ತಂತ್ರ ಕುತಂತ್ರಗಳಿಗೆ ಬಲಿಯಾಗದಿರಲಿ ನಮ್ಮ ಗಣತಂತ್ರ - Mahanayaka
10:15 AM Friday 13 - December 2024

ತಂತ್ರ ಕುತಂತ್ರಗಳಿಗೆ ಬಲಿಯಾಗದಿರಲಿ ನಮ್ಮ ಗಣತಂತ್ರ

republic day
26/01/2023

  • ಚಂದ್ರಕಾಂತ್ ಹಿರೇಮಠ್,  ಬೆಂಗಳೂರು

    ಜನವರಿ 26, 2023. ರಂದು ನಾವೆಲ್ಲ 73ನೇ ವರ್ಷದ ಗಣರಾಜ್ಯೋತ್ಸವವನ್ನು ಸ್ವಾಗತಿಸಿ ಆಚರಿಸಲಿದ್ದೇವೆ. ನಮಗೆಲ್ಲಾ ತಿಳಿದಿರುವಂತೆ 1950 ಜನವರಿ 26 ರಂದು ನಮ್ಮ ದೇಶ ಗಣರಾಜ್ಯವಾಯಿತು. ಗಣರಾಜ್ಯ ಎಂದರೇ, ಪ್ರಜಾಪ್ರಭುತ್ವದ ತತ್ವದ ಅಡಿ ರೂಪಿತವಾದ ಜನರಿಂದ ಚುನಾಯಿತವಾದ ಸರ್ಕಾರ ಆಡಳಿತ ನಡೆಸುವುದು ಎಂದರ್ಥ. ಇಲ್ಲಿಯ ಜನರು ಸೂಕ್ತ ಪ್ರತಿನಿಧಿಗಳಿಗೆ ತಮ್ಮ ಪರವಾಗಿ ದೇಶದ ಒಳಿತಿಗಾಗಿ ಆಡಳಿತ ನಡೆಸುವ ಅಧಿಕಾರವನ್ನು ನೀಡಿರುತ್ತಾರೆ. ಚುನಾವಣೆ ಎಂಬುದು ಪ್ರಜಾಪ್ರಭುತ್ವದಲ್ಲಿ ವ್ಯವಸ್ಥಿತವಾದ ಒಂದು ಸಂವಿಧಾನಾತ್ಮಕ ಪ್ರಕ್ರಿಯೆ, ಇಲ್ಲಿ ಸರ್ಕಾರದ ಅಧಿಕಾರ ಜನರ ಹಿಡಿತದಲ್ಲಿರುತ್ತದೆ.

    ಹಾಗಾದರೆ ಪ್ರಜಾಪ್ರಭುತ್ವ ಎಂದರೇನು? ಅಬ್ರಾಹಿಂ ಲಿಂಕನ್ ಅವರ ಪ್ರಕಾರ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಇಲ್ಲಿ ಪ್ರಜೆಗಳು ಕಾಲಕಾಲಕ್ಕೆ ಚುನಾವಣೆಯ ಮೂಲಕ ದೇಶದ ಒಳಿತಿಗಾಗಿ ಮತ್ತು ಆಡಳಿತ ಸುವ್ಯವಸ್ಥೆಗಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಜನಪ್ರತಿನಿಧಿಗಳು ಜಾತಿ ಜನಸಂಖ್ಯಾವಾರು ಆಯಾ ಜಾತಿಗಳಿಗೆ ಸಿಗಬೇಕಾದ ಸವಲತ್ತುಗಳನ್ನು ತಪ್ಪದೆ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ತಲುಪಿಸುವ ಕೆಲಸ ಮಾಡಿದಾಗ ಮಾತ್ರ ಸಂವಿಧಾನಕ್ಕೆ ಗೌರವ ಸಿಕ್ಕಂತಾಗುತ್ತದೆ ಎಂದಿದ್ದಾರೆ. ಗಣರಾಜ್ಯೋತ್ಸವ ಸಾಮಾನ್ಯ ದಿನವಲ್ಲ ನಮ್ಮ ಭಾರತ ದೇಶವು ಸಂಪೂರ್ಣ ಸ್ವತಂತ್ರವನ್ನು ಪಡೆದುಕೊಂಡ ದಿನವಾಗಿದೆ.

    ಭಾರತವು 15 ಅಗಸ್ಟ್ 1947 ರಂದು ಸ್ವತಂತ್ರಗೊಂಡರು, 26 ಜನವರಿ 1950 ರಂದು ಭಾರತಕ್ಕೆ ಹೊಸದಾಗಿ ರಚಿತವಾದ ಸಮಾನತೆಯ ಸಂವಿಧಾನವನ್ನು ಜಾರಿಗೆ ತಂದಾಗ ಅದು ಸಂಪೂರ್ಣವಾಗಿ ಸ್ವತಂತ್ರವಾಯಿತು ಎನ್ನುವುದು ಪ್ರಭುದ್ಧ ಭಾರತದ ಪ್ರಜೆಗಳ ನಿಲುವುಗಳಾಗಿವೆ. ಭಾರತದಲ್ಲಿ ಸಂವಿಧಾನ ಜಾರಿಯಾದ ನಂತರ ಈ ದೇಶದಲ್ಲಿ ತುಳಿತಕ್ಕೊಳಗಾದ ನಿಮ್ನವರ್ಗಗಳಿಗೆ ವಿದ್ಯೆಯಲ್ಲಿ ಉದ್ಯೋಗದಲ್ಲಿ ಸಮಾನತೆ ದೊರೆಯಲು ಪ್ರಾರಂಭವಾಯಿತು. ಈ ದೇಶದ ಹೆಣ್ಣುಮಗಳು ಸಹ ಎಲ್ಲಾ ಸವಲತ್ತುಗಳಿಂದ ವಂಚಿತಳಾಗಿದ್ದು ಸಂವಿಧಾನ ಜಾರಿಯಾದ ತಕ್ಷಣ ಓದು ಬರೆಯಲು ಪ್ರಾರಂಭಿಸಿದಳು. ಉದ್ಯೋಗದಲ್ಲೂ ಸಮಪಾಲು ದೊರೆಯಿತು.   ದೇಶದ ಹೆಣ್ಣುಮಕ್ಕಳ ಅಧಿಕಾರ, ಆಸ್ತಿಯಲ್ಲಿ ಪಾಲು, ಉದ್ಯೋಗದಲ್ಲಿ ಸಮಾನತೆ, ವಿದೇಯಲ್ಲಿ ಸಮಾನತೆ ಎಲ್ಲವನ್ನು ಕಲ್ಪಿಸದಿದ್ದಲ್ಲಿ ತನ್ನ ಮಂತ್ರಿಪದವಿಗೆ ರಾಜೀನಾಮೆ ನೀಡುವುದಾಗಿ ಬಾಬಾಸಾಹೇಬರು ಪಟ್ಟು ಹಿಡಿದು ಕೂರುತ್ತಾರೆ.  ಕೊನೆಗೆ ಹೆಣ್ಣುಮಕ್ಕಳ ವಿಮೋಚನೆಗಾಗಿ ತನ್ನ ಮಂತ್ರಿಪದವಿಯನ್ನು ತೊರೆಯುತ್ತಾರೆ. ನಂತರ ಸರ್ಕಾರ ಬಾಬಾಸಾಹೇಬರ ಮನವಿಯನ್ನು ಸ್ವೀಕರಿಸಿ ಹಿಂದೂ ಕೋಡ್ ಬಿಲ್ ಅನ್ನು ಜಾರಿ ಮಾಡುತ್ತದೆ. ಇಂದು ಈ ಹೆಣ್ಣುಮಗಳು ಪ್ರತೀ ರಂಗದಲ್ಲೂ ತನ್ನನ್ನು ತಾನು ಗುರುತಿಸಿಕೊಂಡು ಸ್ವಾತಂತ್ರದ ಬದುಕು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾಳೆ ಎಂದರೆ ಅದು ಯಾವ ಧರ್ಮ ಗ್ರಂಥಗಳಿಂದ ಸಿಕ್ಕಂತಹ ವಿಮೋಚನೆಯಲ್ಲಾ ಅದು ಬಾಬಾಸಾಹೇಬ್ ಡಾ.  ಅಂಬೇಡ್ಕರ್ ರವರು ಕೊಟ್ಟಸಂವಿಧಾನದ ಪ್ರತಿಫಲ ಎನ್ನುವುದನ್ನು ಈ ದೇಶದ ಹೆಣ್ಣುಮಕ್ಕಳು ಮರೆಯುವಂತಿಲ್ಲಾ.
    ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ತಿತ್ವವನ್ನು ಸ್ಥಾಪಿಸಿದ ದಿನ ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು, ಅಧಿಕಾರಕ್ಕಾಗಿ ಮತ್ತು ಅವರ ಓಲೈಕೆಗಾಗಿ ಹಲವಾರು ಕಸರತ್ತು ಹೇಳಿಕೆಗಳು ಆಮಿಷಗಳು ಎಲ್ಲವೂ ಚುನಾವಣೆಯ ಹೊತ್ತಿನಲ್ಲಿ ನಮ್ಮ ಕಣ್ಣ ಮುಂದೆ ನಡೆಯುವ ಘಟನೆಗಳೇ. ಅದರ ಜೊತೆ ಜೊತೆಗೆ 2013 ರಲ್ಲಿ ತೆರೆ ಕಂಡಂತಹ ಉಪೇಂದ್ರರವರ ಟೋಪಿವಾಲ ಚಲನಚಿತ್ರದಲ್ಲಿ ಹಲವಾರು ಹಗರಣಗಳ ಬಗ್ಗೆ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ತುಂಬಾ ಮಾರ್ಮಿಕವಾಗಿ ವರ್ಣಿಸಿದ್ದಾರೆ.

    1. 1990 ರಲ್ಲಿ ಬೋಪೂರ್ಸ ಹಗರಣ 200 ಕೋಟಿ.

    2. 1991ರಲ್ಲಿ ಹವಾಲಾ ಹಗರಣ 100 ಕೋಟಿ.

    3. 1992 ರಲ್ಲಿ ಹರ್ಷದ್ ಮೇಹತಾ ಹಗರಣ 4000 ಕೋಟಿ.

    4. 2002 ರಲ್ಲಿ ತೆಲಗಿ ಸ್ಟ್ಯಾಂಪ್ ಪೇಪರ್ ಹಗರಣ 20,000 ಕೋಟಿ.

    5. 2008 ರಲ್ಲಿ 2ಜಿ ಸ್ಪೆಕ್ಟ್ರಮ್ ಹಗರಣ 1.70,000 ಕೋಟಿ.

    6. 2009 ರಲ್ಲಿ ಸತ್ಯಂ ಕಂಪ್ಯೂಟರ್ ಹಗರಣ 14,000 ಕೋಟಿ.

    7. 2010 ರಲ್ಲಿ ಕಾಮನ್ ವೇಲ್ತ್ ಗೇಮ್ ಹಗರಣ 20,000 ಕೋಟಿ.

    8. 2012 ರಲ್ಲಿ ಕಲ್ಲಿದ್ದಲು ಹಗರಣ 1.86,000 ಕೋಟಿ.

    9. 2012 ರಲ್ಲಿ ವಕ್ ಬೋರ್ಡ್ ಲ್ಯಾಂಡ್ ಹಗರಣ 150,000.

    10. 2016 ರಲ್ಲಿ ವಿಜಯಮಲ್ಯ ಬ್ಯಾಂಕ್ ಮೋಸದ ಹಗರಣ 9,000 ಕೋಟಿ.

    12. 1996 ರಲ್ಲಿ ಮೇವಿನ ಹಗರಣ 950 ಕೋಟಿ

    13. 2002 ರಲ್ಲಿ ಸಂಜಯ್ ಅಗರ್ವಾಲ್ ಗೃಹ ಹೂಡಿಕೆ ಹಗರಣ 600 ಕೋಟಿ

    14. 2018 ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀರವ್ ಮೋದಿ ಹಗರಣ 114,000 ಕೋಟಿ.

    ಇಷ್ಟೆಲ್ಲಾ ಹಗರಣಗಳನ್ನು ಗಮನಿಸಿದಾಗ ರಾಜಕೀಯ ಮಾಡುವ ರಾಜಕಾರಣಿಗಳು ಸೋತಿದ್ದಾರೆಯೇ ಹೊರತು, ಸಂವಿಧಾನವೆಂಬುದು ವಿಫಲಗೊಂಡಿಲ್ಲಾ ಎಂದು ಹೇಳಬಹುದು. ಇದು  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದ್ವ0ಸಮಾಡಲು ಹೊರಟಿರುವ ರಾಜಕೀಯ ಕುತಂತ್ರಗಳೇ ಹೊರತು ಸಾಮಾನ್ಯ ಜನರ ಕುತಂತ್ರಗಳಲ್ಲ, ಪ್ರಜೆಗಳನ್ನು ಯಾಮಾರಿಸುವ,ಮೋಸಮಾಡುವ ರಾಜಕಾರಣಿಗಳಿದ್ದಾರೆಯೇ ಹೊರತು, ರಾಜಕಾರಣಿಗಳನ್ನು ಯಾಮಾರಿಸುವ ಮತದಾರರು ಇನ್ನು ಹುಟ್ಟಿಲ್ಲಾ ಎನ್ನುವುದನ್ನು ನಾವು ಮರೆಯುವಂತಿಲ್ಲ. ಈ ಹಗರಣಗಳಲ್ಲಿ ಪಾಲುದಾರರಾಗಿರುವವರೆಲ್ಲಾ ಅನುತ್ಪಾದಕ ವರ್ಗದ ಜನಗಳೇ ಹೊರತು, ಯಾವುದೇ ಉತ್ಪಾದಕ ವರ್ಗದವರಲ್ಲಾ,ಇವರಿಗೆ ಶ್ರಮಿಕವರ್ಗ ಅಥವಾ ಕಾರ್ಮಿಕ ವರ್ಗದವರ ಶ್ರಮಗಳು ಗೊತ್ತಿಲ್ಲವಾದ್ದರಿಂದ ಎಲ್ಲರು ಬಹು ಕೋಟಿ ಹಗರಣಗಳ ಸರದಾರರೇ ಹೊರತು, ಸಾಮಾನ್ಯ ಪ್ರಜೆಗಳ ಸವಲತ್ತುಗಳನ್ನು ಜಾರಿಮಾಡಿದವರಲ್ಲ ಎನ್ನಬಹುದು.ಇವರುಗಳ ಹಿಂದೆ ಒಂದು ದೊಡ್ಡ ರಾಜಕೀಯ ದೊಂಬರಾಟಳು ಎನ್ನುವುದು ಸಾಮಾನ್ಯ ಭಾರತೀಯ ಪ್ರಜೆಗಳ ನಿಲುವಾಗಿದೆ.

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಕುವೆಂಪು ಅವರ ನಾಡಗೀತೆಯ ಸಾಲುಗಳಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ್ ಜೈನರುಧ್ಯಾನ ಎಂಬಂತೆ ಸರ್ವರ ಏಳಿಗೆಗೆ ಸರ್ವರೂ ಶ್ರಮಿಸೋಣ ದೇಶದ ಒಳಿತಿಗಾಗಿ ಮತ ಚಲಾಯಿಸೋಣ. ಭಾರತ ಸಂವಿಧಾನದ ಪೂರ್ವ ಪೀಠಿಕೆಯಂತೆ ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತಾತ್ಮಕ ಗಣರಾಜ್ಯವನ್ನಾಗಿ ರೂಪಿಸೋಣ.

    ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದವ ತೋರಿಸಿ ಬೆಳೆಹಿಸಯ್ಯ
    ಆತನ ತನು ಶುದ್ಧ ಆತನ ಮನ ಶುದ್ಧ
    ಆತನ ಭಾವ ಶುದ್ಧ ಆತನ ಮನೆಯೊಳಗೊಕ್ಕು
    ಲಿಂಗಾರ್ಚನೆ ಮಾಡಿದ ಗುರುಪಾವನನು ನೋಡಾ
    ಬಸವಣ್ಣ.


    ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

    ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

    ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ