ದೇಶಕ್ಕಾಗಿ ಬಿಜೆಪಿ ಒಂದು ನಾಯಿಯನ್ನೂ ಸಹ ಕಳೆದುಕೊಂಡಿಲ್ಲ: ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾದ ಖರ್ಗೆ ಹೇಳಿಕೆ
ಕಾಂಗ್ರೆಸ್ ದೇಶಕ್ಕಾಗಿ ಕೆಲಸ ಮಾಡಿದೆ. ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದೆ. ಆದರೆ ಬಿಜೆಪಿ ನಾಯಕರು ದೇಶಕ್ಕಾಗಿ ಒಂದು ನಾಯಿಯನ್ನೂ ಸಹ ಕಳೆದುಕೊಂಡಿಲ್ಲ ಎಂಬ ಕಾಂಗ್ರೆಸ್ ಅಧ್ಯಕ್ಷ, ರಾಜ್ಯ ಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿತು.
ರಾಜಸ್ಥಾನದ ಅಲ್ವಾರ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಖರ್ಗೆ ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಇಂದು ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಖರ್ಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಆಕ್ಷೇಪಾರ್ಹ ಭಾಷೆ ಬಳಸುವ ಮೂಲಕ ಸುಳ್ಳು ಹರಡಲು ಪ್ರಯತ್ನಿಸಿದ್ದಾರೆ. ಅಲ್ವಾರ್ ನಲ್ಲಿ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಆಗ್ರಹಿಸಿದರು.
ಈ ವೇಳೆ ಬಿಜೆಪಿ ಆಗ್ರಹವನ್ನು ಖರ್ಗೆಯವರು ವ್ಯಂಗ್ಯವಾಡಿದರು. ನಾನು ಇಲ್ಲಿ ಆ ಹೇಳಿಕೆಯನ್ನು ಪುನರಾವರ್ತಿಸಿದರೆ, ಬಿಜೆಪಿಯವರಿಗೆ ತುಂಬಾ ಕಷ್ಟವಾಗುತ್ತದೆ, ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ಷಮೆಯಾಚಿಸಿದವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕ್ಷಮೆಯಾಚಿಸಲು ಕೇಳುತ್ತಿದ್ದಾರೆ ಎಂದು ಮತ್ತೊಮ್ಮೆ ಚುಚ್ಚಿದರು.
ಕಾಂಗ್ರೆಸ್ ‘ಭಾರತ ತೋಡೊ (ವಿಭಜಿತ ಭಾರತ) ಯಾತ್ರೆ’ ನಡೆಸುತ್ತಿದೆ ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿದ ಖರ್ಗೆ, ಕಾಂಗ್ರೆಸ್ ಯಾವಾಗಲೂ ಭಾರತ್ ಜೋಡೋ (ಭಾರತವನ್ನು ಒಂದುಗೂಡಿಸುವ) ಮೇಲೆ ಕೆಲಸ ಮಾಡಿದೆ. ಇದಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ಕೊಟ್ಟರು. ನೀವು ಏನು ಮಾಡಿದ್ದೀರಿ? ದೇಶಕ್ಕಾಗಿ ಯಾರು ತ್ಯಾಗ ಮಾಡಿದ್ದಾರೆಂದು ನಿಮಗೆ ತಿಳಿದಿದೆ ಎಂದು ಪ್ರಶ್ನಿಸಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪಿಯೂಷ್ ಗೋಯಲ್, ಕಾಂಗ್ರೆಸ್ ನಿಂದಾಗಿ ಜಮ್ಮು-ಕಾಶ್ಮೀರ ಯಾವ ಸ್ಥಿತಿಯಲ್ಲಿತ್ತು, ಪಾಕಿಸ್ತಾನದ ಬೆದರಿಕೆ, ಚೀನಾದ ಆಕ್ರಮಣ, ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಅವಮಾನ ಇವರಿಗೆ ನೆನಪಿಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw