ದೈಹಿಕ ಪರೀಕ್ಷೆಯ ನೆಪದಲ್ಲಿ ಇಬ್ಬರು ಯುವತಿಯರಿಗೆ ಕಸ್ಟಮ್ಸ್ ಅಧಿಕಾರಿಯಿಂದ ಲೈಂಗಿಕ ಕಿರುಕುಳ - Mahanayaka
5:08 PM Thursday 12 - December 2024

ದೈಹಿಕ ಪರೀಕ್ಷೆಯ ನೆಪದಲ್ಲಿ ಇಬ್ಬರು ಯುವತಿಯರಿಗೆ ಕಸ್ಟಮ್ಸ್ ಅಧಿಕಾರಿಯಿಂದ ಲೈಂಗಿಕ ಕಿರುಕುಳ

30/12/2020

ನವದೆಹಲಿ: ವಿದೇಶಿ ಮಹಿಳೆಯರಿಗೆ ದೈಹಿಕ ಪರೀಕ್ಷೆಯ ನೆಪದಲ್ಲಿ ಕಿರುಕುಳ ನೀಡಿದ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧೀಕ್ಷಕ ದೇವೇಂದ್ರ ಕುಮಾರ್ ಹುಡೆ ಅಮಾನತುಗೊಂಡ ಅಧಿಕಾರಿಯಾಗಿದ್ದಾನೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಈತ ಉಜ್ಬೇಕಿಸ್ತಾನ್ ಮೂಲದ ಇಬ್ಬರು ಯುವತಿಯರನ್ನು ದೈಹಿಕ ಪರೀಕ್ಷೆಯ ನೆಪದಲ್ಲಿ  ಪರೀಕ್ಷಾ ಕೊಠಡಿಗೆ ಕರೆದೊಯ್ದು, ಲೈಂಗಿಕ ಕಿರುಕುಳ ನೀಡಿದ್ದ.

ಮಹಿಳಾ ಅಧಿಕಾರಿಗಳು ಇಲ್ಲದ ಸಂದರ್ಭದಲ್ಲಿ ದೇವೇಂದ್ರ ಕುಮಾರ್ ಹುಡೆ ಈ ಕೃತ್ಯ ಎಸಗಿದ್ದ.  ಇಬ್ಬರು ಯುವತಿಯರನ್ನು ಕೊಠಡಿಗೆ ಕರೆದೊಯ್ದು ದೈಹಿಕ ಪರೀಕ್ಷೆ ನಡೆಸುವ ನೆಪದಲ್ಲಿ ಅಂಗಾಂಗಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಸಂತ್ರಸ್ತ ಯುವತಿಯರು ತನಿಖಾ ಸಮಿತಿಗೆ ದೂರು ನೀಡಿದ್ದರು.

ಸಂತ್ರಸ್ತೆಯರ ದೂರಿನನ್ವಯ ತನಿಖೆ ಆರಂಭವಾಗಿತ್ತು. ತನಿಖೆಯಲ್ಲಿ ದೇವೇಂದ್ರ ಕುಮಾರ್ ಹುಡೆ ಯುವತಿಯರಿಗೆ ಕಿರುಕುಳ ನೀಡಿರುವುದು ಗೊತ್ತಾಗಿದೆ. ಈತನ ಕೃತ್ಯವನ್ನು ವಾಯುಯಾನ ಗುಪ್ತಚರ ಘಟಕ ಪತ್ತೆ ಮಾಡಿದೆ. ಇದೀಗ ವಿಚಾಣೆ ಸಮಿತಿಯ ಶಿಫಾರಸಿನ ಮೇರೆಗೆ ದೇವೇಂದ್ರ ಕುಮಾರ್ ಹುಡೆನನ್ನು ವಜಾಗೊಳಿಸಲಾಗಿದೆ.

ಇತ್ತೀಚಿನ ಸುದ್ದಿ