ರೀ ಪೋಲಿಸ್ರೇ… ನಾನು ಕುಡುಕ ಅಲ್ಲಾ ಕಣ್ರಿ… ನಾನು ದೇವ್ರು | ಮಧ್ಯರಾತ್ರಿ ಪೊಲೀಸರನ್ನು ಸುಸ್ತಾಗಿಸಿದ ಕುಡುಕ ದೇವ್ರು!
ಕೊಟ್ಟಿಗೆಹಾರ: ನಾನು ದೇವರು, ನನ್ನ ಮೂಲಸ್ಥಾನಕ್ಕೆ ನನ್ನನ್ನು ಕರೆದೊಯ್ಯಿರಿ ಎಂದು ವ್ಯಕ್ತಿಯೋರ್ವ ಪೊಲೀಸರ ತಲೆ ತಿಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದ್ದು, ನಿಮಗೆ ಬೇಕಾದ ವರ ಕೇಳಿ ನಾನು ಕೊಡುತ್ತೇನೆ ಎಂದಿದ್ದಾನೆ.
ಮಧ್ಯರಾತ್ರಿ ರಾತ್ರಿ ರಸ್ತೆ ಮಧ್ಯೆ ಕುಳಿತು ಕಿರಿಕ್ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆಯೊಯ್ಯಲು ಯತ್ನಿಸಿದ್ದಾರೆ. ಈ ವೇಳೆ, ನನ್ನನ್ನ ಮೂಲ ಸ್ಥಾನಕ್ಕೆ ಕರೆದೊಯ್ಯೋದಾದ್ರೆ ಬರ್ತೀನಿ, ಇಲ್ಲಂದ್ರೆ ಬರಲ್ಲ ಎಂದು ವ್ಯಕ್ತಿ ಹಠ ಹಿಡಿದಿದ್ದ.
ರೀ ಪೋಲಿಸ್ರೇ… ನಾನು ಕುಡುಕ ಅಲ್ಲಾ ಕಣ್ರಿ… ನಾನು ದೇವ್ರು… ನಿಮಗೆ ವರ ಬೇಕಾ… ಅಗೋ…. ಅಲ್ಲಿ ನೋಡಿ… ಆ ಮೂಲೆಯೇ ನನ್ನ ಮೂಲಸ್ಥಾನ, ಅಲ್ಲಿಗೆ ಕರೆದೊಯ್ಯಿ ಎಂದು ಪೊಲೀಸರಿಗೆ ವ್ಯಕ್ತಿ ದೇವರಂತೆ ಆದೇಶಿಸಿದ್ದಾನೆ.
ಅಪ್ಪಾ… ಅಲ್ಲಿಗೆ ಕರ್ಕೊಂಡ್ ಹೋಗ್ತೀವಿ ಬಾರಪ್ಪಾ ಎಂದು ಪೊಲೀಸರು ಆತನನ್ನು ಜೀಪ್ ಹತ್ತಿಸಲು ಮುಂದಾಗಿದ್ದಾರೆ. ಆದರೆ ಆ ವ್ಯಕ್ತಿ ಜೀಪು ಹತ್ತದೇ ಮತ್ತೆ ತನ್ನ ದೇವರಾಟವನ್ನು ಮುಂದುವರಿಸಿದ್ದಾನೆ.
ದೇವರನ್ನು ಒಲಿಸಿಕೊಳ್ಳುವುದು ಸುಲಭ ಆದ್ರೆ, ಮಧ್ಯರಾತ್ರಿ ಬೀದಿಯಲ್ಲಿ ಸಿಕ್ಕಿದ ಕುಡುಕ ದೇವ್ರನ್ನು ಮನವೊಲಿಸುವಷ್ಟರಲ್ಲಿ ಮಲೆನಾಡಿನ ಚಳಿಯಲ್ಲೂ ಪೊಲೀಸರು ಬೆವರಿ ಸುಸ್ತಾಗುವಂತಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka