ನಾಳೆಯಿಂದ 5 ದಿನ ಚಿಕ್ಕಲ್ಲೂರು ಜಾತ್ರೆ: ಪ್ರಾಣಿ ಬಲಿ ನಿಷೇಧ

ಚಾಮರಾಜನಗರ: ಐದು ದಿನಗಳ ಕಾಲ ನಡೆಯುವ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯು ಶುಕ್ರವಾರದಿಂದ ಪ್ರಾರಂಭವಾಗಲಿದ್ದು ದೂರದೂರುಗಳಿಂದ ಸಾವಿರಾರು ಮಂದಿ ಭಕ್ತರು ಟೆಂಟ್ ಹೂಡುತ್ತಿದ್ದಾರೆ.
ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗುವ ಈ ಜಾತ್ರೆಗೆ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಗ್ರಾಮಪಂಚಾಯಿತಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿದ್ದು ಭಕ್ತರಿಗೆ ಕುಡಿಯುವ ನೀರು, ಆಸ್ಪತ್ರೆ, ಮುಂತಾದ ಸೌಲಭ್ಯಗಳಿವೆ ಇವೆ.
ಜ.6 ರ ರಾತ್ರಿ ನಡೆಯುವ ಚಂದ್ರಮಂಡಲೋತ್ಸವದೊಂದಿಗೆ ಜಾತ್ರೆಗೆ ಚಾಲನೆ ಸಿಗಲಿದ್ದು ಶನಿವಾರ ಎರಡನೇ ದಿನ ದೊಡ್ಡವರ ಸೇವೆ, ಮೂರನೇ ದಿನ ಭಾನುವಾರ ಮುಡಿಸೇವೆ, ನಾಲ್ಕನೇ ದಿನ ಸೋಮವಾರ ಪಂಕ್ತಿಸೇವೆ ಹಾಗೂ ಮಂಗಳವಾರ ನಡೆಯುವ ಮುತ್ತತ್ತಿರಾಯನ ಸೇವೆಯೊಂದಿಗೆ ಐದು ದಿನಗಳ ಜಾತ್ರೆಗೆ ತೆರೆಬೀಳಲಿದೆ.
ಪ್ರಾಣಿ ಬಲಿ ನಿಷೇಧ:
ಕೊಳ್ಳೇಗಾಲ ತಾಲ್ಲೂಕಿನ ಶ್ರೀ ಕ್ಷೇತ್ರ ಚಿಕ್ಕಲೂರು ಹೊಸ ಮಠದಲ್ಲಿ ಜನವರಿ 6 ರಿಂದ 10 ರವರೆಗೆ ನಡೆಯಲಿರುವ ಶ್ರೀ ಘನಲೀಲ ಸಿದ್ದಪ್ಪಾಜಿ ಜಾತ್ರೆಯಲ್ಲಿ ದೇವಸ್ಥಾನದ ಆವರಣದಲ್ಲಿ ಅಥವಾ ಗ್ರಾಮದ ವ್ಯಾಪ್ತಿಯಲ್ಲಿ ಹಾಗೂ ದೇವಸ್ಥಾನದ ಸುತ್ತಮುತ್ತ ಭಕ್ತಾದಿಗಳು/ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ/ಪಕ್ಷಿ ಬಲಿ ನೀಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಪ್ರಾಣಿಬಲಿ ನಡೆಯದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ಜಾತ್ರೆಗೆ ಕುರಿ, ಕೋಳಿ, ಮೇಕೆ ಹಾಗೂ ಮಾರಕಾಸ್ತ್ರಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅಕ್ರಮ ಮದ್ಯ ಮಾರಾಟ ಇನ್ನಿತರ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಚೆಕ್ ಪೋಸ್ಟ್ ತೆರೆಯಲಾಗುತ್ತಿದ್ದು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಇನ್ನು , ಪ್ರಾಣಿದಯಾ ಸಂಘದ ದಯಾನಂದ ಸ್ವಾಮೀಜಿ ಇಂದು ಸುದ್ದಿಗೋಷ್ಠಿ ನಡೆಸಿ ” ಚಿಕ್ಕಲ್ಲೂರು ಜಾತ್ರೆ, ಬಿಳಿಗಿರಿರಂಗನ ಬೆಟ್ಟದ ಜಾತ್ರೆ, ಕುರುಬನ ಕಟ್ಟೆ ಜಾತ್ರೆ, ಶಿಂಷಾ ಮಾರಮ್ಮನ ಜಾತ್ರೆಯಲ್ಲಿ ಕಟ್ಟುನಿಟ್ಟಾಗಿ ಪ್ರಾಣಿ ಬಲಿಯನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw