ಕರ್ನಾಟಕದಲ್ಲಿ ದಲಿತ  ಮುಖ್ಯಮಂತ್ರಿ! - Mahanayaka
10:21 AM Thursday 12 - December 2024

ಕರ್ನಾಟಕದಲ್ಲಿ ದಲಿತ  ಮುಖ್ಯಮಂತ್ರಿ!

dalith cm in karnataka
05/12/2022

ಭಾರತ ದೇಶದಲ್ಲಿ ಅಥವಾ ಕರ್ನಾಟಕ ರಾಜ್ಯದಲ್ಲಿ  ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ  ದೇಶದ ಮತ್ತು  ರಾಜ್ಯದ ಜನ ನಾಯಕರುಗಳಿಗೆ ದಲಿತರ ಬಗ್ಗೆ ಅಪಾರವಾದ ಕಾಳಜಿ ಎಲ್ಲಿಲ್ಲದೆ ಉಕ್ಕಿ ಬಂದುಬಿಡುತ್ತದೆ.  ಅಂತಹ ಅದೆಷ್ಟೋ ಘಟನೆಗಳು, ಘೋಷಣೆಗಳು,  ದಲಿತರ  ಕಾಳಜಿಗಳ ಬಗೆಗಿನ ಹೇಳಿಕೆಗಳು ದಿನ ನಿತ್ಯ ದಿನಪತ್ರಿಕೆಗಳಲ್ಲಿ,  ಸಾಮಾಜಿಕ ಜಾಲ ತಾಣಗಳಲ್ಲಿ ನೋಡುತ್ತಲೇ ಇದ್ದೇವೆ.  ದಲಿತರ ಬಗೆಗಿನ ಕಾಳಜಿಗಳು ಒಂದು ಕಡೆಯಾದರೆ,  ಅಯ್ಯೋ ಪಾಪ ದಲಿತರು ರೀ, ಮುಸಲ್ಮಾನರಿಗೇಕೆ ರಾಜ್ಯಾಧಿಕಾರ  ಎಂದು ಮರುಕದ ಮಾತುಗಳನ್ನು ಹಾಡುವ ಬೇಜವಾಬ್ದಾರಿ ನಾಯಕರುಗಳು ನಮ್ಮ ಮುಂದೆಯೇ ಇದ್ದಾರೆ,

ರಾಜಕಾರಣಿಗಳಿಗೆ ಮೊದಲು ಅರ್ಥವಾಗಬೇಕಾಗಿರುವುದು ಭಾರತ ದೇಶ ಪ್ರಜಾಪ್ರಭುತ್ವ ದೇಶವಾಗಿದ್ದು  ಭಾರತೀಯ ಪ್ರಜೆಗಳಾದ ನಾವೆಲ್ಲರೂ  ಈ ದೇಶದಲ್ಲಿ ಸರ್ವಾನುಮತದಿಂದ ಬದುಕಬೇಕಾಗಿದೆ,  ಈ ದೇಶದ ದಲಿತನಿಗೂ ಒಂದೇ ಓಟಿನ ಹಕ್ಕಿದೆ,  ಈ ದೇಶದ ಇತರೆ ಮೆಲ್ ವರ್ಗಗಳೆಂದು ಹೇಳಿಕೊಳ್ಳುವವರಿಗೂ ಅಥವಾ ದೇಶದ ಪ್ರಧಾನಿಗೂ  ಒಂದೇ ಓಟಿನ ಹಕ್ಕಿದೆ,  ಹಾಗಾಗಿ  ಇವರು  ಯಾರಿಗೂ ದಲಿತರ ಓಟಿನ ರಾಜಕಾರಣ ಬಗ್ಗೆ, ಮಂತ್ರಿ, ಪದವಿಗಳ ಬಗ್ಗೆ ಮಾತನಾಡಲು ಅರ್ಹರಲ್ಲವೆನ್ನುವುದು ಪ್ರಜ್ಞಾವಂತರ ನಿಲುವು.

ಈ ನಾಡಿನ ರಾಜಕಾರಣಿಗಳಿಗೆ ಒಕ್ಕಲಿಗರ ಮತಗಳು ಬೇಕಾದರೆ  ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿಸುವುದು,  ಕುವೆಂಪುರವರ ಕಾವ್ಯವಾಚನ ಮಾಡಿಸುವುದನ್ನು ಹಮ್ಮಿಕೊಳ್ಳುತ್ತಾರೆ. ಹಾಗೆಯೇ   ಲಿಂಗಾಯಿತರ ಓಟು ಬೇಕಾದಾಗ  ಮಠಗಳಿಗೆ ಮಾನ್ಯತೆ, ದೇಣಿಗೆ, ಬಸವಣ್ಣನ ಹೆಸರಿನಲ್ಲಿ ವಚನ ಸಮ್ಮೇಳನ ಇದು ಒಂದು ಕೆಡೆಯಾದರೆ, ಕುರುಬರ ಓಟಿಗಾಗಲಿ ಕನಕ ಭವನ, ಕುರುಬರ ನಾಯಕರೇ ಮುಂದಿನ ಮುಖ್ಯಮಂತ್ರಿ ಎಂತೆಲ್ಲಾ ಹೇಳಿಕೆಗಳು ಪ್ರಾರಂಭವಾಗುತ್ತವೆ. ಹೀಗೆ  ಜಾತಿಯ ಆಧಾರದ ಮೇಲೆ ಪ್ರಚಾರ ಮಾಡುವುದು,  ಪ್ರಣಾಳಿಕೆ ಹೊರಡಿಸುವುದೇ ಇಂದಿನ ರಾಜಕೀಯ ತಂತ್ರಗಾರಿಕೆಯಾಗಿದೆ. ಇದು ಪ್ರತೀ ಜಾತಿಯ ಜನಾಂಗದ  ನಾಯಕರಿಗೂ ಅರ್ಥವಾಗಬೇಕಾದ ಅನಿವಾರ್ಯತೆ ಕೂಡ ಇದೆ. ಜಾತಿಗಳ ಹೆಸರಿನಲ್ಲಿ ಕಿತ್ತಾಡುತ್ತಾ ಅಧಿಕಾರಕ್ಕಾಗಿ ಒಬ್ಬರಿಗೊಬ್ಬರು ಕಚ್ಚಾಡುವ ಸ್ಥಿತಿ ನಿರ್ಮಾಣ ಮಾಡಿವೆ. ಆದರೆ  ಇಂದಿನ ರಾಜಕೀಯ ಪಕ್ಷಗಳು ಈ ದೇಶದಲ್ಲಿ ಕೇವಲ ಶೇ  3.5%  ರಷ್ಟಿರುವ ಅಲ್ಪಸಂಖ್ಯಾತ ಬ್ರಾಹ್ಮಣರು ಯಾವುದೇ  ಹೋರಾಟವನ್ನು ಮಾಡದೆ, ಕಚ್ಚಾಡದೇ, ದೇಶದ ಸಂಪತ್ತಿನಲ್ಲಿ, ಅಧಿಕಾರದಲ್ಲಿ, ರಾಜಕೀಯ ರಂಗದಲ್ಲಿ ಶೇ 97% ಸವಲತ್ತುಗಳನ್ನು ಅನುಭವಿಸುತ್ತಾ ಬಂದಿದ್ದಾರೆ.  ಇನ್ನಾದರೂ ಅರ್ಥವಾಗಬೇಕಿದೆ ಈ ಜಾತೀವಾದಿ ರಾಜಕಾರಣಿಗಳಿಗೆ.

ದಲಿತರು ಇನ್ನು ಮುಂದೆ ಈ ದೇಶವನ್ನು ಆಳಲು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಾರೆ,  ದಲಿತರೇ ಮುಂದಿನ ಮುಖ್ಯಮಂತ್ರಿ, ಮುಂದಿನ ಪ್ರಧಾನ ಮಂತ್ರಿ ಎಂತೆಲ್ಲಾ ಗಂಟಾಘೋಷವಾಗಿ ಭಾಷಣ ಮಾಡುವ ಎಲ್ಲಾ ನಾಯಕರಿಗೂ ಒಂದು ವಿಚಾರ ಅರ್ಥವಾಗಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ದಲಿತರ ಸರಣಿಯ  ಕಗ್ಗೊಲೆ,  ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ, ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ,  ಶಾಲೆಗಳಲ್ಲಿ ದಲಿತ ಮಕ್ಕಳಿಂದ ಟಾಯ್ಲೆಟ್ ಶುಚಿತ್ವದ ಕೆಲಸ, ಅಂತರ್ ಜಾತಿಯ ವಿವಾಹವಾದವರಿಗೆ ಊರಿನಿಂದ ಬಹಿಷ್ಕಾರ, ದೇವರ ಕೋಲು ಮುಟ್ಟಿದ್ದಕ್ಕೆ ದಂಡ,  ದಲಿತ ವಿದ್ಯಾರ್ಥಿಗಳ ನಿಲಯಗಳಲ್ಲಿ ನೀಡುವ ಊಟದ ಭತ್ಯೆ ಈ ನಾಡಿನ/ದೇಶದ ಕಾರಾಗೃಹದಲ್ಲಿರುವ ಖದೀಮರ ಕರ್ಚಿಗಿಂತಲೂ ಕಡಿಮೆ.  ಇವೆಲ್ಲಾ ಇವತ್ತಿನವರೆವಿಗೂ ಜೀವಂತವಾಗಿಯೇ ಇವೆ.  ಇವುಗಳು ಇವರಿಗೆ  ಕಾಣಲಿಲ್ಲವೇ ಅಥವಾ ಸರಿ ಮಾಡುವ ಮನಸ್ಸಿಲ್ಲವೇ  ? ಇಂತಹವುಗಳು  ಕಂಡರು ಯಾಕೆ ಸುಮ್ಮನಾದಿರಿ ? ಅಂದು ಅವರ ಬಗ್ಗೆ ನಿಮಗೆ ಕಾಳಜಿ ಇರಲಿಲ್ಲವೇ ? ಇದನ್ನು ಮೊದಲು ಎಲ್ಲರ ಮುಂದೆ ಮಾತನಾಡಿ.  ಹೇಗೆ ಮಾತನಾಡಲು ಸಾಧ್ಯ  ಯಾಕೆಂದರೆ ಹೇಳಿಕೆ ಕೊಟ್ಟವರು ಯಾರೂ  ದಲಿತರೇ ಅಲ್ಲಾ,  ಮತ್ತೆಲ್ಲಿ ದಲಿತರ ನೋವುಗಳು ನಿಮಗೆ ಅರ್ಥವಾಗಬೇಕು.

ಮೀಸಲು ಕ್ಷೇತ್ರದಿಂದ ಗೆದ್ದ ನಾಯಕರುಗಳೇ ಇವುಗಳ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ಇರುವಾಗ ಇನ್ನು ನಿಮಗೆಲ್ಲಿಂದ ಬರಬೇಕು ಹೇಳಿ. ದಲಿತ ನಾಯಕರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಬೇಕೆಂದರು ನಿಮ್ಮ ಅನುಮತಿ ಬೇಕಾಗಿದೆ. ಅದಕ್ಕಾಗಿ ಮೀಸಲು ನಾಯಕರು ಬೇಟಿ ನೀಡಿದಾಗ  ಎಲ್ಲರ ಸಮ್ಮುಖದಲ್ಲಿ  ಮಾಧ್ಯಮಗಳಿಗೆ ಮುಖವಿಟ್ಟು ಮಾತನಾಡಿ ಎಲ್ಲರಿಗೂ ಸಮಾಧಾನ ಮಾಡಿ ಬರಲು ನೀವುಗಳು ಕಳುಹಿಸುವ ನಿಮ್ಮ ನಾಯಕರೇ ಹೊರತು ಅವರು ಯಾರು ಸ್ವತಂತ್ರವಾಗಿ ಹೇಳಿಕೆ ನೀಡುವವರಲ್ಲಾ. ದಲಿತರಲ್ಲಿ ಬಲಿತ ನಾಯಕರು  ನಿಮ್ಮ ಪಕ್ಷದಲ್ಲಿಯೇ ನಿಷ್ಠಾವಂತರಾಗಿ ದುಡಿಯುತ್ತಿದ್ದಾರೆಯೇ ಹೊರತು ಇವರಿಗೆ ಉನ್ನತ ಅಧಿಕಾರದ ಆಸೆಯೇ ಇಲ್ಲವೇನೋ ಅನಿಸುತ್ತಿದೆ.ಯಾಕೆಂದರೆ ಇವರುಗಳು ಯಾರು  ತನ್ನ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದವರಲ್ಲಾ. ಬೇರೆ  ಬೇರೆ ಪಕ್ಷದಲ್ಲಿ ನಿಷ್ಠರಾಗಿ ದುಡಿಯುತ್ತಿದ್ದು ಈಗಲೂ ತಮ್ಮ ತನವನ್ನು ಹಾಗೆಯೇ ಕಾಪಾಡಿಕೊಂಡು ಬರುವವರಾಗಿದ್ದಾರೆ.

ಇವರುಗಳಿಗೆ ಇಂತಹ ಆಲೋಚನೆಗಳು ಹೇಗೆ ಬರಲು ಸಾಧ್ಯವಾಗುತ್ತದೆ. ನಾನು  ಮುಖ್ಯಮಂತ್ರಿ,  ಪ್ರಧಾನಮಂತ್ರಿ, ಎಂದು  ಅವರುಗಳು ಹೇಗೆ  ಯೋಚಿಸಬೇಕಾಗಿದೆ. ದೇಶದಲ್ಲಿ ಓಟಿನ ಗುರುತಿನ ಚೀಟಿಯಲ್ಲಿ ನಡೆಯುತ್ತಿರುವ ಗೊಂದಲಗಳಂತೆ  ನಾಡಿನ ಬಲಿತ ಜಾತಿಯ ಒಬ್ಬ ನಾಯಕನೇ ನಾನು ದಲಿತನೆಂದು ಸ್ವಯಂಘೋಷಿಸಿಕೊಂಡು ಮುಖ್ಯಮಂತ್ರಿಯಾಗಬಹುದೇನೋ  ಕಾದು ನೋಡಬೇಕಾಗಿದೆ.

ಒಂದು ಕಡೆ ಸಂಸದರು ವೀರಾವೇಶವಾಗಿ  ಮಾತನಾಡಿದರೆ, ಮತ್ತೊಂದುಕಡೆ ಮಾಜಿ ಮುಖ್ಯಮಂತ್ರಿಗಳು ಮುಂದಿನ ಮುಖ್ಯ ಮಂತ್ರಿ ದಲಿತರೇ ಎಂದು ಘೋಷಿಸುತ್ತಿದ್ದಾರೆ.  ಹಾಗಾದರೆ  ಇಷ್ಟು ವರ್ಷಗಳಲ್ಲಿ ರಾಜಕೀಯವೆಂಬುದು ಇವರ ವಂಶಸ್ಥರು ಕಟ್ಟಿದ ಬಂಗಲೆಗಳೇ?  ಅಥವಾ ಇವರುಗಳು ಇದರ ಮಾಲೀಕರಾಗಿದ್ದರೆ ?  ಅಥವಾ ದಲಿತರು ಇವರ ಮನೆಯ ಜೀತದಾಳುಗಳೇ, ಇವರಿಗೆ ಗೆಲ್ಲುವ ತಾಕತ್ತಿದ್ದರೆ  ಪಕ್ಷದ ಹೆಸರಲ್ಲಿ ಗೆಲ್ಲಲಿ  ಪಕ್ಷದ ಹೆಸರಲ್ಲಿ ಪ್ರಚಾರ ಮಾಡಲಿ,  ಅದು ಬಿಟ್ಟು ಜಾತಿಯ ಹೆಸರಲ್ಲಿ ಪ್ರಚಾರ ಮಾಡಿ ದೇಶದಲ್ಲಿ ಕೋಮು ಗಲಭೆಗಳಿಗೆ ಕಾರಣರಾಗಬಾರದು.  ನೀವು ಯಾರೂ ?ದಲಿತರಿಗೆ ಅಧಿಕಾರ ಕೊಡಲು ! ಈ ದೇಶದ ಮಣ್ಣಿನ ಮಕ್ಕಳೇ ದಲಿತರು. ಡಾ.ಸಿದ್ದಲಿಂಗಯ್ಯ ನವರ ಪ್ರತಿಭಟನೆಯ ಕಾವ್ಯ ನಿಮಗೆ ಅರಿವಾಗಬೇಕಿದೆ  ದಲಿತರು ಬರುವರು ದಾರಿಬಿಡಿ ದಲಿತರ ಕೈಗೆ ರಾಜ್ಯಾಕೊಡಿ ಎಂದದ್ದು, ಅಧಿಕಾರವೆಂಬುದು ದಲಿತರ ರಕ್ತ, ಇದು ಬಾಬಾಸಾಹೇಬರ ಶಕ್ತಿ ಎನ್ನುವುದನ್ನು ಮರೆಯಬೇಡಿ.  ನೀವ್ಯಾರು ದಲಿತರಿಗೆ ಸ್ಥಾನ ಮಾನಗಳನ್ನು ನೀಡಲು,  ನಿಮಗೆ ಮೊದಲು ಈಗೆ ಮಾತನಾಡುವ ಅರ್ಹತೆ, ಯೋಗ್ಯತೆ ಇದೆಯಾ ಒಮ್ಮೆ ಯೋಚಿಸಿ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕೇವಲ 35 ಕ್ಷೇತ್ರಗಳಲ್ಲಿ ಜಯಗಳಿಸದಿದ್ದರೂ ಮುಂದಿನ ಮುಖ್ಯಮಂತ್ರಿ ನಾವೇ ಎಂದು ಗಂಟಾಘೋಷವಾಗಿ  ಹೇಳಿಕೊಳ್ಳುತ್ತದೆ. ಆದರೆ 51 ನಾಯಕರು ಮೀಸಲು ಕ್ಷೇತ್ರಗಳಿಂದ ಗೆದ್ದು ಬಂದರು  ನಮ್ಮದೇ ಸರ್ಕಾರ ಎಂದು ಘೋಷಣೆ ಮಾಡುವ ಶಕ್ತಿ ಯಾವ ನಾಯಕರಲ್ಲಿಯೂ ಇಲ್ಲಾ, ಒಮ್ಮೆ  ದಲಿತರು  ಇಡೀ ರಾಜ್ಯ ಅಥವಾ ದೇಶದಾದ್ಯಂತ ರಾಜಕೀಯ ಚಳುವಳಿ ಮಾಡಿದ್ದೆ ಆದರೆ ನೀವುಗಳು  ಮುಂದಿನ ಮುಖ್ಯಮಂತ್ರಿ ಯಾರು ಎಂದು ಘೋಷಣೆ ಮಾಡುವ ಸದ್ದೇ  ಇಲ್ಲವಾಗುತ್ತದೆ. ಇದು ಈ ದೇಶದ ಮೂಲ ನಿವಾಸಿಗಳ, ಮಣ್ಣಿನ ಮಕ್ಕಳ ಶಕ್ತಿ.  ಒಮ್ಮೆ ದಲಿತ ನಾಯಕರಲ್ಲಿ ರಾಜಕೀಯ ಸ್ವಾಭಿಮಾನ ಬಂದರೆ  ಇತರೆ  ಜನಾಂಗಗಳು ತರಗೆಲೆಗಳಂತೆ ಉದುರಬೇಕಾಗುತ್ತದೆ ? ಇದರ ಅರಿವೇ ಇಲ್ಲದವರಂತೆ ಹೇಳಿಕೆ ನೀಡುವ ನೀವು ಅಧಿಕಾರ ಹಿಡಿಯುವುದಿರಲಿ ರಾಜಕೀಯ ಮಾಡುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ದಲಿತರನ್ನು ಮೂಲೆ ಗುಂಪು ಮಾಡುವಲ್ಲಿ ಏನೆಲ್ಲಾ ಷಡ್ಯಂತ್ರಗಳನ್ನು ಕಳೆದ 75 ವರ್ಷಗಳ ಕಾಲ ನಡೆಸಿರಬಾರದು ಎನ್ನುವುದನ್ನು ಇಂದಿನ ದಲಿತ ಪ್ರಜ್ಞಾವಂತ ಯುವಕರು ಮತ್ತು ಮೀಸಲು ಕ್ಷೆತ್ರದ  ರಾಜಕೀಯ ನಾಯಕರು  ಅರಿಯಬೇಕಾಗಿದೆ.

ಆದರೂ ಇಂತಹ ಗುಲಾಮಿ ಮನಸ್ಥಿತಿ ಇವತ್ತಿಗೂ ದಲಿತ ನಾಯಕರ ರಾಜಕೀಯ ರಂಗದಲ್ಲಿ ಮುಂದುವರೆಯುತ್ತಲೇ  ಇದೇ.  ಅದಕ್ಕಾಗಿಯೇ ಈ ದೇಶದಲ್ಲಿ  ಒಬ್ಬ ದಲಿತ ಪ್ರಧಾನಿಯಾಗಲಿ ಅಥವಾ ರಾಜ್ಯದ ಮುಖ್ಯಮಂತ್ರಿಯಾಗಲಿ ಆಗಲು ಸಾಧ್ಯವಾಗಲಿಲ್ಲಾ.  ಇತ್ತೀಚಿನ ಬೆಳವಣಿಗೆಯ ಪ್ರಕಾರ  ಪಕ್ಷಗಳು ಹಲವಾರು  ಬದಲಾವಣೆಗಳನ್ನು ತಮ್ಮ ಪಕ್ಷಗಳಲ್ಲಿ ಮಾರ್ಪಡಿಸಲಾಗಿದೆ ,  ಒಂದು ಪಕ್ಷ  ದಲಿತರನ್ನು  ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ  ಆಯ್ಕೆಮಾಡಿದರೆ.  ಮತ್ತೊಂದು ಪಕ್ಷ  ದಲಿತರಿಗೆ  ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಹಾಗೆಯೇ  ಮುಖ್ಯಮಂತ್ರಿ ಆಕಾಂಕ್ಷಿ ಹಾಗೂ ಕುಟುಂಬ ರಾಜಕಾರಣದಲ್ಲಿ  ಛಲಬಿಡದ ನಾಯಕನಂತಿದ್ದ ಪಕ್ಷವೂ ಸಹ  ನಾವು ಅಧಿಕಾರಕ್ಕೆ ಬಂದರೆ  ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿದೆ.  ಹೇಗಿದೆ ಈ ರಾಜಕೀಯ ಪಕ್ಷಗಳ ದೊಂಬರಾಟ.?

ಅಂದು ಬಾಬಾಸಾಹೇಬರ  ಮಾತು  ಇವತ್ತಿಗೆ ಜ್ಞಾಪಕಕ್ಕೆ ಬರುತ್ತಿದೆ,  ಎಲ್ಲಿಯವರೆವಿಗೂ  ದಲಿತರು ರಾಜಕೀಯವಾಗಿ  ಮುಂದುವರೆಯುವುದಿಲ್ಲವೋ ಅಲ್ಲಿಯವರೆವಿಗೂ ದಲಿತರಿಗೆ ವಿಮೋಚನೆ ಸಾಧ್ಯವಿಲ್ಲವೆಂದು. ಇಂದು  ದಲಿತರು  ಹಾಗೂ ಮೀಸಲು ಕ್ಷೇತದ ನಾಯಕರು ಇವುಗಳನ್ನು ಅರಿಯಬೇಕಿದೆ.  ಬಾಬಾಸಾಹೇಬರ ಕನಸುಗಳನ್ನು ನನಸುಮಾಡುವ ಸಲುವಾಗಿಯಾದರೂ  ದಲಿತರಿಗೆ ಅಧಿಕಾರ ನೀಡದ ಪಕ್ಷಗಳನ್ನು ತೊರೆದು  ಎಲ್ಲರೂ ಕುಳಿತು ಚರ್ಚಿಸಿ  ಒಂದಾಗಿ  ರಾಜಕೀಯ ರಂಗವನ್ನು ಪ್ರವೇಶ ಮಾಡಿದರೆ ಬಹಳ ಒಳ್ಳೆಯದು ಎನ್ನಬಹುದು.  ಇಂದು ದೇಶದ ಯಾವುದೇ ರಾಜ್ಯವು ಸಹ  ದಲಿತರ  ಬಾಬಾಸಾಹೇಬರ  ಹೆಸರಿಲ್ಲದೆ  ಚುನಾವಣೆಯನ್ನು ಸ್ವರ್ದಿಸಲು ಸಾಧ್ಯವೇ ಇಲ್ಲಾ, ಆ ಕಾರಣಕ್ಕಾಗಿಯೇ  ದಲಿತರು ಮುಂದಿನ ಮುಖ್ಯಮಂತ್ರಿ,  ಪ್ರಧಾನ ಮಂತ್ರಿ ಎಂದು ಮೈಕಾಸುರನ ಮುಂದೆ  ವಿಲವಿಲನೆ ಒದ್ದಾಡುವವರಂತೆ  ನಾಟಕವಾಡುತ್ತಿದ್ದಾರೆ.

ಒಂದು ವಿಚಾರ ತಿಳಿಯಬೇಕಾಗಿದೆ, ದಲಿತರನ್ನು  ಬಿಟ್ಟರೆ ಈ ದೇಶದಲ್ಲಿ ಬೇರೆ ಯಾರಿಗೂ  ಪ್ರತ್ಯೇಕ ಕ್ಷೇತ್ರಗಳಿಲ್ಲಾ  ಹಾಗಾಗಿ ನಾವುಗಳೇ ಈ ದೇಶದ ರೂವಾರಿಗಳು ಎನ್ನುವ ಮನೋಭಾವನೆ ಈಗ ಎಲ್ಲರಲ್ಲಿಯೂ ಮೂಡುತ್ತಿದೆ. ಎಚ್ಚೆತ್ತ  ದಲಿತನ ನಿರ್ಭಯದ ಆರ್ಭಟ  ಶೋಷಕನ ತಾಯಿಯ ಗರ್ಭವನ್ನು ಕೆಣಕುತ್ತದೆ. ಇದು ಈ ದೇಶದ ಭೀಮನ ಮಕ್ಕಳಿಗಿರುವ  ತಾಕತ್ತು. ಆದರೂ ಇಂದಿನ ರಾಜಕೀಯ  ಪಕ್ಷಗಳು  ದಲಿತರನ್ನೇ  ಮುಂದಿನ ದೇಶದ ರೂವಾರಿಗಳು ಎನ್ನಲು  ಬಹುದೊಡ್ಡ ಇನ್ನೊಂದು ಪಿತೂರಿ ಎಂದರೆ  ದೇಶದಲ್ಲಿ ಈಗಾಗಲೇ ನಿರುದ್ಯೋಗ ಸಮಸ್ಯೆ , ಬಡತನ,  ಆರ್ಥಿಕ ಪರಿಸ್ಥಿತಿಯ ಕುಸಿತ,  ಸರ್ಕಾರಿ ಸಂಸ್ಥೆಗಳೆಲ್ಲಾ  ಸ್ವಾಯುತ್ತಾ ಹಾಗೂ  ಖಾಸಗೀಕರಣ,  ವಿದ್ಯಾಭ್ಯಾಸದಲ್ಲಿ ಅರಾಜಕತೆ, ಉದ್ಯೋಗ ಸೃಷ್ಟಿಯಲ್ಲಿ ವಿಳಂಭ, ಭೂಕಬಳಿಕೆ,  ಡಿ ನೋಟಿಫೈಡ್ ಹೆಸರಲ್ಲಿ ಅರಾಜಕತೆ. ಈಗೆ  ಈ ದೇಶದ ಬಹುಪಾಲು ಸಂಪತ್ತನ್ನು  ಲೂಟಿ ಮಾಡಿ ತನ್ನ  ಮಕ್ಕಳು ಮೊಮ್ಮಕ್ಕಳು  ಕೂತು ತಿಂದರು ಖಾಲಿಯಾಗದೆ,  5 ತಲೆಮಾರಿಗಾಗುವಷ್ಟು  ಸಂಪಾದಿಸಿ ಕ್ರೂಢೀಕರಿಸಿ  ದೇಶ ಆರ್ಥಿಕ, ಸಾಮಾಜಿಕ  ಸಂಕಷ್ಟದಲ್ಲಿದ್ದಾಗ  ದಲಿತರ ಕೈಲಿ ಅಧಿಕಾರ ಕೊಟ್ಟು ,  ಹಿಂದೆಯಿಂದ ಛೀಮಾರಿ ಹಾಕಿ  ನಗೆಪಾಟಲಿಗೆ ಈಡುಮಾಡುವ  ಎಲ್ಲಾ ಹುನ್ನಾರಗಳು  ಈ ಪಕ್ಷಗಳ ತೆವಲುಗಳು ಎಂದರೂ ತಪ್ಪಾಗಲಾರದು.

ಇಂತಹ ವಿಚಾರಗಳನ್ನು ಪ್ರಜ್ಞಾವಂತರು  ಅರಿತು  ಮುಂದಿನ ಚುನಾವಣೆಯಲ್ಲಿ  ಪಾಲ್ಗೊಳ್ಳುವ ಅನಿವಾರ್ಯತೆ ಬಂದೊದಗಿದೆ .  ದಲಿತರಿಲ್ಲದೆ  ಯಾರು ರಾಜಕೀಯ ಮಾಡಲು ಸಾಧ್ಯವೇ ಇಲ್ಲವೆನ್ನುವುದನ್ನು  ಮಾನ್ಯರು  ನೇರವಾಗಿ  ತಿಳಿಸಿಕೊಟ್ಟಿದ್ದಾರೆ. ದಲಿತರೇ ರಾಜಕೀಯ  ತೀರ್ಮಾನಗಳ ಕೇಂದ್ರ ಬಿಂದು ಎನ್ನುವುದು ಎಲ್ಲಾ ಜಾತಿ ಜನಾಂಗದ ನಾಯಕರಿಗೂ ತಿಳಿದ ವಿಚಾರವಾಗಿದೆ. ಒಮ್ಮೆ ದಲಿತರು  ಚುನಾವಣೆಯನ್ನು  ಬಹಿಷ್ಕಾರ ಮಾಡಿದ್ದಲ್ಲಿ  ಇಡೀ ರಾಜ್ಯವೇ ಏಕೆ, ಇಡೀ ದೇಶವೇ ತಲ್ಲಣಗೊಳ್ಳುತ್ತದೆ ಎನ್ನಬಹುದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ