ಮೆಸೆಜ್ ಮಾಡಿದ್ದಕ್ಕಾಗಿ ಯುವಕನ ಕೊಲೆ: ಬೆಂಗಳೂರಿನ ಯುವಕನ ಮೃತದೇಹ ಚಾರ್ಮಾಡಿ ಘಾಟ್ ನ ಪ್ರಪಾತದಲ್ಲಿ ಪತ್ತೆ!
ಕೊಟ್ಟಿಗೆಹಾರ: ಕೊಲೆಗಾರರಿಗೆ ಸೇಫ್ ಝೋನ್ ಆಗ್ತಿದ್ಯಾ ಮಲೆನಾಡ ಚಾರ್ಮಾಡಿ ಘಾಟ್ ಅನ್ನೋ ಪ್ರಶ್ನೆಗಳು ಇದೀಗ ಕೇಳಿ ಬಂದಿದ್ದು, ಎಲ್ಲೋ ಕೊಲೆ ಮಾಡಿ ಮೃತದೇಹಗಳನ್ನು ಚಾರ್ಮಾಡಿ ಘಾಟ್ ನಲ್ಲಿ ಎಸೆಯಲಾಗುತ್ತಿದ್ದು, ಇದೀಗ ಚಾರ್ಮಾಡಿ ಘಾಟ್ ಪ್ರಪಾತದಲ್ಲಿ ಮತ್ತೋರ್ವ ಯುವಕನ ಮೃತದೇಹ ಪತ್ತೆಯಾಗಿದೆ.
ಯುವತಿಗೆ ಮೆಸೆಜ್ ಮಾಡಿದ್ದಕ್ಕಾಗಿ ಬೆಂಗಳೂರಿನ ಮತ್ತಿಕೆರೆ ನಿವಾಸಿ ಗೋವಿಂದರಾಜು ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಚಾರ್ಮಾಡಿ ಘಾಟ್ ನ ಪ್ರಪಾತಕ್ಕೆ ಎಸೆದಿರುವ ಘಟನೆ ನಡೆದಿದ್ದು, ಈ ಸಂಬಂಧ ಇಂದು ಸ್ಥಳದಿಂದ ಮೃತದೇಹವನ್ನು ಮೇಲೆತ್ತಲಾಯಿತು.
ನಾಲ್ವರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಗೆ ಕರೆತಂದಿದ್ದ ಯಶವಂತ್ ಪುರ ಪೊಲೀಸರು, ಮೃತದೇಹಕ್ಕಾಗಿ ಶೋಧ ನಡೆಸಿದ್ದು, ಈ ವೇಳೆ ಮೃತದೇಹ ಚಾರ್ಮಾಡಿ ಘಾಟಿಯ ಪ್ರಪಾತದಲ್ಲಿ ಪತ್ತೆಯಾಗಿದೆ.
ಏನಿದು ಪ್ರಕರಣ?
ಕೊಲೆಯಾದ ಗೋವಿಂದರಾಜು ಕುಟುಂಬದಲ್ಲಿಯೇ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದ. ಇದನ್ನು ಸಹಿಸದ ಕುಟುಂಬದ ಅನಿಲ್ ಕುಮಾರ್, ಭರತ್ ಮತ್ತಿತರ ಇಬ್ಬರು ಆರೋಪಿಗಳು ಕಳೆದ ಸೋಮವಾರ ಮತ್ತಿಕೆರೆಯಿಂದ ಗೋವಿಂದರಾಜನನ್ನು ಅಪಹರಿಸಿ ರಾಜ್ ಗೋಪಾಲ್ ನಗರದ ಅಂದರಳ್ಳಿಯಲ್ಲಿ ಕೊಲೆ ಮಾಡಿ, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಮಲಯಮಾರುತದ ಬಳಿ ವಾಹನದಲ್ಲಿ ದೇಹ ತಂದು ಬಿಸಾಕಿ ಪರಾರಿಯಾಗಿದ್ದರು.
ಕುಟುಂಬದವರು ಗೋವಿಂದರಾಜು ಕಾಣೆಯಾಗಿರುವ ಬಗ್ಗೆ ಯಶವಂತಪುರ ಠಾಣೆಗೆ ದೂರು ನೀಡಿದ್ದರು. ಕುಟುಂಬದವರಿಗೆ ಅನಿಲ್ ಕುಮಾರ್ ಮೇಲೆ ಅನುಮಾನವಿದ್ದರಿಂದ ಪೊಲೀಸರು ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭರತ್ ಮತ್ತಿತರ ಇಬ್ಬರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದು ಬುಧವಾರ ಆರೋಪಿಗಳನ್ನು ಚಾರ್ಮಾಡಿ ಘಾಟಿಗೆ ಕರೆ ತಂದು ಯಶವಂತಪುರ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮಹೇಶ್ ಅವರ ತಂಡ ಸ್ಥಳೀಯ ಸಮಾಜ ಸೇವಕರ ಜತೆ ಸೇರಿ ಮೃತದೇಹವನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw