ದೈವಾರಾಧನೆ ಬಗ್ಗೆ ಸಿನಿಮಾ ಮಾಡಿದ್ರೆ ತಪ್ಪಲ್ಲ, ರೀಲ್ಸ್, ವೇದಿಕೆಗಳಲ್ಲಿ ಪ್ರದರ್ಶನ ಮಾಡಿದ್ರೆ ತಪ್ಪೇ?
ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕಾಂತಾರ ಚಿತ್ರ ಪ್ರಸ್ತುತ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ದಾಖಲೆ ಬರೆಯುತ್ತಿದೆ. ಇದೇ ಸಂದರ್ಭದಲ್ಲಿ ಕಾಂತಾರ ಚಿತ್ರದಲ್ಲಿರುವ ತುಳುನಾಡಿನ ದೈವದ ಪಾತ್ರವನ್ನು ಸಾಕಷ್ಟು ಜನರು ಅನುಕರಣೆ ಮಾಡುವುದು, ರೀಲ್ಸ್ ಗಳನ್ನು ಮಾಡುತ್ತಿರುವುದು ಆಗಾಗ ವಿವಾದಕ್ಕೀಡಾಗುತ್ತಿದೆ.
ಇದೇ ವೇಳೆ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು, ದೈವದ ಪಾತ್ರವನ್ನು ರೀಲ್ಸ್ ಮಾಡುವುದು, ಅನುಕರಣೆ ಮಾಡುವುದು, ಇಲ್ಲವೇ ವೇದಿಕೆಗಳ ಮೇಲೆ ಅನುಕರಣೆ ಮಾಡುವುದು ಸರಿಯಲ್ಲ, ಇದರಿಂದ ನಮ್ಮಂತಹ ಭಕ್ತರ ಮನಸ್ಸಿಗೆ ನೋವಾಗುತ್ತದೆ, ದೈವಾರಾಧಕರ ಮನಸ್ಸಿಗೂ ಘಾಸಿ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ದೈವಾರಾಧನೆಯ ಕುರಿತು ಸಿನಿಮಾ ಮಾಡಿದ್ರೆ ತಪ್ಪಲ್ಲ, ಆದ್ರೆ, ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು, ರೀಲ್ಸ್ ಮಾಡುವುದು ತಪ್ಪಾಗುತ್ತದೆಯೇ? ಹಾಗಿದ್ರೆ ರಿಷಬ್ ಶೆಟ್ಟಿ ಅವರು ದೈವದ ಕುರಿತು ಸಿನಿಮಾ ಮಾಡಿದ್ದಾರೆ, ದೈವದ ವೇಷ ಧರಿಸಿ ಅನುಕರಿಸಿದ್ದಾರೆ ಇದು ದೈವಕ್ಕೆ ಮಾಡುವ ಅಪಚಾರ ಅಲ್ಲವೇ? ಅನ್ನೋ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.
ದೈವಾರಾಧನೆಯ ಬಗ್ಗೆ ಯಾರಾದ್ರೂ ಅಸಭ್ಯವಾಗಿಯೋ, ಅವಹೇಳನಾಕಾರಿಯಾಗಿಯೋ ಮಾತನಾಡಿದ್ರೆ ಅಥವಾ ವ್ಯಂಗ್ಯವಾಡುವನ್ನು ವಿರೋಧಿಸಬಹುದು, ಆದ್ರೆ, ರೀಲ್ಸ್ ಮಾಡಬಾರದು, ವೇದಿಕೆಗಳಲ್ಲಿ ಪ್ರದರ್ಶನ ಮಾಡ ಬಾರದು ಎಂದು ದೈವಾರಾಧನೆಯ ವಿಷಯದಲ್ಲೇ ಸಿನಿಮಾ ಮಾಡಿರುವ ರಿಷಬ್ ಶೆಟ್ಟಿ ಅವರು ಹೇಳುತ್ತಿರುವುದು ಎಷ್ಟು ಸರಿ ಅನ್ನೋ ಪ್ರಶ್ನೆಗಳು ಇದೀಗ ಕೇಳಿ ಬಂದಿವೆ.
ದೈವದ ವೇಷ ಧರಿಸಿ ರೀಲ್ಸ್ ಮಾಡಿದ ಹೆಣ್ಣುಮಗಳೊಬ್ಬಳು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ, ತಪ್ಪು ಕಾಣಿಕೆ ಕಟ್ಟಿದರೆ, ಇತ್ತ ದೈವದ ಹೆಸರಿನಲ್ಲಿ ಸಿನಿಮಾ ಮಾಡಿದ ರಿಷಬ್ ಶೆಟ್ಟಿ ಅವರು ಧರ್ಮಸ್ಥಳ ಕ್ಷೇತ್ರದಲ್ಲಿ ಸನ್ಮಾನ ಪಡೆದು ಗೌರವಕ್ಕೆ ಪಾತ್ರರಾದರು. ದೈವದ ಕಥೆಯ ಸಿನಿಮಾ ದೇಶಾದ್ಯಂತ 400 ಕೋಟಿ ಸಂಪಾದನೆ ಮಾಡಿದೆ. ಆದ್ರೆ ದೈವಾರಾಧಕರು ತುಳುನಾಡು ಬಿಟ್ಟು ಹೊರಗೆ ಹೋಗಿ ದೈವರಾಧನೆ ಮಾಡುತ್ತಾರೆ ಎಂದರೆ, “ದೈವದ ಹೆಸರಿನಲ್ಲಿ ದುಡ್ಡು ಮಾಡುತ್ತಿದ್ದಾರೆ” ಎಂದು ಕೆಟ್ಟ ಹೆಸರು ಪಡೆಯುವ ಸ್ಥಿತಿ ಇದೆ ಎನ್ನುವ ಚರ್ಚೆಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka