ರೈತರು ಕಂಗಾಲಾಗಿದ್ದಾರೆ, ಬಿಜೆಪಿ ಸುಳ್ಳು ಹೇಳುತ್ತಾ ತಿರುಗಾಡುತ್ತಿದೆ: ಪ್ರಿಯಾಂಕ್ ಖರ್ಗೆ ಆರೋಪ
![priyank kharge](https://www.mahanayaka.in/wp-content/uploads/2022/11/priyank-kharge-3.jpg)
ಕಲ್ಯಾಣ ಕರ್ನಾಟಕ ಭಾಗದಲ್ಲಿ, ತೊಗರಿ ಬೆಳೆ ನೆಟೆರೋಗದಿಂದ ಸಂಪೂರ್ಣವಾಗಿ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಯಾವುದೇ ಸಮೀಕ್ಷೆಯನ್ನು ನಡೆಸದೆ, ಪರಿಹಾರವನ್ನು ನೀಡದೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸರ್ಕಾರ ನೆಟೆರೋಗದಿಂದ ಹಾನಿಗೊಳಗಾದ ತೊಗರಿ ಬೆಳೆಗಾರರಿಗೆ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಪ್ರತಿ ಎಕರೆ ಪ್ರದೇಶಕ್ಕೆ 25,000 ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇಡೀ ಏಷ್ಯಾ ಖಂಡದಲ್ಲೇ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಈ ಜಿಲ್ಲೆಗೆ ತೊಗರಿಯ ಕಣಜ ಎಂದೇ ಕರೆಯಲಾಗುತ್ತಿದೆ. ಈ ಭಾಗದ ರೈತರ ಪ್ರಮುಖ ಬೆಳೆಯಾದ ತೊಗರಿ ಇಲ್ಲಿನ ಜಮೀನಿಗಳಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತಿದ್ದು, ಕಲಬುರಗಿ ಜಿಲ್ಲೆಯ ತೊಗರಿ ದೇಶದ ನಾನಾ ಭಾಗಗಳಿಗೆ ರವಾನೆ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಎರಡು ವರ್ಷಗಳಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿರುವುದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ತೊಗರಿ ಫಸಲು ಬರುತ್ತಿಲ್ಲ ಎನ್ನುವುದು ಈ ಭಾಗದ ರೈತರ ಅಳಲಾಗಿದೆ.
ಈ ನಡುವೆ 2022-23 ರ ಸಾಲಿನಲ್ಲಿ 5.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 4.78 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಸುರಿದ ಅನಿಯಮಿತ ಮಳೆಯಿಂದಾಗಿ ಸುಮಾರು 1.30 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಸಂಪೂರ್ಣ ಹಾಳಾಗಿದೆ. ಎಡೆಬಿಡದೆ ಸುರಿದ ಮಳೆಯ ಪರಿಣಾಮ ಅತಿವೃಷ್ಟಿ ಸೃಷ್ಟಿಯಾಗಿ ತೊಗರಿ ಗಿಡಗಳು ಒಣಗ ತೊಡಗಿದ್ದು, ಆದರೂ ಕೂಡಾ ಅಷ್ಟೋ ಇಷ್ಟೋ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಇದೀಗ ತೊಗರಿ ಬೆಳೆಗೆ ನೆಟೆ ರೋಗ ಕಾಣಿಸಿಕೊಂಡ ನಂತರ ತೀವ್ರ ಕಂಗಾಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ತೊಗರಿ ಬೆಳೆಯ ಅದ್ಭುತ ಫಸಲಿನ ಕನಸು ಕಂಡಿದ್ದ ರೈತರಿಗೆ ಮೊದಲು ಅತಿವೃಷ್ಟಿ ಹೊಡೆತ ಕೊಟ್ಟರೆ, ಈಗ ನೆಟೆರೋಗ, ಭಾರೀ ಹೊಡೆತ ಕೊಟ್ಟಿದ್ದು ರೈತಾಪಿವರ್ಗ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಒಂದು ಅಂದಾಜಿನ ಪ್ರಕಾರ ಬಿತ್ತನೆಯಾದ 4,78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 1.30 ಲಕ್ಷ ಹೆಕ್ಟೇರ್, ಅತಿವೃಷ್ಟಿಯಿಂದ ಹಾಳಾದರೆ, ಉಳಿದುದರಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ನೆಟೆರೋಗದಿಂದ ಸಂಪೂರ್ಣ ಹಾಳಾಗಿದೆ. ಅಲ್ಲಿಗೆ ಅತಿವೃಷ್ಟಿ ಹಾಗೂ ನೆಟೆ ರೋಗದಿಂದ ಹಾಳಾದ ಬೆಳೆಯ ಪ್ರಮಾಣ ಶೇ 80% ರಿಂದ 90% ಅಂದಾಜಿಸಲಾಗಿದೆ. ಈ ನಷ್ಟವನ್ನು ಅಳಿದುಳಿದ ಬೆಳೆಯಿಂದ ತುಂಬಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆ ರೈತರನ್ನು ಮತ್ತಷ್ಟು ಹೈರಾಣಾಗಿಸಿದೆ ಎಂದಿದ್ದಾರೆ.
ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೆಳೆಗಳು ಹಾನಿಯಾದಾಗ ವಿಶೇಷ ಪ್ಯಾಕೇಜ್ ನೀಡುವಂತೆ, ಈಗ ನೆಟೆ ರೋಗದಿಂದ ಹಾನಿಗೊಳಗಾದ ರಾಜ್ಯದ ತೊಗರಿ ಬೆಳೆಗಾರರಿಗೆ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರೈತರ ನೋವಿಗೆ ಸ್ಪಂದಿಸಿ ಜೊತೆಗೆ ಪ್ರತಿ ಎಕರೆ ಪ್ರದೇಶಕ್ಕೆ 25,000 ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka