1 ಗಂಟೆಯಲ್ಲಿ ಪರಿಹರಿಸಬಹುದಿದ್ದ ಪ್ರಕರಣಕ್ಕೆ 28 ವರ್ಷ ಕಾಯಬೇಕಾಯಿತು | ಹತ್ಯೆಗೀಡಾಗಿದ್ದ ಸಿಸ್ಟರ್ ಅಭಯ ಸಹೋದರ ಬೇಸರ
ತಿರುವನಂತಪುರಂ: ಸಿಸ್ಟರ್ ಅಭಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಕೋರ್ಟ್, ಆರೋಪಿಗಳಾದ ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ಅಪರಾಧಿಗಳು ಎಂದು ತೀರ್ಪು ನೀಡಿದೆ. 28 ವರ್ಷಗಳ ನಂತರ ಅಂತಿಮವಾಗಿ ಸಿಸ್ಟರ್ ಅಭಯ ಅವರಿಗೆ ನ್ಯಾಯದೊರಕಿದೆ. ಈ ಸಂದರ್ಭದಲ್ಲಿ ಸಿಸ್ಟರ್ ಅಭಯ ಅವರ ಸಹೋದರ ಬಿಜು ಥೋಮಸ್ ತೀರ್ಪಿನ ಸಂಬಂಧ ಮಾಧ್ಯಮಗಳಿ ಪ್ರತಿಕ್ರಿಯಿಸಿದ್ದಾರೆ.
ಒಂದು ಹಂತದಲ್ಲಿ ಪ್ರಕರಣಕ್ಕೆ ಸಾಕ್ಷಿಯೇ ಇಲ್ಲ, ಆಧಾರವೇ ಇಲ್ಲ ಎನ್ನುವಂತಾಗಿತ್ತು. ಆದರೆ ಅಂತಿಮವಾಗಿ ನ್ಯಾಯದೊರಕಿದೆ. ಚರ್ಚ್ ಮತ್ತು ಸಮುದಾಯದಲ್ಲಿ ಬಹಳಷ್ಟು ಜನರು ನ್ಯಾಯಕ್ಕಾಗಿ ಕಾಯುತ್ತಿದ್ದರು. ಈ ತೀರ್ಪು ಎಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ನಮಗೆ ನ್ಯಾಯ ದೊರೆಯುವ ಬಗ್ಗೆ ಅನುಮಾನವಿತ್ತು. ಕಳೆದ ವರ್ಷವೂ ನಮಗೆ ಇದೇ ಅನುಭವವಾಗಿದ್ದರಿಂದ ನಮಗೆ ಬಹಳ ಚಿಂತೆ ಇತ್ತು. ಆದರೆ ದೇವರು ಮಧ್ಯಪ್ರವೇಶಿಸಿದ್ದಾರೆ. ಕೇವಲ 1 ಗಂಟೆಯಲ್ಲಿ ಪರಿಹರಿಸಬಹುದಿದ್ದ ಪ್ರಕರಣಕ್ಕೆ 28 ವರ್ಷಗಳ ಕಾಲ ಕಾಯಬೇಕಾಯಿತು ಎಂದು ಬಿಜು ಥೋಮಸ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಸ್ಟರ್ ಅಭಯ ಹತ್ಯೆಯಲ್ಲಿ ಫಾದರ್ ಥಾಮಸ್ ಕೊಟ್ಟೂರು, ಸಿಸ್ಟರ್ ಸೆಫಿ ಅಪರಾಧಿಗಳು
ಸಿಸ್ಟರ್ ಅಭಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ನಾಳೆ ಅಪರಾಧಿಗಳಾದ ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿಗೆ ಶಿಕ್ಷೆ ವಿಧಿಸಲಾಗುವುದು. ಪ್ರಕರಣದಲ್ಲಿ 49 ಸಾಕ್ಷಿಗಳಿದ್ದು, ಅಂತಿಮವಾಗಿ ಸಿಸ್ಟರ್ ಅಭಯಾ ಅವರಿಗೆ ನ್ಯಾಯದೊರಕಿದೆ.
ಸ್ಥಳೀಯ ಪೊಲೀಸರ ತನಿಖೆ ಹಾಗೂ ರಾಜ್ಯಮಟ್ಟದ ಪೊಲೀಸರ ತನಿಖೆಯಲ್ಲಿ ಸಿಸ್ಟರ್ ಅಭಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗಿತ್ತು. ಈ ಪ್ರಕರಣದಲ್ಲಿ ಬಹಳಷ್ಟು ಪ್ರಭಾವಗಳನ್ನು ಬಳಸಲಾಗಿತ್ತು. ಆದರೆ, ಭಾರತೀಯ ಕಾನೂನಿನಲ್ಲಿ ನ್ಯಾಯ ಪಡೆಯಲು ಹಲವು ಅವಕಾಶಗಳಿರುವ ಕಾರಣ ಅಂತಿಮವಾಗಿ ಇಂದು ಸಿಸ್ಟರ್ ಅಭಯ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಶಿಕ್ಷೆಯಾಗಿದೆ.