ಬೆಳ್ತಂಗಡಿ: ಶಬರಿಮಲೆಗೆ ಯಾತ್ರೆಗೆ ಹೊರಟಿದ್ದ ಬಸ್ ಭೀಕರ ಅಪಘಾತ: ಬಳ್ಳಾರಿಯಿಂದ ಹೊರಟಿದ್ದ ಯಾತ್ರಿಕರು
ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ನಿಯಂತ್ರಣ ತಪ್ಪಿದ ಮಿನಿಬಸ್ಸೊಂದು ಅಪಘಾತಕ್ಕೊಳಗಾಗಿ ಹಲವರಿಗೆ ಗಾಯಗಳಾಗಿವೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆರಂಭಿಕ ಮಾಹಿತಿ ಬಂದಿದೆ.
ಗಾಯಾಳುಗಳನ್ನು ಶಶಿ, ಜಲಾಧರ, ರಘು, ಬಸವರಾಜ್ ಮತ್ತು ಲೋಕ ಎಂದು ಗುರುತಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನಿಂದ ಇವರು ಶಬರಿಮಲೆಗೆ ಯಾತ್ರೆ ಹೊರಟವರಾಗಿದ್ದು ವಾಹನದಲ್ಲಿ ಒಟ್ಟು 21 ಜನ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ವಾಹನದ ಬ್ರೇಕ್ ಕೈ ಕೊಟ್ಟಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಅಪಘಾತ ನಡೆದ ಜಾಗ ಇಳಿಜಾರಾಗಿದ್ದು, ವಾಹನದ ಬ್ರೇಕ್ ಕೈ ಕೊಟ್ಟಿದೆ ಎಂದು ತಿಳಿದೊಡನೆಯೇ ಅದರ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದು, ವಾಹನವನ್ನು ರಸ್ತೆ ಪಕ್ಕದ ಪೊದೆಯ ಕಡೆಗೆ ಚಲಿಸುವಂತೆ ಮಾಡಿ ನಿಯಂತ್ರಣಕ್ಕೆ ತಂದಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಒಂದು ಕಡೆ ಆಳ ಕಂದಕ, ಇನ್ನೊಂದೆಡೆ ವಿದ್ಯುತ್ ಕಂಬ ಇದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಅಪಘಾತವಾದ ವಿಚಾರ ತಿಳಿಯುತ್ತಿದ್ದಂತೆ ಮೂರ್ನಾಲ್ಕು ಆಂಬುಲೆನ್ಸ್ ಗಳು ಅಗಮಿಸಿ, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka