ಕಾಲ್ಪನಿಕ ಚರಿತೆಯೂ ಇತಿಹಾಸಕಾರರ ಅನಿಶ್ಚಿತ ಭವಿಷ್ಯವೂ
- ಇತಿಹಾಸಕಾರರ ಮಾತುಗಳನ್ನು ಇಂದು ಕೇಳುವವರೇ ಇಲ್ಲವಾಗಿದ್ದಾರೆ
ಮೂಲ : ಜಾನಕಿ ನಾಯರ್
Imaginative pasts, the Uncertain futures of historians
ದ ಹಿಂದೂ 28 ನವಂಬರ್ 2022
ಅನುವಾದ : ನಾ ದಿವಾಕರ
ಬೆಂಗಳೂರಿನಲ್ಲಿ ಎಲ್ಲೆಡೆ ರಾರಾಜಿಸುತ್ತಿರುವ ಶಾಸಕರ, ಬಿಬಿಎಂಪಿ ಪ್ರತಿನಿಧಿಗಳ ಫ್ಲೆಕ್ಸ್ ಬೋರ್ಡುಗಳು, ಪುನೀತ್ ರಾಜಕುಮಾರ್ ಅವರ ನಗುಮೊಗದ ಬ್ಯಾನರ್ಗಳು, ಧ್ವಜ ಸ್ತಂಭಗಳು, ಸರ್ಕಾರದ ಹಾಗೂ ವಾಣಿಜ್ಯ ಜಾಹೀರಾತುಗಳು ಇವೆಲ್ಲದರ ನಡುವೆ ಬೆಂಗಳೂರಿನಲ್ಲಿ ಮೊದಲನೆ ಕೆಂಪೇಗೌಡರ ಬೃಹತ್ ಪ್ರತಿಮೆಯೂ ಅನಾವರಣಗೊಂಡಿದೆ. 16ನೆಯ ಶತಮಾನದ ನಾಡಪ್ರಭು ಎಂದೇ ಕರೆಯಲ್ಪಡುವ ಕೆಂಪೇಗೌಡ ಬೆಂಗಳೂರಿನ ಸಂಸ್ಥಾಪಕರೆಂದೇ ಹೆಸರುವಾಸಿಯಾಗಿದ್ದು 1537ರಲ್ಲಿ ಸ್ಥಾಪಿಸಿದ ಬೆಂಗಳೂರು ಇಂದು ಈ ನಾಡ ಪ್ರಭುವಿಗೆ ಗೌರವ ಸೂಚಿಸಲು 108 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಸ್ಥಾಪಿಸಿದೆ. ʼಸಮೃದ್ಧಿಯ ಪ್ರತಿಮೆʼ ಎಂದೇ ಗುರುತಿಸಲ್ಪಟ್ಟಿರುವ ಈ ಬೃಹತ್ ಪ್ರತಿಮೆ ಕೆಂಪೇಗೌಡನ ಹೆಸರಿನಲ್ಲೇ ಇರುವ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಲಂಕರಿಸಿದ್ದು, ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಕೆಂಪೇಗೌಡನ ಅಸ್ತಿತ್ವವನ್ನು ಪರಿಚಯಿಸುವಂತಿದೆ.
ಇತಿಹಾಸಕಾರರಿಗೆ ಅವಕಾಶವೇ ಇಲ್ಲ
ಇಂದು ರಾಜ್ಯದ ಬಗ್ಗೆ, ರಾಜ್ಯದ ಚರಿತ್ರೆಯ ಬಗ್ಗೆ ಮತ್ತು ಚರಿತ್ರೆಯಲ್ಲಿ ಆಗಿಹೋದ ನಾಯಕರ ಬಗ್ಗೆ ಕರ್ನಾಟಕದ ವೃತ್ತಿಪರ ಇತಿಹಾಸಕಾರರ ಧ್ವನಿಯನ್ನು, ಈ ಗದ್ದಲದ ನಡುವೆ, ಕೇಳಿಸಿಕೊಳ್ಳಲು ಸಾಧ್ಯವೇ ? ಇತಿಹಾಸಕಾರರು ಸಂಶೋಧನೆ, ಅಧ್ಯಯನ, ಬರಹಗಳಿಗೇ ಸೀಮಿತವಾಗಿದ್ದು ಕೆಲವು ಪ್ರಸಂಗಗಳಲ್ಲಿ ಅದೃಷ್ಟ ಇದ್ದರೆ ಸಂಕೀರ್ಣವಾದ, ವಿವಾದಾಸ್ಪದ, ಸಂಘರ್ಷಮಯ ಇತಿಹಾಸದ ಬೋಧನೆಯನ್ನು ಮಾಡಲು ಸಾಧ್ಯವಾಗುತ್ತಿದೆ. ಸರ್ಕಾರ, ಪಕ್ಷಗಳ ಅಥವಾ ಸಮುದಾಯಗಳ ಬೆಂಬಲದೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಡುತ್ತಿರುವ ವಿಚಾರಗಳು, ಸ್ಥಾಪನೆಯಾಗುತ್ತಿರುವ ಪ್ರತಿಮೆಗಳು,, ತಮ್ಮ ನಾಯಕರನ್ನು ( ಸಾಮಾನ್ಯವಾಗಿ ಪುರುಷರು) ವೈಭವೀಕರಿಸಲು ನಿರ್ಮಿಸಲಾಗುವ ಸ್ಮಾರಕಗಳು, ಸ್ಥಾಪಿತ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯಲು ನಡೆಯುವ ಪ್ರತಿಭಟನೆಗಳು, ಚರಿತ್ರೆಯ ಖಳನಾಯಕರನ್ನು (ಸಾಮಾನ್ಯವಾಗಿ ಮುಸಲ್ಮಾನರು) ಅಪಮಾನಿಸುವ ಪ್ರಯತ್ನಗಳು ಇವೆಲ್ಲದರ ನಡುವೆ ಇತಿಹಾಸಕಾರರು ನಿಕೃಷ್ಟ ಸಂಪನ್ಮೂಲಗಳಾಗಿ ಕಾಣುತ್ತಿದ್ದಾರೆ. ವಿಡಿಯೋಗಳ ಮೂಲಕ ಅಥವಾ ನಾಟಕಗಳ ಮೂಲಕ ಪ್ರಸ್ತುತಪಡಿಸಲಾಗುವ ವರ್ಣರಂಜಿತ ಪ್ರದರ್ಶನಗಳು ಯಾವುದೇ ಶುಷ್ಕ ದೀರ್ಘ ಉಪನ್ಯಾಸಗಳಿಗಿಂತಲೂ ಹೆಚ್ಚು ಆಕರ್ಷಣೀಯವಾಗಿರುತ್ತದೆ. ಅದೃಷ್ಟವಶಾತ್ ಈ ಪ್ರದರ್ಶನಗಳು ವಸ್ತುನಿಷ್ಠತೆಗಾಗಲೀ, ತರ್ಕಗಳಿಗಾಗಲೀ, ಬದ್ಧವಾಗಿರಬೇಕಿಲ್ಲ.
ಹಾಗಾಗಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಎತ್ತರ, ವಸ್ತ್ರ ವಿನ್ಯಾಸ ಅಥವಾ ಚರ್ಯೆಯನ್ನು ನಿರ್ಧರಿಸುವುದರಲ್ಲಿ ಇತಿಹಾಸಕಾರರಿಗೆ ಯಾವುದೇ ಪಾತ್ರ ಇರಲು ಸಾಧ್ಯವಿಲ್ಲ. ಬೆಂಗಳೂರಿನ ಮಾಜಿ ಮೇಯರ್, ದಿವಂಗತ ಜಿ ನಾರಾಯಣ ಅವರು ಹೇಳಿರುವಂತೆ, ಬೆಂಗಳೂರಿನಲ್ಲಿ ಕೆಂಪೇಗೌಡನ ಪ್ರತಿಮೆಯನ್ನು ಮೊಟ್ಟಮೊದಲನೆಯದಾಗಿ ಸ್ಥಾಪಿಸಿದ್ದು 1964ರಲ್ಲಿ ಬೆಂಗಳೂರು ನಗರ ಪಾಲಿಕೆಯ ಮುಂದೆ. ಕೆಂಪೇಗೌಡ ಹೇಗೆ ಕಾಣಬೇಕು ಎಂದು ನಿರ್ಧರಿಸಲೇ ಐದು ವರ್ಷಗಳ ಚರ್ಚೆ ನಡೆದಿತ್ತು ಎಂದು ನಾರಾಯಣ ಹೇಳುತ್ತಾರೆ. ಇತಿಹಾಸಕಾರರು ತಮ್ಮ ಪಾತ್ರ ವಹಿಸಿದ್ದ ಪಕ್ಷದಲ್ಲಿ ಎರಡು ಉಪಲಬ್ಧವಿರುವ ನಿದರ್ಶನಗಳನ್ನು ಒದಗಿಸುತ್ತಿದ್ದರು. ಮೊದಲನೆಯದು ಹಲಸೂರಿನ ಸೋಮೇಶ್ವರ ದೇವಾಲಯದಲ್ಲಿರುವ ಪ್ರತಿಮೆ ಮತ್ತೊಂದು ಶಿವಗಂಗೆಯ ಗಂಗಾಧರೇಶ್ವರ ದೇವಾಲಯದಲ್ಲಿರುವ ಪ್ರತಿಮೆ. ಹಲಸೂರಿನಲ್ಲಾಗಲೀ, ಶಿವಗಂಗೆಯಲ್ಲಾಗಲೀ ಕೆಂಪೇಗೌಡರನ್ನು ಎರಡೂ ಕೈಗಳನ್ನು ಜೋಡಿಸಿ, ಪ್ರಾರ್ಥಿಸುತ್ತಿರುವ ಭಂಗಿಯಲ್ಲಿ ಬಿಂಬಿಸಲಾಗಿದ್ದು, ಖಡ್ಗವು ಒರೆಯಲ್ಲಿರುವಂತೆ ನಿರ್ಮಿಸಲಾಗಿದೆ. ಆದರೆ ಈಗ ಇಡೀ ಪ್ರಾಂತ್ಯದ ಯುಗ ಪುರುಷ ಎಂದು ಮರಣೋತ್ತರವಾಗಿ ಸ್ಥಾಪಿಸಲ್ಪಟ್ಟಿರುವ ಪ್ರತಿಮೆಯು ರಾಜ್ಯದ ವಿವಿಧ ಭಾಗಗಳಿಂದ ತಂದಿರುವ ಮೃತ್ತಿಕೆಯ ಮೇಲೆ ನಿರ್ಮಿಸಲಾಗಿದ್ದು, ಖಡ್ಗ ಹಿಡಿದಿರುವ ಯೋಧನ ರೀತಿಯಲ್ಲಿ ಬಿಂಬಿಸಲಾಗಿದೆ.
ಕೆಂಪೇಗೌಡ ಪ್ರತಿಮೆಯಲ್ಲಿ ಬಿಂಬಿಸಲಾಗಿರುವ ಕಸೂತಿ ಮಾಡಲಾಗಿರುವ ಜುಬ್ಬ, ಪೇಟದ ಮುಂಭಾಗದ ಆಭರಣ, ಚೂರಿದಾರ್, ಪೇಟ, ಮತ್ತು ಪಾದರಕ್ಷೆ ಇವೆಲ್ಲವೂ ನಗಣ್ಯ ಎನಿಸುತ್ತವೆ. ಲಭ್ಯವಿರುವ ಎರಡು ಪ್ರಾತಿನಿಧ್ಯಗಳ ಅನುಸಾರ ಕೆಂಪೇಗೌಡನ ಪ್ರತಿಮೆಗಳು ತೆರೆದ ಎದೆ, ಬರಿಗಾಲು ಮತ್ತು ಮಡಿಕೆಗಳು ಕಾಣುವಂತೆ ಉಟ್ಟಿರುವ ಪಂಚೆ ಇವುಗಳನ್ನು ಬಿಂಬಿಸುತ್ತವೆ. ಇನ್ನೂ ಆಸಕ್ತಿದಾಯಕ ಎಂದರೆ ಧರಿಸಿರುವ ಟೊಪ್ಪಿ. ಇತಿಹಾಸಕಾರರು ಇದನ್ನು ಕಪಾಯಿ ಎಂದು ಗುರುತಿಸುತ್ತಾರೆ. ತ್ರಿಕೋನಾಕಾರದ ಉದ್ದನೆಯ ಜರತಾರಿಯಿಂದ ನೇಯ್ದಿರುವ ಬಟ್ಟೆಯಿಂದ ಅಲಂಕೃತವಾದ ಈ ರೀತಿಯ ಟೊಪ್ಪಿಯನ್ನು ಸಾಮಾನ್ಯವಾಗಿ ಉದ್ದನೆಯ ಬಿಳಿಯ ಜುಬ್ಬದೊಂದಿಗೆ ಧರಿಸಲಾಗುತ್ತದೆ. ಈ ಉಡುಪುಗಳನ್ನು ವಿಜಯನಗರದ ಅರಸರು ತಮ್ಮ ನೆರೆಯ ಇಸ್ಲಾಮಿಕ್ ದೊರೆಗಳಿಂದ ಅನುಕರಿಸಿದ್ದರು. ಈ ರೀತಿಯ ಸಾಂಸ್ಕೃತಿಕ ಅನುಕರಣೆಗಳು, ವಸ್ತ್ರ ವಿನ್ಯಾಸ, ನ್ಯಾಯ ನಿರ್ವಹಣೆ, ಸಂಬೋಧನೆ ಅಥವಾ ವಾಸ್ತುಶಿಲ್ಪದ ಅನುಕರಣೆಗಳು , ಹಿಂದೂ ಮುಸ್ಲಿಂ ವೈರುಧ್ಯದ ಉಚ್ಛ್ರಾಯ ಕಾಲ ಎಂದೂ ಸಹ ಬಲವಾಗಿ ಪ್ರತಿಪಾದಿಸಲಾಗುತ್ತಿರುವ ಈ ಅವಧಿಯಲ್ಲಿ ಸಾಮಾನ್ಯವಾಗಿತ್ತು ಎಂದು ಮಧ್ಯಯುಗದ ಇತಿಹಾಸಕಾರರು ಪ್ರತಿಪಾದಿಸುತ್ತಾರೆ.
17ನೆಯ ಶತಮಾನದ ವೇಳೆಗೆ ಮರಾಠಾ ಶೈಲಿಯ ವಸ್ತ್ರ ಧಾರಣೆಯೂ ಜನಪ್ರಿಯವಾಗಿತ್ತು. ಅದಕ್ಕೂ ಹಿಂದಿನ ವಿಜಯನಗರ ಸಾಮ್ರಾಜ್ಯದ ಇಕ್ಕೇರಿ, ಮದುರೈ, ತಂಜಾವೂರ್ಗಳಲ್ಲಿದ್ದಂತೆ ಈ ವಿನ್ಯಾಸಗಳೂ ಸಹ ಇಸ್ಲಾಮಿಕ್ ದರ್ಬಾರುಗಳ ಸಂಪ್ರದಾಯಗಳನ್ನು ಅಳವಡಿಸಿಕೊಂಡಿದ್ದವು. ಕೆಂಪೆಗೌಡರ ವಸ್ತ್ರ ವಿನ್ಯಾಸವು ಹೆಚ್ಚಿನ ಮಟ್ಟಿಗೆ, ಇಂದು ಬಹುಪಾಲು ಕನ್ನಡಿಗರಿಗೆ ಅಪಥ್ಯವಾಗಿರುವ 18ನೆಯ ಶತಮಾನದ ಟಿಪ್ಪು ಸುಲ್ತಾನನೊಡನೆ ಹೋಲಿಕೆಯಾಗುತ್ತದೆ. ವಿಮಾನ ನಿಲ್ದಾಣ ಇರುವ ದೇವನಹಳ್ಳಿ ಟಿಪ್ಪು ಸುಲ್ತಾನನ ಜನ್ಮಸ್ಥಳವೂ ಆಗಿದ್ದು, ಕೆಂಪೇಗೌಡನ ಜನ್ಮಸ್ಥಳ ಸಮೀಪದಲ್ಲೇ ಇರುವ ಯಲಹಂಕ ಆಗಿದೆ.
ಪಕ್ಷದ ಆಂತರಿಕ ಭೇದ:
ಧರ್ಮಗಳೊಡಗಿನ ಸಂಬಂಧಗಳನ್ನು ವ್ಯಾಪಕ ನೆಲೆಯಲ್ಲಿ ರಾಜಕೀಯ-ಸಾಂಸ್ಕೃತಿಕ ಪ್ರಭಾವಗಳಿಂದ ಪ್ರತ್ಯೇಕಿಸಿ ನೋಡುವ ನಿಟ್ಟಿನಲ್ಲಿ ಇತಿಹಾಸಕಾರರು ಸಾಮಾನ್ಯವಾಗಿ ಇಸ್ಲಾಮಿಕ್ ಎಂಬ ಪದದ ಬದಲು, ಇಸ್ಲಾಮಿಕೇಟ್ ಅಥವಾ ಪರ್ಷಿಯನೇಟ್ ಎಂಬ ಪದವನ್ನು ಬಳಕೆ ಮಾಡುತ್ತಾರೆ. ಆದರೆ ತಮ್ಮ ಕಾರ್ಯಕರ್ತರೊಡನೆ ಮುನ್ನಡೆಯುವ (ಹಿಂದುತ್ವ) ರಾಜಕೀಯ ನಾಯಕರಿಗೆ ಇಂತಹ ಸೂಕ್ಷ್ಮ ಭೇದಗಳು ಬೇಕಾಗುವುದಿಲ್ಲ. ಇತ್ತೀಚೆಗೆ ಮೈಸೂರಿನಲ್ಲಿ ಬಸ್ ತಂಗುದಾಣವೊಂದರ ಮೇಲೆ ಮೂರು ಗುಮ್ಮಟಗಳಿದ್ದುದರ ವಿರುದ್ಧ ವಿವಾದ ಏರ್ಪಟ್ಟಿತ್ತು. ಮೈಸೂರು ಸಂಸದರಾದ ಪ್ರತಾಪ್ ಸಿಂಹ ಗುಂಬಜ್ ಮಾದರಿಯ ಈ ಗುಮ್ಮಟಗಳು ಭಾರತಕ್ಕಿಂತಲೂ ಪಾಕಿಸ್ತಾನಕ್ಕೆ ಸೂಕ್ತವಾಗುತ್ತದೆ ಎಂದು ಖಂಡಿಸಿದ್ದೇ ಅಲ್ಲದೆ, ಅದನ್ನು ಕೆಡವಿ ಪುನರ್ ನಿರ್ಮಾಣ ಮಾಡಲು ಆಗ್ರಹಿಸಿದ್ದರು. ಇದರ ನಿರ್ಮಾಣದ ಜವಾಬ್ದಾರಿ ಹೊತ್ತ ಶಾಸಕ ಎಸ್ ಎ ರಾಮದಾಸ್, ಇದು ಮೈಸೂರು ಅರಮನೆಗೆ ಗೌರವಪೂರ್ವಕವಾಗಿ ಗುಮ್ಮಟಗಳ ಶೈಲಿಯಲ್ಲಿದ್ದು, 20ನೆಯ ಶತಮಾನದಲ್ಲಿ ಅರಮನೆಗಳ ನಿರ್ಮಾಣದಲ್ಲಿ ಅನುಸರಿಸಲಾಗುತ್ತಿದ್ದ ಶೈಲಿ ಎಂದು ಸಮಜಾಯಿಷಿ ನೀಡಿದ್ದರು. ಬಿಜೆಪಿಯ ಈ ಆಂತರಿಕ ಸಂಘರ್ಷದಲ್ಲಿ , ಬಸ್ ತಂಗುದಾಣವು ಮಸೀದಿಯನ್ನು ಹೋಲುತ್ತಿದೆ ಎಂಬ ಆಪಾದನೆಯ ಪರಿಣಾಮ ರಾತ್ರೋರಾತ್ರಿ ಅಲ್ಲಿ ಕಳಶಗಳನ್ನು ನಿರ್ಮಿಸಲಾಗಿತ್ತು. ಅದೂ ಸಹ ಸಂಸದರ ಆಕ್ರೋಶವನ್ನು ತಣಿಸದೆ ಹೋದಾಗ ಕೇಸರಿ ಬಣ್ಣ ಬಳಿಯಲಾಗಿತ್ತು. ಈ ಸಂದರ್ಭದಲ್ಲಿ ಕೊಡೇಕಲ್ ಮತ್ತು ತಿಂತಿಣಿ ದೇವಾಲಯಗಳಲ್ಲಿ (ಯಾದಗಿರಿ ಜಿಲ್ಲೆ) ಮಿನಾರೆಟ್ (ಮಸೀದಿಯ ಸ್ತಂಭ ಗೋಪುರ) ಮತ್ತು ಗುಮ್ಮಟಗಳಿವೆ ಎಂದು ಬೊಟ್ಟು ಮಾಡಿ ತೋರಿಸುವುದಾಗಲೀ, ರಾಜಪ್ರಭುತ್ವಗಳಿಗೂ ಪ್ರಜಾಪ್ರಭುತ್ವಗಳಿಗೂ ವ್ಯತ್ಯಾಸವಿದೆ ಎಂದು ಯುಜಿಸಿ ಅಧ್ಯಕ್ಷರಿಗೆ ಹೇಳುವುದಾಗಲೀ ವೃಥಾ ಪ್ರಲಾಪ ಎನಿಸಬಹುದಷ್ಟೆ. ಆಲ್ಬರ್ಟ್ ಐನ್ಸ್ಸ್ಟೀನ್ ಅವರ “ ಹರ್ಷೋಲ್ಲಾಸದ ಪಯಣಿಗರಿಗೆ ಅಪ್ಪಿ ತಪ್ಪಿ ದೊಡ್ಡ ಮಿದುಳು ನೀಡಲಾಗಿದೆ, ಅವರಿಗೆ ಬೆನ್ನು ಹುರಿ ಇದ್ದಿದ್ದರೆ ಸಾಕಾಗಿತ್ತು ” ಎಂಬ ಮಾತುಗಳು ನೆನಪಾಗುತ್ತವೆ.
ಮತ್ತೊಂದೆಡೆ ಟಿಪ್ಪೂ ಸುಲ್ತಾನನ ಬಗ್ಗೆ ಆಕ್ರೋಶವು ಹಲವು ವೇದಿಕೆಗಳಲ್ಲಿ ಹೊರಹೊಮ್ಮುತ್ತಿದೆ. ರಂಗಾಯಣದ ನಿರ್ದೇಶಕರು ಟಿಪ್ಪು ನಿಜ ಕನಸುಗಳು ಎಂಬ ನಾಟಕವನ್ನು ರಚಿಸಿದ್ದು 250 ಪೊಲೀಸರ ರಕ್ಷಣೆಯೊಂದಿಗೆ ಪ್ರದರ್ಶನ ಮಾಡಿದ್ದಾರೆ. ಈ ನಾಟಕದಲ್ಲಿ ಟಿಪ್ಪು ಸುಲ್ತಾನನನ್ನು ಮತಾಂಧ, ಕ್ರೂರಿ ಎಂದು ಬಿಂಬಿಸಲಾಗಿದೆ. ( ಈ ಕಲ್ಪಿತ ಚಿತ್ರಣವು 18ನೆಯ ಶತಮಾನದ ಅಂತ್ಯದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಆಧಿಪತ್ಯ ಸಾಧಿಸಲು ಅತ್ಯವಶ್ಯವಾಗಿತ್ತು ಎಂದು ಇತಿಹಾಸಕಾರ ಮೈಕೆಲ್ ಸೊರೋಕೋ ಹೇಳುತ್ತಾರೆ). 1940 ಮತ್ತು 50ರ ದಶಕದಲ್ಲಿ ಹುಲಿಮನೆ ಸೀತಾರಾಮಶಾಸ್ತ್ರಿಗಳು ಬರೆದ ನಾಟಕದಲ್ಲಿ ಟಿಪ್ಪುವನ್ನು ಧೀರ-ಶೂರ ಎಂದು ಬಣ್ಣಿಸಲಾಗಿದ್ದು, ಮೈಸೂರಿನ ಪ್ರಪ್ರಥಮ ವಸಾಹತು ವಿರೋಧಿ ಸೇನಾನಿ ಎಂದು ಬಿಂಬಿಸಿರುವುದನ್ನು ಸ್ಮರಿಸುವಾಗ ನಾವು ಬಹುದೂರ ಕ್ರಮಿಸಿದ್ದೇವೆ ಎನಿಸುತ್ತದೆ.
ಇತಿಹಾಸದ ಉಲ್ಲಂಘನೆ:
ಇಂದು ಇತಿಹಾಸದ ಉಲ್ಲಂಘನೆ ಎಷ್ಟು ತೀವ್ರತೆಯನ್ನು ಪಡೆದಿದೆ ಎಂದರೆ ನಂಜೇಗೌಡ ಮತ್ತು ಉರಿಗೌಡ ಎಂಬ ಇಬ್ಬರು ಒಕ್ಕಲಿಗರು 1799ರಲ್ಲಿ ಟಿಪ್ಪು ಸುಲ್ತಾನನನ್ನು ಗಾಯಗೊಳಿಸಿ ಕೊಂದಿದ್ದಾರೆ ಎಂದು ಬಿಂಬಿಸುವ ವಿಡಿಯೋ ಎಲ್ಲೆಲ್ಲೂ ಹರಿದಾಡುತ್ತಿದೆ. ಈ ಇಬ್ಬರು ವೀರ ಸೇನಾನಿಗಳು ಈಸ್ಟ್ ಇಂಡಿಯಾ ಕಂಪನಿಯ ಸೇನೆಗೆ ಸೇರಿದ ಸೈನಿಕರೇ ಆಗಿದ್ದಲ್ಲಿ ಅವರನ್ನು ಹೀರೋಗಳಂತೆ ಪರಿಗಣಿಸಬೇಕೋ ಅಥವಾ ಬ್ರಿಟೀಷರು ಅವರ ಶಕ್ತಿಯನ್ನು ಧಿಕ್ಕರಿಸಿ ಬಲವಾಗಿ ವಿರೋಧಿಸಿದ್ದ ಭಾರತದ ಒಂದು ಪ್ರಾಂತ್ಯದಲ್ಲಿ ಇನ್ನೂ ಗಟ್ಟಿಯಾಗಿ ತಳವೂರಲು ನೆರವಾದ ದೇಶ ವಿರೋಧಿಗಳೆಂದು ಪರಿಗಣಿಸಬೇಕೋ ?
ಇಂದು ಗತಕಾಲವು ಅಪಾಯಕಾರಿ ನೆಲೆಯಾಗಿದ್ದು, ವೃತ್ತಿಪರ ಇತಿಹಾಸಕಾರರು ಇದನ್ನು ದಾಟಿ ಹೋಗಲು ಹಿಂಜರಿಯುತ್ತಿದ್ದಾರೆ. ನಮ್ಮ ನಿತ್ಯ ಜೀವನದಲ್ಲಿ ಎದುರುಗಾಣುವ ಅನಗತ್ಯ ವಸ್ತುಗಳ ಹಾಗೆಯೇ ನಮ್ಮ ಸುತ್ತಲೂ ಕ್ಷಿಪಣಿಗಳಂತೆ ಬಳಸಲಾಗುತ್ತಿರುವ ಇತಿಹಾಸದ ತುಣುಕುಗಳಿಗೆ ನಾವೂ ಒಗ್ಗಿಕೊಳ್ಳಬೇಕಿದೆ. ಈ ಅನಿಶ್ಚಿತ ಭವಿಷ್ಯದೊಂದಿಗೆ, ಅನುಕೂಲ ಇದ್ದವರು ದೂರ ದೇಶಗಳಿಗೆ ಸಂಶೋಧನೆಗಾಗಿ ಹೋಗಬಹುದು, ಉತ್ತಮ ಆತಿಥ್ಯವುಳ್ಳ ಐರ್ಲೆಂಡ್ಗೆ ಹೋಗಬಹುದು ಅಥವಾ ಬ್ರಿಟೀಷ್ ಲೈಬ್ರರಿಯಂತಹ ಸುರಕ್ಷಿತ ತಾಣಗಳನ್ನು ಆಶ್ರಯಿಸಬಹುದು. (ಟಿಪ್ಪು ಕುರಿತ ಬಹಳಷ್ಟು ಗ್ರಂಥಗಳು ಇಲ್ಲಿ, ಅವನ ಮಾಜಿ ಶತ್ರುಗಳ ಕೈಯ್ಯಲ್ಲಿ ಸುರಕ್ಷಿತವಾಗಿದೆ-ನವ ಭಾರತದಲ್ಲಿ ಆಕ್ರಮಣದಿಂದಲೂ ತಪ್ಪಿಸಿಕೊಂಡಿದೆ.).ಅನುಕೂಲ ಇಲ್ಲದವರು ಪ್ರಸಿದ್ಧ ಚಾರಿತ್ರಿಕ ತಾಣಗಳಲ್ಲಿರುವ ಕಲ್ಪನಾತ್ಮಕ ಪ್ರವಾಸಿ ಮಾರ್ಗದರ್ಶಕರೊಡನೆ ಸೇರಿಕೊಂಡು ಪುರಾತನ ಕಾಲದಲ್ಲಿ ಮನುಷ್ಯರು 35 ಅಡಿ ಎತ್ತರ ಇರುತ್ತಿದ್ದರು ಎಂದು ಪ್ರತಿಪಾದಿಸಬಹುದು. (ಲೇಪಾಕ್ಷಿಯಲ್ಲಿ ಮಾರ್ಗದರ್ಶಿಯೊಬ್ಬರು, ಸೀತೆಯ ಒಂದು ಪಾದ ಏಕೆ ಆರು ಅಡಿ ಉದ್ದ ಇದೆ ಎಂದು ಕೇಳಿದ್ದಕ್ಕೆ ಹೀಗೆ ಹೇಳಿದ್ದರು). ಕನಿಷ್ಟ ಇದರಿಂದ ನಾವು ಯಾವುದೇ ಜನರಿಗೆ, ರಚನೆಗಳಿಗೆ ಹಾನಿ ಉಂಟುಮಾಡದೆ ಇರಬಹುದು.
( ಮೂಲ ಲೇಖಕಿ ಜಾನಕಿ ನಾಯರ್- ಜೆಎನ್ಯು ಇತಿಹಾಸ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕರು )
ಟಿಪ್ಪಣಿ :
ಕೆಂಪೇಗೌಡ ಇದ್ದರು ಯಾವ ಬಗೆಯ ಬಟ್ಟೆ ಧರಿಸುತ್ತಿದ್ದರು – ಇದು ತಮಾಷೆಯ ಪ್ರಶ್ನೆಯಾಗುತ್ತದೆ. ಒಬ್ಬ ನಾಡಪ್ರಭುವಾಗಿದ್ದವನು ಮತ್ತು ಆಗಿನ ಕಾಲದ ವಿಜಯನಗರದ ದರ್ಬಾರಿನಲ್ಲಿ ಕಾಣಿಸಿಕೊಂಡವನು. ಆಸ್ಥಾನದ ಶಿಸ್ತಿನಂತೆಯೇ ದುಸ್ತು ಧರಿಸಿರಬೇಕಾಗುತ್ತದೆ. ಅಂದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಇದೆ ತರಹೆ ಇದ್ದಿರಬೇಕು. ಇದು ಆಗಿನ ಕಾಲದ ಫ್ಯಾಶನ್ . ಇದರ ಸುಳಿವು ನಮಗೆ ಸಿಗುವುದು ಬೆಂಗಳೂರಿನ ಹತ್ತಿರದಲ್ಲಿರುವ ಲೇಪಾಕ್ಷಿಯಲ್ಲಿ.
ಅಲ್ಲಿ ವಿಪುಲವಾದ ಚಿತ್ರಗಳನ್ನು ಬರೆದಿದ್ದಾರೆ. ವಿಜಯನಗರದ ಅರಸ ಅಚ್ಚುತರಾಯನ ಅಧಿಕಾರಿಗಳಾಗಿದ್ದ ವೀರಣ್ಣ ಮತ್ತು ವಿರೂಪಣ್ಣರವರು ದೇವಸ್ಥಾನ ಕಟ್ಟಿಸಿ ತಮ್ಮ ಚಿತ್ರಗಳನ್ನೂ ಬರೆಸಿದ್ದಾರೆ . ಇದೆ ಕಾಲದಲ್ಲೇ ಕೆಂಪೇಗೌಡನೂ ಇದ್ದನು. ಹಾಗಾಗಿ ವೀರಣ್ಣ, ವಿರೂಪಣ್ಣ ರವರಂತೆಯೇ ಉನ್ನತ ಅಧಿಕಾರದ ದುಸ್ತು ಇದ್ದಿರಬೇಕೆಂದು ಭಾವಿಸಬಹುದು.
ಶಿವಗಂಗೆ ಮತ್ತು ಹಲಸೂರಿನ ದೇವಸ್ಥಾನಗಳಲ್ಲಿ ಭಕ್ತ ವಿಗ್ರಹಗಳನ್ನು ಕೆಂಪೇಗೌಡನದೆಂದು ತೋರಿಸುತ್ತಾರೆ. ಇದು ಖಾಸಗಿ ಬಟ್ಟೆ ಧರಿಸಿರುವ ಚಿತ್ರ ಅಧಿಕಾರಿಯಾಗಿ ಅಲ್ಲ. ಲೇಪಾಕ್ಷಿಯ ವೀರಣ್ಣ ವಿರೂಪಣ್ಣರವರ ಚಿತ್ರ ಇಲ್ಲಿ ಕೊಡಲಾಗಿದೆ. ಕೆಂಪೇಗೌಡರೂ ಸಹ ಇದೇ ಬಗೆಯಲ್ಲಿ ಬಟ್ಟೆ ಧರಿಸಿದ್ದಿರಬಹುದು .
( ಅನುವಾದಕ)
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka