ಯಡಿಯೂರಪ್ಪ ಹೆಚ್ಚು ದಿನ ಸಿಎಂ ಆಗಿರಲ್ಲ ಎಂದ ಯತ್ನಾಳ್ ವಿರುದ್ಧ ಶಿಸ್ತಿನ ಕ್ರಮ?
ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷ ಶಿಸ್ತಿನ ಕ್ರಮವನ್ನು ಜರಗಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾತನಾಡಿದ್ದ ಸಿ.ಟಿ.ರವಿ, ಯಡಿಯೂರಪ್ಪ ಅವರು ನಮ್ಮ ನಾಯಕರು. ಅವರನ್ನು ಪಕ್ಷವೇ ಆಯ್ಕೆ ಮಾಡಿದೆ. ಯತ್ನಾಳ್ ಯಾವ ವಿಚಾರಕ್ಕೆ ಸಂಬಂಧಿಸಿ ಬೇಕಾದರೂ ಈ ಹೇಳಿಕೆ ನೀಡಿರಲಿ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಅವರು ಹೇಳಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಉಳಿಯುವುದಿಲ್ಲ. ಹೈಕಮಾಂಡ್ ಗೂ ಅವರು ಸಾಕಾಗಿ ಹೋಗಿದ್ದಾರೆ ಎಂದು ಬಿಜೆಪಿ ಶಾಸಕ ಯತ್ನಾಳ್ ಅವರು ಹೇಳಿಕೆ ನೀಡಿದ್ದರು. ಇದು ರಾಜ್ಯ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು.
ಅಂದ ಹಾಗೆ ಇಂತಹ ಹೇಳಿಕೆಯನ್ನು ಯತ್ನಾಳ್ ಅವರು ನೀಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಯಡಿಯೂರಪ್ಪ ನಮ್ಮ ನಾಯಕರಲ್ಲ. ನಮ್ಮ ನಾಯಕರು ಮೋದಿ ಮತ್ತು ಅಮಿತ್ ಶಾ ಎಂದು ಅವರು ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿಯೂ ಅವರ ಮೇಲೆ ಶಿಸ್ತಿನ ಕ್ರಮವನ್ನ ಜರಗಿಸುತ್ತೇವೆ ಎಂದಷ್ಟೇ ಹೇಳಿ ಪಕ್ಷದ ಮುಖ್ಯಸ್ಥರು ಸುಮ್ಮನಿದ್ದರು. ಪಕ್ಷದ ಹೈಕಮಾಂಡ್ ನಿಂದ ಸದ್ಯ ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬಂತೆ ಯತ್ನಾಳ್ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.