು ನೇಮಿಸಲೂ ಯೋಚಿಸಲಾಗಿದೆ. ಗಡಿ ವಿವಾದವು ಉಲ್ಗಣಗೊಳ್ಳುವುದಕ್ಕೂ, ಕರ್ನಾಟಕದಲ್ಲಿ ಚುನಾವಣಾ ಅಕ್ರಮ ಮತ್ತು ಭ್ರಷ್ಟಾಚಾರದ ʼ ಚಿಲುಮೆ ʼ ಹಠಾತ್ತನೆ ಚಿಮ್ಮಿರುವುದಕ್ಕೂ ಸೂಕ್ಷ್ಮ ಸಂಬಂಧ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಆರೋಪದಡಿ , ಮತದಾರ ಸಮೀಕ್ಷೆಗೆ ನಿಯೋಜಿಸಲಾಗಿದ್ದ ಚಿಲುಮೆ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಚುನಾವಣಾ ಆಯೋಗವೂ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚುವರಿ ಚುನಾವಣಾಧಿಕಾರಿಗಳಾಗಿರುವ ಇಬ್ಬರು ಐಎಎಸ್‌ ಅಧಿಕಾರಿಗಳನ್ನೂ ತಕ್ಷಣದಿಂದ ಜಾರಿಯಾಗುವಂತೆ ಅಮಾನತು ಮಾಡಿದೆ. ಹಾಗೆಯೇ ಬಿಬಿಎಂಪಿ ವಿಶೇಷ ಆಯುಕ್ತ ಎಸ್‌ ರಂಗಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್‌ ಅವರನ್ನೂ ಅಮಾನತು ಮಾಡುವಂತೆ ನಿರ್ದೇಶಿಸಿದೆ.

ಮತದಾರರ ಜಾಗೃತಿ ಅಭಿಯಾನದ ಅಡಿಯಲ್ಲಿ ಚಿಲುಮೆ ಸಂಸ್ಥೆಯು ಮತದಾರರ ಮಾಹಿತಿ ಕಳವು ಮಾಡಿರುವುದೇ ಅಲ್ಲದೆ ಮತಪೆಟ್ಟಿಗೆಗೆ ಅಕ್ರಮವಾಗಿ ಹೆಸರು ಸೇರ್ಪಡೆ ಮತ್ತು ಕೈಬಿಡುವ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯ ಅಡಳಿತಾಧಿಕಾರಿಯನ್ನೂ ಬಂಧಿಸಲಾಗಿದ್ದು ಸಂಸ್ಥೆಯ ಸಂಸ್ಥಾಪಕ ರವಿ ಕುಮಾರ್‌, ಅವರ ಸೋದರ ಕೆಂಪೇಗೌಡ ಮತ್ತಿತರ ಏಳು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಈ ಹಗರಣದಲ್ಲಿ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಇತರ ವಿಭಾಗಗಳ ಸಿಬ್ಬಂದಿಯೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ವಿರೋಧ ಪಕ್ಷಗಳು ಮುಖ್ಯಮಂತ್ರಿಗಳ ರಾಜೀನಾಮೆಗೂ ಆಗ್ರಹಿಸುತ್ತಿವೆ. ಮತದಾರರ ಪಟ್ಟಿಯಿಂದ ಸಾವಿರಾರು ಹೆಸರುಗಳನ್ನು ಕೈಬಿಡಲಾಗಿದ್ದು, ಈ ಕುರಿತ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಆದರೆ ಈ ಭ್ರಷ್ಟಾಚಾರದ ಚಿಲುಮೆಗೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಿದೆ. ಈ ಸಂಸ್ಥೆಯನ್ನು ಹಿಂದಿನ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲೇ ನೇಮಿಸಲಾಗಿದ್ದರೂ, ವರ್ತಮಾನದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಭ್ರಷ್ಟಾಚಾರಗಳಿಗೆ ಹಿಂದಿನ ಸರ್ಕಾರಗಳನ್ನು ಮಾತ್ರವೇ ದೂಷಿಸಲಾಗುವುದಿಲ್ಲ. ಈಗ ಆಡಳಿತ ನಡೆಸುತ್ತಿರುವ ಸರ್ಕಾರವೂ ಸಮಾನ ಜವಾಬ್ದಾರಿ ಹೊರಬೇಕಾಗುತ್ತದೆ. ಈಗಾಗಲೇ ಪೊಲೀಸ್‌ ನೇಮಕಾತಿಯಲ್ಲಿ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿದ್ದು ಬೃಹದಾಕಾರವಾಗಿ ಬೆಳೆಯುತ್ತಿರುವಾಗಲೇ ಮತ್ತೊಂದು ಅಕ್ರಮವೂ ಬಯಲಾಗಿರುವುದು ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೀಡುಮಾಡಿದೆ. ಆಡಳಿತ ವ್ಯವಸ್ಥೆಯಲ್ಲಿ, ಅಧಿಕಾರಶಾಹಿಯಲ್ಲಿ ಮತ್ತು ಸರ್ಕಾರದ ವಿವಿಧ ವಿಭಾಗಗಳಲ್ಲಿ, ಭ್ರಷ್ಟಾಚಾರದ ಬೇರುಗಳು ಅಗೆದಷ್ಟೂ ಆಳಕ್ಕೆ ಇಳಿಯುತ್ತಿರುವುದು ಹೊಸ ವಿದ್ಯಮಾನವೇನಲ್ಲ. ಪ್ರಾಮಾಣಿಕ ತನಿಖೆ ಮತ್ತು ವಿಚಾರಣೆಗಳ ಮೂಲಕವೇ ಜನಸಾಮಾನ್ಯರಿಗೆ ಈ ವಾಸ್ತವಗಳ ದರ್ಶನವಾಗಲು ಸಾಧ್ಯ.

ಮತದಾರರು ಜಾಗೃತರಾಗಲೇಬೇಕಲ್ಲವೇ ?

ಮತದಾರರ ವೈಯಕ್ತಿಕ ಮಾಹಿತಿ ಕಲೆ ಹಾಕಲು ಯೋಜನೆ ರೂಪಿಸಿದ್ದ ʼ ಚಿಲುಮೆ ʼ ಸಂಸ್ಥೆ ಕರ್ನಾಟಕದ ರಾಜಕಾರಣದ ಬೃಹತ್‌ ಅಕ್ರಮ ಮತ್ತು ಭ್ರಷ್ಟಾಚಾರದ ಚಿಲುಮೆಯಾಗಿ ಸಾರ್ವಜನಿಕರ ಮುಂದೆ ಬೆತ್ತಲಾಗಿದೆ. ಡಿಜಿಟಲ್‌ ಸಮೀಕ್ಷಾ ಅಪ್ಲಿಕೇಷನ್‌ ಬಗ್ಗೆ ತರಬೇತಿ ನೀಡಿ, ಈ ಕೆಲಸದಕ್ಕಾಗಿ 500 ಸಿಬ್ಬಂದಿಯನ್ನು ಸಂಸ್ಥೆಯು ನೇಮಕ ಮಾಡಿದೆ. ಹಲವು ತಿಂಗಳುಗಳ ಕಾಲ ಈ ಸಮೀಕ್ಷೆಯೂ ನಡೆದಿದೆ. ಈ ಸಂಸ್ಥೆಯನ್ನು ಹಿಂದಿನ ಸರ್ಕಾರವೇ ನೇಮಕ ಮಾಡಿದ್ದರೂ, ಅಕ್ರಮ ನಡೆದಿರುವುದು ಹಾಲಿ ಸರ್ಕಾರದ ಆಡಳಿತಾವಧಿಯಲ್ಲಿ. ಸಹಜವಾಗಿಯೇ ಮುಂಬರುವ ಚುನಾವಣೆಗಳಲ್ಲಿ ಈ ಚಿಲುಮೆ ಬಿಜೆಪಿ ಸರ್ಕಾರದ ಪಾಲಿಗೆ ಮುಳುವಾಗುವ ಸಾಧ್ಯತೆಗಳಿವೆ. ಈಗಾಗಲೇ ಪೊಲೀಸ್‌ ಮತ್ತು ಶಿಕ್ಷಕ ನೇಮಕಾತಿಯಲ್ಲಿನ ಭ್ರಷ್ಟಾಚಾರವು ಬ್ರಹ್ಮಾಂಡದಂತೆ ತೆರೆದುಕೊಳ್ಳುತ್ತಿದ್ದು, ಸರ್ಕಾರದ ಎಲ್ಲ ಇಲಾಖೆಗಳಿಗೂ ವ್ಯಾಪಿಸುತ್ತಿದೆ.

ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಇಂತಹ ಹಗರಣಗಳು ಯಾವುದೇ ಸರ್ಕಾರವನ್ನಾದರೂ ಮುಜುಗರಕ್ಕೀಡುಮಾಡುತ್ತದೆ. ಮತದಾರರ ಮುಂದೆ ಖುಲ್ಲಂಖುಲ್ಲಾ ಸಾಬೀತಾಗುತ್ತಿರುವ ಅಕ್ರಮ ಮತ್ತು ಭ್ರಷ್ಟಾಚಾರಗಳನ್ನು ಯಾವುದೇ ಕಾರಣಗಳನ್ನು ನೀಡಿದರೂ ಸಂಪೂರ್ಣ ಮರೆಮಾಚಲಾಗುವುದಿಲ್ಲ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ವೈಷಮ್ಯ, ತೀವ್ರವಾಗುತ್ತಿರುವ ಮತಧ್ವೇಷದ ಪ್ರಕರಣಗಳು, ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕುಕ್ಕರ್‌ ಸ್ಫೋಟ ಮತ್ತು ಅದರ ಸುತ್ತ ಬಯಲಾಗುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಜಾಲ ಇವೆಲ್ಲವೂ ಆಡಳಿತಾರೂಢ ಪಕ್ಷಕ್ಕೆ ಚುನಾವಣೆಗಳ ದೃಷ್ಟಿಯಿಂದ ಹಿನ್ನಡೆ ಉಂಟುಮಾಡುತ್ತವೆ. ವಿದ್ಯುನ್ಮಾನ ಯುಗದಲ್ಲಿ, ತಂತ್ರಜ್ಞಾನಯುಗದ ಬಾಹುಗಳು ಮೂಲೆ ಮೂಲೆಯನ್ನೂ ತಲುಪುತ್ತಿರುವ ನವ ಭಾರತದಲ್ಲಿ ಭ್ರಷ್ಟಾಚಾರದ ಬೇರುಗಳನ್ನು ಮರೆಮಾಚುವುದೂ ಕಷ್ಟವೇ ಆಗುತ್ತದೆ. ಚಿಲುಮೆ ಸಂಸ್ಥೆಯ ಅಕ್ರಮಗಳು ಪ್ರಜಾತಂತ್ರ ವ್ಯವಸ್ಥೆಯ ಮೂಲಕ್ಕೇ ಕೊಡಲಿಪೆಟ್ಟು ನೀಡುವಂತಹ ಒಂದು ಕೃತ್ಯವಾಗಿರುವುದರಿಂದ ಸಹಜವಾಗಿಯೇ ರಾಜ್ಯ ಸರ್ಕಾರಕ್ಕೆ ಜನಸಾಮಾನ್ಯರ ಮುಂದೆ ನಿಲ್ಲುವುದು ಕಷ್ಟಕರವಾಗಲಿದೆ.

ಈ ಹಿನ್ನೆಲೆಯಲ್ಲೇ ಹಠಾತ್ತನೆ ಬೆಳಗಾವಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುಂದಿನ ವಾರದಲ್ಲೇ ಈ ವಿವಾದವನ್ನು ಸುಪ್ರೀಂಕೋರ್ಟ್‌ ವಿಚಾರಣೆಗೊಳಪಡಿಸುತ್ತಿರುವುದರಿಂದ, ಎರಡೂ ರಾಜ್ಯಗಳಲ್ಲಿ, ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿರುವಾಗ, ಈ ವಿವಾದವು ಉಲ್ಬಣಿಸದಂತೆ ಎಚ್ಚರ ವಹಿಸಬಹುದಿತ್ತು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಯ ಮೂಲಕವೇ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಬಹುದಿತ್ತು. ಅತ್ತ ಮಹಾರಾಷ್ಟ್ರದಲ್ಲೂ ಸಹ ರಾಜ್ಯಪಾಲ ಕೊಶ್ಯಾರಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಫಡ್ನವಿಸ್‌ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳುವಂತೆ ಮರಾಠಿ ಸಂಘಟನೆಗಳು, ವಿರೋಧ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದು, ದೆಹಲಿಯಿಂದಲೂ ಕೊಶ್ಯಾರಿ ಅವರಿಗೆ ಬುಲಾವ್‌ ಬಂದಿದೆ. ಬಿಜೆಪಿಯ ಉನ್ನತ ನಾಯಕರೂ ಸಹ ಕೊಶ್ಯಾರಿ ಅವರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ತ ಮಹಾರಾಷ್ಟ್ರ ಸರ್ಕಾರವೂ ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಬೆಳಗಾವಿ ವಿವಾದ ದೇವೇಂದ್ರ ಫಡ್ನವಿಸ್‌ ಸರ್ಕಾರಕ್ಕೆ ವರದಾನದಂತೆ ಒದಗಿಬಂದಿದೆ.

ಎರಡೂ ರಾಜ್ಯಗಳ ಸರ್ಕಾರಗಳಿಗೆ ಬೆಳಗಾವಿ ವಿವಾದ ಗಡಿ ಪ್ರಶ್ನೆಗಿಂತಲೂ ಹೆಚ್ಚಾಗಿ ಭಾವನಾತ್ಮಕ ವಿಚಾರವಾಗಿದ್ದು, ಗಡಿ ಪ್ರದೇಶಗಳಲ್ಲಿ ಪ್ರತಿ ಬಾರಿಯೂ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತದೆ. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸುವ ಮೂಲಕ, ಅಲ್ಲಿ ವಿಧಾನಸಭೆಯ ಅಧಿವೇಶನವನ್ನೂ ನಡೆಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಬೆಳಗಾವಿ ಮತ್ತೊಂದು ಆಡಳಿತ ರಾಜಧಾನಿಯಂತೆಯೇ ಕಾಣುವುದು ಸಹಜ. ಮಹಾಜನ್‌ ವರದಿಯ ಹಿನ್ನೆಲೆಯಲ್ಲಿ ಮತ್ತು ಚಾರಿತ್ರಿಕ ದೃಷ್ಟಿಯಿಂದಲೂ ಬೆಳಗಾವಿ ಕರ್ನಾಟಕದ ಒಂದು ಭಾಗವಾಗಿಯೇ ಮುಂದುವರೆಯಬೇಕಿದೆ. ಆದರೆ ಈ ವಿವಾದವನ್ನು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಪರಂಪರೆಯೂ ಬೆಳೆದುಬಂದಿದೆ. ಪ್ರಸ್ತುತ ಸಂದರ್ಭದಲ್ಲೂ ರಾಜ್ಯ ಸರ್ಕಾರ ಎದುರಿಸುತ್ತಿರುವ ಹಲವು ಹಗರಣಗಳ ಹಿನ್ನೆಲೆಯಲ್ಲಿ, ಬೆಳಗಾವಿ ವಿವಾದವನ್ನು ರಾಜ್ಯದ ಜನತೆ ಎದುರಿಸುತ್ತಿರುವ ಜಟಿಲ ಸಮಸ್ಯೆಗಳು ಮತ್ತು ಸರ್ಕಾರ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪಗಳಿಂದ ರಕ್ಷಿಸಿಕೊಳ್ಳಲು ಪರದೆಯಂತೆ ಬಳಸುವ ಸಾಧ್ಯತೆಗಳಿವೆ. ಉಭಯ ರಾಜ್ಯಗಳ ಸರ್ಕಾರಗಳು ಗಡಿ ಪ್ರದೇಶದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದರೊಂದಿಗೇ, ಈ ವಿವಾದವನ್ನು ಮಾತುಕತೆಗಳ ಮೂಲಕವೇ ಬಗೆಹರಿಸಿಕೊಂಡು, ಸುಪ್ರೀಂಕೋರ್ಟ್‌ ವಿಚಾರಣೆಯ ಹಿನ್ನೆಲೆಯಲ್ಲಿ ಶಾಂತ ಚಿತ್ತತೆಯಿಂದ ವರ್ತಿಸಬೇಕಿದೆ.

ಯಾವುದೇ ಭಾವನಾತ್ಮಕ ವಿಚಾರಗಳಲ್ಲಿ ಅಧಿಕಾರಾರೂಢ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ತಮ್ಮ ರಾಜಕೀಯ ಲಾಭನಷ್ಟದ ಲೆಕ್ಕಾಚಾರದಲ್ಲೇ ಇರುವುದು ಸಹಜ. ಆದರೆ ಈ ಗಲಭೆಗಳಲ್ಲಿ, ಪ್ರಕ್ಷುಬ್ಧ ವಾತಾವರಣದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೀಡಾಗುತ್ತಾರೆ. ಎರಡೂ ರಾಜ್ಯಗಳ ಗಡಿ ಪ್ರದೇಶಗಳಲ್ಲಿರುವ ಸಾಮಾನ್ಯ ಜನತೆಗೆ ಗಡಿ ರೇಖೆಗಳಿಗಿಂತಲೂ, ನವ ಉದಾರವಾದಿ ಆರ್ಥಿಕ ನೀತಿಗಳು ಸೃಷ್ಟಿಸುತ್ತಿರುವ ತಮ್ಮ ದುರ್ಭರ ಜೀವನ ಮತ್ತು ಜೀವನೋಪಾಯದ ಜಟಿಲ ಸಮಸ್ಯೆಗಳು ಮುಖ್ಯವಾಗಿರುತ್ತವೆ. ಯಾವ ಪ್ರದೇಶ ಯಾವುದೇ ರಾಜ್ಯದ ಭಾಗವಾಗಿದ್ದರೂ, ಸರ್ಕಾರಗಳು ಅನುಸರಿಸುವ ಆರ್ಥಿಕ ನೀತಿಗಳು ಅಲ್ಲಿನ ಶ್ರಮಜೀವಿಗಳ ಬದುಕಿನಲ್ಲಿ ಯಾವುದೇ ನಿರ್ಣಾಯಕ ಪರಿವರ್ತನೆಯನ್ನಂತೂ ಉಂಟುಮಾಡುವುದಿಲ್ಲ. ಇದು ಬಂಡವಾಳಶಾಹಿಯ ಲಕ್ಷಣವೂ ಹೌದು ಇತಿಹಾಸ ನಿರೂಪಿತ ಸತ್ಯವೂ ಹೌದು. ಆದಾಗ್ಯೂ ಸರ್ಕಾರಗಳ ಮಟ್ಟಿಗೆ ಇಂತಹ ಭಾವನಾತ್ಮಕ ವಿವಾದಗಳು ಸಮಸ್ಯೆಗಳನ್ನು ನೇಪಥ್ಯಕ್ಕೆ ಸರಿಸುವ ಕಬ್ಬಿಣದ ಪರದೆಗಳಂತೆಯೇ ಪರಿಣಮಿಸುತ್ತಿರುತ್ತವೆ. ಬೆಳಗಾವಿ ವಿವಾದವೂ ಅಪವಾದವೇನಲ್ಲ. ಜಾಗೃತರಾಗಬೇಕಿರುವುದು ಮತದಾರರಲ್ಲವೇ ?

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ