ಪಿಜಿ, ಹಾಸ್ಟೆಲ್, ಹೋಮ್ ಸ್ಟೇಗಳಿಗೆ ಕಟ್ಟುನಿಟ್ಟಿನ ನಿಯಮ!
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಿಜಿ, ಹಾಸ್ಟೆಲ್, ಹೋಮ್ ಸ್ಟೇ ಇತ್ಯಾದಿಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿ ಮಂಗಳೂರು ನಗರದ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹಾಸ್ಟೆಲ್, ಹೋಂಸ್ಟೇ, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್‌ಮೆಂಟ್, ವಾಣಿಜ್ಯ ಉದ್ದೇಶದ ಗೆಸ್ಟ್ ಹೌಸ್, ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಸತಿ ಗೃಹಗಳ ಮಾಲಕರು/ಪಾಲುದಾರರು, ಆಡಳಿತ ಮಂಡಳಿಯ ಮುಖ್ಯಸ್ಥರು ಸಂಬಂಧಿಸಿದ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು.
ಮಾಲಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಹಾಗೂ ಸಂಸ್ಥೆಯ ರಿಜಿಸ್ಟರ್ ಪುಸ್ತಕವನ್ನು ಕಡ್ಡಾಯವಾಗಿ ಪ್ರತಿವರ್ಷ ಪೊಲೀಸ್ ಆಯುಕ್ತರ ಕಚೇರಿಗೆ ಹಾಜರುಪಡಿಸಬೇಕು. ಅಲ್ಲದೇ ಮಾಲಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು. ವಿದೇಶಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ 24 ಗಂಟೆಗಳೊಳಗೆ ಅವರ ಪೂರ್ಣ ಮಾಹಿತಿಯನ್ನು ಪಾಸ್‌ಪೋರ್ಟ್, ವೀಸಾದ ವಿವರ ಸಹಿತವಾಗಿ ನೀಡಬೇಕು. ಅವರು ವಾಸ್ತವ್ಯ ತೆರವಗೊಳಿಸಿದಾಗಲೂ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.
ಇನ್ನು ಉತ್ತಮ ಗುಣಮಟ್ಟದ ಸಿಸಿ ಕೆಮರಾಗಳನ್ನು ಆಳವಡಿಸಬೇಕು. ಅವುಗಳಲ್ಲಿ ಒಂದು ಕ್ಯಾಮರಾ ಮುಖ್ಯ ದ್ವಾರಕ್ಕೆ/ರಸ್ತೆಗೆ ಮುಖ ಮಾಡಿರುವಂತೆ ಆಳವಡಿಸಿರಬೇಕು. ಸಿಸಿ ಕ್ಯಾಮರಾಗಳ ಫೂಟೇಜ್‌ಗಳು ಕನಿಷ್ಠ 30 ದಿನಗಳವರೆಗೆ ವೀಕ್ಷಣೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಠಾಣಾಧಿಕಾರಿಗಳು ಕೇಳಿದಾಗ ಮಾಹಿತಿ ಸಲ್ಲಿಸಬೇಕು. ಅಪರಾಧದ ಕೃತ್ಯಗಳು, ಮಾದಕ ದ್ರವ್ಯ ಮತ್ತು ಅನೈತಿಕ ಹಾಗೂ ಇತರ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಎಲ್ಲಾ ಪೇಯಿಂಗ್ ಗೆಸ್ಟ್ ಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯ ಅತಿಥಿಗಳನ್ನು ಹೊರತುಪಡಿಸಿ ಉಳಿದ ಅತಿಥಿಗಳಿಗೆ ಅವರ ಮೂಲ ವಿಳಾಸಕ್ಕೆ ಸಂಬಂಧಿಸಿದ ಪೊಲೀಸ್ ಕಚೇರಿಯಿಂದ ಕಡ್ಡಾಯವಾಗಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಸಂಬಂಧಪಟ್ಟವರು ವಹಿಸಿಕೊಂಡು ಈ ಬಗ್ಗೆ ಮುಚ್ಚಳಿಕೆ ಪ್ರಮಾಣ ಪತ್ರವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw