ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ?: ಸುನೀಲ್ ಕುಮಾರ್ ಗೆ ಸಂಕಷ್ಟ!
ಕಾರ್ಕಳ: ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಈ ತಿಂಗಳ ಕೊನೆಯಲ್ಲಿ ತಾವು ಸ್ಪರ್ಧಿಸಲಿರುವ ಕ್ಷೇತ್ರವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ವಿಧಾನಸಭಾ ಚುನಾವಣೆಗೆ ಹಿಂದುತ್ವಕ್ಕಾಗಿ ಸ್ಪರ್ಧಿಸುತ್ತೇನೆ. ಹಿಂದೂ ವಿಚಾರಧಾರೆ ಕಡೆಗಣಿಸಿದ್ದೀರಿ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧಿಸುವುದಾಗಿ ಅವರು ಹೇಳಿದರು.
ಏಳೆಂಟು ಕ್ಷೇತ್ರದ ಅಧ್ಯಯನ ಮಾಡಿದ್ದು, ಈ ಪೈಕಿ ಕಾರ್ಕಳ ಕೂಡಾ ಒಂದು. ಈ ತಿಂಗಳ ಕೊನೆಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಕಾರ್ಕಳದ ಓಡಾಟ ಅಲ್ಲಿಯ ಶಾಸಕರಿಗೆ ಸಹ್ಯವಾಗುತ್ತಿಲ್ಲ. ಕಾರ್ಯಕರ್ತರಿಗೆ ಕೇಸು ಹಾಕೋದು ಹೆದರಿಸೋದನ್ನು ಮಾಡ್ತಾರೆ ಇದು ಶೋಭೆ ತರಲ್ಲ. ನೀವು ಹೆದರಿದ್ದೀರಿ, ಹಿಂದುತ್ವ ನೈತಿಕತೆ ಇದ್ದರೆ ಹೆದರಿಸುವ ಅವಶ್ಯಕತೆ ಇರಲಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಕೊಲೆ ಕೇಸುಗಳನ್ನು ಹಾಕುತ್ತಿದ್ದಾರೆ. ಸುನೀಲ್ ಕುಮಾರ್ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಳ್ಳುತ್ತಿದ್ದಾರೆ ಎಂದು ಸುನೀಲ್ ಕುಮಾರ್ ವಿರುದ್ಧ ಕಿಡಿಕಾರಿದ್ರು.
ಅಂದು ಕಾಂಗ್ರೆಸ್ ಕೂಡಾ ಇದನ್ನೇ ಅಂದು ಮಾಡಿತು. ನೀವೂ ಅದೇ ಮಾಡ್ತಿದ್ದೀರಾ? ನೀವು ಸೋಲೊಪ್ಪಿದ್ದೀರಿ, ಮುಂದಿನ ದಿನಗಳಲ್ಲಿ ಸೋಲು ಗ್ಯಾರೆಂಟಿ, ರಾಜ್ಯದಲ್ಲಿ ಮೂರು ಸಾವಿರ ಹಿಂದೂಕಾರ್ಯಕರ್ತರ ಮೇಲೆ ಕೇಸು ಇದೆ. ಇಡೀ ರಾಜ್ಯದಲ್ಲಿ 18 ಹಿಂದು ಒಕ್ಕೂಟ ಬಿಜೆಪಿಗೆ ವಿರುದ್ಧ ನಿಲ್ಲಲಿದೆ ಎಂದು ಅವರು ಹೇಳಿದರು.
ಕಾರ್ಕಳದ ಭ್ರಷ್ಟಾಚಾರ ದ ದಾಖಲೆ ಇದೆ. ಒಂದೊಂದಾಗಿ ತಿರುಗೇಟು ಕೊಡುತ್ತೇನೆ, ಮುಂದಿನ ದಿನದಲ್ಲಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ. ಸೋಲು ಒಪ್ಪಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕಾರ್ಯಕರ್ತರಿಗೆ ಭಯಪಡಿಸುವ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇನೆ ಎಂದು ಸುನೀಲ್ ಕುಮಾರ್ ಹೆಸರು ಹೇಳದೆ ಪ್ರಮೋದ್ ಮುತಾಲಿಕ್ ಅಸಮಾಧಾನ ಹೊರಹಾಕಿದರು.
ಕಾರ್ಕಳದಲ್ಲಿ ಬೂತ್ ವೈಸ್ ಸಂಘಟನೆ ಮಾಡುತ್ತೇವೆ. ಭ್ರಷ್ಟಾಚಾರ ಡೋಂಗಿ ಹಿಂದುತ್ವದ ವಿರುದ್ಧ ಈ ಸ್ಪರ್ಧೆ ಎಂದ ಅವರು, ಲವ್ ಜಿಹಾದ್, ಗೋವು ಕಳ್ಳತನ ಕಾರ್ಕಳದಲ್ಲಿ ಹೆಚ್ಚುತ್ತಿದೆ. ಮೂರು ಸಾವಿರ ಮತ ಸಿಗಲ್ಲ ಅಂತ ಜಿಲ್ಲಾಧ್ಯಕ್ಷರು ಅವರ ಅಭಿಪ್ರಾಯ ಹೇಳಿದ್ದಾರೆ. ಕಾರ್ಕಳದಲ್ಲಿ ಸಕಾರಾತ್ಮಕ ನಗುಮುಖದ ಸ್ವಾಗತ ಸಿಕ್ಕಿದೆ. ಅವರಿಗೆ ಅಧಿಕಾರದ ದುಡ್ಡಿನ ಅಹಂಕಾರ ಸೊಕ್ಕು ಬಂದಿದೆ. ದೌರ್ಜನ್ಯ ನಿಲ್ಲಿಸಿ, ಅತೃಪ್ತರನ್ನು ಕರೆದು ಮಾತನಾಡಿಸಿ ಸರಿಪಡಿಸಿಕೊಳ್ಳಿ, ಅವರು ದ್ರೋಹ ಮಾಡಿದ್ದಾರೆ, ಜಿಲ್ಲಾ ಸಂಚಾಲಕನಿಂದ ರಾಜ್ಯ ಸಂಚಾಲಕ ಮಾಡಿದ್ದು ನಾನು, ನನಗೂ ಅವರಿಗೂ ಮಾತನಾಡುವುದು ಏನೂ ಉಳಿದಿಲ್ಲ ಎಂದರು.
ನಾನು ಬಿಜೆಪಿಯನ್ನೇ ತಿದ್ದುತ್ತೇನೆ ಆದ್ರೆ, ಕಾಂಗ್ರೆಸ್ ಸೇರಲ್ಲ, ಮೋದಿಯಂತೆ ಕರ್ನಾಟಕದಲ್ಲೂ ಬಿಜೆಪಿ ಆಡಳಿತ ಕೊಡಬೇಕು. ಮನೆಮನೆಗೆ ಹೋಗಿ ಜೋಳಿಗೆ ಹಿಡಿದು ಮತ ಭಿಕ್ಷೆ ಬೇಡುತ್ತೇನೆ ಎಂದು ಮುತಾಲಿಕ್ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka