ಚುನಾವಣೆ ಸೋತ ಅಭ್ಯರ್ಥಿಯ ಹೆಸರಿನಲ್ಲಿ ಅನುದಾನ ಬಿಡುಗಡೆ: ಸಿದ್ದರಾಮಯ್ಯ ಕಿಡಿ
ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಬಿಜೆಪಿ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ವಿಧಾನಸಭೆಯ ಎಲ್ಲಾ ಶಾಸಕರ ಘನತೆ ಮತ್ತು ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಶೃಂಗೇರಿಗೆ ಅನುದಾನ ನೀಡುವಾಗ ಜೀವರಾಜ್ ಅವರ ಹೆಸರು ಉಲ್ಲೇಖಿಸಿರುವುದು ಸರಿಯಲ್ಲ. ಜೀವರಾಜ್ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಒಂದು ಕೆಟ್ಟ ಸಂಪ್ರದಾಯ. ಅದು ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ. ಬಜೆಟ್ ಗೆ ಅನುಮೋದನೆ ನೀಡುವವರು ಯಾರು? ಚುನಾವಣೆಯಲ್ಲಿ ಸೋತವರು ಬಂದು ಚರ್ಚಿಸಿ ಬಜೆಟ್ ಪಾಸ್ ಮಾಡಿ ಕೊಡುತ್ತಾರ? ಸೋತವರ ಹೆಸರಿಗೆ ಅನುದಾನ ನೀಡಿ, ಅವರಿಗೆ ಜನರ ಜೊತೆ ಹೋಗಿ ಕೆಲಸ ಮಾಡಿ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಇದನ್ನು ಪ್ರತಿಷ್ಠೆ ಮಾಡಿಕೊಳ್ಳಬಾರದು, ಇದು ಮುಂದುವರೆಲೂಬಾರದು. ಸೋತವರು ಮತ್ತೆ ಗೆದ್ದು ಬಂದು ಜನರ ಜೊತೆ ನಿಂತು ಕೆಲಸ ಮಾಡಲಿ ಎಂದು ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿರುವಾಗ ಈ ರೀತಿ ಸೋತವರಿಗೆ ಅನುದಾನ ನೀಡಿಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ಇಂಥಾ ನಡವಳಿಕೆಗೆ ಅವಕಾಶ ಇಲ್ಲ. ನಮ್ಮ ಪಕ್ಷದ ಶಾಸಕರಾದ ರಾಜೇಗೌಡರಿಗೆ ಮಾತ್ರವಲ್ಲ, ಖಾದರ್ ಅವರಿಗೆ ಸೇರಿದಂತೆ ಬಹಳಷ್ಟು ಜನರಿಗೆ ಈ ರೀತಿ ಅನ್ಯಾಯ ಆಗಿದೆ. ಮಾಧುಸ್ವಾಮಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎಂದು ಭಾವಿಸಿದ್ದೇನೆ, ಅವರು ಹಿರಿಯ ಸದಸ್ಯರು ಕೂಡ. ಇನ್ನು ಮುಂದೆ ಈ ತಪ್ಪು ಆಗುವುದಿಲ್ಲ ಎಂದು ಸರ್ಕಾರದ ಪರವಾಗಿ ಅವರು ಉತ್ತರ ನೀಡಲಿ ಎಂದಿದ್ದಾರೆ.
ಈಗಾಗಲೇ ಸೋತ ಅಭ್ಯರ್ಥಿಗಳ ಹೆಸರಿನಲ್ಲಿ ನೀಡಿರುವ ಅನುದಾನವನ್ನು ವಾಪಾಸು ಪಡೆಯಿರಿ. ನೀವು ಅನುದಾನ ನೀಡುತ್ತೀರಿ ಎಂಬ ನಿರೀಕ್ಷೆಯನ್ನೇ ನಾವ್ಯಾರು ಇಟ್ಟುಕೊಂಡಿಲ್ಲ. ನೀವು ಅನುದಾನವನ್ನೇ ಕೊಡದಿದ್ದರೂ ಪರವಾಗಿಲ್ಲ ಆದರೆ ಈ ರೀತಿ ಶಾಸಕರಿಗೆ ಅಗೌರವ ಮಾಡಬೇಡಿ. ಶಾಸಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಸಭಾಧ್ಯಕ್ಷರ ಕರ್ತವ್ಯ. ಹಿಂದೆ ಹೀಗೆ ಆಗಿತ್ತು ಎಂದು ಹೇಳುವುದು ಸರಿಯಲ್ಲ, ಇದೊಂದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಈ ಸಂಪ್ರದಾಯ ಇಲ್ಲಿಗೆ ಕೊನೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಾಲಿ ಶಾಸಕರಿಗೆ 100 ಕೋಟಿ ಅನುದಾನ ಕೊಟ್ಟು, ಅದೇ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗೆ ಇನ್ನೂ 100 ಕೋಟಿ ಅನುದಾನ ಬಿಡುಗಡೆ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯಾ? ಸೋತ ಅಭ್ಯರ್ಥಿ ಬಂದು ಬಿಲ್ ಮೇಲೆ ಚರ್ಚೆ ಮಾಡುತ್ತಾರ? ಬಜೆಟ್ ಅನ್ನು ಪಾಸ್ ಮಾಡಿ ಕೊಡುತ್ತಾರ? ಮಾಡಿಕೊಡೋಕೆ ಬರೋದಾದರೆ ಸರ್ಕಾರ ಅವರಿಂದಲೇ ಬಜೆಟ್ ಗೆ ಅನುಮೋದನೆ ಪಡೆಯಲಿ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka