ರಸ್ತೆಯಲ್ಲಿಯೇ ವೃದ್ಧನನ್ನು ಅಟ್ಟಾಡಿಸಿ ಕಚ್ಚಿದ ಬೀದಿನಾಯಿಗಳು | ನಾಯಿಗಳ ಭೀಕರ ದಾಳಿಯ ಬಳಿಕ ವೃದ್ಧ ದಾರುಣ ಸಾವು
ಕುಟ್ಟಿಪುರಂ: ಬೀದಿನಾಯಿಗಳ ದಾಳಿ ಕರ್ನಾಟಕದಲ್ಲಿ ಆಗಾಗ ಸುದ್ದಿಯಾಗುತ್ತಿತ್ತು. ಆ ಬಳಿಕ ಕರ್ನಾಟಕ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿತ್ತು. ಆದರೆ ಕೇರಳದಲ್ಲಿ ಇದೀಗ ಬೀದಿ ನಾಯಿಗಳ ಉಪಟಳ ಹೆಚ್ಚಳವಾಗಿದ್ದು, ವೃದ್ಧರೊಬ್ಬರನ್ನು ನಡು ರಸ್ತೆಯಲ್ಲಿ ಬೀದಿ ನಾಯಿಗಳು ಕ್ರೂರವಾಗಿ ಕಚ್ಚಿ ಕೊಂದು ಹಾಕಿದ ಘಟನೆ ಕೇರಳದ ಕುಟ್ಟಿಪುರ ಎಡಾಚಲಂ ಬಳಿಯಲ್ಲಿ ನಡೆದಿದೆ.
ವಡಕ್ಕಕ್ಕಲಂನ ಶಂಕರನ್ (65) ಮೃತ ದುರ್ದೈವಿಯಾಗಿದ್ದಾರೆ. ಮಂಗಳವಾರ ಸಂಜೆ 6 ಗೆ ಅವರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಅವರ ದೇಹದಾದ್ಯಂತ ಬೀದಿನಾಯಿಗಳು ಕ್ರೂರವಾಗಿ ಕಡಿದು, ಭೀಕರವಾಗಿ ಗಾಯಗೊಳಿಸಿದೆ. ಬೀದಿ ನಾಯಿಗಳ ಕ್ರೂರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳೀಯರು ಶಂಕರನ್ ಅವರನ್ನು ಕುಟ್ಟಿಪುರ ತಾಲೂಕು ಆಸ್ಪತ್ರೆಗೆ ಸಾಗಿಸಿದಾಗ, ಹೆಚ್ಚಿನ ಚಿಕಿತ್ಸೆಗಾಗಿ ತ್ರಿಶ್ಯೂರ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲು ಅಲ್ಲಿ ಸಲಹೆ ನೀಡಲಾಗಿದೆ. ತಕ್ಷಣವೇ ಅವರನ್ನು ತ್ರಿಶ್ಯೂರ್ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಸ್ಥಳೀಯರ ಪ್ರಕಾರ ಈ ರಸ್ತೆಯಾದ್ಯಂತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಬಹಳಷ್ಟು ಜನರನ್ನು ಅಟ್ಟಾಡಿಸಿಕೊಂಡು ಕಚ್ಚಲು ಬೀದಿನಾಯಿಗಳು ಬರುತ್ತಿವೆ. ಇಂದು ಒಬ್ಬರು ವೃದ್ಧರು, ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದಾರೆ. ತಕ್ಷಣವೇ ಸಂಬಂಧಪಟ್ಟವರು ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.