ರಾಜ್ಯ, ಹೊರ ರಾಜ್ಯಗಳಲ್ಲಿ 35 ಕಳವು ಪ್ರಕರಣಗಳ ಆರೋಪಿಯ ಬಂಧನ: ಕದ್ದ ಹಣ ಮಣ್ಣಿನಲ್ಲಿ ಹೂತು ಹಾಕಿ ಪರಾರಿಯಾಗಿದ್ದ!
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಬಳಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ 35ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಪಡಂಗಡಿ–ಮದ್ದಡ್ಕ ನಿವಾಸಿ ಕುಂಞಿಮೋನು ಯಾನೆ ಜಾಫರ್ ಯಾನೆ ಹಮೀದ್ (48) ಎಂದು ಗುರುತಿಸಲಾಗಿದೆ.
ನವೆಂಬರ್ 16ರ ತಡರಾತ್ರಿ ಕೆ.ಎಸ್.ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿನ ಹೂವು ವ್ಯಾಪಾರದ ಹೋಲ್ ಸೇಲ್ ಅಂಗಡಿಯಲ್ಲಿ ಸುಮಾರು 9 ಲಕ್ಷ ರೂಪಾಯಿ ಕಳವು ಮಾಡಿದ್ದು ಅದನ್ನು ಮಣ್ಣಿನಡಿ ಹೂತು ಹಾಕಿ ತಲೆಮರೆಸಿಕೊಂಡಿದ್ದ. ಆದರೆ ಆತ ಹಣವನ್ನು ಹೂತಿಟ್ಟಿದ್ದ ಜಾಗದಲ್ಲಿ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಈ ವೇಳೆ ಜೆಸಿಬಿಯಿಂದ ನೆಲ ಅಗೆಯುವಾಗ ಜೆಸಿಬಿ ಚಾಲಕನಿಗೆ ದುಡ್ಡಿನ ಗಂಟು ಸಿಕ್ಕಿತ್ತು. ಬಳಿಕ ತಪಾಸಣೆ ನಡೆಸಿ 5.80 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಸುಮಾರು 35ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಮೀದ್ ನ ವಿರುದ್ಧ 22 ವಾರೆಂಟ್ ಜಾರಿಯಾಗಿತ್ತು. ಈತನ ವಿರುದ್ಧ ಬಂದರ್ ಠಾಣೆಯಲ್ಲಿ ನಾಲ್ಕು, ಪುತ್ತೂರು ನಗರ ಠಾಣೆಯಲ್ಲಿ 2, ಉಪ್ಪಿನಂಗಡಿ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಠಾಣೆಯಲ್ಲಿ ತಲಾ ಒಂದು, ಚಿಕ್ಕಮಗಳೂರು ಗ್ರಾಮಾಂತರ, ವೇಣೂರು, ಬೆಳ್ತಂಗಡಿಯಲ್ಲಿ ತಲಾ 2, ಪುಂಜಾಲಕಟ್ಟೆ, ಶೃಂಗೇರಿ, ಬಂಟ್ವಾಳ, ಮೂಡಿಗೆರೆ, ಬೇಲೂರು, ಕಡಬ, ಧರ್ಮಸ್ಥಳ, ಹರಿಹರಪುರ, ಕೊಡಗು ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw