ದಲಿತ ಯುವಕನ ಹತ್ಯೆ ಆರೋಪಿಗಳನ್ನು ಬಂಧಿಸದ ಪೊಲೀಸರು: ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ದಲಿತ ಸಂಘಟನೆಗಳು
ಬೆಳ್ತಂಗಡಿ: ಶಿಬಾಜೆ ಕುರುಂಜ ಎಂಬಲ್ಲಿ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ ಅಮಾಯಕ ದಲಿತ ಯುವಕ ಶ್ರೀಧರನನ್ನು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ನಡೆಸಿದ್ದು, ಅರೋಪಿಗಳ ವಿರುದ್ಧ ಕೊಲೆ, ದರೋಡೆ, ಹಲ್ಲೆ,ದಲಿತ ದೌರ್ಜನ್ಯ ಪ್ರಕರಣ ದಾಖಲಾದರು ಆರೋಪಿಗಳನ್ನು ಬಂಧಿಸದೇ ರಾಜಕೀಯವಾಗಿ ರಕ್ಷಣೆ ನೀಡಲಾಗುತ್ತಿದೆ ಎಂದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ನೇಮಿರಾಜ್ ಕೆ. ಹೇಳಿದರು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಪಿಗಳನ್ನು ತಕ್ಷಣ ಬಂಧಿಸದಿದ್ದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಬೆಳ್ತಂಗಡಿ ಸಮಿತಿ, ಮೊಗೇರ ಸಂಘ ಸಮನ್ವಯ ಸಮಿತಿ ಬೆಳ್ತಂಗಡಿ, ನಲಿಕೆಯವರ ಸಮಾಜ ಸೇವಾ ಸಂಘ ರಿ ಬೆಳ್ತಂಗಡಿ ಇದರ ವತಿಯಿಂದ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶ್ರೀಧರ ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾಗಿದ್ದು, ಶಿಬಾಜೆಯ ಫಾರ್ ಹೌಸ್ ನಲ್ಲಿ ದುಡಿಯುತ್ತಿದ್ದನು. ಇದರಲ್ಲಿ ಹಿಂದೆ ದುಡಿಯುತ್ತಿದ್ದ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷಣ ಪುಜಾರಿ, ಅನಂದ ಗೌಡ, ಸೇರಿ ಶ್ರೀಧರನ ಮದುವೆ ವಿಚಾರ ಮುಂದಿಟ್ಟು ಹಿಗ್ಗಾಮುಗ್ಗಾ ಥಳಿಸಿದ್ದು, ಈತನ ಕಿರುಚಾಟ ಕೇಳಿ ತೋಟದ ಸುಪರ್ ವೈಸರ್ ಹರೀಶ್, ಟಿ.ಸಿ.ಅಬ್ರಾಹಂ, ಪರಮೇಶ್ವರ ಗೌಡ ಆತನನ್ನು ರಕ್ಷಿಸಿ ಆತ ಉಳಿದುಕೊಳ್ಳುವ ಮನೆಗೆ ಕಳಿಸಿದ್ದಾರೆ.
ಅದೇ ದಿನ ರಾತ್ರಿ ಹಲ್ಲೆಯ ವಿಷಯ ಬಹಿರಂಗವಾಗಿದ್ದು, ಇದರಿಂದ ಪ್ರಕರಣ ದಾಖಲಾಗಬಹುದು ಎಂಬ ಉದ್ದೇಶದಿಂದ ಮತ್ತೆ ಬೆದರಿಸಿ ಹಲ್ಲೆ ನಡೆಸಿ, ಮದ್ಯ ಮತ್ತು ಕೀಟನಾಶವನ್ನು ಬಾಯಿಗೆ ಹಾಕಿ ಕೊಲೆ ಮಾಡಿ, ಪ್ರಕರಣವನ್ನು ದಾರಿ ತಪ್ಪಿಸುವ ಉದ್ದೇಶದಿಂದ ಮೃತದೇಹವನ್ನು ಬೆತ್ತಲೆ ಮಾಡಿ ಸ್ವಲ್ಪ ದೂರ ಹಾಕಿ ಹೋಗಿದ್ದಾರೆ. ಬಳಿಕ 9,500 ನಗದನ್ನು ದೋಚಿದ್ದಾರೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಚಂದು ಎಲ್. ಮಾತನಾಡಿ, ಸಿವಿಲ್ ಪ್ರಕರಣದಲ್ಲಿ ಮಧ್ಯ ರಾತ್ರಿ ಹೋಗಿ ಪೊಲೀಸರು ಬಂಧಿಸಿದ ಉದಾಹರಣೆ ಇದೆ. ಆದರೆ ಇದರಲ್ಲಿ ಇಷ್ಟು ದೊಡ್ಡ ಪ್ರಕರಣ ದಾಖಲಾದರೂ ಬಂಧನವಾಗಿಲ್ಲ. ರಾಜಕೀಯವಾಗಿ ರಕ್ಷಣೆ ನೀಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಶಾಸಕ ಹರೀಶ್ ಪೂಂಜರವರು ಮಧ್ಯಪ್ರವೇಶಿಸಿ ದಲಿತ ಯುವಕನಿಗೆ ನ್ಯಾಯ ಕೊಡಿಸಬೇಕು. ಸರಕಾರ ಇದನ್ನು ವಿಶೇಷ ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಿ ಉನ್ನತ ಮಟ್ಟದಲ್ಲಿ ಸಿಒಡಿ ತನಿಖೆ ನಡೆಸಬೇಕು. ಮತ್ತು ದೂರುದಾರರಿಗೆ, ಸಾಕ್ಷಧಾರರಿಗೆ ರಕ್ಷಣೆ ಕೊಡಬೇಕು. ತಕ್ಷಣ ಅರೋಪಿಗಳ ಬಂಧನ ಆಗದಿದ್ದರೆ, ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮನ್ವಯ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೊಂಚಾಡಿ, ಇದೊಂದು ಉದ್ದೇಶ ಪೂರ್ವಕ ಕೊಲೆಯಾಗಿದೆ ಎಂಬುದು ಹೊರನೋಟಕ್ಕೆ ಸ್ಪಷ್ಟವಾಗುತ್ತಿದೆ. ದೂರು ದಾಖಲಾದರೂ ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸಿಲ್ಲ. ಸ್ಥಳೀಯ ಬಿಜೆಪಿ ಮುಖಂಡ ಗ್ರಾಮ ಪಂಚಾಯತು ಅಧ್ಯಕ್ಷ ಆರೋಪಿಗಳನ್ನು ರಕ್ಷಿಸುತ್ತಿದ್ದಾನೆ. ಆರೋಪಿಗಳನ್ನು ಆತನೇ ಎಲ್ಲೆಡೆ ಕರೆದೊಯ್ಯುತ್ತಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೊಗೇರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಯಪ್ರಕಾಶ್, ಕನ್ಯಾಡಿ ತಾಲೂಕು ಕಾರ್ಯದರ್ಶಿ ಜಗದೀಶ್ ಕಕ್ಕಿಂಜೆ, ಜಿಲ್ಲಾ ಸಮಿತಿ ಸದಸ್ಯ ವೆಂಕಣ್ಣ ಕೊಯ್ಯೂರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka