ಅಶ್ಲೀಲ ಚಿತ್ರ ನೋಡುತ್ತಿದ್ದೀರಾ? | ಮಕ್ಕಳ ಅಶ್ಲೀಲ ಚಿತ್ರ ಹರಡಿದ, ವೀಕ್ಷಿಸಿದ, ಡೌನ್ ಲೋಡ್ ಮಾಡಿದವರ ಬಂಧನ
ತಿರುವನಂತಪುರಂ: ಮಕ್ಕಳ ಅಶ್ಲೀಲ ಚಿತ್ರ ಹರಡಿದವರು ಹಾಗೂ ವೀಕ್ಷಿಸಿದವರು, ಡೌನ್ ಲೋಡ್ ಮಾಡಿದವರನ್ನು ಕೇರಳ ಇಂಟರ್ಪೋಲ್ ಸಹಯೋಗದೊಂದಿಗೆ ಕೇರಳ ಪೊಲೀಸರು ಬಂಧಿಸಿದ್ದು, ಈಗಾಗಲೇ 41 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹರಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ವಿಡಿಯೋ ತುಣುಕುಗಳನ್ನು ಹರಡಿದವರು ಮಾತ್ರವಲ್ಲದೇ ವೀಕ್ಷಿಸಿದವರು, ಡೌನ್ ಲೋಡ್ ಮಾಡಿಕೊಂಡವರನ್ನು ಪೊಲೀಸರು ಬಂಧಿಸಿದ್ದಾರೆ. ಈಗ 41 ಜನರನ್ನು ಬಂಧಿಸಲಾಗಿದೆ. ಈ 41 ಬಂಧಿತರಲ್ಲಿ ಡಾಕ್ಟರ್ ಗಳು, ಐಟಿ ಸಿಬ್ಬಂದಿಗಳು ಕೂಡ ಸೇರಿದ್ದಾರೆ.
ಇಂಟರ್ಪೋಲ್ ಸಹಯೋಗದೊಂದಿಗೆ ಕೇರಳ ಪೊಲೀಸರು ‘ಆಪರೇಷನ್ ಪಿ ಹಂಟ್’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕೇರಳದ 464 ಸ್ಥಳಗಳಿಗೆ ದಾಳಿ ನಡೆಸಿದ್ದು, 339 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವವರ ವಿರುದ್ಧ ಕಳೆದ ಎರಡು ವರ್ಷಗಳಲ್ಲಿ 525 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಮಕ್ಕಳ ಅಶ್ಲೀಲ ಚಿತ್ರ ಹರಡಿದವರು, ವೀಕ್ಷಿಸಿದ ಆರೋಪಿಗಳ ಪೈಕಿ ವೃತ್ತಿಪರರೇ ಹೆಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಡಿಜಿಪಿ ಮನೋಜ್ ಅಬ್ರಹಾಂ ನೇತೃತ್ವದಲ್ಲಿ ಆಪರೇಷನ್ ಪಿ ಹಂಟ್ ನಡೆಯುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಪಥನಮತ್ತಟ್ಟದಿಂದ ಓರ್ವ ವೈದ್ಯನನ್ನು ಕೂಡ ಬಂಧಿಸಲಾಗಿದೆ. ತ್ರಿಶೂರ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪಾಲಾಯನೂರಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಮಕ್ಕಳ ಅಶ್ಲೀಲ ಚಿತ್ರ ಹರಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಚೆಪ್ಪಾರ ಮೆಪ್ಪಡಂ ಮೂಲದ ಪರಕ್ಕಲ್ ಪೀಡಿಕಾಯಿಲ್ ಆಶಿಕ್(30, ಉತ್ತರ ಕೇರಳದ ಮೂಲದ ಇಕ್ಬಾಲ್ ಪಜಾಯನೂರು ಪೊಲೀಸರಿಂದ ಬಂಧಿತರಾದವರಾಗಿದ್ದಾರೆ.