ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ: ದೇಶವನ್ನು ಬೆಚ್ಚಿಬೀಳಿಸಿದ ಮತ್ತೊಂದು ಘಟನೆ
ನವದೆಹಲಿ: ಬೈಕ್ ನಲ್ಲಿ ಬಂದ ಇಬ್ಬರು ಯುವಕರು 17 ವರ್ಷದ ಬಾಲಕಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ ಆತಂಕಕಾರಿ ಘಟನೆ ನೈಋತ್ಯ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಆ್ಯಸಿಡ್ ದಾಳಿಯ ಪರಿಣಾಮ ಬಾಲಕಿಯ ಮುಖ ಹಾಗೂ ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಬಾಲಕಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಸ್ತೆ ಬದಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಬೈಕೊಂದುವಿದ್ಯಾರ್ಥಿನಿಯರ ಸಮೀಪ ವೇಗ ಕಡಿಮೆ ಮಾಡುತ್ತಾ ಬಂದು ಗ್ಲಾಸ್ ನಲ್ಲಿದ್ದ ಆ್ಯಸಿಡ್ ನ್ನು ಎರಚಿದ್ದು, ಈ ವೇಳೆ ಆ್ಯಸಿಡ್ ತಾಗಿದ ಬಾಲಕಿಯು ಮುಖವನ್ನು ಕೈಯಿಂದ ಮುಚ್ಚಿಕೊಂಡು ನೋವಿನಿಂದ ಓಡುತ್ತಿರುವ ದೃಶ್ಯ ಸೆರೆಯಾಗಿದೆ.
ಈ ಘಟನೆಯ ಬಗ್ಗೆ ವಿವರಿಸಿರುವ ಸಂತ್ರಸ್ತ ಬಾಲಕಿಯ ತಂದೆ, ನನ್ನ ಇಬ್ಬರು ಮಕ್ಕಳು ಒಬ್ಬಳು 17 ವರ್ಷದವಳು, ಮತ್ತೊಬ್ಬಳು 13 ವರ್ಷದವಳು ಇಂದು ಬೆಳಗ್ಗೆ ಒಟ್ಟಿಗೆ ಶಾಲೆಗೆ ಹೋಗಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಬಾಲಕಿಗೆ ಯಾರಾದರೂ ಬೆದರಿಕೆ ಹಾಕಿದ ಬಗ್ಗೆ ಏನಾದರೂ ಹೇಳಿಕೊಂಡಿದ್ದಳೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಇಲ್ಲ ಆ ರೀತಿ ಅವಳು ಏನೂ ಹೇಳಿಲ್ಲ, ಇಬ್ಬರು ಸಹೋದರಿಯರು ಮೆಟ್ರೋದಲ್ಲಿ ಪ್ರತಿದಿನ ಹೋಗುತ್ತಾರೆ. ಆ ರೀತಿ ಇದ್ದಿದ್ದರೆ ನನ್ನ ಬಳಿ ಹೇಳಿದ್ದರೆ, ನಾನು ಅವಳೊಂದಿಗೆ ಪ್ರತಿದಿನ ಹೋಗುತ್ತಿದೆ ಎಂದಿದ್ದಾರೆ.
ಗಾಯಾಳು ಬಾಲಕಿಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಶೇ.8ರಷ್ಟು ಸುಟ್ಟ ಗಾಯಗಳಾಗಿವೆ. ಗಾಯದ ಆಳ ಎಷ್ಟಿದೆ ಅನ್ನೋದನ್ನು ತಿಳಿಯಲು 48ರಿಂದ 72 ಗಂಟೆಗಳು ಬೇಕಾಗುತ್ತದೆ ಎಂದು ಆಸ್ಪತ್ರೆಯ ಡಾ.ಬಿ.ಎಲ್.ಶೆರ್ವಾಲ್ ತಿಳಿಸಿರುವುದಾಗಿ ಎನ್ ಡಿ ಟಿವಿ ವರದಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಆತನ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಹರ್ಷವರ್ಧನ್ ತಿಳಿಸಿದ್ದಾರೆ.
ಇನ್ನೂ ಘಟನೆ ಸಂಬಂಧ ಮಹಿಳಾ ಮುಖ್ಯಸ್ಥೆ ಮಲಿವಾಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳನ್ನು ತಡೆಯಲು ಆ್ಯಸಿಡ್ ಮಾರಾಟವನ್ನು ತಡೆಯಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka