ಚಾಮರಾಜನಗರದಲ್ಲಿ ಕಾಂಗ್ರೆಸ್ ಬಸ್ ಯಾತ್ರೆ: ಮತ್ತೆರಡು ಭರವಸೆ, ಮೋದಿ ಸೇರಿ ಬಿಜೆಪಿಗರ ವಿರುದ್ಧ ವಾಗ್ದಾಳಿ
ಚಾಮರಾಜನಗರ: ಕಾಂಗ್ರೆಸ್ ನ ಪ್ರಜಾಧ್ವನಿ ಬಸ್ ಯಾತ್ರೆ ಇಂದು ಚಾಮರಾಜನಗರಕ್ಕೆ ಆಗಮಿಸಿ ನಗರದ ರೇಷ್ಮೇ ಕಾರ್ಖಾನೆ ಸಮೀಪ ಬೃಹತ್ ಸಮಾವೇಶ ನಡೆಸಲಾಯಿತು.
ಈಗಾಗಲೇ ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮೀ ಯೋಜನೆ ಘೋಷಿಸಿದ್ದ ಕೈಪಡೆ ಇಂದು ಚಾಮರಾಜನಗರ ಆಮ್ಲಜನಕ ದುರಂತದ ಸಂತ್ರಸ್ತರಿಗೆ ಉದ್ಯೋಗ, ಸರ್ಕಾರ ರಚಿಸಿದ ದಿನವೇ 10 ಕೆಜಿ ಅಕ್ಕಿ ಕೊಡಲಾಗುವುದು ಎಂದು ನಾಯಕರು ಘೋಷಿಸಿದರು. ಇದೇ ವೇಳೆ, ನೀವು ಕೊಡುತ್ತಿರುವುದು ನಿಮ್ಮ ಅಭ್ಯರ್ಥಿ ಜೊತೆಗೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ , ರಾಹುಲ್ ಗಾಂಧಿಗೆ ಎಂಬುದನ್ನು ಮರೆಯಬೇಡಿ ಎಂದು ಚುನಾವಣೆಯ ಮತ್ತೊಂದು ತಂತ್ರ ಪ್ರಯೋಗಿಸಿದರು.
ಸತ್ಯ–ಸುಳ್ಳುವಿನ ನಡುವೆ ಚುನಾವಣೆ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಬಾರಿ ಚುನಾವಣೆ ನಡೆಯುತ್ತಿರುವುದು ಸತ್ಯ ಹಾಗೂ ಸುಳ್ಳಿನ ನಡುವೆ , ಬಿಜೆಪಿ ಅವರದ್ದು ಬಾಯಿ ಬಿಟ್ಟರೆ ಬರೀ ಸುಳ್ಳು, ಬಿಜೆಪಿಯವರು ಕರ್ನಾಟಕಕ್ಕೆ ಕಳಂಕ ತಂದಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಅವರ ಬಗ್ಗೆ ಪಾಪದ ಪುರಾಣ ಎಂಬ ಕಿರುಸಂಚಿಕೆ ಹೊರ ತಂದಿದ್ದು ಅದನ್ನು ಶೀಘ್ರ ನಿಮ್ಮ ಮನೆಗೆ ತಲುಪಿಸುತ್ತೇವೆ, ಗೃಹಲಕ್ಷೀ ಯೋಜನೆಗೆ ನಾನು ಹಾಗೂ ಸಿದ್ದರಾಮಯ್ಯ ಸಹಿ ಮಾಡಿರುವ ಚೆಕ್ ಕೂಡ ಕೊಡುತ್ತೇವೆ, ಆಮ್ಲಜನಕ ದುರಂತದ ಸಂತ್ರಸ್ತರಿಗೆ ನೌಕರಿ ಕೊಡುತ್ತೇವೆ ಎಂದು ಘೋಷಿಸಿದರು. ಕಣ್ಣು, ಕಿವಿ ಹಾಗೂ ಹೃದಯವಿಲ್ಲದ ಈ ಸರ್ಕಾರವನ್ನು ಈ ಬಾರಿ ಕಿತ್ತೊಗೆಯಲಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಸಮೀಕ್ಷೆ ಪ್ರಕಾರ 136 ಸೀಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಬ್ಬರಿಗೆ 6 ಸಾವಿರ ರೂ. ಕೊಡುತ್ತೇನೆ ಎಂದು ಶಾಸಕನೊಬ್ಬ ಹೇಳಿದ್ದಾನೆ, ಅವನ ಹೆಸರನ್ನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲ್ಲ, ಬಿಜೆಪಿ ಅವರು ಕೊಟ್ಟ 600 ಭರವಸೆಗಳಲ್ಲಿ 50 ಕೂಡ ಈಡೇರಿಲ್ಲ, ಈ ರೀತಿ ಸರ್ಕಾರ ಬೇಕಾ..? ಎಂದು ಕಿಡಿಕಾರಿದರು.
ಸುಧಾಕರ್ ಸುಳ್ಳಿನ ಸರದಾರ– ಬಂಡಲ್ ಸಚಿವ ಸೋಮಣ್ಣ:
ಇನ್ನು, ಸಿದ್ದರಾಮಯ್ಯ ತಮ್ಮ ಭಾಷಣದುದ್ದಕ್ಕೂ ನರೇಂದ್ರ ಮೋದಿ ಅವರನ್ನು ಅಣಕಿಸುತ್ತಾ ವಾಗ್ದಾಳಿ ನಡೆಸಿ ಡಬಲ್ ಎಂಜಿನ್ ಸರ್ಕಾರವಲ್ಲ, ಎಂಜಿನ್ ಇಲ್ಲದ ಸರ್ಕಾರ ಇದು, ಸಬ್ ಕಾ ಸಾಥ್ ನಲ್ಲಿ ದಲಿತರಿಲ್ಲ, ಹಿಂದುಳಿದವರಿಲ್ಲ, ಅಲ್ಪಸಂಖ್ಯಾತರಿಲ್ಲ, ರೈತರಿಲ್ಲ ಅದರ ಫಲಾನುಭವಿಗಳು ಅಂಬಾನಿ, ಅದಾನಿ, ಬಿಜೆಪಿಯ ಪುಡಾರಿಗಳು ಹಾಗೂ ಮಂತ್ರಿಗಳು ಎಂದು ಜರಿದರು.
ಮೋದಿ ಅವರು ನಮ್ಮ ಪ್ರಧಾನಿಗಳು ಅವರ ಬಗ್ಗೆ ಗೌರವವಿದೆ, ಆದರೆ ಅವರು ಹೇಳಿರುವು ಸುಳ್ಳುಗಳನ್ನು ಹೇಳಬೇಕಲ್ಲಾ..? ಬಿಜೆಪಿ ಎಂಬುದೇ ಒಂದು ಸುಳ್ಳಿನ ಫ್ಯಾಕ್ಟರಿ, ಸಚಿವ ಸುಧಾಕರ್ ಸುಳ್ಳಿನ ಸರದಾರ, ಅವನ ಕೈಯಲ್ಲಿ ನನ್ನ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ, ಆಲಿಬಾಬಾ ಮತ್ತು 40 ಕಳ್ಳರು ಎಂಬ ಗುಂಪಿನಲ್ಲಿ ಆತನೂ ಸದಸ್ಯ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಕರೆಯುತ್ತಿದ್ದಾರೆ, ಅವರು ವಿಪಕ್ಷದಲ್ಲಿದ್ದಾಗ ಏಕೆ ಮಾತನಾಡಲಿಲ್ಲ, ಈಗ ಕಾಂಗ್ರೆಸ್ ಕಾಲದಲ್ಲೂ ಭ್ರಷ್ಟಾಚಾರ ಇತ್ತು ಎಂದು ಸುಳ್ಳು ಹೇಳುತ್ತಿದ್ದಾರೆ, ಬೊಮ್ಮಾಯಿ ಅವರಿಗೆ ತಾಕತ್ ಇದ್ದರೆ, ಧಂ ಇದ್ದರೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ನಾವು ಮಾಡಿರುವ ಆರೋಪಗಳ ಬಗ್ಗೆ ತನಿಖೆ ಮಾಡಿಸಲಿ..! ಯಾರಿಗೆ ಶಿಕ್ಷೆ ಆಗಲಿದೆ ಎಂದು ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.
ಅಧಿಕಾರಕ್ಕೆ ಬಂದ ದಿನವೇ 200 ಯೂನಿಟ್ ಉಚಿತ ವಿದ್ಯುತ್ , ಗೃಹಲಕ್ಷ್ಮಿ ಯೋಜನೆ ಜಾರಿಗಾಗಿ ಆದೇಶ ಹೊರಬೀಳಲಿದೆ, ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆಯುವ ಸರ್ಕಾರ, ನಾವು ಮಂಜೂರು ಮಾಡಿದ ಮನೆಗಳಿಗೆ ಅವರು ಇನ್ನೂ ಹಣ ಕೊಟ್ಟಿಲ್ಲ, ಅಷ್ಟು ಮನೆ-ಇಷ್ಟು ಮನೆ ಎಂದು ಸಚಿವ ಸೋಮಣ್ಣ ಬರೀ ಬಂಡಲ್ ಬಿಡುತ್ತಾರೆ, ನಾವು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಈಗ ಅವರು ಬಂದು ಮಂಗಳಾರತಿ ತೆಗೆದುಕೊಳ್ಳುತ್ತಿದ್ದಾರೆ, ವಾಲ್ಮೀಕಿ ನಿಗಮಕ್ಕೆ ನಾನು 200 ಕೋಟಿ ಕೊಟ್ಟಿದ್ದೆ ಈಗ 80 ಕೋಟಿ ಹಣ ಕೊಟ್ಟಿದ್ದಾರೆ, ಮನ್ ಕಿ ಬಾತ್ ಎನ್ನುವ ಮೋದಿ ಇಲ್ಲಿಯ ತನಕ ರೈತರ ಸಮಸ್ಯೆ, ನಿರುದ್ಯೋಗ ಬಗ್ಗೆ ಒಂದು ಮಾತನಾಡಿಲ್ಲ, ರಾಜ್ಯದ ಭ್ರಷ್ಟಾಚಾರದಲ್ಲಿ ಅವರು ಕೂಡ ಶಾಕೀಲಾಗಿದ್ದಾರೆ ಎಂದು ಆರೋಪಿಸಿದರು.
5 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಹೊಟ್ಟೆ ತುಂಬಾ ಊಟ ಕೊಟ್ಟರೇ ಅವರ ಅಪ್ಪನ ಮನೆ ಗಂಟು ಏನು ಹೋಗೋದು..? ನಾವು ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಪ್ರತಿ ಪಡಿತರದಾರನಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು, ಎಲ್ಲದಕ್ಕೂ ಟ್ಯಾಕ್ಸ್ ಹಾಕಿ ಬಡವರ ರಕ್ತ ಹೀರುತ್ತಿದ್ದಾರೆ ಆದ್ದರಿಂದಲೇ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತಿದ್ದೇವೆ, ರಕ್ತ ಹೀರುವ ಈ ಸರ್ಕಾರವನ್ನು ಮನೆಗೆ ಕಳುಹಿಸಿ, ಸಮ ಸಮಾಜದ ವಿರೋಧಿಗಳ ಕೈಗೆ ಅಧಿಕಾರ ಕೊಡಬೇಡಿ, ನೀವು ಕೊಡುವ ಪ್ರತಿ ಮತ ಅದು ನನಗೆ ಕೊಡುವುದು, ಡಿ.ಕೆ.ಶಿವಕುಮಾರ್ ಗೆ ಕೊಡುವುದು, ರಾಹುಲ್ ಗಾಂಧಿಗೆ ಕೊಡುವುದಾಗಿದೆ, ಕೇಂದ್ರದಿಂದ ಹಣ ತರಲಾಗದ ಈ ಹೇಡಿ ಸರ್ಕಾರ ಸಾಕು ಎಂದು ಆಕ್ರೋಶ ಹೊರಹಾಕಿದರು.
ಸಾಧ್ವಿ ಪ್ರಜ್ಞಾಸಿಂಗ್ ರನ್ನು ಭಯೋತ್ಪಾದಕಿ ಎಂದ ಹರಿಪ್ರಸಾದ್:
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಮ್ಮ ಭಾಷಣದಲ್ಲಿ ಸಂಸದೆ ಸಾಧ್ವಿ ಪ್ರಜ್ಣಾ ಸಿಂಗ್ ರನ್ನು ಭಯೋತ್ಪಾದಕಿ ಎಂದು ಜರಿದ ಘಟನೆ ನಡೆಯಿತು. ಶಿವಮೊಗ್ಗದಲ್ಲಿ ಸಾಧ್ವಿ ಮಾಡಿದ್ದ ಭಾಷಣ ಉಲ್ಲೇಖಿಸಿ ಅವರು ಮಾತನಾಡಿ ನಿಮ್ಮ ಮಕ್ಕಳಿಗೆ ಕಾಂಗ್ರೆಸ್ ನ ಪೆನ್ನು, ಪೇಪರ್ ಬೇಕಾ ಇಲ್ಲಾ ಆ ಭಯೋತ್ಪಾದಕಿ ಹೇಳಿದ ಕತ್ತಿ-ತಲ್ವಾರ್ ಬೇಕಾ ಎಂದು ಯೋಚಿಸಿ ಎಂದರು.
ಮತಾಂಧರಿಗೆ ನಿಮ್ಮ ಓಟ್ ಕೊಡಬೇಡಿ, ಸಂವಿಧಾನ ಬದಲಿಸುತ್ತೇವೆ ಎನ್ನುವವರಿಗೆ ಓಟ್ ಕೊಡಬೇಡಿ, ಸಂವಿಧಾನ ಬದಲಿಸುತ್ತೇವೆ ಎನ್ನುವವನ್ನು ಅರಬ್ಬೀ ಸಮುದ್ರದಲ್ಲಿ ಎಸೆಯಿರಿ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw