ಅಂತಾರಾಜ್ಯ ಪಿಸ್ತೂಲ್ ಡೀಲರ್ ಅರೆಸ್ಟ್: 10 ನಾಡ ಪಿಸ್ತೂಲ್ ಹಾಗೂ 20 ಜೀವಂತ ಗುಂಡು ಪೊಲೀಸ್ ವಶಕ್ಕೆ
ಬೆಂಗಳೂರು: ಪಿಸ್ತೂಲ್ ಗಳನ್ನು ಸರಬರಾಜು ಮಾಡುತ್ತಿದ್ದ ಅಂತಾರಾಜ್ಯ ಪಿಸ್ತೂಲ್ ಡೀಲರ್ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 10 ನಾಡ ಪಿಸ್ತೂಲ್ ಹಾಗೂ 20 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ರೋಷನ್ ಡಯರಾಮ್ ಬನ್ಸೋದ್ ಬಂಧಿತ ಆರೋಪಿ. ಆರೋಪಿಯು ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯಲ್ಲಿ ಸಂಗ್ರಹಿಸಿಟ್ಟಿದ್ದ 6 ನಾಡ ಪಿಸ್ತೂಲ್‍ಗಳು, 8 ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಒಟ್ಟಾರೆ ಈ ಕಾರ್ಯಾಚರಣೆಯಲ್ಲಿ 10 ನಾಡಪಿಸ್ತೂಲ್ ಹಾಗೂ 7.65 ಎಂಎಂ 20 ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಅಕ್ರಮವಾಗಿ ಪಿಸ್ತೂಲ್‍ಗಳು ಸರಬರಾಜು ಆಗುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ. ಈ ಆಧಾರದ ಮೇಲೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡ ಹಲವಾರು ದಿನಗಳಿಂದ ನಿಗಾ ವಹಿಸಿ ಆರೋಪಿಗಳ ಖಚಿತ ಮಾಹಿತಿ ಸಂಗ್ರಹಿಸಿದೆ.ಶಸ್ತ್ರಾಸ್ತ್ರ ಮರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ 4 ನಾಡ ಪಿಸ್ತೂಲ್ ಹಾಗೂ 12 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಆರೋಪಿಯು ವಿಚಾರಣೆ ವೇಳೆ ಮಹಾರಾಷ್ಟ್ರದ ಥಾಣೆಯಲ್ಲಿ ಪಿಸ್ತೂಲ್ ಹಾಗೂ ಗುಂಡುಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿ 6 ನಾಡ ಪಿಸ್ತೂಲ್‍ಗಳು ಹಾಗೂ 8 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಯಿಂದ 10 ನಾಡ ಪಿಸ್ತೂಲ್‍ಗಳು ಹಾಗೂ 20 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಬೇರೆ ಬೇರೆ ರಾಜ್ಯಗಳಿಗೆ ಆರೋಪಿ ಪಿಸ್ತೂಲ್ ಗಳನ್ನು ಸರಬರಾಜು ಮಾಡಿರುವ ಹಾಗೂ ಈತನೊಂದಿಗೆ ಭಾಗಿಯಾಗಿರುವ ಸಹಚರರ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.
ಆರೋಪಿ ವಿರುದ್ಧ ಮಹಾರಾಷ್ಟ್ರ ರಾಜ್ಯದ ನಾಗಪುರದ ವಾಡಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ, ಎರಡು ಕಳ್ಳತನ ಪ್ರಕರಣಗಳು ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿರುವುದು ತಿಳಿದು ಬಂದಿದೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸ್ ಇನ್ಸ್ ಪೆಕ್ಟರ್ ಮಹದೇವ ಸ್ವಾಮಿ, ಭರತ್ ಗೌಡ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw