ಚರಿತ್ರೆ ರಂಗಭೂಮಿ ಮತ್ತು ಸಮಕಾಲೀನ ಸಮಾಜ
ಸಮಕಾಲೀನ ಸಿಕ್ಕು–ಸವಾಲುಗಳಿಗೆ ತೆರೆದುಕೊಳ್ಳಲು ರಂಗಭೂಮಿ ಸೃಜನಶೀಲವಾಗಿರುವುದು ಅಗತ್ಯ
- ನಾ ದಿವಾಕರ
ಮೈಸೂರಿನ ರಂಗಾಯಣ ಮತ್ತೊಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಲಿದೆ. ಈ ಬಾರಿಯ ಬಹುರೂಪಿಯ ಮೂಲ ವಸ್ತು “ ಭಾರತೀಯತೆ ” ಆಗಿದ್ದು, ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಸಿಕ್ಕುಗಳ ನಡುವೆ, ಭಾರತೀಯತೆ ಎನ್ನುವ ಪರಿಕಲ್ಪನೆಯೇ ವಿಭಿನ್ನ ವ್ಯಾಖ್ಯಾನ ಮತ್ತು ನಿರೂಪಣೆಗಳಿಗೆ ಒಳಗಾಗಿರುವುದರಿಂದ ರಾಷ್ಟ್ರೀಯ ರಂಗೋತ್ಸವವೂ ಸಹ ಇದೇ ಭಿನ್ನತೆಗಳ ನಡುವೆಯೇ ʼ ಭಾರತೀಯತೆ ʼ ಯ ವಿಭಿನ್ನ ಆಯಾಮಗಳನ್ನು ತೆರೆದಿಡಲಿದೆ. ರಾಜಕೀಯ ಪ್ರಾಬಲ್ಯ, ಅಧಿಕಾರಶಾಹಿಯ ಹೊಂದಾಣಿಕೆ, ಆಡಳಿತ ವ್ಯವಸ್ಥೆಯ ಸಾಂಸ್ಥಿಕ ನೆಲೆಗಳ ವ್ಯತ್ಯಯಗಳು ಹಾಗೂ ಪ್ರಸ್ತುತ ಸಂದರ್ಭದಲ್ಲಿ ಢಾಳಾಗಿ ಗೋಚರಿಸುವ ಸಾಂಸ್ಕೃತಿಕ ರಾಜಕಾರಣದ ಪಾರಮ್ಯ ಇವೆಲ್ಲವನ್ನೂ ಒಟ್ಟಾಗಿ ನೋಡಿದಾಗ, ಒಂದು ಸ್ವಾಯತ್ತ ಕಲಾ ಭೂಮಿಕೆಯಾಗಿರಬೇಕಾದ ರಂಗಾಯಣದಂತಹ ಸಂಸ್ಥೆ, ತನ್ನ ಮೂಲ ಆಶಯಗಳನ್ನು, ಅಂತಃಸತ್ವವನ್ನು ಉಳಿಸಿಕೊಂಡು ಮುನ್ನಡೆಯುವಂತೆ ಜಾಗ್ರತೆ ವಹಿಸುವ ಅನಿವಾರ್ಯತೆಯೂ ಎದುರಾಗಿದೆ.
ಭಾರತೀಯತೆ ಎನ್ನುವ ಒಂದು ಅಮೂರ್ತ ಕಲ್ಪನೆಯನ್ನು ಚಾರಿತ್ರಿಕವಾಗಿ ಒರೆಹಚ್ಚಿ ನೋಡುವುದಷ್ಟೇ ಅಲ್ಲದೆ, ಭಾರತದ ಪ್ರಾಚೀನ ಸಾಂಸ್ಕೃತಿಕ ನೆಲೆಗಳು, ಜನಪದೀಯ ಚೌಕಟ್ಟುಗಳು ಮತ್ತು ಸಾಮಾನ್ಯ ಜನಜೀವನದಲ್ಲಿನ ಸಾಮಾಜಿಕ-ಸಾಂಸ್ಕೃತಿಕ ವೈವಿಧ್ಯತೆಗಳ ನಡುವೆ ಇದು ಪರಾಮರ್ಶೆಗೊಳಪಡಬೇಕಿದೆ. ಇದಮಿತ್ತಂ ಎಂಬಂತೆ ʼಭಾರತೀಯತೆʼಯನ್ನು ಕಲ್ಪಿಸಿಕೊಂಡಾಗ, ನಮ್ಮ ಚಿಂತನಾ ಲಹರಿ ಯಾವುದೋ ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಿಲುಕಿ, ಹಲವು ಸಿಕ್ಕುಗಳ ನಡುವೆ ಪರದಾಡುವಂತಾಗುತ್ತದೆ. ಏಕೆಂದರೆ ಭಾರತ ಎನ್ನುವ ಭೌಗೋಳಿಕ ದೇಶವೇ ವೈವಿಧ್ಯತಾಪೂರ್ಣ ಸಾಂಸ್ಕೃತಿಕ ನೆಲೆಗಳ ಹೂರಣ. 21ನೆಯ ಶತಮಾನದಲ್ಲೂ ನಿತ್ಯಜೀವನದಲ್ಲಿ ತನ್ನದೇ ಆದ ಅಸ್ತಿತ್ವ ಮತ್ತು ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿರುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬಹುಮುಖಿ ನೆಲೆಗಳನ್ನೂ ಒಳಗೊಂಡಂತೆ, ಈ ಭೌಗೋಳಿಕ ದೇಶದ ಜನಸಾಮಾನ್ಯರ ಬದುಕಿನಲ್ಲಿ ಭಾರತೀಯತೆಯನ್ನು ಶೋಧಿಸಬೇಕಿದೆ. ಹಾಗೆಯೇ ಭಾರತೀಯತೆಯನ್ನು ಏಕಮುಖೀ ಮತಧಾರ್ಮಿಕ ನೆಲೆಗಳಿಂದ ಶೋಧಿಸಲು ಹೊರಟಾಗ ಉಂಟಾಗಬಹುದಾದ ಅಪಾಯಗಳನ್ನೂ ಸಹ ಗಮನದಲ್ಲಿಟ್ಟುಕೊಳ್ಳುವುದು ಅತ್ಯವಶ್ಯ.
ಈ ಹಿನ್ನೆಲೆಯಲ್ಲೇ ರಂಗಾಯಣದ ಬಹುರೂಪಿ ರಾಷ್ಟ್ರೀಯ ರಂಗೋತ್ಸವವನ್ನೂ ವಿಮರ್ಶೆಗೊಳಪಡಿಸಬೇಕಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಬಹು ವಿವಾದಿತ ʼಟಿಪ್ಪುವಿನ ನಿಜ ಕನಸುಗಳುʼ ಸಾಕಷ್ಟು ಸಂಚಲನ ಮತ್ತು ಪರ ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದ್ದು, ಇತಿಹಾಸವನ್ನು ನೋಡುವ ವಿಧಾನವನ್ನೇ ಬದಲಿಸುವ ಒಂದು ಹೊಸ ಚಿಂತನಾ ಕ್ರಮವನ್ನೂ ಹುಟ್ಟುಹಾಕಿದೆ. ಈ ನಾಟಕದ ವಸ್ತು, ವಿನ್ಯಾಸ ಮತ್ತು ಕಥಾ ಹಂದರ ಇವೆಲ್ಲವನ್ನೂ ಬದಿಗಿಟ್ಟು ನೋಡಿದಾಗಲೂ, ʼಭಾರತೀಯತೆʼಯ ವಸ್ತುವನ್ನೊಳಗೊಂಡ ಒಂದು ರಾಷ್ಟ್ರೀಯ ನಾಟಕೋತ್ಸವದಲ್ಲಿ ʼ ಟಿಪ್ಪುವಿನ ನಿಜ ಕನಸುಗಳು ʼ ಹೇಗೆ ಅನ್ವಯಿಸಿಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಕ ನೆಲೆಗಳು ಅಧಿಕಾರ ರಾಜಕಾರಣದ ಒಂದು ಭಾಗವಾಗಿ, ರಾಜಕೀಯ ತತ್ವ ಸಿದ್ಧಾಂತಗಳ ವಾಹಕಗಳಾಗಿ ಪರಿಣಮಿಸಿದಾಗ ಇಂತಹ ಅಪಸವ್ಯಗಳು ಸಹಜವಾಗಿಯೇ ತಲೆದೋರುತ್ತವೆ. ಬದಲಾಗುತ್ತಿರುವ ಭಾರತದಲ್ಲಿ ಸಾಂಸ್ಕೃತಿಕ ನೆಲೆಗಳಲ್ಲಿ ಸಂಭವಿಸುತ್ತಿರುವ ಇಂತಹ ಅಪಸವ್ಯಗಳ ನಡುವೆಯೇ, ರಂಗಭೂಮಿ ತನ್ನ ಅಂತಃಸತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಂತೂ ಎದುರಾಗಿದೆ.
ಕಲಾಭಿವ್ಯಕ್ತಿ ಮತ್ತು ಸೃಜನಶೀಲ ನೆಲೆಗಳು:
ಯಾವುದೇ ಪ್ರಕಾರದ ಸಾಹಿತ್ಯ ಮತ್ತು ಕಲೆ ಸೃಜನಶೀಲತೆಯನ್ನು ಕಳೆದುಕೊಂಡಷ್ಟೂ ಜಡವಾಗುತ್ತಲೇ ಹೋಗುತ್ತದೆ ಎನ್ನುವುದು ಇತಿಹಾಸ ನಿರೂಪಿತ ಸತ್ಯ. ಗತ ಕಾಲದ ಹೆಜ್ಜೆಗಳನ್ನು ಗುರುತಿಸಿಕೊಳ್ಳುತ್ತಲೇ ವರ್ತಮಾನದ ನೆಲೆಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳುತ್ತಾ ಭವಿಷ್ಯದೆಡೆಗೆ ಸಾಗುವ ಜೀವಂತಿಕೆಯನ್ನೊಳಗೊಂಡ ಮಾರ್ಗವನ್ನು ರೂಪಿಸುವ ಜವಾಬ್ದಾರಿ, ನೈತಿಕ ಹೊಣೆಗಾರಿಕೆ ಸಾಹಿತ್ಯಕ್ಕೆ ಇರುವಷ್ಟೇ ಪ್ರಮಾಣದಲ್ಲಿ, ಇನ್ನಿತರ ಕಲಾ ಪ್ರಕಾರಗಳಿಗೂ ಇರಬೇಕಾಗುತ್ತದೆ. ತಳಮಟ್ಟದ ಸಮಾಜವನ್ನೂ, ಅನಕ್ಷರಸ್ಥ ಸಮುದಾಯಗಳನ್ನೂ ಅತ್ಯಂತ ಸುಲಭವಾಗಿ ತಲುಪುವ ಅಭಿನಯ ಕಲೆ ಇಂತಹ ಒಂದು ಜವಾಬ್ದಾರಿಯನ್ನು ಘನತೆ ಗೌರವದೊಂದಿಗೆ ನಿರ್ವಹಿಸುತ್ತಾ ಬಂದಿರುವುದನ್ನು ಭಾರತದ ಚರಿತ್ರೆಯಲ್ಲೂ ಗಮನಿಸಬಹುದು. ಭಾರತದ ರಂಗಭೂಮಿಯ ಚರಿತ್ರೆಯೊಳಗೆ ಇಣುಕಿ ನೋಡಿದಾಗ, ಮಧ್ಯಕಾಲೀನ ಯುಗದಿಂದ ಆಧುನಿಕೋತ್ತರ ಘಟ್ಟದವರೆಗೆ ರಂಗಭೂಮಿಯ ವಿಶಿಷ್ಟ ಪ್ರಯೋಗಗಳು ಜನಸಾಮಾನ್ಯರ ನಡುವೆ ಚಿಂತನ-ಮಂಥನದ ಅಲೆಗಳನ್ನು ಸೃಷ್ಟಿಸುತ್ತಲೇ ಬಂದಿರುವುದು ಸ್ಪಷ್ಟವಾಗುತ್ತದೆ. ಇತರ ಎಲ್ಲಾ ಕಲಾ ಪ್ರಕಾರಗಳಿಗೆ ಮತ್ತು ಅಭಿನಯ ಕಲೆಯ ವಿಭಿನ್ನ ನೆಲೆಗಳಿಗೆ ಹೋಲಿಸಿದಾಗ ರಂಗಭೂಮಿಗೆ ತನ್ನದೇ ಆದ ಪ್ರತಿಷ್ಠಿತ ಸ್ಥಾನ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಏಕೆಂದರೆ ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ಅಂತರ್ಗತ ಹಾಗೂ ಬಹಿರ್ಜಾತ ನೆಲೆಗಳನ್ನೂ ಏಕ ಕಾಲಕ್ಕೆ, ಪರಿಣಾಮಕಾರಿಯಾಗಿ ತಲುಪುವ ಸಾಧ್ಯತೆಯನ್ನು ರಂಗಭೂಮಿ ಅಥವಾ ದೃಶ್ಯಕಲೆಗಳು ಹೊಂದಿರುತ್ತವೆ. ಹಾಗಾಗಿಯೇ ಇತರ ಎಲ್ಲ ಕಲಾ ಪ್ರಕಾರಗಳಿಗೆ ಹೋಲಿಸಿದಾಗ, ದೃಶ್ಯಕಲೆಯಲ್ಲಿ, ವಿಶೇಷವಾಗಿ ರಂಗಭೂಮಿಯಲ್ಲಿ ಸೃಜನಶೀಲತೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ಭಾರತದ ರಂಗಭೂಮಿಯ ಚರಿತ್ರೆಯ ನಡೆದುಬಂದ ಹಾದಿಯನ್ನೇ ಗಮನಿಸುತ್ತಾ ಬಂದಾಗ, ಸ್ವಾತಂತ್ರ್ಯ ಪೂರ್ವದಲ್ಲಿ , ವಿಶೇಷವಾಗಿ 20ನೆಯ ಶತಮಾನದ ಆರಂಭದಲ್ಲಿ ಪ್ರದರ್ಶನವಾಗುತ್ತಿದ್ದ ಪೌರಾಣಿಕ ಕಥನಗಳನ್ನಾಧರಿಸಿದ ನಾಟಕಗಳಿಗೂ, ತದನಂತರದ ಸಾಹಿತ್ಯಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರೂಪುಗೊಂಡ ಸಾಮಾಜಿಕ ಕಥಾ ವಸ್ತುವಿನ ನಾಟಕಗಳಿಗೂ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸೃಜನಶೀಲತೆ ಹೇಗೆ ರಂಗಕಲೆಯನ್ನು ಅತ್ಯುತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ದಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ತಾನು ತಲುಪಬೇಕಾದ ತಳಮಟ್ಟದ ಸಮಾಜವನ್ನು ಎದುರಿನಲ್ಲಿಟ್ಟುಕೊಂಡೇ ತನ್ನ ಕಲಾ ಭೂಮಿಕೆಯನ್ನು ವಿಸ್ತರಿಸಿಕೊಳ್ಳುವ ರಂಗಭೂಮಿಗೆ ಪ್ರೇಕ್ಷಕ ವರ್ಗ ಎನ್ನುವುದು ನಾಲ್ಕು ಗೋಡೆಗಳ ನಡುವೆ ಮಾತ್ರ ಕಾಣುವುದಿಲ್ಲ. ಬದಲಾಗಿ, ತನ್ನ ಸುತ್ತಲಿನ ಸಮಾಜದ ಸಮಸ್ತ ನೆಲೆಗಳೂ ಪ್ರೇಕ್ಷಕ ವೃಂದವಾಗಿಯೇ ಕಾಣುತ್ತವೆ. ಹಾಗಾಗಿಯೇ ಆಧುನಿಕ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯ ಕಲಾವಿದರು ಕಾಲದಿಂದ ಕಾಲಕ್ಕೆ ಸುತ್ತಲಿನ ಸಮಾಜದ ಸಮಕಾಲೀನ ಸ್ಥಿತ್ಯಂತರಗಳಿಗೆ ಸ್ಪಂದಿಸುತ್ತಲೇ ಬಂದಿರುವುದನ್ನು ಗಮನಿಸಬಹುದು. ಕನ್ನಡ ರಂಗಭೂಮಿಯೂ ಸಹ ಈ ಪ್ರವೃತ್ತಿ ಮತ್ತು ಪ್ರಕ್ರಿಯೆಗೆ ಹೊರತಾದುದಲ್ಲ.
ಸಮಕಾಲೀನ ಸಮಾಜದಲ್ಲಿ ನಿತ್ಯ ಎದುರಾಗುತ್ತಿರುವ ಜಟಿಲ ಸಮಸ್ಯೆಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಿಕ್ಕುಗಳನ್ನು ಸಾಮಾನ್ಯ ಜನತೆಯ ಮುಂದಿಡುವ ನಿಟ್ಟಿನಲ್ಲಿ ಆಧುನಿಕ-ಹವ್ಯಾಸಿ ರಂಗಭೂಮಿ ತನ್ನದೇ ಆದ ಕೊಡುಗೆ ಸಲ್ಲಿಸಿದೆ. ಈ ಭೂಮಿಕೆಯಲ್ಲಿ ಸೃಜಿಸುವ ಚಿಂತನಾ ಕ್ರಮಗಳು ನಿರ್ದಿಷ್ಟ ಗ್ರಾಂಥಿಕ ತತ್ವ ಸಿದ್ಧಾಂತಗಳಿಗಿಂತಲೂ ಹೆಚ್ಚಾಗಿ ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ಪ್ರಭಾವ ಬೀರಿದಂತಹ ತತ್ವಶಾಸ್ತ್ರೀಯ, ತಾತ್ವಿಕ ಪ್ರತಿಪಾದನೆಗಳನ್ನು ಅವಲಂಬಿಸಿರಬೇಕಾದ್ದು ಅತ್ಯವಶ್ಯ. ಕನ್ನಡ ರಂಗಭೂಮಿ ಈ ನಿಟ್ಟಿನಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದು ಯಶಸ್ಸನ್ನೂ ಗಳಿಸಿದೆ. ಈ ಹಿನ್ನೆಲೆಯಲ್ಲೇ ರಂಗಭೂಮಿಯ ಸೃಜನಶೀಲ ಮಸೂರದ ಮೂಲಕ ಚರಿತ್ರೆಯನ್ನು ನೋಡುವ ಸೂಕ್ಷ್ಮ ಗ್ರಹೀತಗಳನ್ನೂ ವರ್ತಮಾನದ ಕಾಲಘಟ್ಟದಲ್ಲಿ ಬೆಳೆಸಿಕೊಳ್ಳಬೇಕಿದೆ. ನಮ್ಮ ಸುತ್ತಲಿನ ಸಮಾಜದಲ್ಲಿ ವ್ಯಕ್ತವಾಗುತ್ತಲೇ ಇರುವ ತಾರತಮ್ಯ, ದೌರ್ಜನ್ಯ, ಅಸ್ಪೃಶ್ಯತೆ, ಅತ್ಯಾಚಾರ ಮತ್ತು ಇತರ ಅಸಮಾನತೆಯ ನೆಲೆಗಳನ್ನು ಗುರುತಿಸದೆ ಹೋದರೆ ಮಾನವ ಸಂಬಂಧಗಳನ್ನು ಸೃಜನಶೀಲ ನೆಲೆಗಳಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾಟಕ ಅಥವಾ ಇತರ ಯಾವುದೇ ದೃಶ್ಯಕಲೆಯಲ್ಲಿ ತೊಡಗುವ ಕಲಾವಿದರಿಗೆ, ರಚಯಿತರಿಗೆ ಈ ಅರಿವು ಇರಬೇಕಾಗುತ್ತದೆ.
ಇತಿಹಾಸದೊಳಗೆ ಇಣುಕಿ ನೋಡಿ, ಚಾರಿತ್ರಿಕ ಸನ್ನಿವೇಶಗಳನ್ನು ವಿಡಂಬನೆ ಮಾಡುತ್ತಾ, ವರ್ತಮಾನದ ಸನ್ನಿವೇಶಗಳ ನಡುವೆ ನಿಷ್ಕರ್ಷೆ ಮಾಡುತ್ತಾ, ಚರಿತ್ರೆಯಲ್ಲಿ ಆಗಿ ಹೋದ ವ್ಯಕ್ತಿ ಮತ್ತು ಘಟನೆಗಳನ್ನು ಸಮಕಾಲೀನ ಸಮಾಜಕ್ಕೆ ಪೂರಕವಾಗುವಂತೆ ಕಟ್ಟಿಕೊಡುವ ಒಂದು ಕಲಾತ್ಮಕತೆ ರಂಗಭೂಮಿಯಲ್ಲಿ ಅಂತರ್ಗತವಾಗಿರುತ್ತದೆ. ಇದನ್ನೇ ಸೃಜನಶೀಲತೆಯೊಂದಿಗೆ, ಸಮಕಾಲೀನ ಸಾಂದರ್ಭಿಕ ಸೂಕ್ಷ್ಮತೆಗಳನ್ನು ಸಂವೇದನಾಶೀಲ ನೆಲೆಗಳಲ್ಲಿ ಗ್ರಹಿಸಿ, ಆಂತರಿಕ ಹಾಗೂ ಬಾಹ್ಯ ಸಮಾಜದ ವರ್ತಮಾನಗಳ ಚೌಕಟ್ಟಿನಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುವ ಒಂದು ವೇದಿಕೆಯಾಗಿ ರಂಗಭೂಮಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಕನ್ನಡ ರಂಗಭೂಮಿಯ ಸಮಕಾಲೀನ ಹೆಜ್ಜೆಗಳನ್ನೇ ಗಮನಿಸುತ್ತಾ ಹೋದರೆ, ರಾಕ್ಷಸ ತಂಗಡಿ, ತುಘಲಕ್, ತಲೆದಂಡ, ಶೂದ್ರ ತಪಸ್ವಿ, ಸಂಕ್ರಾಂತಿ ಮತ್ತು ಇತ್ತೀಚಿನ ದೋಪ್ಡಿಯವರೆಗಿನ ಅನೇಕ ನಾಟಕಗಳನ್ನು ಇಲ್ಲಿ ಉದಹರಿಸಬಹುದು.
ಸಾಮಾಜಿಕ ಪುನಾರಚನೆ ಮತ್ತು ರಂಗಭೂಮಿ
ಯಾವುದೇ ಸಮಾಜವಾದರೂ ತನ್ನ ಮುನ್ನಡೆಯ ಹಾದಿಯಲ್ಲಿ ಚರಿತ್ರೆಯನ್ನು ಮತ್ತೆ ಮತ್ತೆ ಕಟ್ಟಿಕೊಳ್ಳುತ್ತಾ, ಚಾರಿತ್ರಿಕ ವ್ಯಕ್ತಿಗಳನ್ನು, ಘಟನೆಗಳನ್ನು ಮತ್ತು ಜನಜೀವನವನ್ನು ತನ್ನ ವರ್ತಮಾನದ ಸಂದರ್ಭಗಳಿಗೆ ತಕ್ಕಂತೆ ಪುನಾರಚನೆ ಮಾಡುತ್ತಾ ಹೋಗುತ್ತದೆ. ಸಹಜವಾಗಿಯೇ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಾಬಲ್ಯ ಸಾಧಿಸಿರುವ, ಪಾರಮ್ಯ ವಹಿಸಿರುವ ಮತ್ತು ಆಧಿಪತ್ಯವನ್ನು ಸ್ಥಾಪಿಸಿಕೊಂಡಿರುವ ಸಮಾಜದ ಒಂದು ವರ್ಗ ಈ ನಿರೂಪಣೆಗಳನ್ನು ತನ್ನ ಅನುಕೂಲತೆಗಳಿಗೆ ತಕ್ಕಂತೆ ನಿಯಂತ್ರಿಸುತ್ತದೆ. ಚಾರಿತ್ರಿಕ ವ್ಯಕ್ತಿಗಳ ವೇಷಭೂಷಣಗಳೂ ಸಹ ಇದೇ ಪ್ರಬಲ ವರ್ಗಗಳ ಚಿಂತೆನಗಳಿಗೆ ಪೂರಕವಾಗಿಯೇ ಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಟಿವಿ ಧಾರಾವಾಹಿ/ಚಲನಚಿತ್ರ/ಪೌರಾಣಿಕ ನಾಟಕಗಳ ರಾಮಾಯಣ, ಮಹಾಭಾರತ ಮತ್ತು ಇಂದು ನಮ್ಮ ಸುತ್ತಲೂ ಬೆಳೆಯುತ್ತಿರುವ ಪ್ರತಿಮಾ ರಾಜಕಾರಣದ ಸಂದರ್ಭದಲ್ಲೂ ಸಹ ಈ ವಿದ್ಯಮಾನವನ್ನು ಗಮನಿಸಬಹುದು. ಚರಿತ್ರೆಯನ್ನು ಪುನಃ ಕಟ್ಟಿಕೊಡುವಾಗ ಸಹಜವಾಗಿ ನಡೆಯುವ ಪ್ರಕ್ರಿಯೆ ಇದಾಗಿದ್ದು, ಹಲವಾರು ಸಂದರ್ಭಗಳಲ್ಲಿ ಚಾರಿತ್ರಿಕ/ಪೌರಾಣಿಕ ವ್ಯಕ್ತಿತ್ವಗಳೂ ಸಹ ಇದೇ ರೀತಿ ಮನ್ವಂತರಕ್ಕೊಳಗಾಗುತ್ತವೆ.
ಆದರೆ ರಂಗಭೂಮಿ ಈ ಸಾಮಾಜಿಕ ನೆಲೆಯಿಂದ ಭಿನ್ನವಾದ ರೀತಿಯಲ್ಲಿ ಇತಿಹಾಸದತ್ತ ನೋಡಬೇಕಾಗುತ್ತದೆ. ಏಕೆಂದರೆ ರಂಗಭೂಮಿ ಮನರಂಜನೆಯ ದೃಷ್ಟಿಯಿಂದ ಒಂದು ಜನಪ್ರಿಯ ದೃಶ್ಯಕಲೆಯಾದರೂ, ಮೂಲತಃ ರಂಗಭೂಮಿಯ ಬೇರುಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಾಮಾನ್ಯ ಜನಜೀವನದ ನಡುವೆಯೇ ಹರಡಿಕೊಂಡು, ಬೆಳೆಯುತ್ತಾ ಬಂದಿವೆ. ವರ್ತಮಾನದ ಆಗು ಹೋಗುಗಳನ್ನು, ಸಮಕಾಲೀನ ಸಿಕ್ಕುಗಳನ್ನು ಮತ್ತು ಸಮಾಜದ ಅಂತರಂಗದ ಬೇಗುದಿ, ತುಮುಲ, ಹತಾಶೆ, ಆಕ್ರೋಶ ಹಾಗೂ ಜಟಿಲ ಮನುಜ ಸಂಬಂಧಗಳ ಸೇತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ, ವರ್ತಮಾನದಿಂದ ಭವಿಷ್ಯಕ್ಕೆ ಸಾಗುವ ಹಾದಿಯಲ್ಲಿ, ಗತ ಇತಿಹಾಸದ ಅಪಸವ್ಯಗಳು ಇಲ್ಲದಂತೆ ಮಾಡುವ ಒಂದು ಪ್ರಯತ್ನವನ್ನು ರಂಗಭೂಮಿ ಮಾಡಲು ಸಾಧ್ಯವಿದೆ. ಕನ್ನಡದ ಜನಪದ-ವೃತ್ತಿ-ಹವ್ಯಾಸಿ ರಂಗಭೂಮಿಯ ಹೆಜ್ಜೆ ಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದನ್ನು ಸಾಕಾರಗೊಳಿಸಿರುವುದನ್ನೂ ಕಾಣಬಹುದು.
ಚರಿತ್ರೆಯ ಕ್ರೌರ್ಯಗಳನ್ನು ರಂಗಸಜ್ಜಿಕೆಯೊಂದಿಗೆ ಪ್ರೇಕ್ಷಕರ ಮುಂದೆ ತೆರೆದಿಡುವಾಗ, ಇಂತಹುದೇ ಕ್ರೌರ್ಯಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವರ್ತಮಾನದಲ್ಲೇ ನಡೆಯುತ್ತಿವೆ ಎಂಬ ಅರಿವು ಇಲ್ಲದೆ ಹೋದರೆ, ಸೃಜನಶೀಲತೆಯ ನೆಲೆಗಳು ಕ್ಷೀಣಿಸಿ, ನಾಟಕ ಕೇವಲ ಮನರಂಜನೆ ಅಥವಾ ಪ್ರಚಾರ ಸಾಮಗ್ರಿ ಆಗಿಬಿಡುತ್ತದೆ. ಹಾಗೆಯೇ ವರ್ತಮಾನದ ಕ್ರೌರ್ಯಗಳು ಮತ್ತು ದೌರ್ಜನ್ಯಗಳು, ಸಮಕಾಲೀನ ಸಮಾಜದ ತಾರತಮ್ಯಗಳು, ಅಸಮಾನತೆಗಳು ರಂಗಪ್ರಯೋಗಗಳನ್ನು ಕಾಡದೆ ಇದ್ದರೂ ಸಹ ನಾಟಕ ಕಲೆ ತನ್ನ ಸೀಮಿತ ಚೌಕಟ್ಟಿನೊಳಗೇ ಉಳಿದುಬಿಡುತ್ತದೆ. ಭಾರತದ ಸಂದರ್ಭದಲ್ಲೇ ಹೇಳುವುದಾದರೆ ದೋಪ್ಡಿಗಳು, ಫೂಲನ್‌ದೇವಿಗಳು ನಮ್ಮ ನಡುವೆ ನರಳುತ್ತಿರುವಂತೆಯೇ, ಪುರಾಣದ ದ್ರೌಪದಿ, ಸೀತೆ, ಕಯಾದು ಅವರಂತಹ ಪುರುಷಾಧಿಪತ್ಯದ ಶೋಷಣೆ ಮತ್ತು ದೌರ್ಜನ್ಯವನ್ನು ಎದುರಿಸುತ್ತಿರುವ ಜೀವಂತ ಪಾತ್ರಗಳೂ ನಮ್ಮ ನಡುವೆ ಜೀವಂತವಾಗಿವೆ. ಹಾಗೆಯೇ ದುಷ್ಯಾಸನರಂತಹ ಪುರುಷ ಕ್ರೌರ್ಯದ ಪಾತ್ರಗಳೂ ಜೀವಂತವಾಗಿವೆ. ಇತಿಹಾಸ ಮತ್ತು ಪುರಾಣಗಳ ಕ್ರೌರ್ಯವನ್ನು ಜನರ ಮುಂದಿಡುವ ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸೃಜನಶೀಲತೆ ಇದ್ದರೆ, ನಮಗೆ ಹಾಥ್ರಸ್, ನಿರ್ಭಯಾ, ಶ್ರದ್ಧಾವಾಲ್ಕರ್ ಮತ್ತು ಅಸ್ಪೃಶ್ಯತೆ-ಅತ್ಯಾಚಾರವನ್ನು ಎದುರಿಸುತ್ತಿರುವ ಪ್ರತಿಯೊಂದು ಜೀವವೂ ಸಹ ರಂಗಪ್ರಯೋಗದ ಕಥಾವಸ್ತುಗಳಾಗಿ ರೂಪುಗೊಳ್ಳುತ್ತವೆ. ದೇಶ ವಿಭಜನೆಯ ಸಂದರ್ಭದ ಕ್ರೌರ್ಯವನ್ನೇ ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಪದೇಪದೇ ಕಾಣುತ್ತಲೇ ಇದ್ದರೂ, ಹಿಂಸೆ ಮತ್ತು ದೌರ್ಜನ್ಯಗಳನ್ನು ಸಾಪೇಕ್ಷ ನೆಲೆಯಲ್ಲಿ ಪರಿಭಾವಿಸುವುದರಿಂದ ನಮಗೆ ಎರಡರ ನಡುವೆ ಭಾರಿ ಅಂತರ ಕಾಣುತ್ತದೆ. ಆದರೆ ಕಲೆ, ಸಾಹಿತ್ಯ ಮತ್ತು ರಂಗಭೂಮಿಯ ಸೃಜನಶೀಲ ಮನಸುಗಳಿಗೆ ಇವೆಲ್ಲವೂ ಪರಸ್ಪರ ಸಂಬಂಧಿತವಾಗಿ, ಸಂವಾದಿಯಾಗಿ ಕಾಣುತ್ತದೆ. ರಂಗಭೂಮಿಯ ಕಲಾತ್ಮಕ ಶ್ರೇಷ್ಠತೆಯೂ ಇಲ್ಲೇ ಅಡಗಿದೆ.
ಈ ಎಲ್ಲ ಏಳುಬೀಳುಗಳ ನಡುವೆಯೇ ಭಾರತದ ಮತ್ತು ವಿಶೇಷವಾಗಿ ಕರ್ನಾಟಕದ ರಂಗಭೂಮಿ ತನ್ನ ಉತ್ಕೃಷ್ಟತೆಯನ್ನು ಗಳಿಸಿಕೊಂಡಿದೆ. 1970-90ರ ಅವಧಿಯ ಬೀದಿ ನಾಟಕಗಳು ಸೃಷ್ಟಿಸಿದ ಸಾಮಾಜಿಕ ಅರಿವು ಮತ್ತು ವಿಸ್ತರಿಸಿದ ಸಂವೇದನಾಶೀಲ ಪ್ರಜ್ಞೆ ಬಹುಕಾಲದವರೆಗೂ, ಹಲವು ತಲೆಮಾರುಗಳಿಗೂ ಜೀವಂತಿಕೆಯಿಂದಿರುವುದನ್ನು ನಾವು ಮನಗಾಣಬೇಕಿದೆ. ವರ್ತಮಾನದ ಸಂದರ್ಭದಲ್ಲಿ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ, ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಅಭದ್ರತೆಗಳನ್ನು, ವಲಸೆ ಕಾರ್ಮಿಕರ ನಡುವೆ, ಆದಿವಾಸಿಗಳ ನಡುವೆ, ತಳಸಮುದಾಯಗಳ ಅವಕಾಶವಂಚಿತರ ನಡುವೆ ಮತ್ತು ನಿತ್ಯ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರ ನಡುವೆ ಕಾಣಬಹುದಾದರೆ, ಇವೆಲ್ಲವನ್ನೂ ನ್ಯಾಯದ ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಮತ್ತೊಂದು ತಟ್ಟೆಯಲ್ಲಿ ಭಾರತದ ಚರಿತ್ರೆಯನ್ನಿಟ್ಟು ನೋಡಬೇಕಿದೆ. ಈ ಸೃಜನಶೀಲ ಕಲಾತ್ಮಕತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವ ಕ್ಷಮತೆ ಮತ್ತು ಸಾಮರ್ಥ್ಯ ರಂಗಭೂಮಿಗಿದೆ.
ಪ್ರೇಕ್ಷಕರ-ವಾಚಕರ-ಓದುಗರ-ಶ್ರೋತೃಗಳ ಶಿಳ್ಳೆ ಚಪ್ಪಾಳೆಗಳ ಸದ್ದಿನಲ್ಲಿ ಸುಡು ವಾಸ್ತವದ ದುರಂತಗಳು ಜಾರಿಹೋಗದಂತೆ ನೋಡಿಕೊಳ್ಳುವ ನೈತಿಕ ಹೊಣೆಗಾರಿಕೆ ಸಾಹಿತ್ಯ, ಕಲೆ ಮತ್ತು ರಂಗಭೂಮಿಯ ಮೇಲಿದೆ. ಈ ಹೊಣೆಯನ್ನು ನಿಭಾಯಿಸಲು ಅಗತ್ಯವಾದ ಸೃಜನಶೀಲ ನೆಲೆಗಳನ್ನು ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿಯೂ ವರ್ತಮಾನದ ಸಮಾಜದ ಮೇಲಿದೆ. ಸಾಂಸ್ಕೃತಿಕ ರಾಜಕಾರಣ ಹೊಡೆತಕ್ಕೆ ಸಿಲುಕಿ ಉಸಿರುಗಟ್ಟಿದಂತಾಗುತ್ತಿರುವ ಸೃಜನಶೀಲ ನೆಲೆಗಳನ್ನು ಪುನರುದ್ಧೀಪನಗೊಳಿಸುವುದು ಸಮಾಜದ ಆದ್ಯತೆಯೂ ಆಗಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka