ವಿಷ ಪ್ರಸಾದದ ಕರಾಳ ನೆನಪು: ಕಂಡವರ ಕಿಚ್ಚಿಗೆ ಬಲಿಯಾಗಿತ್ತು 17 ಜೀವಗಳು!
ಹನೂರು: ತಾಲೂಕಿನ ಸುಳ್ವಾಡಿ ಗ್ರಾಮದ ಹೊರವಲಯದಲ್ಲಿರುವ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದಕ್ಕೆ ಕಿಡಿಗೇಡಿಗಳು ವಿಷ ಬೆರೆಸಿ ಭಕ್ತರಿಗೆ ನೀಡಿದ್ದರಿಂದ ಆದ ಪ್ರಮಾದ ಇವತ್ತಿಗೂ ಯಾರೂ ಮರೆಯುವಂತಿಲ್ಲ. ಈ ಒಂದು ಭೀಕರ ಘಟನೆಗೆ ನೆಡೆದು ನಾಲ್ಕು ವರ್ಷವಾದ ಹಿನ್ನಲೆ
ಹಿರಿಯ ಮುಖಂಡ ಪೆದ್ದನಪಾಳ್ಯ ಮಣಿ ನೇತೃತ್ವದಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ದೇವಿಯ ದರ್ಶನಕ್ಕೆ ಬಂದು ಪ್ರಸಾದ ಸ್ವೀಕರಿಸಿ ಪ್ರಾಣ ಬಿಟ್ಟವರ ಸಂಖ್ಯೆ 17. ಹಾಗೆಯೇ ಸಂತ್ರಸ್ತರಾದವರು 129 ಮಂದಿ. ಅಂದು ಸಂತ್ರಸ್ತರಾದವರ ಪರಿಸ್ಥಿತಿ ಇಂದಿಗೂ ನೆಟ್ಟಗಿಲ್ಲ
2018ರ ಡಿಸೆಂಬರ್ 14ರ ಆ ದುರಂತದ ಕರಾಳ ನೆನಪು ಎಲ್ಲರಲ್ಲಿ ಕಹಿಯಾಗಿ ಉಳಿದಿದೆ. ಯಾರದೋ ಕಿಚ್ಚಿಗೆ ಬಲಿಯಾದ ಅಮಾಯಕ ಜೀವಗಳು ಕಣ್ಣ ಮುಂದೆ ಬರುತ್ತದೆ.
ಪ್ರಸಾದಕ್ಕೆ ವಿಷ ಬೆರೆಸುವ ಹಿಂದಿನ ಉದ್ದೇಶವೇನಿತ್ತು?
ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟ್ರಸ್ಟ್ ರಚನೆಯಾಯಿತು. ಆ ಟ್ರಸ್ಟ್ ಗೆ ಅಧ್ಯಕ್ಷರಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಬೃಹನ್ಮಠದ ಕಿರಿಯ ಇಮ್ಮಡಿ ಮಹದೇವ ಸ್ವಾಮೀಜಿಯನ್ನು ನೇಮಕ ಮಾಡಲಾಗಿತ್ತು. ಏಳೆಂಟು ಮಂದಿ ಟ್ರಸ್ಟಿಗಳಿದ್ದರು. ಇದೆಲ್ಲದರ ನಡುವೆ ಟ್ರಸ್ಟ್ ನ ಮ್ಯಾನೇಜರ್ ಪತ್ನಿ ಅಂಬಿಕಾಗೂ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿಗೂ ನಂಟು ಇದ್ದಿದ್ದರಿಂದಾಗಿ ಆಕೆಯೇ ಟ್ರಸ್ಟ್ ನ ಅಧ್ಯಕ್ಷಳಂತೆ ವರ್ತಿಸಲು ಶುರು ಮಾಡಿದ್ದಳು. ದಿನಕಳೆದಂತೆ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಆಡಳಿತದ ಅಧಿಕಾರ ಹಿಡಿಯಲು ಹಾತೊರೆಯುತ್ತಿದ್ದಳು. ಇದಕ್ಕೆ ಬೆಂಗಾವಲಾಗಿ ನಿಂತಿದ್ದು ಬೃಹನ್ಮಠದ ಕಿರಿಯ ಇಮ್ಮಡಿ ಸ್ವಾಮೀಜಿ.
ಮಾಸುವುದಿಲ್ಲ ಆ ದುರಂತದ ಕ್ಷಣ:
ಪ್ರಸಾದಕ್ಕೆ ವಿಷ ಬೆರೆಸಿ ಒಂದಷ್ಟು ಮಂದಿಗೆ ಆರೋಗ್ಯ ಏರುಪೇರಾಗಿ ದೇವಸ್ಥಾನದ ಟ್ರಸ್ಟ್ ಗೆ ಕೆಟ್ಟ ಹೆಸರು ತರಬೇಕೆಂಬುದು ಅವರ ಇರಾದೆಯಾಗಿತ್ತು. ಹೀಗಾಗಿಯೇ ಅವರು ಟೊಮೋಟೋ ಬಾತ್ ಮಾಡಿ ಅದರಲ್ಲಿ ಕ್ರಿಮಿನಾಶಕ ಬೆರೆಸಿ ಭಕ್ತರಿಗೆ ಹಂಚಿದ್ದರು. ಆದರೆ ಅಂದು ಆಗಿದ್ದೇ ಬೇರೆ. ವಿಷಕ್ಕೆ 17 ಮಂದಿ ಅಮಾಯಕರು ಪ್ರಾಣ ಬಿಟ್ಟರು. 129 ಮಂದಿ ಪ್ರಾಣಾಪಾಯದಿಂದ ಪಾರಾದರೂ ಒಂದಲ್ಲ ಒಂದು ತೊಂದರೆಯಿಂದ ಬಳಲುತ್ತಿದ್ದಾರೆ.
ಇಂದಿಗೂ ಈ ದೇವಾಲಯದ ಸುತ್ತಲಿನ ಗ್ರಾಮಗಳಾದ ಬಿದರಳ್ಳಿ, ಮಾರ್ಟಳ್ಳಿ, ಸುಳ್ವಾಡಿ, ಎಂ.ಜಿ.ದೊಡ್ಡಿ ಹೀಗೆ ಹಲವು ಗ್ರಾಮಗಳ ಜನ ಆ ದುರಂತದ ಕ್ಷಣಗಳನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಿದ್ದಾರೆ.ಎಂದು ಪೆದ್ದನಪಾಳ್ಯ ಮಣಿ ಕಂಬನಿ ಮೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka